images-1.jpeg
Spread the love

ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಜನಪ್ರಿಯರಾದ ಅಧ್ಯಾತ್ಮ ಗುರು.

ಅಧ್ಯಾತ್ಮಿಕ ಚಿಂತಕರಲ್ಲಿ ವಿವಿಧ ರೀತಿಯ ಜನರಿದ್ದಾರೆ.

ನಮ್ಮ ನಿಮ್ಮ ನಡುವೆ ದೇವಸ್ಥಾನದ ಪೂಜೆ ಪುನಸ್ಕಾರ ಮಾಡುವ ಪೂಜಾರಿಗಳು, ಮಸೀದಿಗಳ ಮುಲ್ಲಾ ಮೌಲ್ವಿಗಳು, ಚರ್ಚುಗಳ ಫಾದರ್ ಸಿಸ್ಟರುಗಳು, ಬೌದ್ದ ಸನ್ಯಾಸಿಗಳು, ಜೈನ ಮುನಿಗಳು, ಸಿಖ್ ಗುರುಗಳು ಮತ್ತು ಇನ್ನೂ ಈ ರೀತಿಯ ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳು.

ಆಶ್ರಮಗಳು, ಮಠಗಳು, ಧಾರ್ಮಿಕ ಕೇಂದ್ರಗಳು, ಯೋಗ ಧ್ಯಾನ ಶಿಬಿರಗಳು ಇತ್ಯಾದಿಗಳನ್ನು ಸ್ಥಾಪಿಸಿಕೊಂಡು ಜನರಿಗೆ ಅನ್ನ, ವಿದ್ಯೆ, ಆಶ್ರಯ ನೀಡುತ್ತಾ ತನ್ನ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸುತ್ತಿರುವ ಕೇಂದ್ರಗಳು ಅಧ್ಯಾತ್ಮ ತಿಳಿಸಿ ಕೊಡುತ್ತವೆ.

ಮಾಧ್ಯಮಗಳ ಜನಪ್ರಿಯತೆಯ ಲಾಭ ಪಡೆದು ಜ್ಯೋತಿಷ್ಯ, ಭವಿಷ್ಯ, ಸಂಖ್ಯಾಶಾಸ್ತ್ರ, ವಾಸ್ತು, ಯಂತ್ರ ಮಂತ್ರ, ಹೋಮ ಹವನ ಮುಂತಾದ ಆಚರಣೆಗಳ ಮುಖಾಂತರ ಅಧ್ಯಾತ್ಮಿಕ ಚಿಂತನೆಗಳನ್ನು ಹೇಳುವುದು.

ತಮ್ಮ ಅಧ್ಯಯನ, ಜ್ಞಾನ, ಅನುಭವಗಳಿಂದ ದೊರೆತ ಮಾಹಿತಿಯ ಆಧಾರದ ಮೇಲೆ ಅಧ್ಯಾತ್ಮಿಕ ಚಿಂತನೆಗಳನ್ನು ಬೋಧಿಸುವ ಸಂತರು.

ಇನ್ನು ಕಾರ್ಪೊರೇಟ್ ಶೈಲಿಯ ಅಧ್ಯಾತ್ಮಿಕ ಚಿಂತಕರುಗಳಾದ
ಬಾಬಾ ರಾಮದೇವ್ – ಶ್ರೀ ರವಿಶಂಕರ್ ಗುರೂಜಿ – ಕಲ್ಕಿ ಭಗವಾನ್ – ನಿತ್ಯಾನಂದ ಸ್ವಾಮಿ – ಇನ್ನೂ ಹಲವರು ಭಾರತೀಯ ಸಮಾಜದ ಬಹಳಷ್ಟು ಜನರ ಮೇಲೆ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮ ಬೀರುತ್ತಿದ್ದಾರೆ.

ಮನುಷ್ಯನ ಬದುಕು ಸಂಕೀರ್ಣ – ಸಂಘರ್ಷ – ಒತ್ತಡಕ್ಕೆ ಒಳಗಾದಂತೆ ಅಧ್ಯಾತ್ಮಿಕತೆಗೆ ಹೆಚ್ಚಿನ ಮಹತ್ವ ಬರತೊಡಗಿದೆ.

