ಉಡುಪಿ: ದಿನಾಂಕ :17-03-2026 (ಹಾಯ್ ಉಡುಪಿ ನ್ಯೂಸ್) ಉಪ್ಪೂರು ನಿವಾಸಿ ಅಜೇಯ ಎಂಬವನು ಸರಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಯೋರ್ವಳಿಗೆ 5.40 ಲಕ್ಷ ರೂಪಾಯಿ ವಂಚನೆ ನಡೆಸಿದ್ದು ಇದೀಗ ಬೆದರಿಕೆ ಹಾಕುತ್ತಿದ್ದಾನೆ ಎಂದು ನೊಂದ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಹಿರಿಯಡ್ಕ,ಬೊಮ್ಮರ ಬೆಟ್ಟು ಗ್ರಾಮದ ನಿವಾಸಿ ನವ್ಯ ನಾಯ್ಕ (24) ಎಂಬವರು ಖಾಸಗಿ ಆಸ್ಪತ್ರೆಯಲ್ಲಿ ಸ್ಟಾಪ್ ನರ್ಸ್ ಆಗಿ ಕೆಲಸ ಮಾಡಿಕೊಂಡಿದ್ದು, ನವ್ಯ ನಾಯ್ಕ ರವರು ಪರಿಶಿಷ್ಟ ಪಂಗಡದ ಮರಾಠಿ ನಾಯ್ಕ ಸಮುದಾಯದವರಾಗಿದ್ದು ನವ್ಯ ನಾಯ್ಕ ರವರು 2024 ನೇ ಇಸವಿಯಲ್ಲಿ ನರ್ಸಿಂಗ್ ಪದವಿ ಮುಗಿಸಿ ಉಡುಪಿ ಮಿಷನ್ ಆಸ್ಪತ್ರೆಯಲ್ಲಿ ಟ್ರೈನಿಂಗ್ ನಲ್ಲಿರುವ ಸಮಯ ಆಸ್ಪತ್ರೆಯಲ್ಲಿ HR ಆಗಿ ಕೆಲಸ ಮಾಡಿಕೊಂಡಿದ್ದ ಅಜೇಯ್ ಎಂಬುವವನ ಪರಿಚಯ ಆಗಿರುತ್ತದೆ.
ನವ್ಯ ನಾಯ್ಕರು 6 ತಿಂಗಳು ಟ್ರೈನಿಂಗ್ ಮುಗಿಸಿಕೊಂಡಿರುವಾಗ ಅಜೇಯನು ನೀವು ST ಸಮುದಾಯದವರು ನಿಮಗೆ ಬೇಗ ಕೆಲಸ ಸಿಗುತ್ತದೆ , ಸ್ವಲ್ಪ ಹಣ ಖರ್ಚಾಗುತ್ತದೆ ಎಂದು ಹೇಳಿ ನವ್ಯ ನಾಯ್ಕ ರವರ ಎಲ್ಲಾ ದಾಖಲೆಗಳನ್ನು ಮತ್ತು ಅಡ್ವಾನ್ಸ್ ಹಣ 2000 ರೂಪಾಯಿಯನ್ನು ಪಡೆದುಕೊಂಡಿರುತ್ತಾರೆ.
ನವ್ಯ ನಾಯ್ಕ ರವರು ನರ್ಸಿಂಗ್ ಮುಗಿಸಿ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಕೆಲಸದಲ್ಲಿರುವ ಸಮಯ ಅಜೇಯನು ನವ್ಯ ನಾಯ್ಕರಿಗೆ ಕರೆ ಮಾಡಿ ನಿನಗೆ ಹಿಂದೆ ತಿಳಿಸಿದಂತೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಂತ ಹಂತವಾಗಿ 5,40,000/- ರೂಪಾಯಿಯನ್ನು ಪಡೆದುಕೊಂಡಿರುತ್ತಾನೆ ಅಲ್ಲದೆ ಸಾಮ್ ಸಂಗ್ ಗ್ಯಾಲಾಕ್ಷಿ S 25 ಮೊಬೈಲ್ ಪೋನ್ 1,30,498/- ರೂಪಾಯಿ, ಸ್ಯಾಮ್ ಸಂಗ್ ಗ್ಯಾಲಾಕ್ಷಿ A56-45000/- , YO X60 41000/- ರೂ ಹಾಗೂ YO X60 -41000/- ರೂ ಒಟ್ಟು 2,55,498/- ರೂಪಾಯಿ ಮೌಲ್ಯದ ಮೊಬೈಲ್ ನ್ನು ಪೈನಾನ್ಸ್ ,ಇತರೆ ಲೋನ್ ಮತ್ತು ಸಂಬಳ ಹಣದಿಂದ ನವ್ಯ ನಾಯ್ಕ ರವರು ಕೊಡಿಸಿರುತ್ತಾರೆ .
ಅಲ್ಲದೆ ಆರೋಪಿ ಅಜೇಯ್ ನು ಪದೇ ಪದೇ ನವ್ಯ ನಾಯ್ಕ ರಿಗೆ ಹಣ ನೀಡುವಂತೆ ಪೀಡಿಸುತ್ತಿದ್ದು ಮನೆಯವರಿಗೆ ತಿಳಿಸುವುದಾಗಿ ಹೇಳಿದಾಗ ಮನೆಯವರಿಗೆ ಬೆದರಿಕೆ ಹಾಕಿರುತ್ತಾನೆ ಎಂದು ನವ್ಯ ನಾಯ್ಕ ರವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಅಜೇಯ ಎಂಬ ವ್ಯಕ್ತಿ ಉಪ್ಪೂರು ನಿವಾಸಿಯೆನ್ನಲಾಗಿದ್ದು ಹಲವಾರು ಯುವತಿಯರಿಗೆ ಸರ್ಕಾರಿ ಕೆಲಸ ದೊರಕಿಸಿ ಕೊಡುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ವಂಚನೆ ನಡೆಸಿರುವ ಬಗ್ಗೆ ಆರೋಪಗಳಿದ್ದು ವಂಚನೆಗೊಳಗಾದ ಯುವತಿಯರೆಲ್ಲರೂ ದೂರು ನೀಡಿದಲ್ಲಿ ಈತನ ಜನ್ಮ ಜಾತಕ ಬಯಲಾಗಲಿದೆ.
ನವ್ಯ ನಾಯ್ಕರವರು ನೀಡಿರುವ ಹಣ ಮತ್ತು ಸೊತ್ತುಗಳನ್ನು ವಾಪಸ್ ಕೇಳಿದಾಗ ಅಜೇಯನು ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 3(2)(V-A) SC ST Act & 308(2), 351(2) BNS ರಂತೆ ಪ್ರಕರಣ ದಾಖಲಾಗಿದೆ.
