IMG-20251107-WA0003.jpg
Spread the love

ಈ ವಸಂತ ಮಾಸದ,
ಚಿಗುರೆಲೆಯ ಮೇಲೆ ಕುಳಿತ, ತುಂತುರು ಮಳೆ ಹನಿಯ ಹಿಮಬಿಂದುಗಳ ರಾಶಿ,
ಪ್ರಾಕೃತಿಕ ಸೌಂದರ್ಯದ ಸಾಂಕೇತಿಕ ಮಾತ್ರವಲ್ಲ,
ಸೃಷ್ಟಿಯ ಸಹಜ ಧರ್ಮದ ಪ್ರತಿಫಲನದಂತೆ ಕಾಣುತ್ತದೆ, ಮನಸ್ಸಿನ ಶುದ್ಧೀಕರಣ ಕ್ರಿಯೆಗೆ ಮುನ್ನುಡಿ ಬರೆದಂತಿದೆ…

ಪ್ರಕೃತಿಯ ಧರ್ಮ, ಸಹಜ ಧರ್ಮ, ವೃತ್ತಿ ಧರ್ಮ, ಮಾನವ ಧರ್ಮ, ಸಾಂವಿಧಾನಿಕ ಧರ್ಮ, ಸಾಮಾನ್ಯ ಧರ್ಮ, ಅರಿವಿನ ಧರ್ಮ ಮುಂತಾದ ಎಲ್ಲಾ ಧರ್ಮಗಳ ಸಾರವೇ ನಾಗರಿಕ ಧರ್ಮ, ಒಳ್ಳೆಯತನದ ಧರ್ಮ.
ಹಬ್ಬದ ಈ ಸುಸಂದರ್ಭದಲ್ಲಿ ನಮ್ಮ ಧಾರ್ಮಿಕ ನಿಷ್ಠೆ ಇವುಗಳಿಗೆ ಮಾತ್ರ ಇರಲಿ. ಹಿಂದೂ, ಕ್ರೈಸ್ತ, ಮುಸಲ್ಮಾನ, ಸಿಖ್, ಜೈನ, ಬೌದ್ಧ, ಪಾರ್ಸಿ, ಲಿಂಗಾಯತ ಮುಂತಾದವು ಕೇವಲ ನಮ್ಮ ಹೆಸರಿನಂತೆ ನಮ್ಮ ಗುರುತಿನ, ನಮ್ಮ ಆಚರಣೆಗಳ ವ್ಯಾಪಾರಿಕ ಧರ್ಮಗಳು ಮಾತ್ರವಾಗಿರಲಿ…

ಹುಟ್ಟು ನಮ್ಮ ಆಯ್ಕೆ ಅಲ್ಲ. ಅಂದಮೇಲೆ ಹುಟ್ಟಿನಿಂದ ನಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಿರಲಿ. ಹುಟ್ಟಿದ ನಂತರ ನಮ್ಮ ಕರ್ತವ್ಯಗಳು ಹೀಗಿರಲಿ. ಇದೆ ವೃತ್ತಿ ಧರ್ಮ…

ವೃತ್ತಿ ನಿರತರ ವೃತ್ತಿ ಧರ್ಮ……….

ಪತ್ರಕರ್ತರು


ಕೇವಲ ನಿರೂಪಕರಲ್ಲ – ಮನರಂಜನೆ ನೀಡುವವರಲ್ಲ – ಜನರನ್ನು ಆಕರ್ಷಿಸುವವರಲ್ಲ – ವ್ಯಾಪಾರಿಗಳಲ್ಲ – ಜನಪ್ರಿಯತೆಯ ಹಿಂದೆ ಹೋಗುವವರಲ್ಲ – ಜನರನ್ನು ಮೆಚ್ಚಿಸುವವರು ಮಾತ್ರವಲ್ಲ…….
ಜೊತೆಗೆ ಮುಖ್ಯವಾಗಿ

ವಿವೇಚನೆಯಿಂದ ಪರಿಶೀಲಿಸಿ ಎಷ್ಟೇ ಕಷ್ಟವಾದರೂ ಸತ್ಯವನ್ನು ಧೈರ್ಯವಾಗಿ ಹೇಳುವವರು.

