Screenshot_2026-04-09-15-50-01-673_com.miui_.gallery-edit.jpg
Spread the love

ದಿನಾಂಕ:09-04-2026(ಹಾಯ್ ಉಡುಪಿ ನ್ಯೂಸ್)

ಮಂಗಳೂರು: ಹಲವು ವರ್ಷಗಳಿಂದ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ವಿದೇಶಕ್ಕೆ ಪರಾರಿಯಾಗಿ ತಲೆಮರೆಸಿಕೊಂಡಿರುವ ಇಬ್ಬರು ಕುಖ್ಯಾತ ಆರೋಪಿಗಳ ವಿರುದ್ಧ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಈಗ ‘ರೆಡ್‌ ಕಾರ್ನರ್ ನೋಟಿಸ್’ ಜಾರಿಗೊಳಿಸಿದೆ.
ಕುಶಾಲನಗರದ ಸುಲೈಮಾನ್ ಅಲಿಯಾಸ್ ಸಮೀರ್ ಮತ್ತು ಸಂಶುದ್ದೀನ್ ಅಲಿಯಾಸ್ ಅಲ್ತಾಫ್ ವಿರುದ್ಧ ಈ ಅಂತರಾಷ್ಟ್ರೀಯ ಮಟ್ಟದ ನೋಟಿಸ್ ಹೊರಡಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಸುಲೈಮಾನ್ ಅಲಿಯಾಸ್ ಸಮೀರ್ 2013ರಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ದೇರಳಕಟ್ಟೆ ವೈದ್ಯಕೀಯ ವಿದ್ಯಾರ್ಥಿಗಳ ಅಪಹರಣ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ. ವಿದ್ಯಾರ್ಥಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್ ರೇಪ್ ಎಸಗಿದ ದೂರು ಈತನ ಮೇಲಿದೆ. ಈತನ ವಿರುದ್ಧ ಹತ್ಯೆ ಯತ್ನ ಸೇರಿದಂತೆ ಒಟ್ಟು 14ಕ್ಕೂ ಹೆಚ್ಚು ಗಂಭೀರ ಪ್ರಕರಣಗಳು ದಾಖಲಾಗಿದ್ದವು.

ಸಂಶುದ್ದೀನ್ ಅಲಿಯಾಸ್ ಅಲ್ತಾಫ್ 2008ರಲ್ಲಿ ಪಾವಂಜೆ ಸೇತುವೆ ಬಳಿ ಪ್ರವೀಣ್ ಎಂಬವರನ್ನು ಅಪಹರಿಸಿ, ಸುಲಿಗೆ ಮಾಡಿ, ಬಳಿಕ ಕಳವಾರು ಕಲ್ಲು ಕ್ವಾರೆ ಕೆರೆಯಲ್ಲಿ ಕಲ್ಲಿನಿಂದ ಕಟ್ಟಿ ಮುಳುಗಿಸಿ ಕೊಲೆ ಮಾಡಿದ ಆರೋಪ ಈತನ ಮೇಲಿದೆ. ಕೊಲೆಯ ನಂತರ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದ ಅಲ್ತಾಫ್, ‘ಶೇಕ್ ಮೊಹಮ್ಮದ್ ಸಾದಿಕ್’ ಎಂಬ ನಕಲಿ ಹೆಸರಿನಲ್ಲಿ ಪಾಸ್‌ಪೋರ್ಟ್ ಪಡೆದು ವಿದೇಶಕ್ಕೆ ಪರಾರಿಯಾಗಿದ್ದನು.

ಈ ಇಬ್ಬರೂ ಆರೋಪಿಗಳು ವಿದೇಶದಲ್ಲಿ ನೆಲೆಸಿರುವ ಬಗ್ಗೆ ಬಲವಾದ ಮಾಹಿತಿ ಇದೆ. ಅವರ ಪತ್ತೆಗಾಗಿ ರೆಡ್ ಕಾರ್ನರ್ ನೋಟಿಸ್ ನೀಡಲಾಗಿದ್ದು, ಯಾವುದೇ ದೇಶದಲ್ಲಿ ಅವರು ಪತ್ತೆಯಾದರೂ ತಕ್ಷಣ ಬಂಧಿಸಲು ಕ್ರಮ ಕೈಗೊಳ್ಳಲಾಗುವುದು. ಇವರ ವಿರುದ್ಧ ಭಾರತದ ಕಾನೂನಿನ ಜೊತೆಗೆ ಅಂತರಾಷ್ಟ್ರೀಯ ಕಾನೂನುಗಳ ಅಡಿಯಲ್ಲಿಯೂ ಕಠಿಣ ಕ್ರಮ ಜರುಗಿಸಲಾಗುವುದು,” ಎಂದು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

error: No Copying!