ಬಿಸಿಲ ಬೇಗೆಗೆ ಬಳಲಿದ ಕಾಗೆಯೊಂದು ನೀರಿಗಾಗಿ ಹುಡುಕಾಡುತ್ತಿತ್ತು…….
ಹಸಿದ ಹೊಟ್ಟೆಗೆ ನರಳಿದ ನಾಯಿಯೊಂದು ಅನ್ನಕ್ಕಾಗಿ ತಡಕಾಡುತ್ತಿತ್ತು……..
ಶಾಖದ ಹವೆಗೆ ಕೆರಳಿದ ಗಿಡುಗವೊಂದು ಹೊಂಚುಹಾಕಿ ಕಾಯುತ್ತಿತ್ತು…….
ಕಾಮದಾಸೆಗೆ ನರ ರಾಕ್ಷಸವೊಂದು ಹೆಣ್ಣ ಭೇಟೆಯಲ್ಲಿ ತೊಡಗಿತ್ತು………..
ಹಣಕ್ಕಾಗಿ ಕಾಣದ ಕೈಯೊಂದು ರಾಜಕಾರಣಿಯ ಮುಂದೆ ಚಾಚಿತ್ತು……..
ಮತಕ್ಕಾಗಿ ದುಷ್ಟ ಮನಸ್ಸೊಂದು ಅಂಗಲಾಚುತ್ತಿತ್ತು………..
ಪ್ರಜಾಪ್ರಭುತ್ವದ ಕುರ್ಚಿಗಾಗಿ ಸ್ವಾರ್ಥ ಜೀವವೊಂದು ದಾಳ ಉರುಳಿಸುತ್ತಿತ್ತು…….
ವ್ಯವಸ್ಥೆ ಅವಸಾನದ ಅಂಚಿಗೆ ಸರಿಯುತ್ತಿತ್ತು………
ಮನುಷ್ಯ ಜೀವವೊಂದು ತನ್ನ ಅಸ್ಥಿತ್ವಕ್ಕಾಗಿ ತಳಮಳಿಸುತ್ತಿತ್ತು…….
ಅಕ್ಷರಗಳು ಭಾವ ತುಂಬಿ ತನ್ನಿಂದ ತಾನೇ ಓಡುತ್ತಿತ್ತು……..
ಮನಸ್ಸೊಂದು ಕನಸುಗಳ ಸಾಗರದಲ್ಲಿ ಬದಲಾವಣೆಗಾಗಿ ಮಿಡಿಯುತ್ತಿತ್ತು…….
ಓದುವ ಬಳಗವೊಂದು ಇಂವ ನಮ್ಮವ ಇಂವ ನಮ್ಮವ ಎಂದು ಕರೆಯುತ್ತಿತ್ತು…..
ಏನಾದರೂ ಮಾಡುವ ಹಂಬಲವೊಂದು ಚಿಗಿರುತ್ತಿತ್ತು……
ಅದಕ್ಕಾಗಿಯೇ ಹಲವು ಜೀವಗಳು ತುಡಿಯುತ್ತಿವೆ,….
ಬಡತನವನ್ನು ಆಕರ್ಷಕವಾಗಿ ಕಣ್ಣೀರಾಗುವಂತೆ ವರ್ಣಿಸಬಲ್ಲೆ,…
ಭ್ರಷ್ಟತೆಯನ್ನು ಕೋಪ ಉಕ್ಕುವಂತೆ ಚಿತ್ರಿಸಬಲ್ಲೆ,….
ದೌರ್ಜನ್ಯಗಳನ್ನು ಕೆಂಡಾಮಂಡಲವಾಗುವಂತೆ ಬರೆಯಬಲ್ಲೆ,….
ವೇಶ್ಯಾವಾಟಿಕೆಯನ್ನು ಮನಮಿಡಿಯುವಂತೆ ಹೇಳಬಲ್ಲೆ,…
ರೈತರ ಕಷ್ಟ ಕೋಟಲೆಗಳನ್ನು ನಿಮ್ಮ ಮನದಾಳಕ್ಕೆ ಮುಟ್ಟುವಂತೆ ಸೃಷ್ಟಿಸಬಲ್ಲೆ,….
