ದಿನಾಂಕ:09-04-2026 (ಹಾಯ್ ಉಡುಪಿ ನ್ಯೂಸ್)
ಟೆಹ್ರಾನ್: ಕದನ ವಿರಾಮ ಘೋಷಣೆಯಾಗಿದೆ ಎಂದು ಇಡೀ ಜಗತ್ತು ಖುಷಿ ಪಡ್ತಿದ್ರೆ… ಅದ್ಯಾಕೋ ಇರಾನ್ ಯುದ್ಧ ಸದ್ಯಕ್ಕಂತೂ ನಿಲ್ಲಿಸುವ ಲಕ್ಷಣಗಳೇ ಕಾಣ್ತಿಲ್ಲ.
ಅಮೆರಿಕ-ಇಸ್ರೇಲ್ ಮತ್ತು ಇರಾನ್ ಯುದ್ಧಕ್ಕೆ ಕದನ ವಿರಾಮ ಘೋಷಣೆಯಾದ ಮೇಲೂ ಮಧ್ಯಪ್ರಾಚ್ಯದಲ್ಲಿ ಕ್ಷಿಪಣಿ ಮತ್ತು ಬಾಂಬ್ ಗಳ ಸದ್ದು ಕಡಿಮೆಯಾಗ್ತಿಲ್ಲ, ಒಂದೆಡೆ ಲೆಬೆನಾನ್ ಮೇಲೆ ಇಸ್ರೇಲ್ ಸೇನೆ ಇನ್ನಿಲ್ಲದಂತೆ ದಾಳಿ ಮಾಡುತ್ತಿದ್ದು ಕೇವಲ 10 ನಿಮಿಷಗಳ ಅವಧಿಯಲ್ಲಿ 100ಕ್ಕೂ ಕ್ಷಿಪಣಿ ಸಿಡಿಸಿ ಭಾರಿ ಅನಾಹುತವನ್ನೇ ಮಾಡಿದೆ. ಈ ದಾಳಿಯಲ್ಲಿ ಕನಿಷ್ಟ 250 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
ಇದರ ನಡುವೆಯೇ ಇರಾನ್ ನೌಕಾಪಡೆಯು ಹಾರ್ಮುಜ್ ಜಲಸಂಧಿಯ ಬಳಿಯ ಹಡಗುಗಳಿಗೆ ಟೆಹ್ರಾನ್‌ನ ಅನುಮತಿ ಇನ್ನೂ ಅಗತ್ಯವಿದೆ ಎಂದು ತಿಳಿಸಿ ಜಗತ್ತಿಗೆ ಮತ್ತೊಂದು ಶಾಕ್ ನೀಡಿದೆ.
ವಾಲ್ ಸ್ಟ್ರೀಟ್ ಜರ್ನಲ್‌ನ ವರದಿಯ ಪ್ರಕಾರ, ಅನುಮತಿಯಿಲ್ಲದೆ ಹಾರ್ಮುಜ್ ಜಲಸಂಧಿ ಮೂಲಕ ಹಾದುಹೋಗಲು ಪ್ರಯತ್ನಿಸುವ ಯಾವುದೇ ಹಡಗನ್ನು ಇರಾನ್ ಸೇನೆ ಹೊಡೆದುರುಳಿಸಲಿದೆ ಎಂದು ಇರಾನ್ ನೌಕಾಪಡೆಯು ರೇಡಿಯೋ ಮೂಲಕ ಹಡಗುಗಳಿಗೆ ಎಚ್ಚರಿಕೆ ನೀಡಿದೆ ಎಂದು ವರದಿ ಮಾಡಿದೆ.
“ಜಲಸಂಧಿಯ ಮೂಲಕ ಹಾದುಹೋಗಲು ನೀವು ಇರಾನಿನ ಸೇನಾ ನೌಕಾಪಡೆಯಿಂದ ಅನುಮತಿ ಪಡೆಯಬೇಕು. ಯಾವುದೇ ಹಡಗು ಅನುಮತಿಯಿಲ್ಲದೆ ಸಾಗಲು ಪ್ರಯತ್ನಿಸಿದರೆ, ಅದನ್ನು ನಾಶಪಡಿಸಲಾಗುತ್ತದೆ ಎಂದು ನೌಕೆಗಳಿಗೆ ಎಚ್ಚರಿಕೆ ರವಾನೆ ಮಾಡಲಾಗಿದೆ.
ನಿನ್ನೆಯಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಸಂಪೂರ್ಣ, ತಕ್ಷಣದ ಮತ್ತು ಸುರಕ್ಷಿತ” ರೀತಿಯಲ್ಲಿ ಜಲಸಂಧಿಯನ್ನು ತೆರೆದರೆ ಮಾತ್ರ ಇಸ್ಲಾಮಿಕ್ ಗಣರಾಜ್ಯದ ಮೇಲಿನ ದಾಳಿಯನ್ನು ಎರಡು ವಾರಗಳವರೆಗೆ ಸ್ಥಗಿತಗೊಳಿಸಲು ಒಪ್ಪಿಕೊಂಡಿದ್ದೇನೆ ಎಂದು ಹೇಳಿದ ನಂತರ ಇರಾನ್ ನಿಂದ ಈ ಎಚ್ಚರಿಕೆ ಸಂದೇಶ ಬಂದಿದೆ.
ಇರಾನ್ ಯುದ್ಧದ ಹಿನ್ನಲೆಯಲ್ಲಿ ಹಾರ್ಮುಜ್ ಜಲಸಂಧಿಯಲ್ಲಿ ಹೆಚ್ಚಿನ ಹಡಗುಗಳು ನಿಂತಿವೆ. ಇರಾನ್ ಇನ್ನೂ ಹಾರ್ಮುಜ್ ಜಲಸಂಧಿಯ ಮೇಲೆ ಪ್ರಭಾವ ಬೀರಲು ಉದ್ದೇಶಿಸಿದೆ ಮತ್ತು ಯುದ್ಧವಿಮಾನಗಳು ಇನ್ನೂ ಪರ್ಷಿಯನ್ ಕೊಲ್ಲಿಯ ಮೇಲೆ ಇವೆ ಎಂದು ಸಿಬ್ಬಂದಿಗಳು ಹಂಚಿಕೊಂಡ ಫೋಟೋಗಳು ಮತ್ತು ವೀಡಿಯೊಗಳ ಪ್ರಕಾರ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಇರಾನ್ ಮತ್ತು ಒಮನ್ ನಡುವೆ ಕೇವಲ 34 ಕಿಲೋಮೀಟರ್ (21 ಮೈಲುಗಳು) ಅಗಲವಿರುವ ಈ ಜಲಸಂಧಿಯು ಕೊಲ್ಲಿಯಿಂದ ಹಿಂದೂ ಮಹಾಸಾಗರಕ್ಕೆ ಸಾಗಣೆಯನ್ನು ಒದಗಿಸುತ್ತದೆ ಮತ್ತು ಇದು ವಿಶ್ವದ ತೈಲ ಪೂರೈಕೆಯ ಐದನೇ ಒಂದು ಭಾಗ ಮತ್ತು ರಸಗೊಬ್ಬರ ಸೇರಿದಂತೆ ಇತರ ಪ್ರಮುಖ ಸರಕುಗಳಿಗೆ ಪ್ರಮುಖ ಮಾರ್ಗವಾಗಿದೆ.
