ಮಂದಿರ, ಮಸೀದಿ, ಚರ್ಚು, ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಹೀಗೆ ಮಾತನಾಡುವುದನ್ನು ಕೇಳುತ್ತಿದ್ದೇವೆ…
ದೇವರ ಆಟ ಬಲ್ಲವರಾರು…
ದೇವರಿಗೆ ಯುದ್ಧ ಬೇಕಾಗಿದೆಯೇ ?
ಈ ಜಗತ್ತೇ ದೇವರ ಸೃಷ್ಟಿ ಎಂದು ನಂಬಿರುವವರ ಪಾಲಿಗೆ ಈ ಯುದ್ಧ ಸಹ ಆತನ ಸೃಷ್ಟಿಯೇ ಎಂದು ಭಾವಿಸಬೇಕಾಗುತ್ತದೆ. ಏಕೆಂದರೆ ಆತ ಸರ್ವಶಕ್ತ ಮತ್ತು ಸರ್ವಾಂತರ್ಯಾಮಿ.
ಆದ್ದರಿಂದಲೇ ಯುದ್ಧದ ದುಷ್ಪರಿಣಾಮ ಎಲ್ಲಾ ಧರ್ಮ, ದೇಶಗಳಿಗೂ ವ್ಯಾಪಿಸಿದೆ.
ಈ ಧರ್ಮಗಳ ದೇವರುಗಳು ಮನಸ್ಸು ಮಾಡಿದ್ದರೆ ಒಂದೇ ಕ್ಷಣದಲ್ಲಿ ಯುದ್ಧ ನಿಲ್ಲಿಸಬಹುದಿತ್ತು. ದೇವರಿಗೆ ಅಸಾಧ್ಯವಾದುದು ಯಾವುದಿದೆ. ಆದರೆ ದೇವರು ಪರೀಕ್ಷೆ ಮಾಡುತ್ತಿದ್ದಾನೆ. ಅವನಿಗೆ ಇಷ್ಟವಿದ್ದವರು ಉಳಿಯುತ್ತಾರೆ ಇಲ್ಲದಿದ್ದವರು ಸಾಯುತ್ತಾರೆ. ಅದು ದೈವೇಚ್ಚೆ ಎಂದು ಅರ್ಥ. ಜನ ಭಯ ಪಡುವ ಅವಶ್ಯಕತೆ ಇಲ್ಲ !
ವಿಷಯ ಇಷ್ಟು ಸರಳವಿದ್ದರು ಎಲ್ಲರೂ ಯುದ್ಧದ ಬಗ್ಗೆ ಎಚ್ಚರಿಕೆಯ ಸಲಹೆಗಳನ್ನು ಕೊಡುತ್ತಿದ್ದಾರೆ. ಅಂದರೆ ದೇವರ ಶಕ್ತಿಯನ್ನೇ ಅನುಮಾನಿಸುತ್ತಿದ್ದಾರೆ. ದೇವರಿಗೇ ಪ್ರತಿರೋಧ ಒಡ್ಡುತ್ತಿದ್ದಾರೆ. ಯುದ್ಧ ನಿಲ್ಲಿಸಲು ಸರ್ಕಸ್ ಮಾಡುತ್ತಿದ್ದಾರೆ.
ದೇವರಿಗೇನು ಬುದ್ದಿ ಇಲ್ಲವೇ, ಯಾರನ್ನು ಸಾಯಿಸಬೇಕು, ಯಾರನ್ನು ಉಳಿಸಬೇಕು, ಯಾವಾಗ ಯುದ್ಧ ನಿಲ್ಲಿಸಬೇಕು ಎಂದು ಆತನಿಗೆ ತಿಳಿದಿದೆಯಲ್ಲವೇ ? ಮತ್ತೆ ನಮ್ಮ ಪ್ರಯತ್ನ ಏಕೆ.
