ಬೆಂಗಳೂರು: ಮೇ ೯(ಹಾಯ್ ಉಡುಪಿ ನ್ಯೂಸ್) ಗಣೇಶ್ ನಟನೆಯ ‘ಗಾಳಿಪಟ–2’ ಸಿನಿಮಾ ಅಗಸ್ಟ್ 12ಕ್ಕೆ ಬಿಡುಗಡೆಗೆ ಸಿದ್ಧವಾಗಿದೆ .
ನಿರ್ದೇಶಕ ಯೋಗರಾಜ್ ಭಟ್ ಅವರು ಮತ್ತೊಂದು ಗಾಳಿಪಟ ಹಾರಿಸಲು ದಿನಾಂಕ ನಿಗದಿಗೊಳಿಸಿದ್ದಾರೆ. “ಗೋಲ್ಡನ್ ಸ್ಟಾರ್ ಗಣೇಶ್” ನಟನೆಯ ‘ಗಾಳಿಪಟ–2’ ಆಗಸ್ಟ್ 12ಕ್ಕೆ ಬಿಡುಗಡೆಯಾಗಲಿದೆ. ‘ಒಂದಿಷ್ಟು ಮೊಹಬ್ಬತ್ ಜೊತೆಗೆ ಮತ್ತೊಂದಷ್ಟು ಸ್ನೇಹವನ್ನು ಹೊತ್ತು ನಿಮ್ಮ ಮುಂದೆ ಬರುತ್ತಿದ್ದೇವೆ. ಅದೇ ಹಳೆಯ ಅಕ್ಕರೆ ಮತ್ತು ಪ್ರೀತಿಯನ್ನು ಬಯಸುವ ಗಾಳಿಪಟ–2 ಚಿತ್ರತಂಡ’ ಎಂದು ಯೋಗರಾಜ್ ಭಟ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. 2008ರಲ್ಲಿ ತೆರೆಕಂಡಿದ್ದ ‘ಗಾಳಿಪಟ’ ಸಿನಿಮಾದಲ್ಲಿ ಗಣೇಶ್, ದಿಗಂತ್, ರಾಜೇಶ್ ಕೃಷ್ಣನ್, ಅನಂತನಾಗ್ ಅವರಿದ್ದ ತಾರಾಗಣ ಚಿತ್ರಪ್ರೇಮಿಗಳ ಮನದ ಮುಗಿಲಲ್ಲಿ ‘ಮೊಹಬ್ಬತ್’ ಸೃಷ್ಟಿಸಿತ್ತು. ಗಣಿ ಪಾತ್ರದಲ್ಲಿ ಗಣೇಶ್ ಮಾತಿನ ಮೋಡಿಯ ಜೊತೆಗೆ ಪ್ರೀತಿಯ ಮಳೆ ಸುರಿಸಿದ್ದರು. ‘ದೂದ್‌ಪೇಢ’ವಾಗಿ ದಿಗಂತ್ ಎರಡನೇ ಭಾಗದಲ್ಲೂ ಮುಂದುವರಿದಿದ್ದು, ಪವನ್ ಕುಮಾರ್ ಹೊಸದಾಗಿ ಕಥೆಗೆ ಸೇರ್ಪಡೆಯಾಗಿದ್ದಾರೆ. ರಾಜೇಶ್ ಕೃಷ್ಣನ್ ಅವರು ಅತಿಥಿ ಕಲಾವಿದರಾಗಿ ಕಾಣಿಸಿಕೊಳ್ಳಲಿದ್ದಾರೆ. ನಾಯಕಿಯರಾಗಿ ವೈಭವಿ ಶಾಂಡಿಲ್ಯ, ನಿಶ್ವಿಕಾ ನಾಯ್ಡು ಹಾಗೂ ಶರ್ಮಿಳಾ ಮಾಂಡ್ರೆ ಎರಡನೇ ಭಾಗದಲ್ಲಿದ್ದಾರೆ. ಮೂರು ವರ್ಷಗಳ ಮೊದಲೇ ಈ ಚಿತ್ರದ ಚಿತ್ರೀಕರಣ ಆರಂಭವಾಗಿತ್ತು. ಆದರೆ, ಕೋವಿಡ್ ಕಾರಣದಿಂದ ಚಿತ್ರೀಕರಣ ಸ್ಥಗಿತವಾಗಿತ್ತು. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿತ್ತು. ಕಳೆದ ಡಿಸೆಂಬರ್‌ನಲ್ಲಿ ಡಬ್ಬಿಂಗ್ ಕೆಲಸ ಪೂರ್ಣಗೊಳಿಸಿ ಪೋಸ್ಟ್ ಪ್ರೊಡಕ್ಷನ್‌ನತ್ತ ಚಿತ್ರತಂಡ ಹೆಜ್ಜೆ ಹಾಕಿತ್ತು. ಇದೀಗ ಚಿತ್ರಕ್ಕೆ ‘ಯು’ ಸೆನ್ಸರ್ ಪ್ರಮಾಣಪತ್ರ ದೊರಕಿದ್ದು ಇದೀಗ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ರಮೇಶ್ ರೆಡ್ಡಿ ನಿರ್ಮಾಣದ ಈ ಚಿತ್ರದ ಡಿಜಿಟಲ್ ಹಾಗೂ ಸ್ಯಾಟಲೈಟ್ ಪ್ರಸಾರದ ಹಕ್ಕನ್ನು ಜೀ5 ಹಾಗೂ ಜೀ ಕನ್ನಡ ಪಡೆದಿದೆ ಎಂದಿದ್ದಾರೆ.