ಬೆಂಗಳೂರು: ದಿನಾಂಕ:19-03-2026(ಹಾಯ್ ಉಡುಪಿ ನ್ಯೂಸ್) ಕರ್ನಾಟಕ ಸಾರ್ವಜನಿಕ ಸೇವಾ ಆಯೋಗ (KPSC) ಮೂಲಕ ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ (ಗ್ರೂಪ್ A ಮತ್ತು B) ನೇಮಕಾತಿಯನ್ನು ಪ್ರತಿ ವರ್ಷ ಪ್ರಕಟಿಸಲು ಸರ್ಕಾರ ಸಿದ್ಧವಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ದುರುಪಯೋಗ ಮತ್ತು ನ್ಯಾಯಾಂಗ ವ್ಯಾಜ್ಯಗಳನ್ನು ತಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅನುಸರಿಸುವ ಉತ್ತಮ ಕ್ರಮಗಳನ್ನು ಅಳವಡಿಸಿಕೊಳ್ಳಲಾಗುತ್ತದೆ ಎಂದರು. ಇಲಾಖೆಯಲ್ಲಿು ಸುಧಾರಣೆಗಳನ್ನು ತರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯ ಕಾರ್ಯದರ್ಶಿ, ಹಣಕಾಸು ಇಲಾಖೆ ಮತ್ತು ಡಿಪಿಎಆರ್ (DPAR) ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ ಎಂದು ಹೇಳಿದರು.
ನೇಮಕಾತಿ ಅಧಿಸೂಚನೆ ಸಾಮಾನ್ಯವಾಗಿ ನಾಲ್ಕು ವರ್ಷಕ್ಕೊಮ್ಮೆ ಹೊರಡಿಸುವುದರಿಂದ, ನಿರಂತರವಾಗಿ ಪರೀಕ್ಷೆ ಬರೆಯಲು ವಯೋಮಿತಿ ಅಡ್ಡಿಯಾಗುವ ಕಾರಣ ಯುವ ಅಭ್ಯರ್ಥಿಗಳು ನ್ಯಾಯಾಲಯದ ಮೊರೆ ಹೋಗುತ್ತಾರೆ. ಇದರಿಂದ ಕೆಪಿಎಸ್ ಸಿ ಹೆಚ್ಚು ವ್ಯಾಜ್ಯಗಳನ್ನು ಎದುರಿಸುತ್ತಿದೆ ಎಂದರು.
ಯುಪಿಎಸ್ ಸಿ ಮಾದರಿಯಲ್ಲಿ ಪರೀಕ್ಷೆಗಳನ್ನು ನಡೆಸಲು ಕೆಪಿಎಸ್ ಸಿಯೊಂದಿಗೆ ಚರ್ಚಿಸಿ ನಿರ್ದಿಷ್ಟ ದಿನಾಂಕ ನಿಗದಿ ಮಾಡಲಾಗುತ್ತದೆ ಎಂದು ಹೇಳಿದರು.
ಖಾಲಿ ಹುದ್ದೆಗಳ ಅಂದಾಜು ಮಾಡಿ, ಹಣಕಾಸು ಇಲಾಖೆಯ ತತ್ವಾಧಾರಿತ ಅನುಮೋದನೆ ಪಡೆದು ಗ್ರೂಪ್ ಸಿ ಹುದ್ದೆಗಳ ಭರ್ತಿಗೆ ಇಲಾಖೆಗಳು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಮಾಹಿತಿ ನೀಡುವ ಮೂಲಕ, ಐದು ವರ್ಷಗಳ ಪರೀಕ್ಷಾ ವೇಳಾಪಟ್ಟಿಯನ್ನು ಮುಂಚಿತವಾಗಿ ಪ್ರಕಟಿಸಲಾಗುತ್ತದೆ ಎಂದು ಹೇಳಿದರು.