ಅಲ್ಲಾ, ಬ್ರಹ್ಮ, ಜೀಸಸ್…
ಅಬ್ಬಾ, ಒಬ್ಬರಿಗಿಂತ ಒಬ್ಬರು ಬಲಶಾಲಿಗಳು. ಅಂತಹವರ ಸೃಷ್ಟಿಯಲ್ಲಿ ಒಂದು ದೇಶದ ಅಧ್ಯಕ್ಷನೆಂಬ ಮನುಷ್ಯ ಪ್ರಾಣಿ ಯುದ್ಧ ಮಾಡಿ ಎಲ್ಲರನ್ನೂ ನಾಶ ಮಾಡಲು ಪ್ರಯತ್ನಿಸುತ್ತಿದ್ದಾನೆ ಎಂದರೆ ನಗು ಬರುತ್ತದೆಯಲ್ಲವೇ…..
ನೋಡಿ, ಆಗಲೇ ಒಬ್ಬರು ಹೇಳುತ್ತಿದ್ದಾರೆ, ಅಯ್ಯೋ ಮನುಷ್ಯ ತನ್ನ ಚೇಷ್ಟೆಗಳಿಂದ ಯುದ್ಧ ಸೃಷ್ಟಿಗೆ ಕಾರಣವಾದರೆ ದೇವರು ಏನು ಮಾಡಲು ಸಾಧ್ಯ. ಅವನನ್ನೇಕೆ ದೂರುವಿರಿ ಎಂದು. ಎಲ್ಲಕ್ಕೂ ದೇವರನ್ನೇ ಹೊಣೆ ಮಾಡುವುದು ಮೂರ್ಖತನ.
ಹೌದಲ್ಲವೇ, ಈ ವಿಷಯದಲ್ಲಿ ದೇವರಿಗೆ ಏನೂ ಮಾಡಲು ಸಾಧ್ಯವಿಲ್ಲ. ಹಾಗಾದರೆ ದೇವರು ಮಾಡುವುದಾದರೂ ಏನು ? ಯುದ್ಧ ಮನುಷ್ಯನ ಸೃಷ್ಟಿ ಎನ್ನುವುದಾದರೆ ದೇವರೂ ಸಹ ಮನುಷ್ಯನ ಸೃಷ್ಟಿಯೇ ಆಗಿರಬೇಕು. ಯುದ್ಧವನ್ನು ನಿಯಂತ್ರಿಸಲಾಗದ ದೇವರು ಇನ್ನು ಇಡೀ ಜಗತ್ತನ್ನು ಹೇಗೆ ನಿಯಂತ್ರಿಸುತ್ತಾನೆ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆಯಲ್ಲವೇ…….
ಕಷ್ಟ ಕಾಲದಲ್ಲಿ ದೇವರು ರಕ್ಷಣೆಗೆ ಬರಲಿಲ್ಲವೆಂದರೆ ಆತ ಇರುವುದಾದರೂ ಏತಕ್ಕೆ. ಹಿಂದಿನ ಜನ್ಮ, ಮುಂದಿನ ಜನ್ಮ, ಪಾಪ ಪುಣ್ಯ, ಕರ್ಮ ಹೀಗೆ ಕಾಲ್ಪನಿಕವಾಗಿ ಸಮರ್ಥಿಸಿಕೊಳ್ಳುತ್ತಾ ಇರುವುದು ಇನ್ನೂ ಎಷ್ಟು ದಿನ.
ನೀವು ಯಾವುದೇ ಕೋನದಿಂದ ಯೋಚಿಸಿದರೂ ಸಾಮಾನ್ಯ ಜನರ ನಂಬಿಕೆಯ ದೇವರು ಎಂಬ ವ್ಯಕ್ತಿ ಅಥವಾ ಶಕ್ತಿ ಇರುವ ಸಾಧ್ಯತೆ ತುಂಬಾ ಕಡಿಮೆ.
