ಮಹಾನಗರಿ, ಗಾರ್ಡನ್ ಸಿಟಿ ಇನ್ನೂ ಅನೇಕ ಹೆಸರಿದೆ, ನಮ್ಮ ಬೆಂಗಳೂರಿಗೆ.
ಇತ್ತೀಚೆಗೆ ನಮ್ಮ ಪ್ರಯಾಣ ಬೆಂಗಳೂರಿನ ಕೆಲ ಗಲ್ಲಿಗಳಲ್ಲಿ ಸಾಗಿತ್ತು. ನೋಡಿದರೇ ಬೆಚ್ಚಿಬೀಳಿಸುವ ಗುಂಡಿಗಳು ಅಲ್ಲಲ್ಲ, ರಸ್ತೆಗಳು. ಯಾವಾಗ ಮಾರ್ರೆ, ಇದರ ರಿಪೇರಿ? “ಮುಂದಿನ ಎಲೆಕ್ಷನ್ ಬಂದಾಗ”, ಪಟಕ್ಕನೆ ಉತ್ತರ ಬಂದಿತ್ತು, ಹತ್ತಿರ ಕುಳಿತಿದ್ದ ಬಂಧು ಒಬ್ಬರಿಂದ. ಒಮ್ಮೆ ಯೋಚಿಸುವಂತಿತ್ತು , ಅವರ ಮಾತುಗಳು. ‘ಹೌದಲ್ವಾ, ಸತ್ಯವನ್ನೇ ಹೇಳಿದ್ದಾರೆ ಅವರು ಮುಜುಗರವಿಲ್ಲದೆ’.
ಮತ ಯಾಚಿಸಲು ಬರುವ ಭಾವೀ ನಾಯಕರ ಮಾತುಗಳು, ಅಬ್ಬಾ! ಎಂತಹ ನಾಜೂಕು, ಮೋಡಿ ಭರಿತ ನುಡಿಗಳು. ವಹಿಸಿಕೊಳ್ಳುವ ಕಾರ್ಯ, ಮಾಡಿಯೇ ಸಿದ್ಧ ಎಂಬ ನಿಲುವು, ಎಂತ ಮನುಷ್ಯರನ್ನೂ, ಮರುಳು ಮಾಡಿಸುವಂತಿರುತ್ತದೆ. ಅವರ ಮಾತಿಗೆ ಮರುಳಾದ ಜನ , ಸತ್ಯ ನಂಬಿ, ಹಿಂದೆ ಮುಂದೆ ಯೋಚಿಸದೆ, ದೂರಾಲೋಚನೆ ಮಾಡದೆ, ಕಣ್ಣು ಮುಚ್ಚಿ ಮುದ್ರೆ ಒತ್ತಿ ಬರುತ್ತಾರೆ. ಅದಲ್ಲದೆ ಜನರ ಮನಸ್ಸನ್ನು ವಿವಿಧ ರೀತಿಯಿಂದ ಸೂರೆಗೈದು ಅವರ ಮನ ಪರಿವರ್ತನೆ, ಯಶಸ್ವಿಯಾಗಿ ಮಾಡುವಲ್ಲಿ ಬಹಳ ತೆರೆಮರೆಯ ಕಾರ್ಯ ಕೂಡ ನಡೆಯುತ್ತದೆ ಎಂದರೆ ತಪ್ಪಾಗಲಾರದು.
