qqgb107g_jeyaraj-and-bennicks-father-son-killed-in-tamil-nadu-ndtv-file_625x300_07_July_20.jpg
Spread the love

ಸುಮಾರು ಆರು ವರ್ಷಗಳ ಹಿಂದೆ ಅಂದರೆ 2020ರಲ್ಲಿ ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ನಡೆದ ಅಮಾನುಷ ಲಾಕಪ್ ಡೆತ್ ಬಗ್ಗೆ ಬರೆದ ಲೇಖನವಿದು. ಇದೀಗ ಆರೋಪಿಗಳಿಗೆ ಅಪರಾಧಿಗಳೆಂದು ಘೋಷಿಸಿ ಮರಣದಂಡನೆಯನ್ನು ವಿಧಿಸಲಾಗಿದೆ.

ಮರಣದಂಡನೆಯೂ ಒಂದು ರೀತಿಯ ಕೊಲೆ. ಈ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬಹುದಿತ್ತೇನೋ….
ಇರಲಿ ಅದು ನ್ಯಾಯಾಂಗದ ವ್ಯಾಪ್ತಿಗೆ ಸೇರಿದ್ದು. ಆಗ ಬರೆದ ಲೇಖನ ಈಗ ಮತ್ತೆ ನೆನಪಿಸುತ್ತ…..

ಲಾಕಪ್ ಡೆತ್ ಗಳೆಂಬ ಭಯಾನಕ ಮತ್ತು ಅನಾಗರಿಕ ಸಾವುಗಳು ಮತ್ತು ನಾಗರಿಕ ಸಮಾಜದ ರಕ್ತ ಸಿಕ್ತ ಚುಕ್ಕೆಗಳು……

ದುಷ್ಟರ ಶಿಕ್ಷೆಗಾಗಿ, ಶಿಷ್ಟರ ರಕ್ಷಣೆಗಾಗಿ ಸ್ವತಃ ಸಮಾಜ ನಿರ್ಮಿಸಿಕೊಂಡ ವ್ಯವಸ್ಥೆಯೇ ಪೋಲೀಸ್…..

ವೈದ್ಯೋ ನಾರಾಯಣೋ ಹರಿ ಎನ್ನುವ ಮಾತಿಗೆ ಹತ್ತಿರವಾದ ಮತ್ತೊಂದು ವೃತ್ತಿ ಪೋಲೀಸ್…..

ಭಾರತೀಯ ಸಮಾಜ ಮತ್ತು ಜನರ ಮನಸ್ಥಿತಿ ಸ್ವಲ್ಪ ಮೃದು ಮತ್ತು ಭಯಗ್ರಸ್ಥವಾಗಿದೆ. ತಪ್ಪು ಮಾಡದಿದ್ದರೂ ಪೋಲೀಸರನ್ನು ಕಂಡರೆ ಸಾಮಾನ್ಯ ಜನ ಹೆದರುತ್ತಾರೆ. ಜೀವನದಲ್ಲಿ ಒಮ್ಮೆಯೂ ಪೋಲೀಸ್ ಠಾಣೆಯ ಮೆಟ್ಟಿಲು ಹತ್ತದ ಅನೇಕ ಜನರಿದ್ದಾರೆ. ಠಾಣೆ ಹತ್ತುವುದೇ ಒಂದು ಅವಮಾನಕರ ವಿಷಯ ಎಂದೇ ಭಾವಿಸುತ್ತಾರೆ. ಪೋಲೀಸರ ಭಾಷೆಯ ಬಗ್ಗೆಯೇ ಹಲವಾರು ದೂರುಗಳಿವೆ.

ಪೋಲೀಸರ ಒಡನಾಟ ಮತ್ತು ಕಾರ್ಯಚಟುವಟಿಕೆಯೇ ಕೆಟ್ಟವರೊಂದಿಗೆ ಇರುತ್ತದೆ. ಆಧುನಿಕತೆ ಬೆಳೆದಂತೆಲ್ಲಾ ಅವರಲ್ಲೂ ಕೆಲವು ಸುಧಾರಣೆಗಳನ್ನು ಮಾಡಲಾಗುತ್ತಿದೆ. ಆದರೂ ಲಾಕಪ್ ಡೆತ್ ಗಳು ಈಗಲೂ ಸಂಭವಿಸುತ್ತಲೇ ಇವೆ.