ಪ್ರಕೃತಿ ಎಂಬುದು ಮಾತ್ರ ಅಸ್ತಿತ್ವದಲ್ಲಿ ಇದೆ. ಅದೇ ವಾಸ್ತವ. ಇಲ್ಲಿ ಯಾವುದನ್ನು ಸೃಷ್ಟಿಸಲು ಸಾಧ್ಯವಿಲ್ಲ ಮತ್ತು ಯಾವುದನ್ನು ನಾಶ ಮಾಡಲು ಸಾಧ್ಯವಿಲ್ಲ. ಕೇವಲ ರೂಪ ಬದಲಾಗುತ್ತದೆ. ಎಷ್ಟೊಂದು ನಿಜವಲ್ಲವೇ….
ಯುದ್ಧ ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ. ಅದರ ರೂಪ ಮಾತ್ರ ಬದಲಾಗುತ್ತಿರುತ್ತದೆ.
ಪ್ರಕೃತಿ ಹೇಗೆ ಸೃಷ್ಟಿಯಾಯಿತು ಎಂಬುದನ್ನು ಸ್ವಲ್ಪ ಮಟ್ಟಿಗೆ ವಿಜ್ಞಾನಿಗಳು ಹೇಳುತ್ತಾರೆ. ದೇವರೇ ಪ್ರಕೃತಿಯನ್ನು ಸೃಷ್ಟಿ ಮಾಡಿದ್ದು ಎಂದರೆ ದೇವರನ್ನು ಸೃಷ್ಟಿ ಮಾಡಿದ್ದು ಯಾರು ಎಂಬ ಪ್ರಶ್ನೆಯೂ ಕಾಡುತ್ತದೆ.
ಪ್ರಕೃತಿ ನಮ್ಮ ಕಣ್ಣ ಮುಂದೆಯೇ ಇದೆ.
ಆದರೆ ದೇವರು…. ….
ಅದು ಒಂದು ನಂಬಿಕೆ…….
ಇಷ್ಟಪಡುವವರು ನಂಬುತ್ತಲೇ ಇರಬಹುದು. ಯಾವುದೇ ಅಡ್ಡಿ ಇಲ್ಲ.
ನಂಬದವರು ಪ್ರಶ್ನಿಸುತ್ತಲೇ ಇರಬಹುದು.
ಅದಕ್ಕೂ ಅಡ್ಡಿ ಮಾಡಬಾರದು……
ದೇವರೇ ನೇರವಾಗಿ ನಮ್ಮ ಪ್ರಶ್ನೆಗಳಿಗೆ ಉತ್ತರಿಸುವವರೆಗೂ………
ಅವನ ಪರವಾಗಿ ಯಾವುದೇ ಧರ್ಮದ ಯಾರೇ ಉತ್ತರಿಸಿದರೂ ನಾನಂತೂ ನಂಬುವುದಿಲ್ಲ……..
ಎಲ್ಲಿಯೋ ಯುದ್ಧ ನಡೆದರೆ ಅಡುಗೆ ಮಾಡುವ ಗ್ಯಾಸ್ಗಾಗಿ ನಾವು ಇಲ್ಲಿ ಪರದಾಡುತ್ತಿದ್ದೇವೆ ಎಂದರೆ ಯುದ್ಧದ ಭಯಂಕರ ದುಷ್ಪರಿಣಾಮ ಯೋಚಿಸಿ.
ಯುದ್ಧ ಬೇಕೆ ಯುದ್ಧ…..
ನಗು ಅಥವಾ ದು:ಖ…
ಮನೆ ಅಥವಾ ಸ್ಮಶಾನ….
ಹೂವು ಅಥವಾ ಬಂದೂಕು…
ಶಾಂತಿ ಅಥವಾ ಸರ್ವನಾಶ…..
ನಮ್ಮ ಆಯ್ಕೆ ಯಾವುದು……
ವಿಶ್ವ ಈಗಾಗಲೇ ಕಂಡಿರುವ ಎರಡು ಬೃಹತ್ ಯುದ್ಧಗಳೆಂದರೆ ಮೊದಲನೇ ಮಹಾಯುದ್ಧ ಮತ್ತು ಎರಡನೇ ಮಹಾಯುದ್ಧ.
