ನಗೆಯು ಬರುತಿದೆ ಎನಗೆ ನಗೆಯು ಬರುತಿದೆ……
ಎಂಬ ದಾಸವಾಣಿಯಂತೆ…….
” ನಾವು ಮಾರಾಟಕ್ಕಿಲ್ಲ “
ಟಿವಿ ನ್ಯೂಸ್ ಚಾನಲ್ tag line.
” ಇದು ಯಾರ ಆಸ್ತಿಯೂ ಅಲ್ಲ “
ಇನ್ನೊಂದು ಚಾನಲ್ ಘೋಷವಾಕ್ಯ.
” ನಾವು ಸುಳ್ಳು ಹೇಳುವುದಿಲ್ಲ “
ಮತ್ತೊಂದು ಚಾನಲ್ ಶೀರ್ಷಿಕೆ.
” ಇದು ಭರವಸೆಯ ಬೆಳಕು “
ಮಗದೊಂದು ಚಾನಲ್ ಉದ್ಘೋಷ.
” ನೇರ ದಿಟ್ಟ ನಿರಂತರ “
ಇದು ಮತ್ತೊಂದು ಚಾನಲ್ ಘೋಷಣೆ .
” ಇದು ನಿಮ್ಮ ಚಾನಲ್ “
ಒಂದು ಚಾನಲ್ ಹೇಳಿಕೊಳ್ಳುವುದು.
ಸೂಕ್ಷ್ಮವಾಗಿ ಗಮನಿಸಿದರೆ ಈ Tag line ಘೋಷಣೆಗಳೇ ಇಂದಿನ ಕನ್ನಡ ಟಿವಿ ನ್ಯೂಸ್ ಮಾಧ್ಯಮಗಳು ತಲುಪಿರುವ ಅಧೋಗತಿಯನ್ನು – ಜನರಲ್ಲಿ ಉಂಟಾಗಿರುವ ಅಪನಂಬಿಕೆಯನ್ನು ಸೂಚಿಸುತ್ತದೆ.
ನಿಮ್ಮನ್ನು ಯಾರು ಕೇಳಿದರು ಸ್ವಾಮಿ,
ಇದು ಯಾರ ಆಸ್ತಿ, ನೀವು ಮಾರಾಟಕ್ಕಿಲ್ಲ, ನೀವು ಸುಳ್ಳು ಹೇಳುತ್ತೀರಿ, ನಿಮ್ಮ ಬಗ್ಗೆ ಭರವಸೆ ಇಲ್ಲ, ನಿಮ್ಮದು ದಿಟ್ಟತನವಲ್ಲದ ಸುದ್ದಿ ಎಂದು. ಏಕೆ ನಿಮಗೇ ಅನುಮಾನ ಶುರುವಾಗಿದೆಯೇ ?
ಪತ್ರಿಕಾ ಧರ್ಮ ಎಂಬುದೇ ಪ್ರಾಮಾಣಿಕತೆಗೆ ನಿಸ್ಪಕ್ಷಪಾತತೆಗೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ, ನ್ಯಾಯಕ್ಕೆ, ಸತ್ಯಕ್ಕೆ, ವೈಚಾರಿಕತೆಗೆ ಮತ್ತೊಂದು ಹೆಸರಾಗಿರುವಾಗ ಅದನ್ನು ಈಗ ಮತ್ತೆ ಮತ್ತೆ ಬಹಿರಂಗವಾಗಿ ಹೇಳಿಕೊಳ್ಳುವ ಸ್ಥಿತಿ ಏಕೆ ಉಂಟಾಗಿದೆ ಎಂದು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
ಎಂತಹ ಸುಳ್ಳು, ವಿಕೃತ, ವಿವೇಚನೆ ಇಲ್ಲದ ಅತ್ಯಂತ Childish behavior ನಿಮ್ಮದು ಎಂದರೆ……
ದೇಶದ ಈ ವರ್ಷದ ಆರ್ಥಿಕ ಸ್ಥಿತಿಗತಿಗಳನ್ನು ಜ್ಯೋತಿಷಿಗಳ ಮುಖಾಂತರ ನಿರ್ಧರಿಸುವಿರಿ.
ರಾಜಕೀಯ ಆಗುಹೋಗುಗಳನ್ನು ಸಂಖ್ಯಾಶಾಸ್ತ್ರದವರಿಂದ ಹೇಳಿಸುವಿರಿ.
ನೈಸರ್ಗಿಕ ವಿಕೋಪಗಳನ್ನು ಕವಡೆ ಶಾಸ್ತ್ರದವರಿಗೆ ಕೇಳುವಿರಿ.
