ಭಾರತ ಸಾಹಿತ್ಯದ ನೊಬೆಲ್ ಎಂದೇ ಹೆಸರಾದ ಜ್ಞಾನಪೀಠ ಪ್ರಶಸ್ತಿ ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ಮಾತ್ರವಲ್ಲ, ಅದನ್ನು ಪಡೆದ ವ್ಯಕ್ತಿಗಳು ಆಯಾ ಭಾಷೆಯ ದಾರ್ಶನಿಕರು, ಮಾರ್ಗದರ್ಶಕರು, ಸಾಹಿತ್ಯ ಮತ್ತು ಸಾಂಸ್ಕೃತಿಕ ರಾಯಭಾರಿಗಳು, ಆದರ್ಶ ವ್ಯಕ್ತಿಗಳು, ಮಾದರಿ ವ್ಯಕ್ತಿತ್ವದವರು ಆಗುವುದು ಮಾತ್ರವಲ್ಲದೇ, ಅವರ ಭಾವಚಿತ್ರಗಳು ಶಾಲಾ-ಕಾಲೇಜಿನಿಂದ ಹಿಡಿದು ಅನೇಕ ಸಂಘ ಸಂಸ್ಥೆಗಳ ಗೋಡೆಗೆ ಅಲಂಕಾರವಾಗುತ್ತಾರೆ. ಜೊತೆಗೆ ಪೀಳಿಗೆಯಿಂದ ಪೀಳಿಗೆ ಅವರನ್ನು ಪರಿಚಯಿಸುತ್ತಾ, ಕಲಿಸುತ್ತಾ, ಅನುಕರಿಸುತ್ತಾ ಮುನ್ನಡೆಯಲಾಗುತ್ತದೆ. ಇಂತಹ ಜ್ಞಾನಪೀಠ ಪ್ರಶಸ್ತಿ ಒಂದು ಬಹುದೊಡ್ಡ ತೂಕವನ್ನು ಹೊಂದಿದೆ.
ಜ್ಞಾನಪೀಠ ಪ್ರಶಸ್ತಿ ಇಲ್ಲದ ಸಮಯದಲ್ಲೂ ಈ ದೇಶದಲ್ಲಿ ಅತ್ಯದ್ಭುತ ಸಾಹಿತಿಗಳು ಇದ್ದರು. ಆದರೆ ಅಧಿಕೃತವಾಗಿ ಸ್ವಾತಂತ್ರ್ಯ ನಂತರ ಜ್ಞಾನಪೀಠ ಪ್ರಶಸ್ತಿ ಪ್ರಾರಂಭವಾದ್ದರಿಂದ ಆ ನಂತರದ ಸಾಹಿತಿಗಳಿಗೆ ಮಾತ್ರ ಒಂದು ದೊಡ್ಡ ಅಧಿಕೃತ ಮಾನ್ಯತೆ ದೊರೆತಿದೆ. ಅದಕ್ಕಾಗಿಯೇ ಆ ಪ್ರಶಸ್ತಿಗೆ ಎಲ್ಲಾ ರಾಜಕೀಯ, ಸೈದ್ಧಾಂತಿಕ, ಸಾಂಸ್ಕೃತಿಕ ನಿಲುವುಗಳನ್ನು ಮೀರಿ ಗೌರವಾನ್ವಿತ ಮಾನ್ಯತೆ ಇದೆ.
1961 ರಲ್ಲಿ ಸ್ಥಾಪಿತವಾದ ಜ್ಞಾನಪೀಠ ಪ್ರಶಸ್ತಿ ಇಲ್ಲಿಯವರೆಗೆ ಸುಮಾರು 65 ಜನರಿಗೆ ಸಂದಿದೆ. ಮೊನ್ನೆಯಷ್ಟೇ ಪ್ರಕಟವಾದ ತಮಿಳಿನ ವೈರಮುತ್ತು ಅವರೇ ಈ ಪ್ರಶಸ್ತಿ ಪಡೆದ 66ನೆಯವರು. ತಮಿಳು ಭಾಷೆಯ ಮೂರನೆಯವರು.
ಇಡೀ ಭಾರತದಲ್ಲಿಯೇ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆ ಕನ್ನಡ. ಇಲ್ಲಿಯವರೆಗೆ ಎಂಟು ಪ್ರಶಸ್ತಿಗಳು ಕರ್ನಾಟಕಕ್ಕೆ ಸಂದಿವೆ. ಹಿಂದಿ ಭಾಷೆಗೆ ಏಳು, ಬಂಗಾಳಿ ಭಾಷೆಗೆ ಆರು ಪ್ರಶಸ್ತಿಗಳು ಬಂದಿದೆ.