1914 ಮತ್ತು 18ರ ನಡುವಿನ ಮೊದಲ ಮಹಾಯುದ್ಧ ಮತ್ತು 1939 ರಿಂದ 1945 ರವರೆಗಿನ ಎರಡನೇ ಮಹಾಯುದ್ಧ. ತದನಂತರ ಬೇರೆ ಬೇರೆ ಎರಡು ದೇಶಗಳ ನಡುವೆ ಸಾಕಷ್ಟು ಯುದ್ಧ ನಡೆದಿದೆ ಮತ್ತು ನಡೆಯುತ್ತಿದೆ ಯಾದರೂ ಇದೀಗ ಮೂರನೇ ಮಹಾಯುದ್ಧದ ಸಾಧ್ಯತೆ ಮತ್ತೆ ಗೋಚರಿಸುತ್ತಿದೆ..
ಮೊದಲ ಎರಡು ಮಹಾ ಯುದ್ಧಗಳು ವಿಸ್ತರಣಾವಾದ, ಅತಿಯಾದ ರಾಷ್ಟ್ರೀಯತೆ, ಸಂಪನ್ಮೂಲಗಳ ಕ್ರೋಡೀಕರಣ, ದುರಹಂಕಾರದ ಕಾರಣದಿಂದ ನಡೆದಿದ್ದರೆ, ಈಗಿನ ಯುದ್ಧ ಪ್ರದೇಶಗಳ ಹಿಡಿತ, ಆಯಿಲ್ ಮತ್ತು ಧಾರ್ಮಿಕ ಕಾರಣಕ್ಕಾಗಿ ನಡೆಯುತ್ತಿರುವಂತೆ ಕಾಣುತ್ತಿದೆ…..
ಮುಖ್ಯವಾಗಿ ಈ ಕ್ಷಣದಲ್ಲಿ ರಕ್ಷಣಾತ್ಮಕ ಮತ್ತು ಸೈನಿಕ ಸಾಮರ್ಥ್ಯದ ದೃಷ್ಟಿಯಿಂದ ಅತ್ಯಂತ ಶಕ್ತಿಶಾಲಿಯಾಗಿ ಹೊರಹೊಮ್ಮಿರುವ ಅಮೆರಿಕ, ಇಸ್ರೇಲ್ ಯುದ್ಧದ ಎಲ್ಲಾ ನೀತಿ, ನಿಯಮ, ಸಂಯಮ ಎಲ್ಲವನ್ನೂ ಮೀರಿ ತನ್ನ ಶತ್ರುಗಳ ವಿರುದ್ಧ ಅತ್ಯಂತ ನಿರ್ದಾಕ್ಷಿಣ್ಯವಾಗಿ ಯುದ್ಧವನ್ನು ಮಾಡುತ್ತಿದೆ.
ಈ ಕ್ಷಣಕ್ಕೆ ಅದು ತಾನು ತನ್ನ ಎಲ್ಲಾ ಶತ್ರುಗಳನ್ನು ನಾಶ ಮಾಡಿ ಅವರಿಗೆ ತಕ್ಕ ಪಾಠ ಕಲಿಸುತ್ತೇನೆ ಎಂದು ಭಾವಿಸಿರಬಹುದು ಮತ್ತು ಅದರಲ್ಲಿ ಯಶಸ್ವಿಯೂ ಆಗುತ್ತಿರಬಹುದು. ಆದರೆ ವಿಶ್ವದ ಯುದ್ಧ ಇತಿಹಾಸವನ್ನು ಅಧ್ಯಯನ ಮಾಡಿ, ಆ ಯುದ್ಧದ ತಿರುವುಗಳನ್ನು ಗಮನಿಸಿದರೆ, ಖಂಡಿತವಾಗಲೂ ಯಾರೊಬ್ಬರೂ, ಎಷ್ಟೇ ಬಲಶಾಲಿಯಾದರು, ನಿರಂತರವಾಗಿ ತಮ್ಮ ಸಾಮರ್ಥ್ಯವನ್ನು ಉಳಿಸಿಕೊಳ್ಳುವುದು ಸಾಧ್ಯವಿಲ್ಲ. ಶತ್ರುಗಳು ಒಂದಲ್ಲ ಒಂದು ರೂಪದಲ್ಲಿ ಬೇರೆ ಬೇರೆ ರೀತಿಯಲ್ಲಿ ಕಾಲವನ್ನು ಮೀರಿ ಮತ್ತೆ ಪ್ರತಿ ದಾಳಿ ಮಾಡುವ ಎಲ್ಲ ಸಾಧ್ಯತೆಯೂ ಇರುತ್ತದೆ.