ಇಲ್ಲಿ ಯಾರದ್ದು ತಪ್ಪು, ಒಳ್ಳೆ ಜನ ನಾಯಕರಾಗುತ್ತಾರೆ, ಎಂದು ಮತ ಚಲಾಯಿಸಿದ ಸಾಮಾನ್ಯ ಜನರದ್ದೋ? ಹಾ , ಇವರದ್ದು ಪ್ರತಿಷ್ಠಿತ ಕಂಪನಿ, ಇವರಿಗೇ ಈ ಸಲದ ರಸ್ತೆಯ ಟೆಂಡರ್ ಕೊಡೋಣ, ಎಂದು ನಂಬಿ, ಟೆಂಡರ್ ಕೊಟ್ಟ ಸರ್ಕಾರದ ತಪ್ಪೋ? , ಸೋ ಕಾಲ್ಡ್ ಪ್ರತಿಷ್ಠಿತ ಕಂಪೆನಿಯದ್ದೋ, ಅವರು ಬಳಸುವ/ ಉಪಯೋಗಿಸುವ ಕಳಪೆ ವಸ್ತುಗಳದ್ದೋ, ಒಂದೂ ತಿಳಿಯುತ್ತಿಲ್ಲ. ಮತ ಕೇಳಲು ಬಂದಿದ್ದಾಗ ತೋರುತ್ತಿದ್ದ ಕಾಳಜಿ, ಆಶ್ವಾಸನೆ ಗಾಳಿ ಗೋಪುರವಾಗಿ ಮಸಣ ಸೇರಿತೇ. ಅಥವಾ ಕಣ್ಣಿದ್ದೂ ಕುರುಡ ಪರಿಸ್ಥಿತಿಯೆ? ಯಕ್ಷಪ್ರಶ್ನೆ
ಅದಲ್ಲಿರಲಿ, ಮಳೆಗಾಲದ ದಿನಗಳಲ್ಲಿ ಬೆಂಗಳೂರಿನ ರಸ್ತೆ ಗಲ್ಲಿಗಳಲ್ಲಿ ಹೋಗಬೇಕೆಂದರೆ, ಎಷ್ಟು ಕಣ್ಣುಗಳಿದ್ದರೂ ಸಾಲದು. ರಸ್ತೆಯೆಲ್ಲಿ ಎಂದು ಸೂಕ್ಷ್ಮದರ್ಶಕ ಉಪಯೋಗಿಸಿ ಹುಡುಕುವುದೂ ಅಸಾಧ್ಯ ಎಂಬಂತಾಗಿದೆ. ಎರಡು ಚಕ್ರದ ವಾಹನ , ಆಟೋ ರಿಕ್ಷಗಳ ಪರದಾಟ ಕೇಳುವವರಿಲ್ಲ. ದಿನನಿತ್ಯ ಪ್ರಾಣ ಕೈಯಲ್ಲಿ ಹಿಡಕೊಂಡು ಅಲೆದಾಡುವ ಪರಿಸ್ಥಿತಿ. ಇವೆಲ್ಲ ರಾಜಕೀಯದವರ ಸುಳ್ಳು ಆಶ್ವಾಸನೆಯ ಅಡ್ಡ ಪರಿಣಾಮ ಎಂದು ಬೊಬ್ಬಿಟ್ಟು ಹೇಳುವ ಅಗತ್ಯವಿಲ್ಲ, ಸ್ವತಃ ಅರ್ಥಮಾಡಿಕೊಳ್ಳಬೇಕಾದ ನಗ್ನ ಸತ್ಯ. ಒಂದೆಡೆ ಧಾರಾಕಾರ ಮಳೆ , ಇನ್ನೊಂದೆಡೆ ಗುಂಡಿಯನ್ನು ಹುಡುಕುವ ಕೆಲಸ. ಛೇ, ಅವಸ್ಥೆಯೇ, ಅಲ್ಲಲ್ಲ ಅವ್ಯವಸ್ಥೆಯೇ, ಇಂತಹ ಕಷ್ಟ ಯಾರಿಗೂ ಬೇಡ. ರಸ್ತೆ ಸರಿಮಾಡಿಸಿಕೊಳ್ಳುವ ಹಕ್ಕು ಎಲ್ಲರಿಗೂ ಇದೆಯಲ್ಲ. ಕೇಳುವ ಹಕ್ಕಿಲ್ಲವೇ? ಅಥವಾ ನಮ್ಮ ನಾಯಕರು ನಮಗೆ ಪ್ರಿಯರು ಎಂಬ ಧೋರಣೆಯೇ? ಎಲ್ಲದರಲ್ಲೂ ಮೂಗು ತೋರಿಸುವ ಜನ , ಈ ವಿಷಯದಲ್ಲೇಕೆ ಹಿಂದೇಟು ಹಾಕುತ್ತಿದೆ. ಅಥವಾ ಹೇಳಿಯೂ ಪ್ರಯೋಜನ ಇಲ್ಲವೆಂಬ ನಿರಾಸೆಯ ನಿಟ್ಟುಸಿರೇ?