ಇನ್ನು ಮುಂದೆ ಪತ್ರಕರ್ತನಾದ ನಾನು ಇಂದಿನ ವ್ಯಾವಹಾರಿಕ ಸಮಾಜದ ನಡುವೆಯೂ, ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ, ಅವಕಾಶ ಸಿಕ್ಕಾಗಲೆಲ್ಲಾ, ನನಗೆ ತಿಳಿದ ಸತ್ಯವನ್ನೇ ಹೇಳುತ್ತೇನೆ ಎಂದು ಸಂಕಲ್ಪ ಮಾಡುತ್ತಿದ್ದೇನೆ…

ಪೋಲೀಸರು


ಕೇವಲ ಭಯ ಪಡಿಸುವವರಲ್ಲ – ಹೊಡೆಯುವವರಲ್ಲ – ಕೊಲ್ಲುವವರಲ್ಲ – ಬಂಧಿಸುವವರಲ್ಲ – ನಿಯಂತ್ರಿಸಿವವರಲ್ಲ – ಎಚ್ಚರಿಸುವವರಲ್ಲ – ರಕ್ಷಿಸುವವರು ಮಾತ್ರವಲ್ಲ…..
ಜೊತೆಗೆ ಮುಖ್ಯವಾಗಿ

ನ್ಯಾಯವನ್ನು – ಸತ್ಯವನ್ನು – ಕಾನೂನನ್ನು ಅವಶ್ಯವಿರುವ ಜನರಿಗೆ ನಿಷ್ಪಕ್ಷಪಾತವಾಗಿ ತಲುಪಿಸುವವರು.

ಇನ್ನು ಮುಂದೆ ಆರಕ್ಷಕನಾದ ನಾನು, ನನ್ನ ಈ ಪೊಲೀಸ್ ವೃತ್ತಿಯಲ್ಲಿ, ಏನೇ ಪ್ರಭಾವವನ್ನು ಯಾರೇ ಬೀರಿದರು, ಅನ್ಯಾಯವಾದವರಿಗೆ ನ್ಯಾಯ ಒದಗಿಸಲು ನನ್ನೆಲ್ಲಾ ಶ್ರಮವನ್ನು ವಿನಿಯೋಗಿಸುತ್ತೇನೆ…

ವಕೀಲರು


ಕೇವಲ ವೃತ್ತಿಪರರಲ್ಲ – ಹೊಟ್ಟೆ ಪಾಡಿನ ಕೆಲಸದವರಲ್ಲ – ಕಾನೂನು ಅರ್ಥೈಸುವವರಲ್ಲ – ಕಕ್ಷಿದಾರರ ಹಿತಾಸಕ್ತಿ ಕಾಪಾಡುವವರಲ್ಲ – ಚಾಣಾಕ್ಷತನದಿಂದ ವಾದ ಮಂಡಿಸುವವರು ಮಾತ್ರವಲ್ಲ….
ಜೊತೆಗೆ ಮುಖ್ಯವಾಗಿ

ಶೋಷಿತರಿಗೆ – ಧಮನಿತರಿಗೆ – ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುವವರು.

ವಕೀಲ ವೃತ್ತಿಯಲ್ಲಿರುವ ನಾನು, ಇನ್ನು ಮುಂದೆ, ನನ್ನ ವೃತ್ತಿಯಲ್ಲಿ, ಸಾಧ್ಯವಾದಷ್ಟು ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ, ನ್ಯಾಯಯುತ ಕಕ್ಷಿದಾರರ ಪರವಾಗಿ ವಾದ ಮಾಡಿ, ಕನಿಷ್ಠ ನನ್ನ ಸಮಾಜದ ಮೌಲ್ಯಯುತ ಹಿತಾಸಕ್ತಿಯನ್ನು ಕಾಪಾಡಲು ನನ್ನಮಟ್ಟಿಗೆ ಪ್ರಯತ್ನಿಸುತ್ತೇನೆ…

ಬರಹಗಾರರು


ಕೇವಲ ಅಕ್ಷರಗಳನ್ನು ಜೋಡಿಸುವವರಲ್ಲ – ಪದ ಲಾಲಿತ್ಯ ಹೊರಡಿಸುವವರಲ್ಲ – ವಾಕ್ಯಗಳ ಆಕರ್ಷಕ ನಿರೂಪಣೆ ಮಾಡುವವರಲ್ಲ – ಭಾವನೆಗಳನ್ನು ವ್ಯಕ್ತಪಡಿಸುವವರಲ್ಲ – ಪುಸ್ತಕ ಪ್ರಕಟಿಸುವವರಲ್ಲ – ಪ್ರಶಸ್ತಿ ಪಡೆಯುವವರಲ್ಲ – ಅಧ್ಯಕ್ಷತೆ ವಹಿಸುವವರು ಮಾತ್ರವಲ್ಲ …
ಜೊತೆಗೆ ಮುಖ್ಯವಾಗಿ

ಸತ್ಯದ ಹುಡುಕಾಟಗಾರರು ಮತ್ತು ನಿರ್ಭಯವಾಗಿ ಅದನ್ನು ದಾಖಲಿಸುವವರು.