ಅದರಲ್ಲೂ ಈಗಿನ ತಂತ್ರಜ್ಞಾನದ ಯುಗದಲ್ಲಿ, ಅಣುಬಾಂಬುಗಳ ಕಾಲದಲ್ಲಿ, ವೈರಸ್ ಗಳನ್ನು ಹರಡಿಸುವ ಸಾಧ್ಯತೆ ಇರುವಲ್ಲಿ ಯಾರೋ ಒಬ್ಬ, ಯಾವುದೋ ರೂಪದ, ಅತ್ಯಂತ ಮಾರಕವಾದ ತಂತ್ರಜ್ಞಾನವನ್ನು ರೂಪಿಸಿ, ಮುಂದೊಂದು ದಿನ ತನ್ನ ಶತ್ರುವಿನ ಮೇಲೆ ದಾಳಿ ಮಾಡಿ ಬಿಡಬಹುದು. ಆಗ ಯಾರೇ ಆಗಲಿ ಅದನ್ನು ನಿಯಂತ್ರಿಸಲಾಗದೆ ಸರ್ವನಾಶ ಹೊಂದುತ್ತಾರೆ.
ಇದು ವಿಶ್ವದ ಎಲ್ಲಾ ನಾಗರಿಕರಿಗೂ, ಎಲ್ಲಾ ದೇಶಗಳಿಗೂ, ಎಲ್ಲಾ ಧರ್ಮಗಳಿಗೂ ಸಮನಾಗಿ ಅನ್ವಯಿಸುತ್ತದೆ. ಯಾರು ಎಷ್ಟೇ ಬಲಿಷ್ಠವಾದರೂ ಆ ಶಕ್ತಿಯನ್ನು ಸದುಪಯೋಗಪಡಿಸಿಕೊಳ್ಳಬೇಕೆ ಹೊರತು ದುರುಪಯೋಗಪಡಿಸಿಕೊಳ್ಳಬಾರದು. ಎಲ್ಲಾ ಧರ್ಮಗಳ ದೈವಭಕ್ತರು ಗಮನಿಸಬೇಕಾದ ಅಂಶವೆಂದರೆ ದುಷ್ಟತನಕ್ಕೆ ಯಾವಾಗಲೂ ಸೋಲಾಗೇ ಆಗುತ್ತದೆ. ಜೊತೆಗೆ ನಮ್ಮ ಶಕ್ತಿಯನ್ನು ನಾವು ಲೋಕಹಿತಕ್ಕಾಗಿ ಬಳಸಿದಾಗ ಅದು ಉಜ್ವಲವಾಗುತ್ತದೆ ಮತ್ತು ಪ್ರಜ್ವಲವಾಗುತ್ತದೆ. ಅದನ್ನು ಲೋಕವಿನಾಶಕ್ಕಾಗಿ ಬಳಸಿದಾಗ ಮುಂದೊಂದು ದಿನ ಅದು ನಮ್ಮನ್ನೇ ಸರ್ವನಾಶ ಮಾಡುತ್ತದೆ.
