ದಿನಾಂಕ:21-04-2026(ಹಾಯ್ ಉಡುಪಿ ನ್ಯೂಸ್)
ಬೆಂಗಳೂರು: ರಾಜಧಾನಿ ಬೆಂಗಳೂರಿನಾದ್ಯಂತ ಹಲವು ಕಡೆ ಮನೆಗಳಲ್ಲಿ ಮತ್ತು ಸ್ಪಾಗಳಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಮೂವರು ಮಹಿಳೆಯರು ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.
ವಿವಿಧ ಸ್ಥಳಗಳಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ಹಲವು ದಿನಗಳಿಂದ ಸಂಗ್ರಹಿಸಿದ ಸಾರ್ವಜನಿಕ ಮಾಹಿತಿಯ ಆಧಾರದ ಮೇಲೆ ಕೇಂದ್ರ ಅಪರಾಧ ವಿಭಾಗದ ಮಹಿಳಾ ರಕ್ಷಣಾ ಘಟಕದ ಪೊಲೀಸರು ದಾಳಿ ನಡೆಸಿದ್ದಾರೆ.
ಪೊಲೀಸರ ಪ್ರಕಾರ, ಮಾರತಹಳ್ಳಿ, ಸುಂಕದಕಟ್ಟೆ ಸಮೀಪದ ಸ್ಪಾಗಳು ಹಾಗೂ ಮಂಜುನಾಥನಗರದ ಮನೆಯಲ್ಲಿ ಮಹಿಳೆಯರನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಲಾಗಿತ್ತು.
ಆರೋಪಿಗಳು, ಬಲವಂತವಾಗಿ ಅಥವಾ ಆಮಿಷಕ್ಕೆ ಒಳಪಡಿಸಿ ಮಹಿಳೆಯರನ್ನು ವೇಶ್ಯಾವಾಟಿಕೆಗೆ ತಳ್ಳಿದ್ದು, 6 ಮಂದಿಯನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.
ಫೋನ್ ಮೂಲಕ ಗ್ರಾಹಕರನ್ನು ಸಂಪರ್ಕಿಸಿ ಸ್ಪಾಗಳು ಮತ್ತು ಮನೆಯಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಬಗ್ಗೆ ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಈ ಸಂಬಂಧ HAL, ಬ್ಯಾಡರಹಳ್ಳಿ ಮತ್ತು ಬಾಗಲಗುಂಟೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