ಇದಕ್ಕಿಂತಲೂ ಕ್ರೌರ್ಯದ ಕೊಲೆಗಳು ನಮ್ಮ ಸುತ್ತಲೂ ನಡೆಯುತ್ತಿರುತ್ತವೆ. ಆದರೆ ರಕ್ಷಕರೇ ಭಕ್ಷಕರಾಗುವ ಘಟನೆಗಳು ಮಾತ್ರ ತುಂಬಾ ಭೀಕರ ಪರಿಣಾಮ ಬೀರುತ್ತದೆ.

ಇದು ಒಂದೆರಡಲ್ಲ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸಾಕಷ್ಟು ಪೋಲೀಸ್ ಸ್ಟೇಷನ್ನುಗಳಲ್ಲಿ ಈ ರೀತಿಯ ಅತಿರೇಕದ ಘಟನೆಗಳು ವರದಿಯಾಗುತ್ತಲೇ ಇವೆ.

ಏಕೆ ಹೀಗೆ ? ವೈಯಕ್ತಿಕವಲ್ಲದ ಸಾರ್ವಜನಿಕ ಕರ್ತವ್ಯ ನಿರ್ವಹಿಸಬೇಕಾದ ಪೋಲೀಸರು ಏಕೆ ಇಷ್ಟೊಂದು ಅಮಾನವೀಯ ಘಟನೆಗೆ ಕೈ ಹಾಕುತ್ತಾರೆ ? ಸಂವಿಧಾನಾತ್ಮಕವಾಗಿ ತಮ್ಮ ಕರ್ತವ್ಯ ನಿರ್ವಹಿಸಿದರೆ ಸಾಕಲ್ಲವೇ ?

ಏಕೋ ಏನೋ ಪೋಲೀಸರೆಂದರೆ ದೌರ್ಜನ್ಯ, ದರ್ಪ, ಗಡುಸು, ಕ್ರೌರ್ಯ,, ಅಹಂಕಾರ, ದಬ್ಬಾಳಿಕೆಯ ಅಧಿಕಾರ ಹೊಂದಿರುವವರು ಎಂಬ ಭಾವನೆಯನ್ನು ಮೂಲದಿಂದಲೇ ಹುಟ್ಟು ಹಾಕಲಾಗಿದೆ. ಎಷ್ಟೋ ಜನ ಹೇಳುತ್ತಾರೆ, ಖಾಕಿ ಬಟ್ಟೆ ತೊಟ್ಟ ತಕ್ಷಣ ಏನೋ ವಿದ್ಯುತ್ ಸಂಚಾರವಾದಂತೆ ನಮ್ಮಲ್ಲಿ ಧೈರ್ಯ ಉಂಟಾಗುತ್ತದೆ ಎಂದು. ಆ ಭ್ರಮೆ ಅವರಲ್ಲಿ ಸೃಷ್ಟಿಯಾಗಿ ಅದು ಬಹಳಷ್ಟು ಸಲ ತನ್ನ ನಿಯಂತ್ರಣ, ಸಂಯಮ ಕಳೆದುಕೊಂಡು ಈ ಲಾಕಪ್ ಡೆತ್ ಗಳಿಗೆ ಕಾರಣವಾಗುತ್ತದೆ.

ಪ್ರಭಾವಿ ವ್ಯಕ್ತಿಗಳ ಬಳಿ ತಮ್ಮ ದರ್ಪ ನಡೆಯುವುದಿಲ್ಲ ಎಂಬ ಅರಿವು ಇರುವುದರಿಂದ ಅಮಾಯಕರ ಮೇಲೆ ಅದನ್ನು ಪ್ರಯೋಗಿಸುತ್ತಾರೆ. ಅದರ ಪರಿಣಾಮವೇ ಲಾಕಪ್ ಡೆತ್.