ಇಲ್ಲಿ ಇಸ್ರೇಲ್, ಅಮೆರಿಕ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕು ಅಥವಾ ಇರಾನ್ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕು ಎಂಬುದು ಮುಖ್ಯವಲ್ಲ. ಒಂದು ರೀತಿಯಲ್ಲಿ ಇಬ್ಬರು ಅಪರಾಧಿಗಳೇ. ಈಗ ಆಗಬೇಕಾಗಿರುವುದು ಹಿಂದಿನದೆಲ್ಲವನ್ನು ಮರೆತು ಹೊಸ ವಿಶ್ವಕ್ಕಾಗಿ, ಹೊಸ ಅಧ್ಯಾಯವನ್ನು, ಹೊಸ ಹೊಂದಾಣಿಕೆಯನ್ನು ಮಾಡಿಕೊಳ್ಳಬೇಕಿರುವುದು. ಇಂದು ಎಲ್ಲರೂ ತಮ್ಮ ಹಠಮಾರಿ ಧೋರಣೆಯನ್ನು,, ಧಾರ್ಮಿಕ ಅಂಧತ್ವವನ್ನು ಮರೆತು, ಒಂದು ಪರಿಹಾರ ರೂಪದ ಕಾರ್ಯ ಯೋಜನೆಯನ್ನು ಕಂಡುಕೊಳ್ಳಬೇಕಿದೆ…..
ಈ ಯುದ್ಧದಿಂದ ಈಗಾಗಲೇ ಎಷ್ಟೊಂದು ಅಮಾಯಕರು ಬಲಿಯಾಗಿದ್ದಾರೆ. ಲಕ್ಷಾಂತರ ಜನರು ನಿರ್ವಸಿತರಾಗಿದ್ದಾರೆ ಮತ್ತು ವಲಸೆ ಹೋಗಿದ್ದಾರೆ. ಅವರು ಯಾವ ಧರ್ಮದವರು, ಯಾವ ದೇಶದವರು ಎಂಬುದು ಮುಖ್ಯವಲ್ಲ. ನಮ್ಮದೇ ರೀತಿಯ ಮನುಷ್ಯ ಪ್ರಾಣಿಗಳು ಎಂಬುದು ಮುಖ್ಯ….
ಸಾಮಾನ್ಯ ಜನರು ಕೂಡ ಇಲ್ಲಿ ಯೋಚಿಸಬೇಕಾದ ವಿಷಯವಿದೆ. ಯುದ್ಧ ನಡೆದಾಗ ನಮ್ಮ ದೇಶಕ್ಕೆ ಜಯವಾಗುತ್ತದೆ ಎಂದು ಯುದ್ಧವನ್ನು ಬೆಂಬಲಿಸುವ ಮೂರ್ಖತನ ಮತ್ತು ಅಮಾನವೀಯ ನಡೆಗಳನ್ನು ಸಾಮಾನ್ಯ ಜನ ಪ್ರದರ್ಶಿಸಬಾರದು ಮತ್ತು ಸಹಿಸಿಕೊಳ್ಳಬಾರದು. ಯುದ್ಧದ ಸಾಧ್ಯತೆ ಕಂಡು ಬಂದ ತಕ್ಷಣ ಅಲ್ಲಿನ ಸಾಮಾನ್ಯ ಜನ ತನ್ನದೇ ದೇಶದ ಸರ್ಕಾರಗಳ ವಿರುದ್ಧ ಧ್ವನಿ ಎತ್ತಬೇಕು. ಯಾವ ಕಾರಣಕ್ಕೂ ಯುದ್ಧವಾಗದಂತೆ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರೇ ಪ್ರತಿಭಟನೆಗಳನ್ನು ಮಾಡಬೇಕು. ಎರಡೂ ಕಡೆಯ ಪ್ರಜೆಗಳು ಈ ರೀತಿ ಶಾಂತಿಯ ಕೂಗನ್ನು ದೊಡ್ಡ ಧ್ವನಿಯಲ್ಲಿ ಮೊಳಗಿಸಿದರೆ ಖಂಡಿತವಾಗಲೂ ಯುದ್ಧಗಳು ನಡೆಯುವ ಸಾಧ್ಯತೆ ತುಂಬಾ ಕಡಿಮೆ.