ಒಬ್ಬ ಬರಹಗಾರನಾದ ನಾನು, ನನ್ನ ಸಮಾಜದ ಎಲ್ಲ ಆಗುಹೋಗುಗಳಿಗೆ, ಪ್ರತಿಸ್ಪಂದಿಸುವ, ಧ್ವನಿ ಇಲ್ಲದವರಿಗೆ, ಅಸಹಾಯಕರಿಗೆ ಧ್ವನಿ ನೀಡುವ ಕರ್ತವ್ಯವನ್ನು ಮನಸ್ಸಾಕ್ಷಿಗೆ ಅನುಗುಣವಾಗಿ ನಿಷ್ಠೆಯಿಂದ ಪಾಲಿಸುತ್ತೇನೆ…

ವೈದ್ಯರು


ಕೇವಲ ರೋಗ ಗುಣಪಡಿಸುವವರಲ್ಲ – ವೃತ್ತಿಪರರಲ್ಲ – ಆರೋಗ್ಯದ ಮಾಹಿತಿ ನೀಡುವವರಲ್ಲ –
ಅತಿಮಾನುಷರಲ್ಲ – ಜೀವ ನೀಡುವವರು, ಉಳಿಸುವವರು ಮಾತ್ರವಲ್ಲ….
ಜೊತೆಗೆ ಮುಖ್ಯವಾಗಿ

ಜನರಲ್ಲಿ ಬದುಕಿನ ಆತ್ಮವಿಶ್ವಾಸ ಮೂಡಿಸುವವರು, ಆರೋಗ್ಯ ಕಾಪಾಡುವವರು.

ವೈದ್ಯನಾದ ನಾನು, ಇನ್ನು ಮುಂದೆ ಹಣ ಕೇಂದ್ರೀಕೃತ ಈ ಸಮಾಜದಲ್ಲಿಯೂ, ನನ್ನ ವೃತ್ತಿಯಲ್ಲಿ ಕನಿಷ್ಠ ಶೇಕಡಾ 15ರಷ್ಟು ಕಡು ಬಡವರಿಗೆ ಉಚಿತ ಸೇವೆಯನ್ನು ಒದಗಿಸುತ್ತೇನೆ. ಇಷ್ಟು ಜನರಿಗೆ ಯಾವುದೇ ಹಣ ಪಡೆಯದೆ ಚಿಕಿತ್ಸೆ ನೀಡುತ್ತೇನೆ…

ಶಿಕ್ಷಕರು


ಕೇವಲ ಅಕ್ಷರ ಕಲಿಸುವವರಲ್ಲ – ಪಾಠ ಮಾಡುವವರಲ್ಲ – ಬುದ್ದಿವಾದ ಹೇಳುವವರಲ್ಲ – ಪದವಿ ನೀಡುವವರಲ್ಲ – ಉದ್ಯೋಗ ಕೊಡಿಸುವವರು ಮಾತ್ರವಲ್ಲ…..
ಜೊತೆಗೆ ಮುಖ್ಯವಾಗಿ

ಬದುಕಲು ಕಲಿಸುವವರು,
ಯೋಚಿಸಲು ಪ್ರೇರೇಪಿಸುವವರು.

ಶಿಕ್ಷಕನಾದ ನಾನು, ಇನ್ನು ಮುಂದೆ ನನ್ನ ವೃತ್ತಿಪರ ಉದ್ಯೋಗದ ನಡುವೆಯೂ, ಬಿಡುವಿನ ಸಮಯದಲ್ಲಿ, ವಿದ್ಯಾರ್ಥಿಗಳಿಗೆ ಉಚಿತವಾಗಿ ಪಾಠ ಮಾಡುವ ಮೂಲಕ ಈ ಸಮಾಜದ ನನ್ನ ಋಣ ತೀರಿಸುತ್ತೇನೆ…

ರಾಜಕಾರಣಿಗಳು


ಕೇವಲ ರಸ್ತೆ ಮಾಡಿಸುವವರಲ್ಲ – ವಿದ್ಯುತ್ ಹರಿಸುವವರಲ್ಲ –
ಕಾನೂನು ಮಾಡುವವರಲ್ಲ – ಆಡಳಿತ ನಡೆಸುವವರಲ್ಲ –
ರಕ್ಷಣೆ ಮಾಡುವವರು ಮಾತ್ರವಲ್ಲ…..
ಜೊತೆಗೆ ಮುಖ್ಯವಾಗಿ

ಜನರ ಜೀವನಮಟ್ಟ ಸುಧಾರಿಸುವವರು.

