kannadaprabha_2026-03-18_9rzpqbie_bengaluru-rain-1-1-1.jpeg
Spread the love

ದಿನಾಂಕ:18-03-2026(ಹಾಯ್ ಉಡುಪಿ ನ್ಯೂಸ್)

ಬೆಂಗಳೂರು: ಕರ್ನಾಟಕದಲ್ಲಿ ಬೇಸಿಗೆ ಮಳೆ ಆರ್ಭಟ ಮುಂದುವರೆದಿದ್ದು, ಕಳೆದ ಕೆಲ ದಿನಗಳಿಂದ ರಾಜ್ಯದ ಹಲವೆಡೆ ಆಲಿಕಲ್ಲು ಸಹಿತ ಭಾರಿ ಮಳೆ ಆಗುತ್ತಿದೆ.

ಇಂದು ಕೂಡ ಅಕಾಲಿಕ ಭಾರಿ ಮಳೆಯಾಗಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದೆ. ದಾವಣಗೆರೆ, ಚಾಮರಾಜನಗರ, ದಕ್ಷಿಣಕನ್ನಡ, ಮೈಸೂರು ಸೇರಿದಂತೆ ಹಲವು ನಗರಗಳಲ್ಲಿ ಮಳೆಯಾಗಿದೆ.

ದಾವಣಗೆರೆ ತಾಲೂಕಿನ ಗುಮ್ಮನೂರ, ಗುಡಾಳ್, ಹೆಬ್ಬಾಳ್, ಆನಗೋಡ್ ಸೇರಿದಂತೆ ಬಹುತೇಕ ಕಡೆ ಮಳೆ ಆಗಿದೆ. ಗ್ರಾಮದ ರಸ್ತೆ ತುಂಬೆಲ್ಲಾ ರಾಶಿ ರಾಶಿ ಅಲಿಕಲ್ಲು ಬಿದ್ದಿದ್ದು, ರಸ್ತೆ ಜಮ್ಮು ಕಾಶ್ಮೀರದಂತಾಗಿತ್ತು. ಚಾಮರಾಜನಗರ ಪಟ್ಟಣ ಹಾಗೂ ಚಾಮರಾಜನಗರ ತಾಲೂಕಿನಾದ್ಯಂತ ಭಾರೀ ಬಿರುಗಾಳಿ ಸಹಿತ ಮಳೆಯಾಗಿದೆ.

ಇನ್ನು ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನಾದ್ಯಂತ ಮಳೆ ಸುರಿದಿದೆ. ಕೊಂಬಾರು ಗ್ರಾಮದಲ್ಲಿ ಆಲಿಕಲ್ಲು ಮಳೆ ಸುರಿದಿದೆ. ಆ ಮೂಲಕ ಬಿಸಿಲ ಧಗೆಗೆ ಮಳೆರಾಯ ತಂಪೆರೆದಿದ್ದಾನೆ. ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಸುಮಾರು ಒಂದು ಗಂಟೆ ನಿರಂತರ ಮಳೆ ಆಗಿದೆ. ವರ್ಷದ ಮೊದಲ ಮಳೆಗೆ ಮೈಸೂರಿಗರು ಸಂತಸಗೊಂಡಿದ್ದಾರೆ. ಬಿಸಿಲಿನ ಬೇಗೆಯಿಂದ ಬಸವಳಿದಿದ್ದವರಿಗೆ ವರುಣ ಸಿಂಚನವಾಗಿದೆ.

ವರ್ಷದ ಮೊದಲ ಮಳೆಗೇ ಬೆಂಗಳೂರಿಗರು ಹೈರಾಣಾಗಿದ್ದು, ನಗರದ ಹಲವೆಡೆ ಆಲಿಕಲ್ಲು ಸಹಿತ ಮಳೆ ಆಗಿದೆ. ರಣ ಬಿಸಿಲಿನ ನಡುವೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇಂದು ಆಲಿಕಲ್ಲು ಸಹಿತ ಭಾರಿ ಮಳೆ ಆಗಿದೆ. ಮೆಜೆಸ್ಟಿಕ್​, ಶಾಂತಿನಗರ, ಕಾಡುಗೋಡಿ, ಮಾರ್ಕೆಟ್, ಜಯನಗರ, ಬಸವೇಶ್ವರ ನಗರ, ಶಾಂತಿನಗರ, ವಿಲ್ಸನ್​ಗಾರ್ಡನ್, ರಿಚ್ಮಂಡ್​ಟೌನ್ ಸುತ್ತಮುತ್ತ ಮಳೆ ಆಗಿದೆ.

ಮೈಸೂರು ರೋಡ್, ಹೊಸಗುಡ್ಡದಹಳ್ಳಿ, ಚಾಮರಾಜಪೇಟೆ, ಬಾಪೂಜಿ ನಗರ, ನಾಯಂಡಹಳ್ಳಿ, ಸೇರಿದಂತೆ ಹಲವೆಡೆ ಮಳೆಯಾಗಿದೆ. ಹಲಸೂರು, ಇಂದಿರಾನಗರ, ಬೈಯ್ಯಪ್ಪನಹಳ್ಳಿ ಸುತ್ತಮುತ್ತ ಆಲಿಕಲ್ಲು ಮಳೆಯಾಗಿದೆ.