ವಿರೋಧಿಗಳು ಕೊಡುವ ಹಣ ಅಥವಾ ಇತರ ಆಮಿಷಗಳಿಗಾಗಿಯೋ, ಮತ್ಯಾರನ್ನೋ ಮೆಚ್ಚಿಸಲೋ, ತನ್ನ ಒಳಗಿನ ಕ್ರೌರ್ಯ ನಿಯಂತ್ರಿಸಲಾಗದ ಮಾನಸಿಕ ಸ್ಥಿತಿಯೋ, ಆರೋಪಿ ಕೆಲವೊಮ್ಮೆ ಧೈರ್ಯದಿಂದ ತನ್ನ ಹಕ್ಕುಗಳನ್ನು ಕೇಳುವುದನ್ನು ಸಹಿಸುವ ತಾಳ್ಮೆ ಇಲ್ಲದಿರುವುದೋ, ಆರೋಪಿಯೇ ಕೆಲವು ಸಲ ಅತ್ಯಂತ ಕೆಟ್ಟದ್ದಾಗಿ ವರ್ತಿಸಿದಾಗ ಅದನ್ನು ಮಿತಿ ಮೀರಿ ತಡೆಯಲು ಯತ್ನಿಸುವುದು, ಅನಿರೀಕ್ಷಿತ ಅಚಾತುರ್ಯ ಹೀಗೆ ಹಲವಾರು ಸಂದರ್ಭಗಳ ದುರುಪಯೋಗವೇ ಲಾಕಪ್ ಡೆತ್.

ಸಿನಿಮಾಗಳ ಪ್ರಭಾವ, ರಾಜಕಾರಣಿಗಳ ಹಸ್ತಕ್ಷೇಪ, ರೌಡಿಗಳು ಮತ್ತು ಅನೈತಿಕ ಚಟುವಟಿಕೆಗಳ ಖದೀಮರ ಕಾನೂನು ಬಾಹಿರ ಕೃತ್ಯಗಳ ಪರಿಣಾಮ, ನ್ಯಾಯಾಲಯಗಳ ದೌರ್ಬಲ್ಯಗಳಿಂದ ಸಂಭವಿಸುವ ಘಟನೆಗಳೇ ಲಾಕಪ್ ಡೆತ್.

ಪೋಲೀಸ್ ವ್ಯವಸ್ಥೆ ಒಂದು ಅನಿವಾರ್ಯ ವೃತ್ತಿ. ಅದು ಸಮಾಜದ ಸ್ವಾಸ್ಥ್ಯ ಕಾಪಾಡಲು ಇರಲೇಬೇಕು. ಆದರೆ ಅದನ್ನು ಮೂಲ ಕಲ್ಪನೆಯಿಂದಲೇ ಪುನರ್ ರೂಪಿಸಬೇಕಾಗಿದೆ. ಆದರೆ ನಾವು ಏನೇ ಹೇಳಿದರು ಇಡೀ ಸಮಾಜ ಇದರ ಜವಾಬ್ದಾರಿ ಹೊರಬೇಕಾಗುತ್ತದೆ. ಸಮಾಜದ ಯಾವುದೋ ಒಂದು ವಿಭಾಗವನ್ನು ಆದರ್ಶವಾಗಿ ರೂಪಿಸಲು ಸಾಧ್ಯವಿಲ್ಲ. ಶಿಕ್ಷಣದಿಂದ ಆಡಳಿತದವರೆಗೆ ಎಲ್ಲವೂ ಸುಧಾರಣೆಯಾಗಬೇಕು.

ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯ ವ್ಯಾಪ್ತಿಯಲ್ಲಿ ಅಪ್ಪ ಮತ್ತು ಮಗನ ಅಮಾನುಷ ಲಾಕಪ್ ಡೆತ್ ಸಂಭವಿಸಿದೆ. ಸುದ್ದಿ ಮಾಧ್ಯಮಗಳ ವಿವರಣೆಯಂತೆ ಅದು ಊಹಿಸಲಸಾಧ್ಯ, ಕೇಳಲು ಸಾಧ್ಯವಾಗದ ಭಯಂಕರ ಹಿಂಸಾತ್ಮಕ ಕೊಲೆಯಾಗಿದೆ. ಮನಸ್ಸು ತಲ್ಲಣಗೊಂಡಿದೆ. ಸರ್ಕಾರಿ ಅಧಿಕಾರಿಯೊಬ್ಬ ಇಷ್ಟೊಂದು ಅಮಾನುಷ ರೀತಿಯಲ್ಲಿ ವರ್ತಿಸಲು ಹೇಗೆ ಸಾಧ್ಯ ಎಂದು ಕೊರಗುತ್ತಿದೆ.

