ಉಡುಪಿ: ದಿನಾಂಕ:19-03-2026 (ಹಾಯ್ ಉಡುಪಿ ನ್ಯೂಸ್) ಶಿವಳ್ಳಿ ಗ್ರಾಮದ ಕಕ್ಕುಂಜೆ ವಾರ್ಡಿನಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಮಣ್ಣು ಹಾಕಿ ಸಾರ್ವಜನಿಕರ ಸಂಚಾರಕ್ಕೆ ತಡೆ ಒಡ್ಡುತ್ತಿದ್ದ ಸೂರ್ಯಕಾಂತ ಎಂಬವನ ವಿರುದ್ಧ ಉಡುಪಿ ನಗರ ಸಭೆಯ ಪೌರಾಯುಕ್ತರು ಪೊಲೀಸರಿಗೆ ದೂರು ನೀಡಿದ್ದಾರೆ.
ಉಡುಪಿ ನಗರ ಸಭಾ ವ್ಯಾಪ್ತಿಯ ಶಿವಳ್ಳಿ ಕಕ್ಕುಂಜೆ ವಾರ್ಡಿನಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಸೂರ್ಯಕಾಂತ ಎಂಬಾತನು ಮಣ್ಣು ಹಾಕಿ ಸಾರ್ವಜನಿಕರಿಗೆ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ತಡೆ ಉಂಟು ಮಾಡುತ್ತಿರುವ ಬಗ್ಗೆ ಉಡುಪಿ ನಗರಸಭೆಯ ಪೌರಾಯುಕ್ತರಾದ ಮಹಾಂತೇಶ್ ಅವರಿಗೆ ಶಿವಳ್ಳಿ ಯ ಸಾರ್ವಜನಿಕರಾದ ಶ್ರೀಮತಿ ಮೆಟಿಲ್ಲಾ ಡಯಾಸ್ ಕಕ್ಕುಂಜೆ ಶಿವಳ್ಳಿ ಗ್ರಾಮ ಮತ್ತು ಇತರರು ದೂರು ನೀಡಿದ್ದು, ಅದರಂತೆ ಸಾರ್ವಜನಿಕ ರಸ್ತೆಯಲ್ಲಿ ಹಾಕಿರುವ ಮಣ್ಣನ್ನು ತೆರವುಗೊಳಿಸಲು ನಗರ ಸಭೆಯ ಶ್ರೀಚೇತನ್ ಸಹಾಯಕ ಅಭಿಯಂತರರು, ಪ್ರಕಾಶ್ ಪ್ರಭು ಕಿರಿಯ ಆರೋಗ್ಯ ನಿರೀಕ್ಷಕರು, ಶ್ರಾವ್ಯ ಕಂದಾಯ ನಿರೀಕ್ಷಕರು, ಸುಧಾಕರ ಕೋಟ್ಯಾನ್ ತೆರಿಗೆ ವಸೂಲಿದಾರ ಇವರಿಗೆ ಪೌರಾಯುಕ್ತರು ಆದೇಶ ಮಾಡಿರುತ್ತಾರೆ.
