IMG-20260316-WA0003-1536x1152.jpg
Spread the love

ದಿನಾಂಕ: 16-03-2026(ಹಾಯ್ ಉಡುಪಿ ನ್ಯೂಸ್)

ಹೆಬ್ರಿ: ಕಳೆದ ಮೂರು ವರ್ಷಗಳಿಂದ ಗ್ರಾಮಸ್ಥರಿಗೆ ತೊಂದರೆ ಉಂಟುಮಾಡುತ್ತಿದ್ದ ಕೊಬ್ಬಿದ ಗೂಳಿಯನ್ನು ಗ್ರಾಮಸ್ಥರು ಹಾಗೂ ಇಲಾಖೆಯ ಸಹಕಾರದಿಂದ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.


ತಿಂಗಳೆ ಭಾಗದ ಗೂಳಿಯು ಮೆಗದ್ದೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಗೂಳಿ ಜನರಿಗೆ ಆತಂಕ ಉಂಟುಮಾಡುತ್ತಿತ್ತು. ಸುಮಾರು 25ಕ್ಕೂ ಹೆಚ್ಚು ಮನೆಗಳಿರುವ ಈ ಭಾಗದ ನಿವಾಸಿಗಳು ಗೂಳಿಯ ಕಾಟದಿಂದ ಹಲವು ವರ್ಷಗಳಿಂದ ಸಂಕಷ್ಟ ಅನುಭವಿಸುತ್ತಿದ್ದರು. ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡುವುದು, ಹಟ್ಟಿಗಳಲ್ಲಿ ನುಗ್ಗಿ ಜನರನ್ನು ಓಡಿಸುವುದು ಮುಂತಾದ ಘಟನೆಗಳು ಆಗಾಗ ನಡೆಯುತ್ತಿದ್ದು, ಗ್ರಾಮಸ್ಥರು ಭಯಭೀತರಾಗಿದ್ದರು.
ಶಾಲೆಗೆ ಹೋಗುವ ಮಕ್ಕಳನ್ನು ಕೂಡ ಗೂಳಿ ಅಟ್ಟಿಸಿಕೊಂಡು ಹೋಗುತ್ತಿದ್ದುದಾಗಿ ಗ್ರಾಮಸ್ಥರು ದೂರಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ 20ಕ್ಕೂ ಹೆಚ್ಚು ಬಾರಿ ಮಕ್ಕಳು ಗೂಳಿಯಿಂದ ಓಡಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ಕುರಿತು ಕಳೆದ ವರ್ಷವೇ ಪೋಲಿಸ್ ಠಾಣೆಗೆ ದೂರು ನೀಡಲಾಗಿದ್ದರೂ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಬಳಿಕ ಸಮಸ್ಯೆ ಗಂಭೀರವಾಗುತ್ತಿದ್ದಂತೆ ಹೆಬ್ರಿ ತಾಲೂಕು ಕಚೇರಿ ಎದುರು ಗ್ರಾಮಸ್ಥರು ಧರಣಿ ನಡೆಸಿದರು. ಸಬ್‌ ಇನ್ಸ್‌ಪೆಕ್ಟರ್ ರವಿ ಬಿಕೆ ಹಾಗೂ ತಹಶೀಲ್ದಾರ್ ಪ್ರಸಾದ್ ಅವರಿಗೆ ಮನವಿ ಸಲ್ಲಿಸಿ ಗೂಳಿಯನ್ನು ಹಿಡಿಯುವಂತೆ ಒತ್ತಾಯಿಸಿದರು.

ಗ್ರಾಮಸ್ಥರು ನೀಡಿದ ಮನವಿ ಪತ್ರದಲ್ಲಿ, ಈ ಕೊಬ್ಬಿದ ಗೂಳಿ ತಿಂಗಳೆ ಗ್ರಾಮದ ವಿಕ್ರಮಾರ್ಜುನ ಹೆಗ್ಡೆಯವರಿಗೆ ಸೇರಿದುದಾಗಿದೆ ಎಂದು ಉಲ್ಲೇಖಿಸಲಾಗಿದೆ. ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಧರಣಿ ನಡೆಸಬೇಕಾಯಿತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಧರಣಿಯ ಬಳಿಕ ಗ್ರಾಮಸ್ಥರ ಒತ್ತಡದ ಮೇರೆಗೆ ಇಲಾಖೆಯ ಸಹಕಾರದೊಂದಿಗೆ ಸ್ಥಳೀಯರು  ಕಾರ್ಯಾಚರಣೆ ನಡೆಸಿ ಗೂಳಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದರು. ಿ ಸೆರೆಹಿಡಿದ ಗೂಳಿಯನ್ನು ಹೆಬ್ರಿಯ ಗಿಲ್ಲಾಳಿಯ ಗೋಶಾಲೆಗೆ ಒಪ್ಪಿಸಲಾಗಿದೆ.

ಈ ಸಂದರ್ಭದಲ್ಲಿ ಪಂಚಾಯತ್ ಮಾಜಿ ಅಧ್ಯಕ್ಷ ನವೀನ್ ಕುಮಾರ್, ವಿಜಯಕುಮಾರ್ ಸೆಟ್ಟಿ ಸೀತಾನದಿ, ಭಾಸ್ಕರ್ ಸೆಟ್ಟಿ ಗುಲ್ಕಾಡು, ರಮೇಶ್ ಶೆಟ್ಟಿ ಅಜ್ಜೊಳ್ಳಿ, ರಾಜೇಶ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಸುದರ್ಶನ್ ಹೆಗ್ಡೆ ಅಜ್ಜೊಳ್ಳಿ, ಸದಾಶಿವ ಗೌಡ, ಮಹೇಶ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಗುಡ್ಡೆಮನೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.


error: No Copying!