ಯಾವುದೇ ಪ್ರಶಸ್ತಿಗಳು, ಯಾರಿಗೇ ಬಂದರು ಆಗಾಗ ಕೆಲವೊಮ್ಮೆ ಒಂದಷ್ಟು ವಿವಾದಗಳು ಹುಟ್ಟಿಕೊಳ್ಳುವುದು ನಮ್ಮ ಸಮಾಜದಲ್ಲಿ ಅತ್ಯಂತ ಸಹಜವಾಗಿದೆ. ಕೇವಲ ಜ್ಞಾನಪೀಠ ಪ್ರಶಸ್ತಿ ಮಾತ್ರವಲ್ಲ, ಪದ್ಮ ಪ್ರಶಸ್ತಿಗಳು, ಭಾರತ ರತ್ನ ಪ್ರಶಸ್ತಿ, ಅರ್ಜುನ್ ಪ್ರಶಸ್ತಿ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಯಾವುದೇ ಇರಲಿ ಅಥವಾ ಯಾವುದೇ ಅಧಿಕಾರ, ಅಕಾಡೆಮಿಗಳ ಅಧ್ಯಕ್ಷತೆ ಇರಲಿ, ಇಡೀ ವಿಶ್ವದ ಬೃಹತ್ ಜನಸಂಖ್ಯೆಯ ಈ ದೇಶದಲ್ಲಿ ಸ್ಪರ್ಧಿಗಳು ಕೂಡ ಹೆಚ್ಚಾಗಿರುವುದರಿಂದ ಒಂದಷ್ಟು ವಿವಾದಗಳು ಚರ್ಚೆಗೆ ಬರುವುದೂ ಅಷ್ಟೇ ಸಹಜ. ಅದರಲ್ಲೂ ಸಾಮಾಜಿಕ ಜಾಲತಾಣಗಳ ಈ ಮಾಯಾಲೋಕದೊಳಗೆ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಇರುವುದರಿಂದ ಎಲ್ಲರೂ ಅಭಿಪ್ರಾಯ ಮಂಡಿಸುತ್ತಾರೆ.
ಈಗ ತಮಿಳುನಾಡಿನ ಜನಪ್ರಿಯ ಸಿನಿಮಾ ಸಾಹಿತಿ, ಬರಹಗಾರ ವೈರಮುತ್ತು ಅವರ ವಿಷಯದಲ್ಲಿ ಎರಡು ವಿವಾದಗಳು ಚರ್ಚೆಯಾಗುತ್ತಿವೆ. ಒಂದು ಅವರ ವೈಯಕ್ತಿಕ ವ್ಯಕ್ತಿತ್ವ ಹಾಗೂ ಅವರ ಮೇಲೆ ಇರುವ ಮಹಿಳೆಯರ ಲೈಂಗಿಕ ದೌರ್ಜನ್ಯದ ಆರೋಪ, ಮತ್ತೊಂದು ಅವರದು ಮನರಂಜನಾ ಉದ್ಯಮದ ಜನಪ್ರಿಯ ಸಾಹಿತ್ಯ. ವಾಸ್ತವ ನೆಲೆಯ ಸಾಂಸ್ಕೃತಿಕ ಸಾಹಿತ್ಯದ ತೂಕ ಅವರ ಬರಹಗಳಿಗಿಲ್ಲ ಎಂಬುದು.