ಮತೀಯ ಕೊಲೆಗಳನ್ನು ಚರ್ಚಿಸಲು ರಕ್ತದ ಕಲೆಗಳನ್ನು ಕೈಗೆ ಅಂಟಿಸಿಕೊಂಡಿರುವ ಧರ್ಮಾಂದ ಮತಾಂಧ ಭಯೋತ್ಪಾದಕರನ್ನೇ ಕರೆಸಿ ತಮ್ಮ ಅಮಾನವೀಯ ಕಾರ್ಯಗಳನ್ನು ಸಮರ್ಥಿಸಿಕೊಳ್ಳುವಂತೆ ವೇದಿಕೆ ಕೊಡುವಿರಿ.
ಒಂದೇ – ಎರಡೇ ನಿಮ್ಮ ಹುಚ್ಚಾಟಗಳು.
ಮುಗ್ಧ ಮೂರ್ಖ ಜನರ ಶಾಂತ ಸ್ವಭಾವ ಅಸಹನೆಯಿಂದ ಕುದಿಯುವಂತೆ ರಾಜಕಾರಣಿಗಳು ಮಾಡಿದರೆ, ಅದಕ್ಕೆ ತುಪ್ಪ ಸುರಿಯುವ ಕೆಲಸ
ಮತಾಂಧರು ಮಾಡಿದರೆ, ಅದಕ್ಕೆ ಬೆಂಕಿ ಹಚ್ಚುವ ಕೆಲಸ ನೀವು ಮಾಡುತ್ತಿರುವಿರಿ.
ನರಳಿ ಸುಡುತ್ತಿರುವುದು ಮಾತ್ರ ಹೆತ್ತ ತಾಯಿ ಕರುಳು.
ಸೂಕ್ಷ್ಮ ಮನಸ್ಸುಗಳ ನಿಮಗೆ ಇದಕ್ಕಿಂತ ಹೆಚ್ಚಿಗೆ ಹೇಳುವ ಅವಶ್ಯಕತೆ ಇಲ್ಲವೆನಿಸುತ್ತದೆ.
ಮಾಧ್ಯಮಗಳ ಚರ್ಚೆಗೆ ಹೊಸ ದಿಕ್ಕನ್ನು ಸೂಚಿಸುವ ಸಮಷ್ಟಿ ಪ್ರಜ್ಞೆಯ ಮಾರ್ಗ ಶೀಘ್ರ ಗೋಚರಿಸಲಿ ಎಂಬ ಆಶಯದೊಂದಿಗೆ……
ನಿನ್ನೆ ಪ್ರೀತಿಯ ಮನಸ್ಸುಗಳು ಕೈಕೊಂಡಿದ್ದ ಮಾಧ್ಯಮಗಳ ಸಂಯಮಕ್ಕಾಗಿ ” ಆತ್ಮಾವಲೋಕನ ಸತ್ಯಾಗ್ರಹ ” ಸಮಯದಲ್ಲಿ ಪಬ್ಲಿಕ್ ಟಿವಿ ಸುವರ್ಣ ಟಿವಿ ಬಿಟಿವಿ ಮತ್ತು ಟಿವಿ 9 ವಾಹಿನಿಗಳ ವರ್ತನೆ, ಅದನ್ನು ಸ್ವೀಕರಿಸಿದ ರೀತಿ ಮಾತ್ರ ನಮಗೆ ನೀಡಿದ ಅತ್ಯದ್ಭುತ ಸ್ವಾಗತ ಮಾತ್ರ ನಮಗೆ ದಾಸವಾಣಿ ನೆನಪಿಸಿತು…….
ಹೌದು ಸಂಖ್ಯಾ ದೃಷ್ಟಿಯಿಂದ ನಾವು ಕಡಿಮೆ ಜನ ಭಾಗವಹಿಸಿದ್ದೆವು. ಜನಪ್ರಿಯತೆಯ ದೃಷ್ಟಿಯಿಂದ ನಾವು ತೀರಾ ಅಪರಿಚಿತರು. ಅಧಿಕಾರ ಸಾಮರ್ಥ್ಯ ಯಾವುದು ನಮಗೆ ಇರಲಿಲ್ಲ. ನಾವು ಯಾವ ರಾಜಕೀಯ ಪಕ್ಷ ಧರ್ಮ ಸಿದ್ದಾಂತಗಳಿಗೆ ಒಳಗಾಗಿರಲಿಲ್ಲ. ಯಾವ ಸಂಘಟನೆಗೂ ಸೇರಿರಲಿಲ್ಲ.
ನಮಗೆ ಯಾವುದೇ ಬೇಡಿಕೆ ಇರಲಿಲ್ಲ. ಯಾವುದೇ ಹಾರಾಟ ಚೀರಾಟ ಘೋಷಣೆಗಳು ಇರಲಿಲ್ಲ.
