IMG_20260331_201907.jpg
Spread the love

ಬೆಂಗಳೂರು: ದಿನಾಂಕ:31-03-2026 (ಹಾಯ್ ಉಡುಪಿ ನ್ಯೂಸ್) ಕೇಂದ್ರ ಸರ್ಕಾರವು 2023-24ರಿಂದ ಜಿ.ಎಸ್.ಟಿ. ಪರಿಹಾರ ಸ್ಥಗಿತಗೊಳಿಸಿದ್ದರಿಂದ, ಕೇಂದ್ರ ಸರ್ಕಾರ ಅಂದಾಜಿಸಿದ್ದ ಜಿ.ಎಸ್.ಟಿ. ಸಂಗ್ರಹಣೆಗೆ ಹೋಲಿಸಿದರೆ, ರಾಜ್ಯದ ಜಿ.ಎಸ್.ಟಿ ಸಂಗ್ರಹಣೆಯು 2023-24ರಲ್ಲಿ 30,871 ಕೋಟಿ ರೂ.ಗಳು ಮತ್ತು 2024-25ರಲ್ಲಿ 40,368 ಕೋಟಿ ರೂ.ಗಳು ಕೊರತೆಯಾಗಿರುತ್ತದೆ. 15ನೇ ಹಣಕಾಸು ಆಯೋಗದಲ್ಲಿ ರಾಜ್ಯದ ತೆರಿಗೆ ಪಾಲು ಕಡಿಮೆಯಾದ ಕಾರಣ 2023-24ರಿಂದ 2025-26ರವರೆಗೆ 39,500 ಕೋಟಿ ರೂ.ಗಳು ನಷ್ಟವಾಗಿರುತ್ತದೆ. ಇದರ ಪರಿಣಾಮವಾಗಿ, 2023-24ರಿಂದ ರಾಜಸ್ವ ಕೊರತೆಯನ್ನು ಎದುರಿಸುವಂತಾಗಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ (2019-2022) ಕೇಂದ್ರ ಸರ್ಕಾರ ಜಿ.ಎಸ್.ಟಿ ಪರಿಹಾರ ನೀಡಿತ್ತು. ಈ ಅವಧಿಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿರುವ ಒಟ್ಟು ಪರಿಹಾರ 57,351 ಕೋಟಿ ರೂ.ಗಳು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ, 2023ರಿಂದ ಕೇಂದ್ರ ಸರ್ಕಾರ ಜಿ.ಎಸ್.ಟಿ ಪರಿಹಾರ ನೀಡುವುದನ್ನು ನಿಲ್ಲಿಸಿರುತ್ತದೆ. ಆದಕಾರಣ ರಾಜ್ಯದ ರಾಜಸ್ವ ಸಂಗ್ರಹಣೆ ಕಡಿಮೆಯಾಗಿ ರಾಜಸ್ವ ಕೊರತೆಯನ್ನು ಎದುರಿಸಬೇಕಾಯಿತು.

2017ರಲ್ಲಿ ಜಿಎಸ್‌ಟಿ ಜಾರಿಯಾದಾಗಿನಿಂದ, 15ನೇ ಹಣಕಾಸು ಆಯೋಗ ಮಾಡಿದ ಅನ್ಯಾಯದಿಂದ, 15ನೇ ಹಣಕಾಸು ಆಯೋಗ ಮಾಡಿದ ಶಿಫಾರಸ್ಸುಗಳನ್ನು ಜಾರಿ ಮಾಡದೆ ಕೇಂದ್ರವು ಮಾಡಿದ ದ್ರೋಹದಿಂದ, ಜಿಎಸ್‌ಟಿ ಪರಿಹಾರ ನೀಡದ ಕಾರಣ ಸುಮಾರು 2,00,000 ಕೋಟಿ ರೂ.ಗಳಿಗೂ ಹೆಚ್ಚಿನ ನಷ್ಟ ರಾಜ್ಯಕ್ಕೆ ಉಂಟಾಗಿದೆ. ಕೇಂದ್ರ ಸರ್ಕಾರ ಅನುಸರಿಸುತ್ತಾ ಬಂದಿರುವ ಒಕ್ಕೂಟ ವಿರೋಧಿ ಧೋರಣೆಯ ಹೊರತಾಗಿಯೂ ರಾಜ್ಯದ ಆರ್ಥಿಕತೆ ಎಲ್ಲಿಯೂ ಹಳಿ ತಪ್ಪದಂತೆ ಎಚ್ಚರಿಕೆ ಮತ್ತು ಬದ್ಧತೆಯಿಂದ ಮುನ್ನಡೆಸುತ್ತಾ ಬಂದಿದ್ದೇವೆ.