ಯಾವುದೇ ಕ್ಷೇತ್ರದ, ಯಾವುದೇ ವ್ಯಕ್ತಿಯ, ಯಾವುದೇ ಸಾಮರ್ಥ್ಯ, ಪ್ರತಿಭೆ, ಸಾಧನೆ, ಅಧಿಕಾರ, ಪ್ರಶಸ್ತಿ ನಿಜಕ್ಕೂ ಪರಿಪೂರ್ಣಗೊಳ್ಳುವುದು ಆತನ ನೈತಿಕ ವ್ಯಕ್ತಿತ್ವದ ಆಧಾರದ ಮೇಲೆ. ಅಂದರೆ ಸಾರ್ವಜನಿಕವಾಗಿ ನೀವು ಎಷ್ಟು ಜನಪ್ರಿಯರಾಗುತ್ತೀರಿ, ನೀವು ಸಮಾಜದ ಮೇಲೆ ಎಷ್ಟು ಪ್ರಭಾವ ಬೀರುತ್ತೀರಿ ಅದನ್ನು ನಾಗರೀಕ ಲಕ್ಷಣಗಳ ಮೇಲೆ ಅವಲೋಕಿಸಿದಾಗ ತಮ್ಮ ವ್ಯಕ್ತಿತ್ವ ಅತ್ಯಂತ ಉನ್ನತ ಮಟ್ಟದಲ್ಲಿ ಇರಬೇಕು. ಅನೈತಿಕ ವ್ಯಕ್ತಿಗಳು ಸಹ ಸಮಾಜದಲ್ಲಿ ದೊಡ್ಡ ಪ್ರಶಸ್ತಿ, ಅಧಿಕಾರ, ಜನಪ್ರಿಯತೆ ಪಡೆಯಬಹುದು. ಆದರೆ ಅವರನ್ನು ಆದರ್ಶ ವ್ಯಕ್ತಿ, ಮಾದರಿ ವ್ಯಕ್ತಿ ಎಂದು ಪರಿಗಣಿಸುವುದಿಲ್ಲ. ಹಾಗೆಯೇ ಆ ತರಹದ ವ್ಯಕ್ತಿಗಳು ಉನ್ನತ ಸ್ಥಾನಕ್ಕೇರಿದಾಗ ಸಮಾಜ ಅದನ್ನು ಖಂಡಿಸಬೇಕು. ಇಲ್ಲದಿದ್ದರೆ ಪ್ರಖ್ಯಾತರಿಗಿಂತ ಕುಖ್ಯಾತರೇ ಸಮಾಜದ ಮುಖ್ಯ ವಾಹಿನಿಗೆ ಬಂದಾಗ ಆ ಸಮಾಜದ ನೈತಿಕತೆ ಕುಸಿಯುತ್ತದೆ.
ಈ ಹಿನ್ನೆಲೆಯಲ್ಲಿ ವೈರಮುತ್ತು ಅವರನ್ನು ಸ್ಥಳೀಯ ಸಮಾಜ ಹೇಗೆ ಕಾಣುತ್ತದೆ, ಹೇಗೆ ಮಾನ್ಯತೆ ನೀಡುತ್ತದೆ ಎಂಬುದು ಹೀಗಿರುವ ಒಂದು ಕುತೂಹಲ. ಅವರ ಮೇಲೆ ಇರುವುದು ಆಕಸ್ಮಿಕವಾಗಿ ದಾಖಲಾದ ಯಾವುದೋ ಒಂದೋ, ಎರಡೋ ವೈಯಕ್ತಿಕ, ಕೌಟುಂಬಿಕ ಲೈಂಗಿಕ ಹಗರಣಗಳಲ್ಲ. ಬರೋಬ್ಬರಿ 18 ಮಹಿಳೆಯರು ಇವರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ಅಕ್ಷರ ಸಾಹಿತ್ಯ,
ಅನುಭವ ಸಾಹಿತ್ಯ,
ಅನುಭಾವ ಸಾಹಿತ್ಯ……….
ಅಕ್ಷರ ಸಾಹಿತ್ಯ……
ಅಕ್ಷರಗಳನ್ನು ಕಲಿತಿರುವ ಕಾರಣದಿಂದ ಏನಾದರೂ ಬರೆಯಬೇಕು ಎಂಬ ಹಂಬಲದಿಂದ ಬರೆಯುತ್ತಾ ಹೋಗುವುದು ಅಕ್ಷರ ಸಾಹಿತ್ಯ. ಇಲ್ಲಿ ಅಕ್ಷರಗಳದೇ ಪ್ರಾಬಲ್ಯ. ಅಕ್ಷರಗಳಿಂದಲೇ ಭಾವನೆಗಳನ್ನು, ಕಲ್ಪನೆಗಳನ್ನು, ಅನುಭವಗಳನ್ನು, ಮಾಹಿತಿಗಳನ್ನು ಇತ್ಯಾದಿ ಎಲ್ಲಾ ಪ್ರಕಾರದ ಬರಹಗಳನ್ನು ಮೂಡಿಸುತ್ತಾ ಹೋಗುವುದು. ತನಗೆ ತಿಳಿದಿರುವ ಅಥವಾ ತನ್ನ ಜ್ಞಾನದ ಮಿತಿಯಲ್ಲಿ ಬರೆಯುವುದು. ಇದರಲ್ಲಿ ಅಕ್ಷರದ ಅಥವಾ ಪದಗಳ ಲಾಲಿತ್ಯವೇ ಮೇಲುಗೈ ಪಡೆದಿರುತ್ತದೆ ಜೊತೆಗೆ ತನ್ನ ಬುದ್ದಿಯ ಪ್ರದರ್ಶನವೂ ಸೇರಿರುತ್ತದೆ. ನನ್ನ ವೈಯಕ್ತಿಕ ಅನಿಸಿಕೆಯ ಪ್ರಕಾರ ಇದರಲ್ಲಿ ಹೆಚ್ಚು ಜೀವ ಇರುವುದಿಲ್ಲ. ಒಣ ಅಥವಾ ಶುಷ್ಕ ವಾತಾವರಣದ ರೀತಿಯಲ್ಲಿ ಈ ಬರಹಗಳು ಇರುತ್ತವೆ. ಇದರಲ್ಲಿ ಹೆಚ್ಚು ಆಳವಾದ ಅಥವಾ ಅಧ್ಯಯನದ ಒಳ ಅರ್ಥಗಳು ಗೋಚರಿಸುವ ಸಾಧ್ಯತೆ ಕಡಿಮೆ. ನಿರೂಪಣೆಯೇ ಇಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ.