ಅಧ್ಯಾತ್ಮ ವೈಜ್ಞಾನಿಕವಾಗಿರಲಿ, ವೈಚಾರಿಕವಾಗಿರಲಿ, ನಂಬಿಕೆಯಾಗಿರಲಿ, ಧಾರ್ಮಿಕ ಆಚರಣೆಯಾಗಿರಲಿ ಅದನ್ನು ಕಲಿಯುವುದರಿಂದ ಅರ್ಥಮಾಡಿಕೊಳ್ಳುವುದರಿಂದ, ಅನುಸರಿಸುವುದರಿಂದ ಅಂತಹ ಹೆಚ್ಚಿನ ತೊಂದರೆ ಏನೂ ಇಲ್ಲ. ಬದಲಾಗಿ ಒಂದಷ್ಟು ಲಾಭವೇ ಉಂಟು.

ಆದರೆ ತೊಂದರೆ ಇರುವುದು ಅಧ್ಯಾತ್ಮಿಕ ಗುರುಗಳಿಂದ ಮತ್ತು ಅಧ್ಯಾತ್ಮಿಕತೆಯನ್ನು ಆ ಗುರುಗಳು ವ್ಯಾಪಾರಿಕರಣ ಮಾಡಿ, ಶೋಷಣೆಯ ಅಸ್ತ್ರವಾಗಿ ಉಪಯೋಗಿಸಿ, ಅದನ್ನು ತಪ್ಪಾಗಿ ಅರ್ಥೈಸಿ ಜನರನ್ನು ದಾರಿ ತಪ್ಪಿಸಿ, ದೇವ ಮಾನವರೆಂದು ತಮ್ಮನ್ನು ತಾವೇ ಕರೆದುಕೊಂಡು ಸಮಾಜದ ನಿಯಂತ್ರಣ ಸಾಧಿಸಲು ಪ್ರಯತ್ನಿಸುವುದರಲ್ಲಿ.

ಅಧ್ಯಾತ್ಮ ತುಂಬಾ ಸರಳ, ಸಹಜ, ಸಾಮಾನ್ಯವಾಗಿದ್ದಾಗ ಸರ್ವರ ಒಳಿತಿಗಾಗಿ ಉಪಯೋಗಿಸಿದಾಗ, ನಿರಪೇಕ್ಷ ಸ್ಥಿತಿ ತಲುಪಿದಾಗ ಮತ್ತು ಅದರಲ್ಲಿ ಒಂದಷ್ಟು ನಿಯಂತ್ರಣ ಸಾಧಿಸಿದಾಗ ಅದರ ಲಾಭ ಸಿಗಬಹುದು. ಅದು ತೀರಾ ವೈಯಕ್ತಿಕ.

ಆದರೆ ಅಧ್ಯಾತ್ಮ ಇದನ್ನು ಹೊರತುಪಡಿಸಿ ಇತರ ಚಟುವಟಿಕೆಯಾದಾಗ…..

ಈ ಹಿನ್ನೆಲೆಯಲ್ಲಿ ಜಗ್ಗಿ ವಾಸುದೇವ್ ಅವರನ್ನು ನೋಡೋಣ…..

ಆಕರ್ಷಕ ನಿಲುವಿನ, ಕಂಚಿನ ಕಂಠದ, ಉತ್ತಮ ಭಾಷಾ ಹಿಡಿತದ, ನೋಡುವ, ಕೇಳುವ ಭಕ್ತರಿಗೆ ಸಮ್ಮೋಹನ ಗೊಳಿಸುವ ವಾಕ್ಚಾತುರ್ಯದ ವಾಸುದೇವ್ ಈಶಾ ಫೌಂಡೇಶನ್ ಹೆಸರಿನಲ್ಲಿ ಬಹುದೊಡ್ಡ ಆಶ್ರಮ ಸ್ಥಾಪಿಸಿದ್ದಾರೆ. ಅಪಾರ ಜನಪ್ರಿಯತೆ ಗಳಿಸಿದ್ದಾರೆ. ತುಂಬಾ ಸಂತೋಷ ಮತ್ತು ಅವರ ಸ್ವಾತಂತ್ರ್ಯ – ಸಾಧನೆ. ಅದನ್ನು ಗೌರವಿಸುತ್ತಾ…..