ಬಾಲಕಾರ್ಮಿಕರ ಸ್ಥಿತಿಯನ್ನು ಮನಕರಗುವಂತೆ ನಿರೂಪಿಸಬಲ್ಲೆ,….
ಧರ್ಮಗಳನ್ನು ಕಟು ಮಾತುಗಳಲ್ಲಿ ಖಂಡಿಸಬಲ್ಲೆ,….
ಜಾತಿಗಳ ಅಸ್ತಿತ್ವವನ್ನು ಅಲ್ಲಗಳೆಯಬಲ್ಲೆ,….
ಬುದ್ದ, ಬಸವ, ಗಾಂಧಿ, ವಿವೇಕಾನಂದ, ಅಂಬೇಡ್ಕರ್ ಅವರುಗಳನ್ನು ದೇವರಂತೆ ಚಿತ್ರಿಸಬಲ್ಲೆ,…
ಪ್ರೀತಿ, ಕರುಣೆ, ಸಮಾನತೆ, ಮಾನವೀಯತೆಯ ಶ್ರೇಷ್ಠತೆಯನ್ನು ಸಾರಬಲ್ಲೆ,….
ನಿಮ್ಮನ್ನು ಮೆಚ್ಚಿಸುವ ಸಿನಿಮಾ ನಿರ್ಮಿಸಬಲ್ಲೆ,…..
ನಿಮ್ಮನ್ನು ರಂಜಿಸುವ ಲೇಖನ ಬರೆಯಬಲ್ಲೆ,…..
ನಿಮ್ಮನ್ನು ನಗಿಸುವ ಸಾಹಿತ್ಯ ರಚಿಸಬಲ್ಲೆ,…..
ನಿಮ್ಮನ್ನು ಅಳಿಸುವ ಕಥೆ, ಕಾದಂಬರಿ ಸೃಷ್ಟಿಸಬಲ್ಲೆ,….
ನಿಮ್ಮನ್ನು ಭಕ್ತಿಯ ಲೋಕದಲ್ಲಿ ತೇಲಿಸಬಲ್ಲೆ,….
ನಿಮ್ಮನ್ನು ಮೌಡ್ಯದ ಆಳಕ್ಕೆ ಸೆಳೆಯಬಲ್ಲೆ,….
ನಿಮ್ಮನ್ನು ಮಹಾನ್ ಬುದ್ದಿವಂತರೆಂದು ನಂಬಿಸಬಲ್ಲೆ,….
ನಿಮ್ಮನ್ನು ಮಾತಿನ ಮೋಡಿಯಲ್ಲಿ ಬೀಳಿಸಬಲ್ಲೆ,….
ಹೌದು,
ಇದನ್ನು ಕೇವಲ ಲೇಖನಿಯಿಂದ ಮಾಡಬಲ್ಲೆ,….
ಆದರೆ,…….,
ನಿಮ್ಮನ್ನು ನಾಗರಿಕರನ್ನಾಗಿ ಮಾಡಲು ಸಾಧ್ಯವಾಗುತ್ತಿಲ್ಲ,…..
ನಿಮ್ಮನ್ನು ನಿಜವಾದ ಮನುಷ್ಯರನ್ನಾಗಿ ಮಾಡಲು ಸಾಧ್ಯವಾಗುತ್ತಿಲ್ಲ,….
ನಿಮ್ಮ ಕಷ್ಟ ಕೋಟಲೆಗಳನ್ನು ಕಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ,…
ನನಗೂ ನನ್ನಂತೆ ಸ್ವತಂತ್ರವಾಗಿ ಬದುಕಲು ಸಾಧ್ಯವಾಗುತ್ತಿಲ್ಲ,….
ಇದೆಲ್ಲಾ ಹೇಳಿದ ನಾನೂ ನಿಮ್ಮೊಳಗೊಬ್ಬನೇ,….
ನಿಮ್ಮಂತೆ ನನ್ನ ಮನಸ್ಸೂ ಬದಲಾವಣೆಗಾಗಿ ತುಡಿಯುತ್ತಿದೆ,…..
ನಿಮ್ಮೊಂದಿಗೆ ನಾನೂ ಆ ನಿರೀಕ್ಷೆಯಲ್ಲಿ ………..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
