ದಿನಾಂಕ:22-04-2026(ಹಾಯ್ ಉಡುಪಿ ನ್ಯೂಸ್)
ಹೈದರಾಬಾದ್: ಐಪಿಎಲ್ ಟೂರ್ನಿಯ ಇಂದಿನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಸನ್ ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟರ್ ಅಭಿಷೇಕ್ ಶರ್ಮಾ ಶತಕ ಸಿಡಿಸಿದ್ದು ಮಾತ್ರವಲ್ಲದೇ ಹಲವು ದಾಖಲೆಗಳನ್ನು ಛಿದ್ರ ಮಾಡಿದ್ದಾರೆ.
ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ನಿಗಧಿತ 20 ಓವರ್ ನಲ್ಲಿ 2 ವಿಕೆಟ್ ಕಳೆದುಕೊಂಡು 242 ರನ್ ಪೇರಿಸಿದೆ.
ಹೈದರಾಬಾದ್ ಈ ಬೃಹತ್ ಮೊತ್ತಕ್ಕೆ ತಂಡದ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಕಾರಣರಾಗಿದ್ದು ತಮ್ಮ ಅಜೇಯ 135 ರನ್ ಗಳ ಮೂಲಕ ತಂಡದ ಮೊತ್ತವನ್ನು 240ರನ್ ಗಡಿ ದಾಟಿಸಿದರು.
ಅವರಿಗೆ ಉತ್ತಮ ಸಾಥ್ ನೀಡಿದ ಟ್ರಾವಿಸ್ ಹೆಡ್ (37 ರನ್), ನಾಯಕ ಇಶಾನ್ ಕಿಶನ್ (25) ಮತ್ತು ಹೆನ್ರಿಕ್ ಕ್ಲಾಸೆನ್ ಅಜೇಯ 37 ರನ್ ಪೇರಿಸಿದರು.
DC ಬೌಲರ್ ಗಳ ಚೆಂಡಾಡಿದ ಅಭಿಷೇಕ್:ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡದ ಪರ ಅಭಿಷೇಕ್ ಮತ್ತು ಟ್ರಾವಿಸ್ ಹೆಡ್ ಆರಂಭಿಕರಾಗಿ ಕಣಕ್ಕಿಳಿದರು. ಇನ್ನಿಂಗ್ಸ್ ಮೊದಲ ಎಸೆತದಿಂದಲೇ ಡೆಲ್ಲಿ ಬೌಲರ್ ಗಳ ಇನ್ನಿಲ್ಲದಂತೆ ದಂಡಿಸಲು ಆರಂಭಿಸಿದ ಅಭಿಷೇಕ್ ಮತ್ತು ಟ್ರಾವಿಸ್ ಹೆಡ್ ಜೋಡಿ ಮೊದಲ ವಿಕೆಟ್ ಗೆ 97 ರನ್ ಗಳ ಭರ್ಜರಿ ಜೊತೆಯಾಟ ನೀಡಿತು.
ಈ ಪೈಕಿ ಟ್ರಾವಿಸ್ ಹೆಡ್ 26 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 2 ಬೌಂಡರಿಗಳ ಸಹಿತ 37 ರನ್ ಗಳಿಸಿ ಅಕ್ಸರ್ ಪಟೇಲ್ ಬೌಲಿಂಗ್ ನಲ್ಲಿ ಔಟಾದರು. ಬಳಿಕ ಕ್ರೀಸ್ ಗೆ ಬಂದ ಇಶಾನ್ ಕಿಶನ್ ಕೂಡ 13 ಎಸೆತಗಳನ್ನು ಎದುರಿಸಿ 1 ಸಿಕ್ಸರ್ ಮತ್ತು 2 ಬೌಂಡರಿ ಸಹಿತ 25 ರನ್ ಗಳಿಸಿ ರನೌಟ್ ಗೆ ಬಲಿಯಾದರು.