ಸದ್ಗುರುಗಳೇ, ಜಗದ್ಗುರುಗಳೇ, ಶ್ರೀಶ್ರೀಶ್ರೀಗಳೇ, ಮಹರ್ಷಿಗಳೇ,
ಸ್ವಾಮೀಜಿಗಳೇ,

ಮೋಕ್ಷದ ಮಾರ್ಗದಲ್ಲಿ ಈಗಾಗಲೇ ಜ್ಞಾನ ಯೋಗ, ಭಕ್ತಿ ಯೋಗ, ಕರ್ಮ ಯೋಗ, ರಾಜ ಯೋಗ ಬಹಳ ಹಿಂದಿನಿಂದಲೇ ಅಸ್ತಿತ್ವದಲ್ಲಿದೆ. ಅದನ್ನು ಅಸಂಖ್ಯಾತ ಚಿಂತಕರು ನಾನಾ ರೀತಿಯ ಪ್ರಯೋಗಕ್ಕೆ ಒಳಪಡಿಸಿ ವಿವಿಧ ಅರ್ಥಗಳನ್ನು ನೀಡಿದ್ದಾರೆ. ಏನೇ ಆಗಲಿ ಅಂತಿಮವಾಗಿ ಅದೊಂದು ಇಡೀ ಬದುಕಿನ ನಿರಂತರ ಕ್ರಿಯೆ. ಅದು ಯಾವುದೇ 24 ಗಂಟೆಗಳ ಅಥವಾ ಒಂದು ವಾರದ ಅಥವಾ ಒಂದು ತಿಂಗಳ ಅಥವಾ ಒಂದು ವರ್ಷದ ಕೋರ್ಸ್ ಆಗಲು ಸಾಧ್ಯವಿಲ್ಲ. ಅದನ್ನು ಸಾವಿರದಿಂದ ಲಕ್ಷಾಂತರ ರೂಪಾಯಿ ಹಣ ನೀಡಿ ಕಲಿಯಲೂ ಆಗುವುದಿಲ್ಲ ಮತ್ತು ಹಣ ಪಡೆದು ಕಲಿಸಲೂ ಆಗುವುದಿಲ್ಲ.

ಸಾಮಾನ್ಯ ಜನ ನಿಮ್ಮಂತೆ ಪ್ರಶಾಂತ ಪರಿಸರದಲ್ಲಿ, ಸೇವಕ ಸೇವಕಿಯರ ಸಹಾಯದ ನೆರಳಲ್ಲಿ, ಯಾವುದೇ ಜವಾಬ್ದಾರಿ ನಿರ್ವಹಿಸದೆ ಕಲಿಯಲು, ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ದೇಶದಲ್ಲಿ ಕೋಟ್ಯಂತರ ಜನರಿಗೆ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲೇ ಸಾಧ್ಯವಾಗುತ್ತಿಲ್ಲ.

ಇಂತಹ ಸನ್ನಿವೇಶದಲ್ಲಿ ಅಧ್ಯಾತ್ಮವನ್ನು ಹೈಜಾಕ್ ಮಾಡಿರುವ ನೀವು ಕಾರ್ಪೊರೇಟ್ ಶೈಲಿಯಲ್ಲಿ ವಾಣಿಜ್ಯೀಕರಣ ಮಾಡಿರುವಿರಿ. ಅಧ್ಯಾತ್ಮಿಕತೆಯ ಹೆಸರಿನಲ್ಲಿ ಭಕ್ತರನ್ನು ಸೆಳೆದು ನಂತರ ಆ ಜನಪ್ರಿಯತೆಯನ್ನು ಬೇರೆ ವಿಷಯಗಳಿಗೆ ಉಪಯೋಗಿಸಿಕೊಳ್ಳುತ್ತಿರುವಿರಿ. ನಿಮ್ಮ ಸಂಸ್ಥೆಗಳನ್ನು ದೊಡ್ಡ ಮಟ್ಟದಲ್ಲಿ ಬೆಳೆಸುತ್ತಿರುವಿರಿ.

ಅದು ನಿಮ್ಮ ಸಂವಿಧಾನಾತ್ಮಕ ಹಕ್ಕು ನಿಜ. ಹಾಗೆಯೇ ನಿಮ್ಮ ಸ್ವಾರ್ಥದ ಹುನ್ನಾರಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವುದು ನಮ್ಮ ಸಂವಿಧಾನಾತ್ಮಕ ಕರ್ತವ್ಯ ಕೂಡ.