ರಾಜಕಾರಣಿಯಾದ ನಾನು,
ಇನ್ನು ಮುಂದೆ ಎಲ್ಲಾ ವ್ಯಾವಹಾರಿಕ ಚತುರತೆಯ ನಡುವೆಯೂ, ಜನಸೇವೆಯನ್ನು ಹೆಚ್ಚಿಸುತ್ತೇನೆ, ಭ್ರಷ್ಟಾಚಾರವನ್ನು ಕಡಿಮೆ ಮಾಡಿಕೊಳ್ಳುತ್ತೇನೆ, ಕುತಂತ್ರವನ್ನು, ಅಡ್ಡ ದಾರಿಯನ್ನು, ಸ್ವಾಭಿಮಾನ ಮಾರಿಕೊಳ್ಳುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿಕೊಳ್ಳುತ್ತೇನೆ…

ಧರ್ಮದ ಪೀಠಾಧಿಪತಿಗಳು


ಕೇವಲ ಭೋದನೆ ಮಾಡುವವರಲ್ಲ – ಉಪನ್ಯಾಸ ನೀಡುವವರಲ್ಲ – ಆಶ್ರಯ, ಅನ್ನ, ಶಿಕ್ಷಣ ನೀಡುವವರಲ್ಲ – ಧರ್ಮ ಪ್ರಚಾರಕರಲ್ಲ – ಭಕ್ತಿ ಭಾವ ಮೂಡಿಸುವವರು ಮಾತ್ರವಲ್ಲ…..
ಜೊತೆಗೆ ಮುಖ್ಯವಾಗಿ

ಜ್ಞಾನದ ಬಲದಿಂದ ಜನರ ನೋವು, ಸಂಕಷ್ಟ ಕಡಿಮೆ ಮಾಡುವವರು.

ಧರ್ಮಾಧಿಕಾರಿಯಾದ ನಾನು, ಇನ್ನು ಮುಂದೆ ಸಕಲ ಸುಖಭೋಗಗಳನ್ನು ಕಡಿಮೆ ಮಾಡಿಕೊಂಡು, ಸರಳವಾಗಿ, ಪ್ರಾಮಾಣಿಕವಾಗಿ, ಮಾನವೀಯ ಮೌಲ್ಯಗಳ ಪರವಾಗಿ ನನ್ನ ಧಾರ್ಮಿಕ ಪೀಠವನ್ನು ಉಪಯೋಗಿಸಿಕೊಳ್ಳುತ್ತೇನೆ. ಸಂಕುಚಿತತೆ ತೊರೆದು, ಸರ್ವಸಂಗ ಪರಿತ್ಯಾಗಿಯಾಗಿ, ಸಕಲ ಜೀವರಾಶಿಗಳಿಗೆ ಒಳಿತನ್ನೇ ಬಯಸುವ ಮನೋಭಾವ ಬೆಳೆಸಿಕೊಳ್ಳುತ್ತೇನೆ…

ಕಲಾವಿದರು


ಕೇವಲ ಮನರಂಜನೆ ನೀಡುವವರಲ್ಲ – ಭಾವಾತಿರೇಕಗಳನ್ನು ವ್ಯಕ್ತಪಡಿಸುವವರಲ್ಲ – ಜನರನ್ನು ಭ್ರಮಾಲೋಕಕ್ಕೆ ಒಯ್ಯುವವರಲ್ಲ – ಜನಪ್ರಿಯತೆ ಗಳಿಸುವವರಲ್ಲ – ದುಡ್ಡು ಮಾಡುವವರು ಮಾತ್ರವಲ್ಲ…..
ಜೊತೆಗೆ ಮುಖ್ಯವಾಗಿ,

ಜವಾಬ್ದಾರಿಯಿಂದ ಜನರನ್ನು ಒಳ್ಳೆಯ ನಡತೆ ಅಳವಡಿಸಿಕೊಳ್ಳಲು, ಜೀವನೋತ್ಸಾಹ ಹೆಚ್ಚಿಸಿಕೊಳ್ಳಲು ಪ್ರೇರೇಪಿಸುವವರು.

