ಮಲ್ಪೆ: ದಿನಾಂಕ:21-04-2026(ಹಾಯ್ ಉಡುಪಿ ನ್ಯೂಸ್)ಅಪರಾಧ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದು ತಲೆಮರೆಸಿಕೊಂಡಿದ್ದ ಕೆಮ್ಮಣ್ಣು ನಿವಾಸಿ ಸದಾಫ್ ಜಿ ಮೊಹಮ್ಮದ್ ಎಂಬಾತನನ್ನು ಆತನ ಮನೆಯಲ್ಲಿ ಅವಿತಿರುವ ಮಾಹಿತಿ ಪಡೆದ ಮಲ್ಪೆ ಠಾಣೆಯ ಪಿಎಸ್ಐ ಯವರಾದ ಗಂಗಪ್ಪ ಎಸ್ ಅವರು ದಾಳಿ ನಡೆಸಿದಾಗ ಆತ ತಪ್ಪಿಸಿಕೊಂಡು ಓಡಿ ಹೋದ ಘಟನೆ ಕೆಮ್ಮಣ್ಣು ನಲ್ಲಿ ನಡೆದಿದೆ.
ಮಲ್ಪೆ ಪೊಲೀಸ್ ಠಾಣೆಯ ಪಿಎಸ್ಐ ಯವರಾದ ಗಂಗಪ್ಪ ಎಸ್ ಅವರು ಮಲ್ಪೆ ಪೊಲೀಸ್ ಠಾಣೆಯ ಅಪರಾಧ ಕ್ರಮಾಂಕ 38/2026, ಕಲಂ: 8A(C), 20(b)(ii)A, 20(b)(ii)B NDPS ACT 1985 ಪ್ರಕರಣದ ತನಿಖಾಧಿಕಾರಿಯಾಗಿದ್ದು, ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಕೆಮ್ಮಣ್ಣು ನಿವಾಸಿ ಸದಾಫ್ ಜಿ ಮೊಹಮ್ಮದ್ ಎಂಬಾತನು ತನ್ನ ಮನೆಯಲ್ಲಿ ಇರುತ್ತಾನೆ ಎಂಬ ಖಚಿತ ಮಾಹಿತಿ ದೊರೆತ ಮೇರೆಗೆ, ಆತನ ಪತ್ತೆಗಾಗಿ ದಿನಾಂಕ 20/04/2026 ರಂದು ಬೆಳಿಗ್ಗೆ ಉಡುಪಿ ತಾಲೂಕು ಪಡುತೋನ್ಸೆ ಗ್ರಾಮದ ಕೆಮ್ಮಣ್ಣು ಸೇತುವೆ ಬಳಿ ಇರುವ ಆರೋಪಿತ ಸದಾಫ್ನ ಮನೆ ಬಳಿಗೆ ಹೋಗಿ ಆತನು ಮನೆಯಲ್ಲಿ ಇರು ಬಗ್ಗೆ ಖಚಿತಪಡಿಸಿಕೊಳ್ಳುತ್ತಿರುವಾಗ, ಆರೋಪಿತನು ಆತನ ಮನೆಯ ಟೆರೆಸ್ ನಿಂದ ಪಕ್ಕದಲ್ಲಿರುವ ಶೆಡ್ನ ತಗಡು ಶೀಟಿನ ಮೇಲ್ಚಾವಣಿಗೆ ಹಾರಿ ತಪ್ಪಿಸಿಕೊಂಡಿರುತ್ತಾನೆ.