ಇಡೀ ಜಗತ್ತು ಹಣದ ಹಿಂದೆ ಬಿದ್ದು ಮಾನವೀಯ ಮೌಲ್ಯಗಳು ಅವಸಾನದ ಅಂಚಿನಲ್ಲಿ ಇರುವಾಗ ಅಧ್ಯಾತ್ಮ ಮನುಷ್ಯರನ್ನು ಮಾನವೀಯ ನಡವಳಿಕೆಗೆ ಸೆಳೆಯುವ ಮಾರ್ಗವಾಗಿ ಬಳಸುವ ಬದಲಾಗಿ ನೀವು ಸಹ ಅಧ್ಯಾತ್ಮವನ್ನು ಹಣ ಮಾಡುವ ಪ್ರಚಾರ ಪಡೆಯುವ ಸಲುವಾಗಿ ಉಪಯೋಗಿಸಿದರೆ ಜಗತ್ತಿನ ಮುಂದಿನ ಗತಿಯೇನು ?

ಅಲ್ಲದೆ ಅಧ್ಯಾತ್ಮ ಬಿಟ್ಟು ಸಮಾಜ ಸೇವೆ ಮತ್ತು ವ್ಯಾಪಾರದ ಮುಖವಾಡ ಧರಿಸಿದರೆ ಅಧ್ಯಾತ್ಮದ ಆಳ ಅರಿವಾಗುವುದು ಮತ್ತು ಅದನ್ನು ಸಾಮಾನ್ಯ ಜನರಿಗೆ ತಲುಪಿಸುವವರು ಯಾರು. ಯಾವುದೇ ಕಾರಣದಿಂದ ಖಾಸಗಿ ಸಂಸ್ಥೆ ಮತ್ತು ವ್ಯಕ್ತಿಗಳು ಜನರಿಂದ ಹಣ ವಸೂಲಿ ಮಾಡುವುದು ಈ ದೇಶದಲ್ಲಿ ಎಷ್ಟೊಂದು ಅಪಾಯಕಾರಿ ನಿಮಗೆ ತಿಳಿದಿಲ್ಲವೇ.

ಒಂದು ವೇಳೆ ನಿಮಗೆ ಸಾರ್ವಜನಿಕ ಸೇವೆ ಮಾಡಬೇಕೆಂಬ ಬಯಕೆ ಇದ್ದರೆ ನಿಮ್ಮ ಹಣಕಾಸಿನ ಮಿತಿಯಲ್ಲಿ ಅಥವಾ ನೀವು ಸರ್ಕಾರದ ಮೇಲೆ ಪ್ರಭಾವ ಬೀರಿ ಸಲಹೆ ನೀಡಿ ಅಥವಾ ಹಣಕಾಸು ರಹಿತ ಸೇವೆ ಮಾಡಿ. ಇಲ್ಲದಿದ್ದರೆ……

ಉದಾಹರಣೆಗೆ,
ಪತ್ರಿಕೋದ್ಯಮಿಗಳು ಪತ್ರಿಕಾ ಧರ್ಮ ಬಿಟ್ಟು ರಿಯಾಲಿಟಿ ಎಕ್ಸ್ಪೋ, ಫರ್ನಿಚರ್ ಎಕ್ಸ್ಪೋ, ಪುಡ್ ಮೇಳ ಮುಂತಾದ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮ ಮೂಲ ವೃತ್ತಿಗೆ ನ್ಯಾಯ ಸಲ್ಲಿಸದೆ ಇನ್ನೇನೋ ಹಣ ಮಾಡಲು ಹೋಗಿ ಈಗಾಗಲೇ ಬೆಲೆ ಕಳೆದುಕೊಂಡಿಲ್ಲವೇ ?

ಆದ್ದರಿಂದ ಅಧ್ಯಾತ್ಮ ಗುರುಗಳು ಕೇವಲ ಅಧ್ಯಾತ್ಮಿಕ ಚಿಂತನೆಗಳನ್ನು ಸಾಮಾನ್ಯ ಜನರ ಬಳಿಗೆ ಕೊಂಡೊಯ್ಯುವ ಮತ್ತು ಅವರ ನೋವುಗಳನ್ನು ಕಡಿಮೆ ಮಾಡಲು ಪ್ರಯತ್ನಿಸುವುದು ಉತ್ತಮ.