ಈ ಹಂತದಲ್ಲಿ ಕ್ರೀಸ್ ನ ಮತ್ತೊಂದು ಬದಿಯಲ್ಲಿದ್ದ ಅಭಿಷೇಕ್ ಶರ್ಮಾ ಎಂದಿನ ತಮ್ಮ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿದ್ದರು. ನೋಡ ನೋಡುತ್ತಲೇ ಅರ್ಧಶತಕ ಸಿಡಿಸಿದ್ದ ಅಭಿಷೇಕ್ ಬಳಿಕ ಅರ್ಧಶತಕವನ್ನು ಶತಕವನ್ನಾಗಿಸಿದರು. ಒಟ್ಟು 68 ಎಸೆತಗಳಲ್ಲಿ ಅಭಿಷೇಕ್ 10 ಬೌಂಡರಿ ಮತ್ತು 10 ಸಿಕ್ಸರ್ ಗಳ ಮೂಲಕ ಅಜೇಯ 135 ರನ್ ಗಳಿಸಿದರು. ತಮ್ಮ ಐಪಿಎಲ್ ವೃತ್ತಿಜೀವನದ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಅಂದಹಾಗೆ ಅಭಿಷೇಕ್ ಗೆ ಇದು ಎರಡನೇ ಐಪಿಎಲ್ ಶತಕವಾಗಿದ್ದು, ಈ ಹಿಂದೆ 2025ರಲ್ಲಿಯೂ ಅಭಿಷೇಕ್ ಪಂಜಾಬ್ ಕಿಂಗ್ಸ್ ವಿರುದ್ಧ ಶತಕ ಸಿಡಿಸಿದ್ದರು. ಅಂದು ಅಭಿಷೇಕ್ 55 ಎಸೆತಗಳಲ್ಲಿ 141 ರನ್ ಗಳಿಸಿ ತಮ್ಮ ಚೊಚ್ಚಲ ಐಪಿಎಲ್ ಶತಕ ಸಿಡಿಸಿದ್ದರು. ಇದೀಗ ದೆಹಲಿ ವಿರುದ್ಧ ತಮ್ಮ 2ನೇ ಶತಕ ಸಿಡಿಸಿದ್ದಾರೆ.
ಹಲವು ದಾಖಲೆಗಳ ನಿರ್ಮಾಣ
ಇನ್ನು ಈ ಶತಕದ ಮೂಲಕ ಅಭಿಷೇಕ್ ಶರ್ಮಾ ಹಲವು ದಾಖಲೆಗಳನ್ನು ಛಿದ್ರ ಮಾಡಿದ್ದು, ಹೊಸ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಟಿ20 ಕ್ರಿಕೆಟ್ ನಲ್ಲಿ ಅತೀ ಹೆಚ್ಚು 130+ ಸ್ಕೋರ್
ಇನ್ನು ಇಂದು ಅಭಿಷೇಕ್ ಶರ್ಮಾ ಅಜೇಯ 135 ರನ್ ಗಳಿಸುವ ಮೂಲಕ ಟಿ20 ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಬಾರಿ 130+ ಸ್ಕೋರ್ ಮಾಡಿದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಅಭಿಷೇಕ್ ಟಿ20 ಕ್ರಿಕೆಟ್ ನಲ್ಲಿ ಒಟ್ಟು 4 ಬಾರಿ ಈ ಸಾಧನೆ ಮಾಡಿದ್ದು, ತಲಾ ಮೂರು ಬಾರಿ 130+ ಸ್ಕೋರ್ ಮಾಡಿರುವ ಆ್ಯರೋನ್ ಫಿಂಚ್ ಮತ್ತು ವಿಂಡೀಸ್ ದೈತ್ಯ ಕ್ರಿಸ್ ಗೇಯ್ಲ್ ಜಂಟಿ 2ನೇ ಸ್ಥಾನದಲ್ಲಿದ್ದಾರೆ.