ಅತ್ಯಂತ ಸಾಮಾನ್ಯ ಜನ ನಾವಾಗಿದ್ದೆವು.
ಒಂದು ಹೂವು, ಒಂದು ಪುಸ್ತಕ, ಒಂದು ಮನವಿ ಪತ್ತ ಇಷ್ಟು ಮಾತ್ರ ಅವರಿಗೆ ನೀಡಲು ಬಯಸಿದ್ದೆವು. ಅದನ್ನು ಆ ಸುದ್ದಿ ವಾಹಿನಿಯವರಿಗೆ ಮೊದಲೇ ತಿಳಿಸಿದ್ದೆವು ಮತ್ತು ಸ್ಥಳೀಯ ಆರಕ್ಷಕ ಠಾಣೆಗಳವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದೆವು. ಆದರೆ……
ಪಬ್ಲಿಕ್ ಟಿವಿಯ ಬಳಿ ನಾವು ತಲುಪುವ ವೇಳೆಗಾಗಲೇ ಸಾಕಷ್ಟು ಸಂಖ್ಯೆಯ ಪೋಲೀಸರು ಆ ವಾಹಿನಿಯ ರಕ್ಷಣೆಗಾಗಿ ಅಲ್ಲಿ ನೆರದಿದ್ದರು. ನಂತರ ನಾವು ಸಾಕಷ್ಟು ಕಾಡಿ ಬೇಡಿದ ಮೇಲೆ ನಮಗೆ ಮನವಿ ಪತ್ರ ಸಲ್ಲಿಸಲು ಅವಕಾಶ ನೀಡಲಾಯಿತು. ಆಗ ಅವರು ಸ್ವಾಗತಿಸಿದ – ಸ್ವೀಕರಿಸಿದ ರೀತಿ ಖಂಡಿತ ಸಮಾಧಾನಕರವಾಗಿ ಇರಲಿಲ್ಲ. ಪ್ರಕಾಂಡ ಪಂಡಿತರು ಅತ್ಯಂತ ಪ್ರಭಾವಶಾಲಿಗಳು ಆದ ನಮಗೆ ಯಾರೋ ಅಪರಿಚಿತರು ನಮ್ಮ ಅತಿರೇಕದ ವಿರುದ್ಧ ಸಂಯಮದ ಪಾಠ ಹೇಳುತ್ತಾರೆ ಇವರಿಗೆ ಎಷ್ಟು ಅಂಹಕಾರ ಇರಬೇಕು ಇವರು ದಾರಿಯಲ್ಲಿ ಹೋಗುವ ನಿಷ್ಪ್ರಯೋಜಕ ಜನರು ಎಂಬಂತೆ ಇತ್ತು. ಆದರೂ ನಾವು ಸಂಯಮದಿಂದ ಮನವಿ ಪತ್ರ ಸಲ್ಲಿಸಿ ಹೊರಬಂದೆವು……
ನಂತರ….
ಅಕ್ಕ ಪಕ್ಕದಲ್ಲಿಯೇ ಇರುವ ಸುವರ್ಣ ಮತ್ತು ಬಿಟಿವಿ ಕಡೆ ಹೊರಟೆವು. ಆ ಮಾಹಿತಿ ಮತ್ತು ನಮ್ಮ ಶಾಂತಿಯುತ ಸತ್ಯಾಗ್ರಹ ಯಶವಂತಪುರ ಪೋಲೀಸರಿಂದ ಅಲ್ಲಿನ ಪೋಲೀಸರಿಗೆ ರವಾನೆಯಾಯಿತು. ಆದರೆ ಸುವರ್ಣ ಮತ್ತು ಬಿಟಿವಿಯ ಸಂಬಂಧಪಟ್ಟವರು ಪೋಲೀಸರಿಗೆ ತಮ್ಮ ಪ್ರಭಾವ ಉಪಯೋಗಿಸಿ ನಾವು ಅವರ ಕಚೇರಿಯ ರಸ್ತೆಯ ಬಳಿ ಸಹ ತೆರಳಲು ಅವಕಾಶ ನೀಡದೆ ನಾವು ಪರಿಪರಿಯಾಗಿ ಕೇವಲ ಮನವಿ ಪತ್ರ ಸಲ್ಲುಸಲು ಕೇಳಿದ ಅವಕಾಶವನ್ನು ನಿರಾಕರಿಸಿದರು ಮತ್ತು ಕನಿಷ್ಠ ನಮ್ಮ ಬಳಿ ಬಂದು ವಾಹಿನಿಯ ಯಾರಾದರೂ ಒಂದು ಮನವಿ ಪತ್ರ ಸ್ವೀಕರಿಸಲು ಕೇಳಿದರು ಚಾನಲ್ ನವರು ನಿರಾಕರಿಸಿದರು ನಂತರ ನಮ್ಮನ್ನು ವಶಕ್ಕೆ ಪಡೆದು ಸಂಜೆಯ ವೇಳೆಗೆ ಬಿಡುಗಡೆ ಮಾಡಲಾಯಿತು. ಟಿವಿ 9 ನವರು ಸಹ ಮನವಿ ಪತ್ರ ಸ್ವೀಕರಿಸಲು ನಿರಾಕರಿಸಿದರು ಎಂದು ಪೋಲೀಸರಿಂದ ಮಾಹಿತಿ ತಿಳಿಯಿತು…..