2020 ರ ಈ ಸಮಯದಲ್ಲೂ, ನಮ್ಮೆಲ್ಲರ ಕಣ್ಣ ಮುಂದೆ ಈ ಘಟನೆ ನಡೆದಿರುವುದು ನಮ್ಮ ನೈತಿಕತೆಯನ್ನೇ ಪ್ರಶ್ನಿಸುವಂತಿದೆ. ದೇಶದ ಇಡೀ ಜನ ಸಮೂಹ ದೆಹಲಿಯ ನಿರ್ಭಯ ಅತ್ಯಾಚಾರದ ಸಮಯದಲ್ಲಿ ಎಚ್ಚೆತ್ತುಕೊಂಡು ಪ್ರತಿಭಟಿಸಿದಂತೆ ಒಂದು ಚಳವಳಿ ರೂಪಿಸಿದರೆ ಕನಿಷ್ಟ ಮುಂದಿನ ಲಾಕಪ್ ಡೆತ್ ಗಳ ಸಂಖ್ಯೆ ಕಡಿಮೆ ಮಾಡಬಹುದು.

ಪೋಲೀಸರೆ, ನೀವು ಸಹ ಮನುಷ್ಯರೇ,
ಈ ಸಮಾಜವನ್ನು ನಿಮಗೆ ಗುತ್ತಿಗೆ ನೀಡಿಲ್ಲ. ಎಲ್ಲ ವೃತ್ತಿಗಳಂತೆ ನೀವು ಸಹ ಸರ್ಕಾರಿ ಸೇವಕರು. ಸಾರ್ವಜನಿಕ ಹಣದಿಂದ ಬದುಕುತ್ತಿರುವವರು. ಒಳ್ಳೆಯ ಪ್ರಾಮಾಣಿಕ ಕೆಲಸ ಮಾಡುವುದು ನಿಮ್ಮ ಕರ್ತವ್ಯ. ದೌರ್ಜನ್ಯ ನಿಮ್ಮ ವಿಕೃತ ಮನಸ್ಥಿತಿಯ ಪ್ರತೀಕ. ನಿಮ್ಮ ಗಡುಸುತನ, ಕರ್ತವ್ಯ ಪ್ರಜ್ಞೆ ಕಾನೂನು ಬಾಹಿರ ವ್ಯಕ್ತಿಗಳ ಬಳಿ ತೋರಿಸಿ. ಅಮಾಯಕ ಜನರನ್ನು ಹಿಂಸಿಸುವುದು, ನ್ಯಾಯ ಕೇಳಿದವರನ್ನು ನಿಮ್ಮ ವಿರೋಧಿಗಳೆಂದು ಭಾವಿಸುವುದು ಸರಿಯಲ್ಲ. ನಮ್ಮ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬ ಪ್ರಜ್ಞೆ ಇರಲಿ. ಇಲ್ಲಿ ಸಣ್ಣ ಪುಟ್ಟ ತಪ್ಪುಗಳು ಸಹಜ. ದೊಡ್ಡವರಿಗೆ ಒಂದು ನ್ಯಾಯ, ಬಡವರಿಗೆ ಒಂದು ನ್ಯಾಯ ಇದೆ. ಅದನ್ನು ದಯವಿಟ್ಟು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಿ.

ಹೊಟ್ಟೆ ಪಾಡಿಗಾಗಿ ಇಡೀ ಜೀವನ ಸಾಗಿಸುತ್ತಿರುವ ಕೋಟ್ಯಂತರ ಜನ ಇರುವಾಗ ಕಾನೂನಿನ ಜಾರಿಯಲ್ಲಿ ಸಂಯಮವಿರಲಿ.

ಮನಗಳಲ್ಲಿ,
ಮನೆಗಳಲ್ಲಿ,
ಮತಗಳಲ್ಲಿ,
ಬದಲಾವಣೆ ಆಗುವವರೆಗೂ ಈ ದೌರ್ಜನ್ಯಗಳು ನಿರಂತರ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.

error: No Copying!