ಪೌರಾಯುಕ್ತರ ಆದೇಶದಂತೆ ಅಧಿಕಾರಿಗಳು ದಿನಾಂಕ 18/03/2026 ರಂದು ಬೆಳಿಗ್ಗೆ ಬ್ಯಾಕ್ ಲೋಡರ್ ಮತ್ತು ಪೌರ ಕಾರ್ಮಿಕ ರಾಘು ಅವರ ಜೊತೆ ಸಾರ್ವಜನಿಕ ರಸ್ತೆಯಲ್ಲಿರುವ ಮಣ್ಣನ್ನು ತೆರವುಗೊಳಿಸಲು ತೆರಳಿರುತ್ತಾರೆ. ಆ ಸಮಯ ಸೂರ್ಯಕಾಂತ ಎಂಬಾತನು ಮನೆಯ ಹತ್ತಿರದ ಗುಡ್ಡವನ್ನು ಕಡಿದು ರಸ್ತೆಯ ಮೇಲೆ ಹಾಕಿದ ಮಣ್ಣನ್ನು ಬ್ಯಾಕ್ ಲೋಡರ್ ಮೂಲಕ ರಸ್ತೆ ಬದಿಯಿಂದ ತೆರವುಗೊಳಿಸಲು ಮುಂದಾದಾಗ ಓರ್ವ ವ್ಯಕ್ತಿ ಸೂರ್ಯಕಾಂತ ಎಂದು ಪರಿಚಯಿಸಿಕೊಂಡು ಸ್ಥಳದಲ್ಲಿದ್ದ ಅಧಿಕಾರಿಗಳ ಎದುರು ಇದು ನನಗೆ ಸಂಬಂಧಪಟ್ಟ ಜಾಗ ನೀವು ಇಲ್ಲಿ ಹಾಕಿದ ಮಣ್ಣನ್ನು ಹೇಗೆ ತೆಗೆಯುತ್ತೀರಿ ಎಂದು ನೋಡುತ್ತೇನೆ ಎಂದು ಹೇಳಿ ಜೆ.ಸಿ.ಬಿ. ಎದುರು ಬಂದು ನಿಂತು ಅಧಿಕಾರಿಗಳು ನಿರ್ವಹಿಸುವ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದು, ಆತನಿಗೆ ಇದು ಸಾರ್ವಜನಿಕ ರಸ್ತೆಯಾಗಿದ್ದು ಸರಕಾರಿ ಜಾಗವಾಗಿರುತ್ತದೆ. ನೀನು ಈ ತರಹ ಗುಡ್ಡದಿಂದ ಮಣ್ಣು ಕಡಿದು ರಸ್ತೆ ಮೇಲೆ ಹಾಕಿರುವುದರಿಂದ ಮಳೆಗಾಲದಲ್ಲಿ ಗುಡ್ಡೆ ಮೇಲೆ ಇರುವ ಮನೆಗಳು ಜರಿದು ಆಸ್ಥಿ ಮತ್ತು ಜೀವಹಾನಿಯಾಗುವ ಸಂಭವ ಇರುತ್ತದೆ ಎಂದು ಹೇಳಿದರೂ ಆತನು ಅದಕ್ಕೆ ಒಪ್ಪದೆ ಜೆ.ಸಿ.ಬಿ ಗೆ ಅಡ್ಡ ನಿಂತು ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಬಗ್ಗೆ ಸ್ಥಳಕ್ಕೆ ತೆರಳಿದ ಅಧಿಕಾರಿಗಳು ಪೌರಾಯುಕ್ತರ ಬಳಿ ವರದಿ ಮಾಡಿರುತ್ತಾರೆ.
ಆದುದರಿಂದ ಸಾರ್ವಜನಿಕ ರಸ್ತೆಯಲ್ಲಿ ಮಣ್ಣು ರಾಶಿ ಹಾಕಿ ಸಾರ್ವಜನಿಕರಿಗೆ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿ ಮಾಡಿ ಹಾಗೂ ಉದ್ದೇಶ ಪೂರ್ವಕವಾಗಿ ಮತ್ತು ಬುದ್ದಿ ಪೂರ್ವಕವಾಗಿ ಜೀವಹಾನಿ ಆಗುತ್ತದೆ ಎಂದು ತಿಳಿದೂ ಸರಕಾರಿ ಜಾಗದಿಂದ ಮಣ್ಣು ತೆಗೆದು ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಸೂರ್ಯಕಾಂತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಪೌರಾಯುಕ್ತರು ತಿಳಿಸಿದ್ದಾರೆ.
ಪೌರಾಯುಕ್ತರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 126(2), 132, 351(2) 110,285 BNS ರಂತೆ ಪ್ರಕರಣ ದಾಖಲಾಗಿದೆ.