ಕಳೆದ ವರ್ಷ ಕೇಂದ್ರ ಸರ್ಕಾರ ಇದ್ದಕ್ಕಿದ್ದಂತೆ ಮಾಡಿದ ಜಿಎಸ್‌ಟಿ ದರಗಳ ಪರಿಷ್ಕರಣೆಯಿಂದಾಗಿ ರಾಜ್ಯದ ಆರ್ಥಿಕತೆಯ ಮೇಲೆ ಹೊಡೆತ ಬಿತ್ತು. ಈ ಪರಿಷ್ಕರಣೆಗೆ ಮುನ್ನ, ರಾಜ್ಯದ ಸರಾಸರಿ ಮಾಸಿಕ ಜಿ.ಎಸ್.ಟಿ ಸಂಗ್ರಹಣೆಯು ಶೇ.10ರಷ್ಟು ಬೆಳವಣಿಗೆಯನ್ನು ದಾಖಲಿಸಿತ್ತು. ಆದರೆ ದರ ಪರಿಷ್ಕರಣೆಯ ನಂತರ, ಜಿ.ಎಸ್.ಟಿ ಸಂಗ್ರಹಣೆಯ ಮಾಸಿಕ ಬೆಳವಣಿಗೆಯು ಶೇ.4ರಷ್ಟು ಕಡಿಮೆಯಾಗಿದೆ. 2025-26ನೇ ಸಾಲಿನಲ್ಲಿ ಸುಮಾರು ₹10,000 ಕೋಟಿ ಕೊರತೆಯಾದರೆ, 26-27ರಲ್ಲಿ 15,000 ಕೋಟಿ ರೂ.ಗಳಷ್ಟು ಕೊರತೆಯಾಗಬಹುದು ಎಂದು ಅಂದಾಜಿಸಲಾಗಿದೆ. ಇದು ನಮ್ಮ ರಾಜಸ್ವ ಕೊರತೆಗೆ ಪ್ರಮುಖ ಕಾರಣ.

ಕೇಂದ್ರ ಸರ್ಕಾರ ನಡೆಸಿದ ಜಿಎಸ್‌ಟಿ ದರ ಪರಿಷ್ಕರಣೆಯಿಂದ ಸಾಮಾನ್ಯ ಜನರಿಗೆ ಯಾವ ಲಾಭವೂ ಆಗಿಲ್ಲ. ಕಾರು, ಬೈಕುಗಳ ಖರೀದಿ ಮಾಡಿದವರಿಗೆ ಸ್ವಲ್ಪ ಲಾಭವಾಗಿರಬಹುದು. ಇದರ ಬಹುತೇಕ ಲಾಭವನ್ನು ಬಹುರಾಷ್ಟ್ರೀಯ ಕಂಪೆನಿಗಳು, ಕಾರ್ಪೊರೇಟ್ ಕುಳಗಳು ಹೊತ್ತುಕೊಂಡು ಹೋಗುತ್ತಿವೆ. ಇಷ್ಟರ ನಡುವೆಯೂ ಕಳೆದ ವರ್ಷದ ಆಯವ್ಯಯಕ್ಕಿಂತ ಸುಮಾರು 22,573 ಕೋಟಿ ರೂ. ಹೆಚ್ಚಿನ ರೆವಿನ್ಯೂ ಸಂಗ್ರಹವಾಗಬಹುದೆಂದು ಅಂದಾಜಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

error: No Copying!