ದಿನಾಂಕ:16-03-2026(ಹಾಯ್ ಉಡುಪಿ ನ್ಯೂಸ್)
ಉಡುಪಿ: ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವವನ್ನು ಬಲಪಡಿಸುವ ಉದ್ದೇಶದಿಂದ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಉಡುಪಿ ಜಿಲ್ಲಾ ಘಟಕದ ವತಿಯಿಂದ ಮುಸ್ಲಿಂ ಬಾಂಧವರಿಗಾಗಿ ರಂಜಾನ್ ಸೌಹಾರ್ಧ ಇಫ್ತಾರ್ ಕೂಟವನ್ನು ಆಯೋಜಿಸಲಾಯಿತು.
ಮಾರ್ಚ್ 15ರಂದು ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದ ಸಮೀಪದಲ್ಲಿರುವ ಮಥುರಾ ಛತ್ರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿವಿಧ ಸಮುದಾಯದ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿ ಧರ್ಮಸೌಹಾರ್ದತೆಯ ಸಂದೇಶವನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕರವೇ ಉಡುಪಿ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ ಅವರು, “ಉಡುಪಿ ಜಿಲ್ಲೆ ಸದಾ ಶಾಂತಿ ಮತ್ತು ಸೌಹಾರ್ದತೆಯ ಪರಂಪರೆಯನ್ನು ಕಾಪಾಡಿಕೊಂಡು ಬಂದಿರುವ ಪವಿತ್ರ ನೆಲವಾಗಿದೆ. ರಂಜಾನ್ ಮಾಸವು ಸಹೋದರತ್ವ, ಸಹಾನುಭೂತಿ ಮತ್ತು ಶಾಂತಿಯ ಸಂದೇಶವನ್ನು ಸಾರುತ್ತದೆ. ಎಲ್ಲಾ ಸಮುದಾಯದವರು ಪರಸ್ಪರ ಗೌರವದಿಂದ ಬದುಕಿ ಉಡುಪಿ ಜಿಲ್ಲೆಯನ್ನು ಶಾಂತಿ ಸೌಹಾರ್ದತೆಯ ಮಾದರಿ ಜಿಲ್ಲೆಯನ್ನಾಗಿ ರೂಪಿಸೋಣ” ಎಂದು ಕರೆ ನೀಡಿದರು.
ಈ ಇಫ್ತಾರ್ ಕೂಟವು ಧರ್ಮಸೌಹಾರ್ದತೆ ಮತ್ತು ಸಾಮಾಜಿಕ ಐಕ್ಯತೆಯನ್ನು ಮತ್ತಷ್ಟು ಬಲಪಡಿಸುವ ವೇದಿಕೆಯಾಗಿದ್ದು, ಎಲ್ಲರಲ್ಲೂ ಸೌಹಾರ್ದದ ಸಂದೇಶವನ್ನು ಹರಡಿತು.
ಇಫ್ತಾರ್ ಕೂಟದಲ್ಲಿ ಕರವೇ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ, ಸೈಯದ್ ನಿಜಾಮ್, ತಮೀಮ್ ಉಸ್ತಾದ್, ಅಬು ಮೊಹಮ್ಮದ್ (ಮಣಿಪಾಲ), ಪ್ರಸಾದ್, ಜಯಪ್ರಕಾಶ್ ಶೆಟ್ಟಿ, ಆನಂದ್ ಶೆಟ್ಟಿ, ನಾಗರಾಜ್, ಗಣೇಶ್ ಆಚಾರ್ಯ, ಸದ್ದಾಮ್ ಸೇರಿದಂತೆ ಹಲವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