2023-24ರಲ್ಲಿ ಕೆಪಿಎಸ್ ಸಿ ಮೂಲಕ 384 ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆಯೆಂದು ಹೇಳಲಾದ ಭ್ರಷ್ಟಾಚಾರ ಮತ್ತು ಅನಿಯಮಿತತೆಗಳ ಕುರಿತು ಸದನದಲ್ಲಿ ನಡೆದ ಚರ್ಚೆಗೆ ಅವರು ಉತ್ತರ ನೀಡುತ್ತಿದ್ದರು. ಈ ನೇಮಕಾತಿಗೆ ಸಂಬಂಧಿಸಿದ ಮುಖ್ಯ ಪರೀಕ್ಷೆಯ ಫಲಿತಾಂಶವನ್ನು ಮಾರ್ಚ್ 2ರಂದು ಪ್ರಕಟಿಸಲಾಗಿದೆ. ಅನಿಯಮಿತತೆಗಳ ಕುರಿತು ನಡೆದ ಚರ್ಚೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸದನದಲ್ಲಿ ವ್ಯಕ್ತವಾದ ಟೀಕೆಯನ್ನು ಕೆಪಿಎಸ್ ಸಿ ಗಮನಕ್ಕೆ ತರಲಾಗುತ್ತಿದೆ ಎಂದರು.
18 ಸದಸ್ಯರಿರುವ ಕೆಪಿಎಸ್ ಸಿ ಹೆಚ್ಚು ಭ್ರಷ್ಟಾಚಾರಕ್ಕೆ ಸುದ್ದಿಯಾಗುತ್ತಿದೆ ಎಂಬ ಬಿಜೆಪಿಯ ಆತಂಕಕ್ಕೆ ಉತ್ತರವಾಗಿ, ಅವರ ಅವಧಿ ಮುಗಿಯುವವರೆಗೆ ಸಂಖ್ಯೆಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಎಂದರು. 2027ರ ಮೇ ವೇಳೆಗೆ ಸದಸ್ಯರ ಸಂಖ್ಯೆ ಎಂಟಕ್ಕೆ ಇಳಿಯುತ್ತದೆ ಎಂದರು.
ಮತ್ತೆ ಪರೀಕ್ಷೆಗೆ ಇಲ್ಲ ಎಂದ ಸಚಿವರು
ಗಜೆಟೆಡ್ ಪ್ರೊಬೇಷನರ್‌ಗಳ ನೇಮಕಾತಿಗೆ ಸಂಬಂಧಿಸಿದ ಮುಖ್ಯ ಪರೀಕ್ಷೆಯನ್ನು, ಒಂದೇ ಹಾಲ್‌ನಲ್ಲಿ ಪರೀಕ್ಷೆ ಬರೆದ ಸುಮಾರು 11 ಮಂದಿ ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ ಎಂಬ ಅನುಮಾನಕ್ಕೆ ಸಂಬಂಧಪಟ್ಟಂತೆ ಸದನದಲ್ಲಿ ಉತ್ತರಿಸಿದ ಸಚಿವರು ಮರುಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎಂದರು.
ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಬಳಿಕ ಯಾವುದೇ ದುರುಪಯೋಗ ನಡೆದಿಲ್ಲ ಎಂದು ಕೆಪಿಸಿಸಿ ವರದಿ ಸಲ್ಲಿಸಿದೆ. ಆಯ್ಕೆಯಾದ 11 ಅಭ್ಯರ್ಥಿಗಳು ಪರಸ್ಪರ ಸಂಬಂಧ ಹೊಂದಿಲ್ಲ ಮತ್ತು ವಿವಿಧ ಜಿಲ್ಲೆಗಳಿಂದ ಬಂದಿದ್ದಾರೆ ಎಂದು ತಿಳಿಸಲಾಗಿದೆ.
ಸಂದರ್ಶನ ಹಂತದಲ್ಲಿ ಮರುಪರೀಕ್ಷೆ ನಡೆಸಿದರೆ ನೇಮಕಾತಿ ಪ್ರಕ್ರಿಯೆ ಎರಡು ವರ್ಷಗಳಷ್ಟು ವಿಳಂಬವಾಗುತ್ತದೆ. ಪರೀಕ್ಷೆ ಬರೆದ 5,800 ಅಭ್ಯರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಬೇಕಾಗುತ್ತದೆ ಎಂದರು.
ಕರ್ನಾಟಕ ಸಾರ್ವಜನಿಕ ಸೇವಾ ಆಯೋಗದಲ್ಲಿ ಇನ್ನಷ್ಟು ಸುಧಾರಣೆಗಳಿಗೆ ಎಲ್ಲಾ ಪಕ್ಷಗಳ ಶಾಸಕರನ್ನೊಳಗೊಂಡ ಸದನ ಸಮಿತಿಯನ್ನು ಸರ್ಕಾರ ರಚಿಸಲಿದೆ ಎಂದು ತಿಳಿಸಿದರು.