ಅನುಭವ ಸಾಹಿತ್ಯ……
ಅಕ್ಷರ ಜ್ಞಾನದ ಜೊತೆಗೆ ಬದುಕಿನ ಅನುಭವದ ಆಧಾರದ ಮೇಲೆ ಬರೆಯುವ ಪ್ರಕಾರ. ಅಂದರೆ ಇಲ್ಲಿ ಅನುಭವಗಳಿಗೆ ಅಕ್ಷರದ ರೂಪ ನೀಡುವುದು. ಒಂದಷ್ಟು ಅಧ್ಯಯನ ಚಿಂತನೆಗಳು ಇಲ್ಲಿ ಅಡಕವಾಗಿರುವ ಸಾಧ್ಯತೆ ಇರುತ್ತದೆ. ಬರೆಯುವ ತುಡಿತ ಹೆಚ್ಚಾಗಿರುತ್ತದೆ. ಆ ಅಕ್ಷರಗಳಲ್ಲಿ ಜೀವಂತಿಕೆಯ ಲಕ್ಷಣಗಳನ್ನು ಗುರುತಿಸಬಹುದು.
ಅಕ್ಷರಗಳಿಂದ ಅನುಭವದ ರೂಪ ಕೊಡುವುದಕ್ಕಿಂತ ಅನುಭವವನ್ನು ಅಕ್ಷರಗಳಲ್ಲಿ ಹಿಡಿದಿಡುವುದು ಸಾಹಿತ್ಯಿಕವಾಗಿ ಉತ್ತಮ ಗುಣಮಟ್ಟವನ್ನು ಮುಟ್ಟಲು ಸಾಧ್ಯವಾಗುತ್ತದೆ.
ಅನುಭಾವ ಸಾಹಿತ್ಯ…
” ರವಿ ಕಾಣದ್ದನ್ನು ಕವಿ ಕಂಡ ” ಎಂಬ ನಾಣ್ಣುಡಿಯನ್ನು ಇದು ನೆನಪಿಸುತ್ತದೆ. ಅಕ್ಷರ ಜ್ಞಾನದ ಜೊತೆಗೆ ಅನುಭವವೂ ಸೇರಿ ಅದರಿಂದ ಮೇಲೇರಿ ಇನ್ನಷ್ಟು ಆಳವನ್ನು ಹುಡುಕುತ್ತಾ ಒಳನೋಟಗಳನ್ನು, ವಿವಿಧ ಮುಖಗಳನ್ನು ಗ್ರಹಿಸುತ್ತ, ಬರೆಯುತ್ತಾ ಹೋಗುವುದು ಅನುಭಾವ ಸಾಹಿತ್ಯ ತುಂಬಾ ಸೂಕ್ಷ್ಮ ಮತ್ತು ದೂರ ದೃಷ್ಟಿ ಇದರಲ್ಲಿ ಸಿಗುತ್ತದೆ. ಅಧ್ಯಯನ ಮತ್ತು ಚಿಂತನೆಯೂ ಇಲ್ಲಿ ಅಡಕವಾಗಿರುತ್ತದೆ. ಇದರಲ್ಲಿ ಜೀವ ಮೈತುಂಬಿ ಹರಿಯುತ್ತದೆ..