ಮನರಂಜನಾ ಉದ್ಯಮದ ವೃತ್ತಿಯಲ್ಲಿರುವ ನಾನು, ಇನ್ನು ಮುಂದೆ, ಸಮಾಜದ ಮೌಲ್ಯಗಳಿಗೆ ವಿರುದ್ಧವಾದ ಯಾವುದೇ ಪಾತ್ರವನ್ನು ಸಿನಿಮಾ, ಧಾರವಾಹಿ, ಜಾಹೀರಾತು, ಮಾಡಲಿಂಗ್ ಕೆಲಸವನ್ನು ಮಾಡುವುದಿಲ್ಲ. ಈ ನೆಲದ ಸಾಂಸ್ಕೃತಿಕ ಮೌಲ್ಯವನ್ನು ಎತ್ತಿ ಹಿಡಿಯುತ್ತೇನೆ. ಪ್ರತಿ ಸಂಭಾಷಣೆಯಲ್ಲಿ ಪ್ರಜ್ಞಾಪೂರ್ವಕವಾಗಿ ಮೌಲ್ಯಗಳನ್ನು ಬಿತ್ತುತ್ತೇನೆ.

ಅಧಿಕಾರಿಗಳು


ಇನ್ನು ಮುಂದೆ ಸರ್ಕಾರಿ ಅಧಿಕಾರಿಯಾದ ನಾನು, ನನ್ನ ಮನಸ್ಸಾಕ್ಷಿಗೆ ಅನುಗುಣವಾಗಿ, ಸಾಧ್ಯವಾದಷ್ಟು ಸೇವಾ ಮನೋಭಾವವನ್ನು ಹೆಚ್ಚಿಸಿಕೊಳ್ಳುತ್ತಾ, ನನ್ನ ಸಂಬಳದ ವ್ಯಾಪ್ತಿಯಲ್ಲಿಯೇ ಜೀವನ ರೂಪಿಸಿಕೊಳ್ಳಲು ಶ್ರಮಿಸುತ್ತಾ, ಕಡಿಮೆ ಭ್ರಷ್ಟತೆಯನ್ನು, ಹೆಚ್ಚು ಸೇವೆಯನ್ನು ಮಾಡುತ್ತಾ, ನನ್ನ ವೃತ್ತಿನಿಷ್ಠೆಯನ್ನು ಪ್ರದರ್ಶಿಸುತ್ತೇನೆ ಎಂದು ಈ ಮೂಲಕ ಪ್ರತಿಜ್ಞೆ ಮಾಡುತ್ತಿದ್ದೇನೆ…

ಹೀಗೆ, ಇನ್ನೂ ಮುಂತಾದ ಸೇವಾ ವಲಯಗಳಲ್ಲಿ ಈ ರೀತಿಯ ಮೌಲ್ಯಗಳು ಪುನರ್ ಸ್ಥಾಪನೆಯಾಗಬೇಕಾದ ಅವಶ್ಯಕತೆ ಮತ್ತು ಅನಿವಾರ್ಯತೆ ಈಗ ತುರ್ತಾಗಿ ಆಗಬೇಕಿದೆ.

ಇದನ್ನು ಹೊರತುಪಡಿಸಿ ಬೆವರು ಸುರಿಸುವ, ರಕ್ತ ಬಸಿಯುವ, ಅನೇಕ ಶ್ರಮಜೀವಿಗಳು ನಮ್ಮ ನಡುವೆ ಇದ್ದಾರೆ. ಆದರೆ ಅವರಲ್ಲಿ ಬಹುತೇಕರಿಗೆ ಆಯ್ಕೆಯ ಸ್ವಾತಂತ್ರ್ಯವೇ ಇಲ್ಲ. ಹೊಟ್ಟೆ ಪಾಡಿನ, ಕೌಟುಂಬಿಕ ನಿರ್ವಹಣೆಯ, ಮೂಲಭೂತ ಅವಶ್ಯಕತೆಗಳಿಗೇ ಕೊರತೆ ಇರುವಾಗ ಸದ್ಯದ ಪರಿಸ್ಥಿತಿಯಲ್ಲಿ ಅವರಲ್ಲಿ ಆದರ್ಶಗಳನ್ನು ಹುಡುಕುವುದು ತುಂಬಾ ಕಷ್ಟ.

ಸಾಮಾನ್ಯರಾದ ನಾವು ಮಾನವೀಯ ಮೌಲ್ಯಗಳ ಉಳಿವಿಗಾಗಿ ಸಾಧ್ಯವಾದಷ್ಟು ಈಗಿನಿಂದಲೇ ಪ್ರಯತ್ನಿಸೋಣ.

ಇದು ಸಾಧ್ಯವಿಲ್ಲ. ಈ ಸಮಾಜ ಸರಿಪಡಿಸಲಾಗದಷ್ಟು ಕೆಟ್ಟು ಹೋಗಿದೆ ಎಂಬ ಸಿನಿಕತನ ಬೇಡ.

ಒಳ್ಳೆಯದಾಗಲಿ….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮಾತುಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.

error: No Copying!