ಇನ್ನು, ಮನೆ ಮನೆ ಪಾದಾಯಾತ್ರೆ ಮಾಡುತ್ತೇವೆ, ಕಷ್ಟ ತಿಳಕೊಂಡು ಬಗೆಹರಿಸುತ್ತೇವೆ ಎಂಬ ನಾಟಕ. ಅಯ್ಯೋ ದೇವ್ರೇ ಇವರ ಈ ನಾಟಕಕ್ಕೆ ಪುರಸ್ಕಾರ ಸಿಗಬೇಕು. ಸುಳ್ಳಿನ ಸರಮಾಲೆ, ಫೋಟೋ ತೆಗೆದು ಜಾಲತಾಣಕ್ಕೆ ಹಾಕುವ ಸಂಭ್ರಮ ಸಡಗರ. ಒಂದು ದಿನ ಎರಡು ದಿನ, ಹೆಚ್ಚೆಂದರೆ ಮೂರು. ಮತ್ತೆ ಇಲ್ಲ. ಪತ್ತೆಯೇ ಇಲ್ಲ. ಅಲ್ಲಿಗೆ ಆ ವಿಷಯಕ್ಕೆ ಪೂರ್ಣ ವಿರಾಮ. ಇನ್ನೊಮ್ಮೆ ಮುಗ್ಧ ಜನರ ನೆನಪಾಗುವುದು, ಮುಂದಿನ ಮತದಾನದ ಸಮಯದಲ್ಲಿ.
ಇನ್ನು , ಬೀದಿ ದೀಪ ಹಾಕುತ್ತೇವೆ ಎಂದೋ, ನೀರಿನ ಸೌಲಭ್ಯ ಕೊಡುತ್ತೇವೆ , ಕಸ ವಿಲೇವಾರಿ ಘಟಕ ಸ್ಥಾಪಿಸುತ್ತೇವೆ, ಒಳ ಚರಂಡಿ ವ್ಯವಸ್ಥೆ ಸರಿಯಾಗಿ ಮಾಡುತ್ತೇವೆ, ಸರಕಾರಿ ಶಾಲೆಯ ಆಧುನೀಕರಣ ಮಾಡುತ್ತೇವೆ, ಎಂಬ ಆಶ್ವಾಸನೆ, ಪೂರ್ಣ ಗೊಳ್ಳಲು ಇನ್ನು ಅದೆಷ್ಟು ವರ್ಷ ಬೇಕಾಗುವುದೋ , ಆ ದೇವರೇ ಬಲ್ಲ. ದಿನ ನಿತ್ಯ ಮಾಧ್ಯಮದಲ್ಲಿ ,ಈ ರಾಜಕಾರಣಿಗಳ ಮೊದಲೇ ದರ್ಶಿಸಿದ ನಾಟಕ ನೋಡುವಂತೆ , ನೋಡಬೇಕು. ಸರಿ, ಒಂದು ವೇಳೆ ಯಾರಾದರೂ ಸಮಾಜಕ್ಕೆ ಒಳ್ಳೆಯದು ಮಾಡಲು , ಹೆಜ್ಜೆ ಮುಂದಿಟ್ಟರೆ , ಆ ಕಾರ್ಯವನ್ನು ಕುಂಠಿತಗೊಳಿಸಲು, ಇಲ್ಲ ಸಲ್ಲದ ಪಿತೂರಿ. ಇವರುಗಳ ಗುದ್ದಾಟಕ್ಕೆ ಬಲಿ ಪಶು ಆಗುವವರು, ಸಾಮಾನ್ಯ ಜನರು.