ಬರಹಗಳಲ್ಲಿ ಸಹ ಗುಣಮಟ್ಟವನ್ನು ಅಳೆಯಬಹುದು. ಅನೇಕ ಬರಹಗಳು ಕಾಲದ ಅಗ್ನಿ ಪರೀಕ್ಷೆಯಲ್ಲಿ ಗೆದ್ದು ಈಗಲೂ ಪ್ರಸ್ತುತವಾಗಿ ಉಳಿದಿರುವುದಕ್ಕೆ ಕಾರಣ ಅವುಗಳ ಆಳದಲ್ಲಿ ಇರುವ ಅನುಭಾವ.
ಅದು ಅಕ್ಷರ ಸಾಹಿತ್ಯ ದಾಟಿ ಅನುಭವ ಸಾಹಿತ್ಯ ಮೀರಿ ಅನುಭಾವ ಸಾಹಿತ್ಯವಾಗಲಿ ಎಂಬುದು ಒಂದು ಆಶಯ.
ಇದರಲ್ಲಿ ವೈರಮುತ್ತು ಅವರದು ಯಾವ ರೀತಿಯ ಸಾಹಿತ್ಯ ಎಂಬ ಪ್ರಶ್ನೆ ಎದ್ದಿದೆ.
ನಿಜವಾದ ಸಾಹಿತ್ಯ ಮಾನವೀಯತೆಯ ವಿಕಾಸವಾದದ ಕುರುಹುಗಳಾಗಿ ಉಳಿಯಬೇಕೇ ಹೊರತು ಶಿಕ್ಷಣ ಆಧಾರಿತ ಮಾನವೀಯ ಮೌಲ್ಯಗಳ ವಿನಾಶದ ಮಾರ್ಗವಾಗಬಾರದು………….
ಇದೊಂದು ಸರಳ ನಿರೂಪಣೆ. ಸಾಹಿತ್ಯದ ಆಳ ಅಗಲಗಳು ಅನಂತ……..
ಬದುಕು ಮತ್ತು ಬರಹ ಎಷ್ಟು ಹತ್ತಿರ ಮತ್ತು ಎಷ್ಟು ದೂರ ಎಂಬ ಎಳೆಯ ಹಿಂದೆ ಒಂದು ಹುಡುಕಾಟ…….
ಪ್ರತಿಯೊಂದು ಜೀವಿಗಳಲ್ಲೂ ಭಾವನೆಗಳ ಪ್ರವಾಹ ಸದಾ ಹರಿಯುತ್ತಿರುತ್ತದೆ.
ಇನ್ನು ಮನುಷ್ಯರಲ್ಲಂತೂ ಗಂಡು ಹೆಣ್ಣಿನ ಬೇಧಗಳಿಲ್ಲದೆ ಭಾವನೆಗಳದೇ ಸಾಮ್ರಾಜ್ಯ.
ಹಿಂದೆ ಅಕ್ಷರ ಜ್ಞಾನವಿಲ್ಲದ ಜನರು ಜಾನಪದ ಹಾಡು ಕಥೆಗಳ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದರು.
ಅಕ್ಷರ ಲಿಪಿಯ ಸಂಶೋದನೆಯೊಂದಿಗೆ ಓದು ಬರಹ ಸುಲಭವಾಯಿತು.
ಭಾವನೆಗಳ ವ್ಯಕ್ತಪಡಿಸುವಿಕೆ ಕಥೆ, ಕವಿತೆ, ಕಾದಂಬರಿ ಇತ್ಯಾದಿ ಅನೇಕ ರೂಪಗಳಲ್ಲಿ ಹೊರ ಹೊಮ್ಮಲ್ಪಟ್ಟಿತು. ಸೃಷ್ಟಿಯ ಎಲ್ಲವೂ ಬರವಣಿಗೆಯ ವಸ್ತುವಾಯಿತು.
ಅನುಭವಗಳು, ಅನಿಸಿಕೆಗಳು, ವಾಸ್ತವಗಳು, ಆದರ್ಶಗಳು, ಕಲ್ಪನೆಗಳು ಎಲ್ಲವೂ ಬರಹರೂಪಕ್ಕಿಳಿಯಿತು ಮತ್ತು ಅದರಲ್ಲಿ ಅನುಸರಿಸಿದ್ದ, ಅನುಸರಿಸುತ್ತಿರುವ, ಅನುಸರಿಸಬೇಕಾದ ಎಲ್ಲಾ ಜೀವನ ವಿಧಾನಗಳು ಒಳಗೊಂಡಿರುತ್ತಿದ್ದವು.