ನಗರದ ಅಂಜನಾಪುರ, ಗೊಟ್ಟಿಗೆರೆ, ಉತ್ತರಹಳ್ಳಿ, ರಾಜ ರಾಜೇಶ್ವರಿ ನಗರ, ಹೆಬ್ಬಾಳ, ಜೆ.ಪಿ.ನಗರ, ಕೆಂಗೇರಿ, ನಾಗವಾರ, ಕಮ್ಮನಹಳ್ಳಿ, ಸಂಜಯನಗರ ಸೇರಿದಂತೆ ನಗರದ ಹಲವೆಡೆ ಗುಡುಗು ಮಿಂಚು ಸಹಿತ ವರ್ಷದ ಮೊದಲ ಮಳೆ ಆಗಿದೆ.

ಮಂಗಳವಾರ ನಗರದಲ್ಲಿ ಸುರಿದ ಮಳೆಗೆ ಅಲ್ಲಲ್ಲಿ ಸಂಚಾರ ಅಡಚಣೆ ಉಂಟಾಯಿತು. ನಗರದ ವಿವಿಧ ಕಡೆ ನಡೆಯುತ್ತಿರುವ ರಾಜಕಾಲುವೆ ಕಾಮಗಾರಿ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮಾಹಿತಿ ನೀಡಿದೆ.

ಇಂದು ರಾತ್ರಿ 9 ಗಂಟೆ ಹೊತ್ತಿಗೆ ಹೆಮ್ಮೆಗೆಪುರದಲ್ಲಿ 24 ಮಿಲಿ ಮೀಟರ್, ಗೊಲ್ಲಹಳ್ಳಿಯಲ್ಲಿ 22.5 ಮಿಲಿ ಮೀಟರ್, ಬ್ಯಾಟರಾಯನಪುರ 16.5 ಮಿಲಿ ಮೀಟರ್, ಚೌಡೇಶ್ವರಿ 14.5ಮಿಲಿ ಮೀಟರ್, ಜಕ್ಕೂರು 12.5ಮಿಲಿ ಮೀಟರ್ ಮತ್ತು ಜಕ್ಕೂರು-2 12 ಮಿಲಿ ಮೀಟರ್ ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಹಿತಿ ನೀಡಿದೆ.

ಯುಗಾದಿ ಬಳಿಕ‌ ರಂಜನ್ ಹಬ್ಬ ಶನಿವಾರ ಭಾನುವಾರ ರಜೆ ಇರುವ ಕಾರಣ ಎಂದಿನಂತೆ ಜನರು ವಾಹನದಲ್ಲಿ ತಮ್ಮ ತಮ್ಮ ಊರಿಗೆ ತೆರಳುತ್ತಿದ್ದರು. ಸಂಜೆ ಊರಿಗೆ ತೆರಳುವ ಸಮಯದಲ್ಲೇ ಮಳೆ ಬಿದ್ದಿದೆ. ರಜೆ ಹಿನ್ನಲೆಯಲ್ಲಿ ಮೈಸೂರು ರಸ್ತೆಯಲ್ಲಿ ಮೊದಲೇ ನಿಧಾನವಾಗಿ ವಾಹನಗಳು ಸಂಚರಿಸುತ್ತಿದ್ದವು. ಈಗ ಮಳೆ ಸುರಿದ ಪರಿಣಾಮ ಸಿಟಿ ಮಾರ್ಕೆಟ್‌ ಫ್ಲೈ ಓವರ್‌ನಿಂದ ನಾಯಂಡಹಳ್ಳಿಯವರೆಗೆ ಟ್ರಾಫಿಕ್‌ ಜಾಮ್‌ ಆಗಿದೆ.

ಪೂರ್ವ ಮುಂಗಾರು ಮಳೆ ನಗರದಲ್ಲಿ ಮುಂದುವರಿಯುವ ಮುನ್ಸೂಚನೆ ಇದೆ. ಮುಂದಿನ 2 ದಿನ ನಗರದಲ್ಲಿ ಹಗಲು ಒಣಹವೆ ಕಂಡು ಬರಲಿದ್ದು, ಸಂಜೆ ಹೊತ್ತಿಗೆ ಮಳೆ ಜಮಾಯಿಸಲಿದೆ. ಬಿಸಿಲು ಕಡಿಮೆ ಅಗಲಿದೆ. ಮುಂದಿನ ಎರಡು ಮೂರು ದಿನಗಳಲ್ಲಿ ಬೆಂಗಳೂರಿನಲ್ಲಿ ಪ್ರತ್ಯೇಕ ಮಳೆಯಾಗುವ ನಿರೀಕ್ಷೆಯಿದೆ. ಅಂದರೆ ಮಾರ್ಚ್ 21ರವರೆಗೂ ಗುಡುಗು ಸಹಿತ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

error: No Copying!