IMG-20260408-WA0049-1024x768.jpg
Spread the love

ಮಂಗಳೂರು: ದಿನಾಂಕ:08-04-2026(ಹಾಯ್ ಉಡುಪಿ ನ್ಯೂಸ್) ನಗರದಲ್ಲಿ ಶೈಕ್ಷಣಿಕ ಹಂತದಲ್ಲೇ ಮಾದಕ ದ್ರವ್ಯ ಜಾಲ ವಿಸ್ತರಿಸುತ್ತಿರುವ ಆತಂಕಕಾರಿ ಬೆಳವಣಿಗೆಯೊಂದು ಬೆಳಕಿಗೆ ಬಂದಿದೆ. ಗಾಂಜಾ ಮಾರಾಟ ದಂಧೆಯಲ್ಲಿ ತೊಡಗಿದ್ದ ಐವರು ಕಾಲೇಜು ವಿದ್ಯಾರ್ಥಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ವಿದ್ಯಾರ್ಥಿಯೊಬ್ಬನ ಬಳಿ ಸಣ್ಣ ಪ್ರಮಾಣದ ಗಾಂಜಾ ಪೊಟ್ಟಣ ಪತ್ತೆಯಾದ ಹಿನ್ನೆಲೆಯಲ್ಲಿ ಆತನ ಪೋಷಕರು ನೀಡಿದ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ತನಿಖೆಯ ವೇಳೆ ಈ ವಿದ್ಯಾರ್ಥಿಯ ಹಿಂದೆ ಐವರು ವಿದ್ಯಾರ್ಥಿಗಳ ದೊಡ್ಡ ಪೆಡ್ಲಿಂಗ್ ಜಾಲವೇ ಇರುವುದು ದೃಢಪಟ್ಟಿದೆ.

ಬಂಧಿತ ವಿದ್ಯಾರ್ಥಿಗಳು ನಗರದ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದು, ಹಾಸ್ಟೆಲ್‌ಗಳ ಬದಲಾಗಿ ಪ್ರತ್ಯೇಕವಾಗಿ ಬಾಡಿಗೆ ಕೊಠಡಿಯಲ್ಲಿ ವಾಸವಿದ್ದರು. ಇದೇ ಕೊಠಡಿಯನ್ನು ಕೇಂದ್ರವಾಗಿಸಿಕೊಂಡು ಗಾಂಜಾವನ್ನು ಸಣ್ಣ ಪೊಟ್ಟಣಗಳನ್ನಾಗಿ ಮಾಡಿ ಗ್ರಾಹಕರಿಗೆ ಸರಬರಾಜು ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಆರು ವಿವಿಧ ಕಾಲೇಜುಗಳ ಸುಮಾರು 40 ವಿದ್ಯಾರ್ಥಿಗಳು ಹಾಗೂ ಇತರ 10 ಮಂದಿ ಇವರಿಂದ ಗಾಂಜಾ ಖರೀದಿಸುತ್ತಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ.

ಮಕ್ಕಳ ವರ್ತನೆಯಲ್ಲಿ ಸಣ್ಣ ಬದಲಾವಣೆ ಕಂಡರೂ ಪೋಷಕರು ಎಚ್ಚೆತ್ತುಕೊಳ್ಳಬೇಕು. ವಿಶೇಷವಾಗಿ ಮಕ್ಕಳು ಹಾಸ್ಟೆಲ್‌ ಬಿಟ್ಟು ಬಾಡಿಗೆ ಕೊಠಡಿಗಳಲ್ಲಿ ಉಳಿದುಕೊಂಡಾಗ ಪೋಷಕರು ಮತ್ತು ಕಾಲೇಜು ಆಡಳಿತ ಮಂಡಳಿ ಅವರ ಮೇಲೆ ನಿಗಾ ಇಡುವುದು ಅತ್ಯಗತ್ಯ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ.

error: No Copying!