img_2081.jpeg
Spread the love

ಮಂಗಳೂರು : ದಿನಾಂಕ : 17-03-2026(ಹಾಯ್ ಉಡುಪಿ ನ್ಯೂಸ್) ಜೈಲಿನೊಳಗೆ ಉದ್ವಿಗ್ನ ಪರಿಸ್ಥಿತಿ, ಜೈಲು ಅಧೀಕ್ಷಕರ ಮೇಲೆ ಕೈದಿಗಳಿಂದ ಹಲ್ಲೆಗೆ ಯತ್ನ – ಜೈಲಿನ ಸೊತ್ತುಗಳಿಗೆ ಹಾನಿ, ಪ್ರಕರಣ ದಾಖಲು.

ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಆತಂಕಕಾರಿ ಘಟನೆ ನಡೆದಿದ್ದು, ಜೈಲು ಅಧೀಕ್ಷಕರ ಮೇಲೆಯೇ ವಿಚಾರಣಾಧೀನ ಕೈದಿಗಳು ಹಲ್ಲೆಗೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.

ಜೈಲು ಅಧೀಕ್ಷಕ ಶರಣಪ್ಪ ನೀಡಿದ ದೂರಿನ ಆಧಾರದ ಮೇಲೆ ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣಾಧೀನ ಕೈದಿಗಳಾದ ಇಕ್ಬಾಲ್, ಶೆಹರಾಜ್ ಯಾನೆ ಶಾರೂಕ್ ಮತ್ತು ಅಫ್ರೀದ್ ವಿರುದ್ಧ ಆರೋಪ ಕೇಳಿಬಂದಿದೆ.

ಘಟನೆಯ ವಿವರಗಳ ಪ್ರಕಾರ, ಮೊನ್ನೆ ರಾತ್ರಿ ಜೈಲಿಗೆ ಹೊಸದಾಗಿ ದಾಖಲಾದ ಕೈದಿಗಳನ್ನು ತನ್ನ ಕೊಠಡಿಗೆ ಸೇರಿಸಬೇಕು ಎಂದು ವಿಚಾರಣಾಧೀನ ಕೈದಿ ಇಕ್ಬಾಲ್ ಜೋರಾಗಿ ಕೂಗಾಡಿ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾನೆ. ಜೈಲು ಅಧೀಕ್ಷಕರು ಅವನನ್ನು ಸಮಾಧಾನಪಡಿಸಲು ಯತ್ನಿಸಿದರೂ ಆತ ಶಾಂತವಾಗದೆ ಅವಾಚ್ಯವಾಗಿ ಬೈದು, ಪ್ಲಾಸ್ಟಿಕ್ ಕುರ್ಚಿಯಿಂದ ಹಲ್ಲೆ ಮಾಡಲು ಮುಂದಾಗಿದ್ದಾನೆ ಎನ್ನಲಾಗಿದೆ.

ಈ ವೇಳೆ ಮತ್ತೊಬ್ಬ ವಿಚಾರಣಾಧೀನ ಕೈದಿ ಅಫ್ರೀದ್ ಕೂಡ ಜೈಲು ಅಧೀಕ್ಷಕರಿಗೆ ಅವಾಚ್ಯವಾಗಿ ಬೈದು ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದಷ್ಟೇ ಅಲ್ಲದೆ, ಆರೋಪಿಗಳು ಜೈಲಿನೊಳಗೆ ಅಳವಡಿಸಿರುವ ನೀರು ಶುದ್ಧೀಕರಣ ಯಂತ್ರ ಮತ್ತು ಪೈಪ್‌ಗಳನ್ನು ಹಾನಿಗೊಳಪಡಿಸಿದ್ದು, ಇದರ ಮೌಲ್ಯ ಸುಮಾರು ₹12 ಸಾವಿರ ಎಂದು ಅಂದಾಜಿಸಲಾಗಿದೆ.

ಮತ್ತೊಬ್ಬ ಕೈದಿ ಶೆಹರಾಜ್ (ಶಾರೂಕ್) ಕೊಠಡಿಯೊಳಗಿನ ವಸ್ತುಗಳನ್ನು ಹಾನಿಗೊಳಪಡಿಸಿ ಕೇರಂಬೋರ್ಡ್ ಮುರಿದು ಅದರ ತುಂಡುಗಳನ್ನು ಇಕ್ಬಾಲ್ ಮತ್ತು ಅಫ್ರೀದ್‌ಗೆ ನೀಡಿ ಹಲ್ಲೆ ಮಾಡಲು ಪ್ರಚೋದಿಸಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.

ಈ ಘಟನೆ ಜೈಲಿನೊಳಗಿನ ಭದ್ರತಾ ವ್ಯವಸ್ಥೆ ಹಾಗೂ ಕೈದಿಗಳ ವರ್ತನೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಆರಂಭಿಸಿದ್ದಾರೆ.

error: No Copying!