ಸಾರ್ವಜನಿಕರೇ ಮನಸ್ಸಿನಲ್ಲಿ ಯುದ್ದೋತ್ಸಾಹಿಗಳಾದರೆ ಅದರ ದುಷ್ಪರಿಣಾಮ ಸಾರ್ವಜನಿಕರೇ ಎದುರಿಸಬೇಕು. ಏಕೆಂದರೆ ಯುದ್ಧದಲ್ಲಿ ಯಾವ ರಾಜಕಾರಣಿಗಳು, ಯಾವ ಪತ್ರಕರ್ತರು, ಯಾವ ಧಾರ್ಮಿಕ ಮುಖಂಡರು ಹೋರಾಡುವುದಿಲ್ಲ. ಸಾಮಾನ್ಯ ಜನರ ಕರುಳ ಬಳ್ಳಿಗಳಾದ ಬಲಿಷ್ಠ ಯೋಧರೇ ಈ ಯುದ್ಧದಲ್ಲಿ ಭಾಗವಹಿಸುವುದು ಮತ್ತು ಅದೇ ಯೋಧರೆ ಇನ್ನೊಂದು ದೇಶದ ಅಮಾಯಕ ಜನರನ್ನು ಕೊಲ್ಲುವುದು. ಯುದ್ಧವೆಂಬುದು ಸಂಬಂಧವೇ ಇಲ್ಲದ ಮುಗ್ಧ ಜನರ ರಕ್ತದೋಕುಳಿಯಾಟ.
ಆದ್ದರಿಂದ ಯಾವಾಗಲೂ ಯುದ್ಧದ ಸಾಧ್ಯತೆ, ಅದನ್ನು ತಡೆಗಟ್ಟಲು ಕ್ರಿಯಾಶೀಲ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ಈ ಮಾಧ್ಯಮಗಳ ರೋಚಕ ಸುದ್ದಿಗಳಿಗೆ, ವಿವೇಚನೆ ಇಲ್ಲದ ಅಭಿಪ್ರಾಯಗಳಿಗೆ ಮಾನ್ಯತೆ ನೀಡಬಾರದು.
ಇನ್ನೊಬ್ಬರನ್ನು ಕೊಂದು ಗೆಲ್ಲುವುದು ಅದು ಯಾವ ಗೆಲುವು. ಅದು ನಿಮ್ಮ ದೇವರುಗಳಿಗೆ, ಧರ್ಮಕ್ಕೆ ಮಾಡುವ ಅಪಚಾರವಲ್ಲವೇ, ನಂಬಿಕೆ ದ್ರೋಹವಲ್ಲವೇ…
ಯುದ್ಧಗಳು ಚೆಲ್ಲುವುದು ರಕ್ತವನ್ನು,
ಯುದ್ಧಗಳು ನಿಲ್ಲಿಸುವುದು ಮನುಷ್ಯರ ಉಸಿರನ್ನು ,
ಯುದ್ಧಗಳು ಉಂಟುಮಾಡುವುದು ದುಃಖವನ್ನು,
ಯುದ್ಧಗಳು ಸೃಷ್ಟಿ ಮಾಡುವುದು ಅನಾಥರನ್ನು…..