ಅದನ್ನು ಬರೆಯುತ್ತಿದ್ದವರು ತೀರಾ ಕಡಿಮೆ ಮತ್ತು ನುಡಿದಂತೆ ನಡೆಯುವ ಜನರೇ ಹೆಚ್ಚಿದ್ದರು. ಬದುಕು ಬರಹ ಸಾಮಾನ್ಯವಾಗಿ ಒಂದೇ ಆಗಿತ್ತು ಮತ್ತು ಬಹುತೇಕ ವಾಸ್ತವವು ಆಗಿದ್ದಿತು.
ಆದರೆ ಆಧುನಿಕ ಶಿಕ್ಷಣ ಪದ್ಧತಿ ಪ್ರಾರಂಭವಾದ ಮೇಲೆ ಬದುಕು ಬರಹದ ಅಂತರ ಜಾಸ್ತಿಯಾಯಿತು. ಬದುಕಿದಂತೆ ಬರೆಯಬೇಕಿಲ್ಲ ಬರೆದಂತೆ ಬದುಕಬೇಕಿಲ್ಲ ಎಂಬ ಆತ್ಮವಂಚಕ ಮನಸ್ಸು ಬಹುತೇಕರಲ್ಲಿ ಮೂಡಿತು. ಬರಹಗಳ ದಂಧೆ ಶುರುವಾಯಿತು. ಅಕ್ಷರದ ಅಹಂಕಾರ ಹೆಚ್ಚಾಯಿತು..
ಹೊಟ್ಟೆ ಪಾಡನ್ನೂ ಮೀರಿ ಬರಹ ಆತ್ಮತೃಪ್ತಿಗೆ, ಕ್ರಾಂತಿಗೆ, ಬದಲಾವಣೆಗೆ ನಾಂದಿ ಹಾಡಿತು.
“ಖಡ್ಗಕ್ಕಿಂತ ಲೇಖನಿ ಹರಿತ ” ಎಂಬಂತಾದರೂ, ಮುಂದೆ ಅಧಿಕಾರ, ಅಂತಸ್ತು, ಭಟ್ಟಂಗಿತನ, ದುಷ್ಟತನ, ಚಾಕಚಕ್ಯತೆಯಿಂದ ಸಮಾಜವನ್ನು ಒಡೆಯುವ ಸಾಧನವೂ ಆಯಿತು.
ಇನ್ನು ಇತ್ತೀಚಿನ ಆಧುನಿಕ ಮಾಧ್ಯಮಗಳಂತೂ ಮನಸ್ಸಗಳನ್ನು ಒಡೆದು ಚೂರು ಚೂರು ಮಾಡಿ
ಭಸ್ಮಾಸುರನಂತೆ ಜನರ ಭಾವನೆಗಳನ್ನೇ ನಿಯಂತ್ರಿಸುವ, ಪ್ರಚೋದಿಸುವ ಕೊನೆಗೆ ತಮ್ಮ ನಾಶಕ್ಕೆ ತಾವೇ ಕಾರಣವಾಗುವಂತೆ ಬೆಳೆದು ನಿಂತಿದೆ.
ಬದುಕು ಮತ್ತು ಬರಹಗಳು ಬೇರೆ ಬೇರೆಯಾಗಿ ಬಹಳ ಕಾಲವಾಗಿದೆ. ಅದನ್ನು ಸಮರ್ಥಿಸಲೂ ವಿಕೃತ ವಿಚಾರಧಾರೆಳು ಸೃಷ್ಟಿಯಾಗಿವೆ. ಇದು ತೀರಾ ಅಪಾಯಕಾರಿ ಬೆಳವಣಿಗೆ.
ಕೆಲವು ಉದಾಹರಣೆಗಳೊಂದಿಗೆ ಆತ್ಮಾವಲೋಕನ…….
ಶಾಲೆಯಲ್ಲಿದ್ದಾಗ ಅಮ್ಮನ ಪ್ರೀತಿಯ ಬಗ್ಗೆ ಬರೆದೆ,
ಅಲ್ಲಿ ನನಗೆ ಮೊದಲ ಬಹುಮಾನ ಕೊಡಲಾಯಿತು…..