ಇದು ಕೇವಲ ಬೆಂಗಳೂರು ಮಹಾನಗರಿಯ ಸಮಸ್ಯೆ ಅಲ್ಲ, ಎಲ್ಲ ಪ್ರದೇಶದ ಜನರ ಸಮಸ್ಯೆ ಕೂಡ. ಇದು ಕೇವಲ ಒಂದು, ಎರಡು ಉದಾಹರಣೆ. ಇಂತಹ ಅದೆಷ್ಟೋ ಸಮಸ್ಯೆಗಳು ದಿನನಿತ್ಯ ನಮ್ಮ ಕಣ್ಣ ಮುಂದೆ ಇದ್ದರೂ ಏನೂ ಮಾಡಲಾಗದ ಅಸಹಜ ಪರಿಸ್ಥಿತಿ. ಮುಂದಿನ ಪೀಳಿಗೆಗೆ ಬೆಳಕಾಗ ಬೇಕಾದ ಜನ ನಾಯಕರು, ತಾವೇ ತಮ್ಮ ವ್ಯವಹಾರಗಳಿಂದ ಹಿಂದೆ ಸರಿಯುತ್ತಿದ್ದಾರೆ , ತಮ್ಮ ಕೆಲಸದ ಮೇಲೆ ಶ್ರದ್ಧೆಯಿಲ್ಲ ಎಂದಾದರೆ , ಈ ಪ್ರಜಾಪ್ರಭುತ್ವ ವ್ಯವಸ್ಥೆ ಯಾವ ರೀತಿಯಲ್ಲಿ ಜನ ಸಾಮಾನ್ಯರಿಗೆ ಸುಲಭ ಸಖ್ಯ? . ಈ ರಸ್ತೆಯ ಗುಂಡಿಗಳ ರಿಪೇರಿಯ ಹೊಣೆ ಹೊತ್ತವರ್ಯಾರು? . ಎಲ್ಲ ಸಮಸ್ಯೆಗೆ ಪರಿಹಾರ ಇದ್ದೇ ಇದೆ ಎಂಬ ಹಿರಿಯರ ನುಡಿ ಸುಳ್ಳಾಗುವುದು ಬೇಡ. ಮಿತ್ರರೇ, ಸಮಯ ಮೀರುವ ಮೊದಲೇ, ಎಚ್ಚೆತ್ತುಕೊಳ್ಳೋಣ. ಜಾಗರೂಕರಾಗೋಣ. ಸುಗಮ ರೀತಿಯಲ್ಲಿ ಜೀವಿಸುವ ಹಕ್ಕು ಎಲ್ಲ ಜನರಿಗೆ ಇದೆ.
ರಾಜಕಾರಣಿಗಳ ಸುಳ್ಳು ಆಶ್ವಾಸನೆ ಕೇಳಿ ಕೇಳಿ, ತಾಳಿಕೊಳ್ಳುತ್ತಾ ಬಂದಿರುವುದು ಸಾಕು. ತಪ್ಪು ಮಾಡಿದರೆ , ಕೊಟ್ಟ ಮಾತನ್ನು ಉಳಿಸಿಕೊಳ್ಳದೆ ಇದ್ದರೆ , ಪ್ರಶ್ನಿಸಿ ಎದೆಸೆಟೆದು ನಿಲ್ಲೋಣ. ನಮ್ಮಿಂದ ಎಲ್ಲರ ಜೀವನ ಹಸನಾದರೆ ಹೆಮ್ಮೆ ತಾನೇ. ಸಮಾಜದ ಆಡಳಿತದ ಚುಕ್ಕಾಣಿ ಹೊತ್ತವರು, ತಮ್ಮ ಸ್ವಾರ್ಥಕ್ಕಾಗಿ ಏನನ್ನು ನೋಡದೆ, ಸಮಾಜದ ಏಳಿಗೆಗೆ ಕೈ ಜೋಡಿಸಿದರೆ ಎಷ್ಟು ಚೆನ್ನ. ಮಾಡುವ/ ಮಾಡಿದ / ನಿರ್ವಹಣೆ ಹೊತ್ತಂತಹ ಕೆಲಸವನ್ನು ಆತ್ಮ ತೃಪ್ತಿಗಾಗಿ ಮಾಡಲಿ, ಯಾವುದೇ ಪ್ರತಿಫಲ ನಿರೀಕ್ಷೆ ಮಾಡದೆ ಕೆಲಸ ಮಾಡಿ, ನೋಡಲಿ, ಜನ ಹುಡುಕಿಕೊಂಡು ಬರುತ್ತಾರೆ, ಅಂತಹ ಜನ ನಾಯಕನನ್ನು, ಗೌರವಯುತವಾಗಿ ಕಾಣುತ್ತಾರೆ. 'ಮುಂದಿನ ದಿನಗಳಲ್ಲಿಯೂ ಇವರೇ ನಮ್ಮ ನಾಯಕರಾಗಲಿ' ಎಂದು ಬಾಯ್ತುಂಬ ಹರಸುತ್ತಾರೆ. ನಮಗೆ ಓಟು ನೀಡಿ ಎಂಬ ಪ್ರಮೇಯವೇ ಇರುವುದಿಲ್ಲ, ಅವರ ಕೆಲಸ ಅವರಿಗೆ ಮುಂದಿನ ಸಲದ ನಾಯಕತ್ವ ಕೂಡ ಒದಗಿ ಬರುವಂತೆ ಮಾಡುತ್ತದೆ.
✍🏻 ಪದ್ಮಶ್ರೀ ಪ್ರಶಾಂತ್, ಬೆಂಗಳೂರು