ಉಡುಪಿ: ದಿನಾಂಕ:13-03-2026 (ಹಾಯ್ ಉಡುಪಿ ನ್ಯೂಸ್) ನಗರದ ಸಿಟಿ ಬಸ್ ನಿಲ್ದಾಣದಲ್ಲಿ ಅಪರಾತ್ರಿಯಲ್ಲಿ ಯಾವುದೋ ಅಪರಾಧ ಎಸಗಲು ಅವಿತು ಕುಳಿತಿದ್ದ ವ್ಯಕ್ತಿ ಯೋರ್ವನನ್ನು ನಗರ ಪೊಲೀಸ್ ಠಾಣೆಯ ಎಎಸ್ಐ ಹರೀಶ್ ಅವರು ಬಂಧಿಸಿದ್ದಾರೆ.
ಉಡುಪಿ ನಗರ ಠಾಣೆಯ ಎಎಸ್ಐ ಹರೀಶ್ ಅವರು ದಿನಾಂಕ:12/03/2026 ರಂದು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬೆಳಗಿನ ಜಾವ ಅಂದರೆ ದಿನಾಂಕ 13/03/2026 ರ ಬೆಳಿಗ್ಗೆ 03:45 ಗಂಟೆಯ ಸುಮಾರಿಗೆ ಮೂಡನಿಡಂಬೂರು ಗ್ರಾಮದ ಸಿಟಿ ಬಸ್ ನಿಲ್ದಾಣದ ಹತ್ತಿರ ಮರೆಯಲ್ಲಿ ಕತ್ತಲೆಯಲ್ಲಿ ಓರ್ವ ವ್ಯಕ್ತಿಯು ನಿಂತಿರುವ ಬಗ್ಗೆ ಎಎಸ್ಐ ಹರೀಶ್ ರವರಿಗೆ ಸಾರ್ವಜನಿಕರಿಂದ ಮಾಹಿತಿ ಬಂದಿದೆ.
ಮಾಹಿತಿಯಂತೆ ಎಎಸ್ಐ ಹರೀಶ್ ರವರು ರಾತ್ರಿ ಗಸ್ತು ಕರ್ತವ್ಯದ ಸಿಬ್ಬಂದಿಯವರೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ ಬಂದು ಅಲ್ಲಿ ನೋಡಿದಾಗ ಸಿಟಿ ಬಸ್ ನಿಲ್ದಾಣದ ಬಳಿ ಮರೆಯಲ್ಲಿ ಕತ್ತಲೆಯಲ್ಲಿ ಓರ್ವ ವ್ಯಕ್ತಿಯು ತನ್ನನ್ನು ಮರೆ ಮಾಚಿಕೊಂಡು ನಿಂತಿದ್ದು ಆತನ ಬಳಿ ಪೊಲೀಸರು ಹೋದಾಗ ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಓಡಿಹೋಗಲು ಪ್ರಯತ್ನಿಸಿರುತ್ತಾನೆ.
ಪೊಲೀಸರು ಓಡಿ ಹೋಗುತ್ತಿದ್ದ ಆತನನ್ನು ಹಿಡಿದು ಬಂಧಿಸಿ ವಶಕ್ಕೆ ಪಡೆದಿದ್ದು, ಆತನನ್ನು ಕೂಲಂಕುಷವಾಗಿ ವಿಚಾರಣೆ ನಡೆಸಿದಾಗ ತನ್ನ ಹೆಸರು ಪ್ರಶಾಂತ ಕೆ.ವಿ ಯಾನೆ ಕುಟ್ಟಿ ಬಿನ್ ವಿಜಯ್ (35) ವಾಸ: ಕೊರಡಿಹಿತ್ತಲ್ಲಾ ಗ್ರಾಮ ,ಎಎಲ್ ಎನ್ ಆಸ್ಪತ್ರೆಯ ಬಳಿ ಕೊಪ್ಪ ತಾಲೂಕು ಚಿಕ್ಕಮಗಳೂರು ಜಿಲ್ಲೆ ಎಂಬುದಾಗಿ ತಿಳಿಸಿರುತ್ತಾನೆ.
ಪೊಲೀಸರು ಆತನನ್ನು ಅಪರಾತ್ರಿಯಲ್ಲಿ ಅಲ್ಲಿ ಅವಿತು ಇದ್ದ ಬಗ್ಗೆ ವಿಚಾರಿಸಿದ್ದು ಅದಕ್ಕೆ ಸಮರ್ಪಕವಾದ ಉತ್ತರವನ್ನು ಆತ ನೀಡದೇ ಇದ್ದು ಆತನಿಗೆ ಉಡುಪಿಯಲ್ಲಿ ಸಂಬಂಧಿಕರು ಯಾರೂ ಇರುವುದಿಲ್ಲ, ಹಾಗೂ ಆತನು ಯಾವುದೋ ಅಪರಾಧ ಎಸಗುವ ಇರಾದೆಯುಳ್ಳವನಾಗಿರುವ ಬಗ್ಗೆ ಪೊಲೀಸರಿಗೆ ಬಲವಾದ ಸಂಶಯ ಇರುತ್ತದೆ.
ಈತನ ಮೇಲೆ ಈಗಾಗಲೇ ಶಿವಮೊಗ್ಗ ಜಿಲ್ಲೆಯ ಕೋಟೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 17/2010 ಕಲಂ 379 ಐಪಿಸಿ ಯಂತೆ ಪ್ರಕರಣ ದಾಖಲಾಗಿ ಸಜಾ ಬಂಧಿಯಾಗಿರುವುದಾಗಿ ಈತನ ಬೆರಳಚ್ಚು ದಾಖಲೆಯಿಂದ ತಿಳಿದುಬಂದಿರುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ 96(B) KP ACT ರಂತೆ ಪ್ರಕರಣ ದಾಖಲಾಗಿದೆ.