ಕಾಲೇಜಿನಲ್ಲಿ ಯುವಶಕ್ತಿಯ ಬಗ್ಗೆ ಭಾಷಣ ಮಾಡಿದೆ ,
ಆಗ ನನ್ನನ್ನು ಗೌರವಿಸಲಾಯಿತು…..
ಮುಂದೆ ಪ್ರೀತಿ – ಪ್ರೇಮ ಕುರಿತು ಪತ್ರಿಕೆಗಳಲ್ಲಿ ವರ್ಣಿಸಿದೆ,
ನನ್ನನ್ನು ಕವಿ ಎಂದು ಗುರುತಿಸಲಾಯಿತು…….
ಬಡತನ, ದಾರಿದ್ರ್ಯವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದೆ,
ನಮ್ಮ ಜಿಲ್ಲಾ ಸಾಹಿತ್ಯ ಪ್ರಶಸ್ತಿ ನೀಡಲಾಯಿತು…….
ವ್ಯವಸ್ಥೆಯ ವಿರುದ್ಧ ಆಕ್ರೋಶದಿಂದ ಮಾತನಾಡಿದೆ,
ಸಮಾಜ ನನ್ನನ್ನು ದೊಡ್ಡ ಲೇಖಕನೆಂದು ಗುರುತಿಸಿತು……
ದೇಶಭಕ್ತಿಯ ಬಗ್ಗೆ ಹೆಚ್ಚೆಚ್ಚು ಮಾತನಾಡತೊಡಗಿದೆ,
ಸಾಹಿತಿ ಎಂದು ಭಾವಿಸಿ ಸರ್ಕಾರದಿಂದ ಪ್ರಶಸ್ತಿ ಘೋಷಿಸಲಾಯಿತು……
ಮಾನವೀಯತೆಯ ಬಗ್ಗೆ ಇನ್ನಷ್ಟು, ಮತ್ತಷ್ಟು ಚರ್ಚಿಸತೊಡಗಿದೆ,
ಸರ್ಕಾರ ಒಂದು ಅಕಾಡೆಮಿಗೆ ಅಧ್ಯಕ್ಷನನ್ನಾಗಿ ಮಾಡಿತು……
ಭಾಷೆಯ ಬಗ್ಗೆ ಅಭಿಮಾನ ತೋರಿ ಹಾಡುಗಳನ್ನು ರಚಿಸಿದೆ,
ಅನೇಕ ಸಂಘ ಸಂಸ್ಥೆಗಳಿಂದ ಹಣ, ಬಿರುದು, ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು…….
ಆಕರ್ಷಕ ಕಥೆಗಳನ್ನು ಕಲ್ಪಿಸಿಕೊಂಡು ಸೃಷ್ಟಿಸತೊಡಗಿದೆ,
ರಾಷ್ಟ್ರೀಯ ಮಟ್ಟದ ಬರಹಗಾರನೆಂದು ಬಿಂಬಿಸಲಾಯಿತು……
ಬೃಹತ್ ಕಾದಂಬರಿಗಳನ್ನು ರಚಿಸತೊಡಗಿದೆ,
ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ನೀಡಿ ಗೌರವಿಸಲಾಯಿತು……
ಬದುಕಿನ ನಶ್ವರತೆಯ ಬಗ್ಗೆ ಪುಂಖಾನುಪುಂಖವಾಗಿ ಪ್ರವಚನ ನೀಡಿದೆ,
ನನ್ನನ್ನು ವಿಧಾನ ಪರಿಷತ್/ರಾಜ್ಯಸಭೆಯ ಸದಸ್ಯನನ್ನಾಗಿ ಆಯ್ಕೆ ಮಾಡಲಾಯಿತು……..
ವಾವ್,
ಎಂತಹ ಅದೃಷ್ಟವಂತ ಎಂದು ಭಾವಿಸಿದಿರೇ…..?
ಆದರೆ ಈಗ ನಿಜ ಹೇಳಲೆ…..
ಇದಕ್ಕಾಗಿ ನಾನು ಎಲ್ಲಾ ರೀತಿಯ ಲಾಬಿಗಳನ್ನ ಮಾಡಿದೆ,
ನಾನು ಬರೆದ ಯಾವ ಸಮಸ್ಯೆಗಳಿಗೂ ಪರಿಹಾರವೇನು ಸಿಗಲಿಲ್ಲ,
ವಾಸ್ತವವಾಗಿ ಮತ್ತಷ್ಟು ಹೆಚ್ಚಾಯಿತು……
ಆದರೆ ನನ್ನ ಬದುಕು ಸಮೃದ್ಧವಾಯಿತು. ನನ್ನ ಜೀವನ ಸಮಸ್ಯೆಗಳಿಂದ ಮುಕ್ತವಾಯಿತು.