ಆರೋಪಿತನ ಮನೆಯ ಬಳಿ ಒಂದು ಬಿಳಿ ಬಣ್ಣದ ಸ್ವೀಫ್ಟ್ ಕಾರು ನಿಂತಿದ್ದು, ಇದೇ ಕಾರಿನಲ್ಲಿ ಆತನು ತನ್ನ ಮನೆಗೆ ನಿನ್ನೆ ದಿನ ರಾತ್ರಿ ಬಂದಿರುವುದಾಗಿ ಸ್ಥಳೀಯರು ತಿಳಿಸಿದ ಮೇರೆಗೆ, ಈ ಕಾರಿನ ಆರ್.ಸಿ ಮಾಲಕರ ಬಗ್ಗೆ ಪರಿಶೀಲಿಸಿದಾಗ, ಆರ್ಸಿ ಮಾಲಕ ನಂಬರ್ ನಾಟ್ ರಿಚೇಬಲ್ ಬಂದಿದ್ದು, ಆತನ ಮನೆಯ ಪರಿಸರದಲ್ಲಿ ಹೆಚ್ಚಿನ ಮಾಹಿತಿ ಸಂಗ್ರಹಿಸಲು ನೋಡಿದಾಗ, ಆರೋಪಿತನ ಮನೆಯಿಂದ ಅಣತಿ ದೂರದಲ್ಲಿ ತೆಂಗಿನ ತೋಟದಲ್ಲಿ 2 ಕಾರುಗಳು ನಿಂತಿದ್ದು, ಅವುಗಳಲ್ಲಿ ಹುಂಡೈ ಐ20 ಕಾರಿಗೆ ಮಾರುತಿ ಸುಜುಕಿ ಬಲೆನೊ ಕಾರಿನ KA20MC7034 ನೇ ನಕಲಿ ನಂಬರ್ ಪ್ಲೇಟ್ ಅಳವಡಿಸಿರುವುದು ಕಂಡು ಬಂದಿರುತ್ತದೆ. ಜೊತೆಗೆ ಇನ್ನೊಂದು ಕಾರು ನೀಲಿ ಬಣ್ಣದ ಹೊಂಡಾ ಸಿಟಿ KA05MC7576 ನೇದ ಬಗ್ಗೆ ಸಹ ಅನುಮಾನವಿರುತ್ತದೆ.
ಆರೋಪಿತ ಸದಾಫ್ ಜಿ ಮೊಹಮ್ಮದ್ನು ಈಗಾಗಲೇ ಹಲವು ಪ್ರಕರಣಗಳಲ್ಲಿ ಒಳಗೊಂಡಿದ್ದು, ಈ ಮೂರು ಕಾರುಗಳಿಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿ ಅವುಗಳನ್ನು ಅಕ್ರಮ ಚಟುವಟಿಕೆಗಳಿಗೆ ಉಪಯೋಗಿಸಿರುವ ಬಗ್ಗೆ ಬಲವಾದ ಸಂಶಯವಿದ್ದ ಕಾರಣ 1) ನಕಲಿ ನಂಬರ್ ಪ್ಲೇಟ್ KA20MC7034 ನೇದನ್ನು ಹೊಂದಿರುವ ಬಿಳಿ ಬಣ್ಣದ ಹುಂಡೈ ಐ20 ಕಾರು ಆಗಿದ್ದು, ಅಂದಾಜು ಮೌಲ್ಯ ರೂ. 3,00,000/-, 2) ನೀಲಿ ಬಣ್ಣದ ಹೊಂಡಾ ಸಿಟಿ ಕಾರು ನಂಬ್ರ KA05MC7576 ಆಗಿದ್ದು, ಅಂದಾಜು ಮೌಲ್ಯ ರೂ. 1,00,000/- 3) ಬಿಳಿ ಬಣ್ಣದ ಮಾರುತಿ ಸುಜುಕಿ ಸ್ವೀಫ್ಟ್ ಕಾರು ನಂಬ್ರ KA19MG0482 ಅಂದಾಜು ಮೌಲ್ಯ ರೂ. 3,00,000/- ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಕಲಂ:336(2),336(3),318(4) BNS ಮತ್ತು 39 ಜೊತೆಗೆ 192 IMV ACT ರಂತೆ ಪ್ರಕರಣ ದಾಖಲಾಗಿದೆ.
