kannadaprabha_2026-04-09_qgo51huw_disha.jpg
Spread the love

ದಿನಾಂಕ:09-04-2026(ಹಾಯ್ ಉಡುಪಿ ನ್ಯೂಸ್)

ಬೆಂಗಳೂರು: ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ 2025-26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಇಂದು ಗುರುವಾರ ಪ್ರಕಟವಾಗಿದ್ದು, ಫಲಿತಾಂಶದಲ್ಲಿ ಈ ಬಾರಿ ದಾಖಲೆಯ ಹೆಚ್ಚಳವಾಗಿದೆ.

ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು ಇಂದು ಸಂಜೆ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದರು.

ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದ್ದು, ಕಳೆದ ವರ್ಷಕ್ಕಿಂತ ಶೇ. 12 ರಷ್ಟು ಹೆಚ್ಚು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಇದು ಐತಿಹಾಸಿಕ ದಿನ ಎಂದು ಸಚಿವರು ಹರ್ಷ ವ್ಯಕ್ತಪಡಿಸಿದರು.

ಈ ವರ್ಷ ಶೇ.86ರಷ್ಟು ಮಕ್ಕಳು ಉತ್ತೀರ್ಣರಾಗಿದ್ದಾರೆ. ಅಂದರೆ 7,10,363 ವಿದ್ಯಾರ್ಥಿಗಳ ಪೈಕಿ 6.10 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಳೆದ ವರ್ಷ ಶೇ.73.45ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. ಇದರೊಂದಿಗೆ ಈ ಬಾರಿ ಪಿಯುಸಿ ಫಲಿತಾಂಶದಲ್ಲಿ ಭಾರೀ ಸುಧಾರಣೆ ಕಂಡು ಬಂದಿದೆ.

ಈ ಸಲವೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಶೇಕಡಾ 88.70 ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಶೇಕಡಾ 83.65ರಷ್ಟು ಬಾಲಕರು ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಮಧು ಬಂಗಾರಪ್ಪ ಅವರು ಮಾಹಿತಿ ನೀಡಿದರು.9 ವಿದ್ಯಾರ್ಥಿಗಳಿಗೆ 590ಕ್ಕಿಂತ ಅಧಿಕ ಅಂಕ

9 ವಿದ್ಯಾರ್ಥಿಗಳಿಗೆ 590ಕ್ಕಿಂತ ಅಧಿಕ ಅಂಕ:ವಾಣಿಜ್ಯ ವಿಭಾಗದಲ್ಲಿ 9 ವಿದ್ಯಾರ್ಥಿಗಳು 590ಕ್ಕಿಂತ ಅಧಿಕ ಅಂಕ ಗಳಿಸಿದ್ದಾರೆ. ಒಂದೇ ಕಾಲೇಜಿನ 9 ವಿದ್ಯಾರ್ಥಿಗಳು ವಾಣಿಜ್ಯ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ.

ಬೆಂಗಳೂರಿನ ರಾಜಾಜಿನಗರದ ASC ಕಾಲೇಜಿನ 9 ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ.

ಉಡುಪಿಗೆ ಮೊದಲ ಸ್ಥಾನ:ಈ ಬಾರಿಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ಪ್ರಥಮ ಸ್ಥಾನ ಪಡೆದಿವೆ. ಈ ಬಾರಿಯೂ ಈ ಎರಡು ಜಿಲ್ಲೆಗಳು ಅತ್ಯಧಿಕ ಪಾಸ್ ಪ್ರಮಾಣ ದಾಖಲಿಸಿವೆ.

ಶೇಕಡಾ 96.39 ಫಲಿತಾಂಶ ಪಡೆದು ಉಡುಪಿ ಜಿಲ್ಲೆ ರಾಜ್ಯಕ್ಕೆ ಮತ್ತೆ ಪ್ರಥಮ ಸ್ಥಾನ ಪಡೆದುಕೊಂಡರೆ, ಉತ್ತರ ಕನ್ನಡ ಜಿಲ್ಲೆ ಶೇಕಡಾ 96.35 ಫಲಿತಾಂಶದೊಂದಿಗೆ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದೆ.

ಬೆಂಗಳೂರು ನಗರ ಮತ್ತು ಮೈಸೂರು ಜಿಲ್ಲೆಗಳೂ ಉತ್ತಮ ಸಾಧನೆ ತೋರಿದ್ದು, ಹಾಸನ ಹಾಗೂ ಯಾದಗಿರಿ ಜಿಲ್ಲೆಗಳು ಶೇಕಡಾ 71.21 ಫಲಿತಾಂಶದೊಂದಿಗೆ ರಾಜ್ಯಕ್ಕೆ ಕೊನೆಯ ಸ್ಥಾನದಲ್ಲಿವೆ.

ಅತಿ ಹೆಚ್ಚು ಅಂಕ ಪಡೆದ ಟಾಪರ್ ಗಳು:ವಾಣಿಜ್ಯ‌ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ ಅವರು 600 ಅಂಕಗಳಿಗೆ 600 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಇನ್ನು ಕಲಾ ವಿಭಾಗದಲ್ಲಿ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಇಂದು ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರಾದ ಅರ್ಚನಾ ಮತ್ತು ಸಂಗೀತ ಅವರು 600 ಅಂಕಗಳಿಗೆ 598 ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಮನ್ಯು ಎಸ್. ಶೆಟ್ಟಿ ಅವರು 600 ಅಂಕಗಳಿಗೆ 598 ಅಂಕ ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ.

ಈ ಬಾರಿ ಡಿಜಿಲಾಕರ್‌ನಲ್ಲೂ ಫಲಿತಾಂಶ ಲಭ್ಯ:ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳ ಫಲಿತಾಂಶದ ಅಂಕಪಟ್ಟಿಯು ಡಿಜಿಲಾಕರ್ ಮೂಲಕ ಲಭ್ಯವಾಗಲಿದೆ. ಒಂದು ವೇಳೆ ವೆಬ್ಸೈಟ್ನಲ್ಲಿ ರಿಸಲ್ಟ್ ನೋಡುವಾಗ ಸರ್ವರ್ ಸಮಸ್ಯೆ ಎದುರಾದರೆ ಡಿಜಿಲಾಕರ್ ಮೂಲಕವೇ ಮಾರ್ಕ್ಸ್ ಕಾರ್ಡ್ ಪಡೆದುಕೊಳ್ಳಬಹುದು ಎಂದಿದ್ದಾರೆ.

error: No Copying!