ಉಕ್ಕಿನ ಕೋಟೆಯಲ್ಲಿ, ಗಾಜಿನ ಅರಮನೆಯಲ್ಲಿ,
ವಜ್ರದ ಹೃದಯದಲ್ಲಿ, ಕಲ್ಲಿನ ಮನಸ್ಸುಗಳಲ್ಲಿ, ದುರಹಂಕಾರದ ಭಾವನೆಗಳಲ್ಲಿ, ಅಜ್ಞಾನದ ಕೂಪದಲ್ಲಿ
ಭ್ರಮಾಲೋಕದ ಬದುಕಿನಲ್ಲಿ ಸಿಲುಕಿ ವಾಸ್ತವ ಜಗತ್ತಿನಿಂದ ದೂರ ಸರಿದಿರುವ ಮಾಧ್ಯಮ ಗೆಳೆಯರನ್ನು ಕಂಡು…….
ಇರಲಿ, ಇದು ನಮ್ಮ ಕರ್ತವ್ಯ ಮತ್ತು ಸ್ಪಂದನೆ.
ತಿರಸ್ಕಾರ ಮತ್ತು ಅವಮಾನಗಳು ಸಾರ್ವಜನಿಕ ಜೀವನದ ಅವಿಭಾಜ್ಯ ಅಂಗಗಳು. ಸಿನಿಮಾ ಧಾರವಾಹಿಗಳ ನಟರು, ರಾಜಕಾರಣಿಗಳು, ಧಾರ್ಮಿಕ ಮುಖಂಡರು, ಉದ್ಯಮಿಗಳು, ಭವಿಷ್ಯಕಾರರು ಜನಸಾಮಾನ್ಯರ ಸಮಾಧಿಯ ಮೇಲೆ ಮಹಡಿ ನಿರ್ಮಿಸಲು ಪ್ರಜಾಪ್ರಭುತ್ವದ ಕಾವಲುಗಾರರೇ ವೇದಿಕೆ ಕಲ್ಪಿಸುತ್ತಿರುವ ಸನ್ನಿವೇಶದಲ್ಲಿ…..
ಮಾಧ್ಯಮ ಮಿತ್ರರೇ ಮತ್ತೊಮ್ಮೆ ನಿಮ್ಮಲ್ಲಿ ಕಳಕಳಿಯ ಮನವಿ. ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ. ನಿಮ್ಮ ಬಾಗಿಲಿಗೆ ಬಂದ ಸಾಮಾನ್ಯ ಜನರ ಭಾವನೆ ಮುಂದೊಂದು ದಿನ ಪ್ರವಾಹವಾಗಿ ನುಗ್ಗಬಹುದು. ಹಾಗಾಗದಿರಲಿ. ಮಾಧ್ಯಮಗಳು ಸದಾ ಜಾಗೃತ ಸ್ಥಿತಿಯಲ್ಲಿ ಇರಲಿ ಎಂದು ಆಶಿಸುತ್ತಾ…..
ಮಾನವೀಯ ಮೌಲ್ಯಗಳ ಪುನರುತ್ಥಾನದ ನಮ್ಮ ಹೋರಾಟ ನಿರಂತರ ಮತ್ತು ದೀರ್ಘ. ಎಲ್ಲಾ ಸವಾಲುಗಳನ್ನು ಎದುರಿಸುತ್ತಾ…..
ಭಾಗವಹಿಸಿದ, ಪ್ರೋತ್ಸಾಹಿಸಿದ, ಬೆಂಬಲಿಸಿದ ಎಲ್ಲರಿಗೂ ಆತ್ಮೀಯ ಪ್ರೀತಿಯ ತುಂಬು ಹೃದಯದಿಂದ ಧನ್ಯವಾದಗಳನ್ನು ಅರ್ಪಿಸುತ್ತಾ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಹೆಚ್.ಕೆ.
9844013068…….