ಆದರೆ ಅದೇ ಯುದ್ಧವಲ್ಲದ ಶಾಂತಿ ಪ್ರಕ್ರಿಯೆಯು ಸೃಷ್ಟಿ ಮಾಡುವುದು ಜೀವನದ ಘನತೆಯನ್ನು,
ಬದುಕಿನ ನೆಮ್ಮದಿಯನ್ನು,
ಮನುಷ್ಯನ ಸಂತೋಷವನ್ನು,
ಅವನ ಮುಖದ ನಗುವನ್ನು……
ಈ ಆಯ್ಕೆ ಈಗ ನಮ್ಮ ಮುಂದಿದೆ…
ಕೆಲವು ಮತಾಂಧ ಮಾಧ್ಯಮಗಳು, ಧಾರ್ಮಿಕ ಮುಖಂಡರು, ಸಾಮಾನ್ಯ ವ್ಯಕ್ತಿಗಳು ಅಮೆರಿಕ, ಇಸ್ರೇಲ್ ನ ಶಕ್ತಿಯನ್ನು ಅದ್ಬುತವೆನ್ನುವಂತೆ ವರ್ಣಿಸಿ ಆತ್ಮ ವಂಚನೆ ಮಾಡಿಕೊಂಡು ತಮ್ಮ ಅಜ್ಞಾನದ ಪರಮಾವಧಿಯಲ್ಲಿ ತೇಲಿ ಮುಖವಾಡವನ್ನು ಕಳಚಿಕೊಂಡಿದ್ದಾರೆ. ಹಾಗೆಯೇ ಇನ್ನೊಂದಿಷ್ಟು ಜನ ಇಂದಲ್ಲ ನಾಳೆ ನಮ್ಮ ದೇವರು ಮತ್ತು ಧರ್ಮ ಇಸ್ರೇಲನ್ನು ಸಂಪೂರ್ಣ ನಾಶ ಮಾಡುತ್ತದೆ ನೋಡುತ್ತಿರಿ ಎಂದು ಮತ್ತೊಂದು ವಿಕೃತ ಮನಸ್ಥಿತಿಯಲ್ಲಿ ಇದ್ದಾರೆ.
ಆದರೆ ನಿಜವಾಗಲೂ ಮನುಷ್ಯರಾದವರು ಹಿಂದುವಾಗಲಿ, ಕ್ರಿಶ್ಚಿಯನ್ನರಾಗಲಿ, ಮುಸ್ಲಿಮರಾಗಲಿ, ಇಸ್ರೇಲ್ ನವರಾಗಲಿ, ಲೆಬನಾನ್ ನವರಾಗಲಿ, ಅಮೆರಿಕಾದವರಾಗಲಿ, ಇರಾನ್ ನವರೇ ಆಗಿರಲಿ, ಯಾರೇ ಆಗಿರಲಿ, ಸಹಜ, ಸ್ವಾಭಾವಿಕ ಸಾವುಗಳನ್ನು ಹೊರತುಪಡಿಸಿ, ಅಪರಾಧಿಗಳ ಶಿಕ್ಷೆಯನ್ನು ಹೊರತುಪಡಿಸಿ, ಇತರ ಯಾವುದೇ ರೀತಿಯ ಹಿಂಸೆಯನ್ನು ನಾವು ಖಂಡಿತವಾಗಲೂ ಯೋಚಿಸಬಾರದು ಮತ್ತು ಆಶಿಸಬಾರದು. ಮನುಷ್ಯನ ನಿಜವಾದ ಜೀವಶಕ್ತಿ ಶಾಂತಿ ಮಾತ್ರ. ಅದನ್ನು ಈ ನಾಗರಿಕ ಸಮಾಜ ಅಳವಡಿಸಿಕೊಂಡರೆ ಉತ್ತಮ. ಇಲ್ಲದಿದ್ದರೆ ವಿನಾಶ ಖಂಡಿತ…..
ಏನಾದರಾಗಲಿ ಮೂರನೆಯ ವಿಶ್ವ ಯುದ್ಧ ನಮ್ಮ ಕಣ್ಣ ಮುಂದೆ, ನಮ್ಮ ಜೀವಿತಾವಧಿಯಲ್ಲಿ ನಡೆಯದಿರಲಿ ಎಂದು ಆಶಿಸುತ್ತಾ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