ನಗರದಲ್ಲಿ ಒಂದು ಬೃಹತ್ ಬಂಗಲೆ ಕಟ್ಟಿಸಿದೆ…..
ಇಬ್ಬರು ಮಕ್ಕಳಿಗೂ ವಿದೇಶಗಳಲ್ಲಿ ನೆಲೆ ಕಲ್ಪಿಸಿದೆ.
ವಿದೇಶಿ ಕಾರು, ಸರ್ಕಾರದ ಉಚಿತ ಸೇವೆಗಳು ದೊರೆತವು……
ಕೇವಲ ನನ್ನ ಪೆನ್ನು, ಪೇಪರ್, ಬುದ್ಧಿ, ಚಾಕಚಕ್ಯತೆ ಇದನ್ನು ನೀಡಿತು…..
ಆದರೆ,
ಇದಕ್ಕಾಗಿ ಆತ್ಮಸಾಕ್ಷಿಯನ್ನು ಸಾವಿರಾರು ಬಾರಿ ಇರಿದಿದ್ದೇನೆ
ಮತ್ತು ಪ್ರತಿ ಬರಹದಲ್ಲೂ ಕೊಲ್ಲುತ್ತಿದ್ದೇನೆ (ಈ ಬರಹ ಬಿಟ್ಟು)……
ನಾನೊಂದು ಜೀವಂತ ಶವ ಎಂದು ನನ್ನ ನೆರಳು ಸದಾ ನನ್ನನ್ನು ಕಾಡುತ್ತಿದೆ. ಹೊರಬರಲಾರದೆ ಪರಿತಪಿಸುತ್ತಿದ್ದೇನೆ…..
ಕೊನೆಯ ಅನುಭವದ ನನ್ನ ಸಲಹೆ ಎಂದರೆ,
ಆತ್ಮಸಾಕ್ಷಿಗೆ ಮೋಸ ಮಾಡದಿರಿ. ಅದು ನಿಮ್ಮ ಮನದ ಕನ್ನಡಿ,
ಉಳಿದದ್ದೆಲ್ಲಾ ಒಂದು ಭ್ರಮೆ. ಧನ್ಯವಾದಗಳು……
ಬದುಕು ಮತ್ತು ಬರಹ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವ ಇಂದಿನ ಸಮಯದಲ್ಲಿ ಅತ್ಯಂತ
ತಾಳ್ಮೆಯಿಂದ ನಾವೆಲ್ಲರೂ ಅದನ್ನು ಸಾಧ್ಯವಾದ ಮಟ್ಟಿಗೆ ಹತ್ತಿರ ತರಲು ಪ್ರಯತ್ನಿಸಬೇಕಿದೆ,
ನಮ್ಮ ಬರಹ ನಮ್ಮ ಬದುಕನ್ನು ಪ್ರತಿಬಿಂಬಿಸುವುದು ಬಹಳ ಕಷ್ಟವಾದರು ಆದಷ್ಟು ಹತ್ತಿರ ಇರಬೇಕಿದೆ.
ವಾಸ್ತವದಿಂದ ದೂರವಾದ ಯಾವ ಬರಹಗಳೂ ದೀರ್ಘಕಾಲ ಉಳಿಯುವುದಿಲ್ಲ ಮತ್ತು ಆತ್ಮವಂಚಕ ಮನಸ್ಸುಗಳು ಸಮಾಜ ಕಂಟಕವೇ.
ಪ್ರೀತಿ, ಪ್ರೇಮ, ಕುಟುಂಬ, ದೇಶ, ಧರ್ಮ, ರಾಜಕೀಯ ಇತ್ಯಾದಿ ಯಾವ ವಿಷಯವೇ ಆಗಿರಲಿ ಬರಹ ಮತ್ತು ಬದುಕು ಹತ್ತಿರವಾಗಿರಲಿ. ರಮ್ಯತೆ, ಮನರಂಜನೆ , ಕಾಲ್ಪನಿಕತೆಗಳು ದಾರಿ ತಪ್ಪಿಸದಿರಲಿ.
ಇದಕ್ಕಾಗಿ ನಾವೆಲ್ಲಾ ಪ್ರಯತ್ನಿಸೋಣ……..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್.ಕೆ.