ಜನರೂ ಸಹ ಯಾವುದೇ ಸದ್ಗುರುಗಳನ್ನು ಅತಿಮಾನುಷರೆಂದು ಭಾವಿಸದೆ, ಒಬ್ಬ ವ್ಯಕ್ತಿ ಎಲ್ಲಾ ಸಮಸ್ಯೆಗಳಿಗೂ ಉತ್ತರಿಸುತ್ತೇನೆ – ಪರಿಹರಿಸುತ್ತೇನೆ ಎಂಬುದನ್ನು ನಂಬದೆ ಅವರ ಮಿತಿಗಳನ್ನು ಸಹ ಅರಿಯುವ ಪ್ರಬುದ್ದತೆ ಬರಲಿ ಎಂದು ಆಶಿಸುತ್ತಾ….

ನಿಸ್ವಾರ್ಥ – ನಿಷ್ಕಲ್ಮಶ – ನಿರಪೇಕ್ಷ
ಕಾರ್ಯಗಳನ್ನು ಪ್ರೋತ್ಸಾಹಿಸೋಣ.
ಆಡಂಬರದ ತೋರಿಕೆಯ ಪ್ರದರ್ಶನದ
ಪ್ರಚಾರದ ಆಸೆಯ ಕೆಲಸಗಳನ್ನು ತಿರಸ್ಕರಿಸೋಣ.
ಯಾರೇ ಮಾಡಿದರೂ…….


ವೈಚಾರಿಕ ( ವೈಜ್ಞಾನಿಕ ) ಅಧ್ಯಾತ್ಮ………

ನಮ್ಮೊಳಗಿನ ಅರಿವೇ ನಿಜವಾದ ದೇವರು, ಧರ್ಮ ಮತ್ತು ಆಧ್ಯಾತ್ಮ. ಅದನ್ನು ದಯವಿಟ್ಟು ಧೈರ್ಯವಾಗಿ, ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಿ…….

ಇದೊಂದು ವಿಶಿಷ್ಟ ಕಲ್ಪನೆ.
ಸಾಮಾನ್ಯವಾಗಿ ಆಧ್ಯಾತ್ಮಿಕತೆ ಎಂದರೆ ಧಾರ್ಮಿಕ ನಂಬುಗೆಯ, ದೈವತ್ವದ ಕಲ್ಪನೆಯ ಮೋಕ್ಷದೆಡೆಗಿನ ಮನೋನಿಯಂತ್ರಣದ ಒಂದು ಪಯಣ ಅಥವಾ ಅರಿವು ಅಥವಾ ಸಾಧನೆ ಎಂದು ಕರೆಯಲಾಗುತ್ತದೆ….

ಇದರಲ್ಲಿ ಅಗೋಚರ ಶಕ್ತಿಯ ಮೇಲಿನ ಭಕ್ತಿ ಮತ್ತು ಅದಕ್ಕೆ ಸಂಪೂರ್ಣ ಅರ್ಪಿಸಿಕೊಳ್ಳುವಿಕೆ ಮಹತ್ವದ ಪಾತ್ರ ವಹಿಸುತ್ತದೆ……

ಜ್ಞಾನ ಮಾರ್ಗ, ಭಕ್ತಿ ಮಾರ್ಗ, ಕರ್ಮ ಮಾರ್ಗ, ರಾಜ ಮಾರ್ಗ ಇವುಗಳ ಗರಿಷ್ಠ ಉತ್ಕಟತೆ ಮತ್ತು ಸಮನ್ವಯತೆ ಇದರ ಸಾಧನೆಯ ಹಾದಿಗಳು…..

ಕೇವಲ ಋಷಿ ಮುನಿಗಳು, ಪ್ರಖ್ಯಾತರು, ಚಿಂತಕರು ಮಾತ್ರವಲ್ಲ ಆಸಕ್ತಿ ಇರುವ ಸಾಮಾನ್ಯರು ಸಹ ಅಧ್ಯಾತ್ಮದ ಜ್ಞಾನ ಪಡೆಯಲು ಅಥವಾ ಅದರಲ್ಲಿ ಸಾಧನೆ ಮಾಡಲು ಸಾಧ್ಯವಿದೆ…….

ಆದರೆ ಈಗ ಇಲ್ಲಿ ಹೇಳ ಹೊರಟಿರುವ ವೈಚಾರಿಕ, ವೈಜ್ಞಾನಿಕ, ಅಧ್ಯಾತ್ಮದ ಗುರಿ ಸಾಂಪ್ರದಾಯಿಕ ಅಧ್ಯಾತ್ಮದ ಗುರಿಯೂ ಒಂದೇ ಆಗಿದೆ, ಆದರೆ ಮಾರ್ಗ ಮಾತ್ರ ಭಿನ್ನವಾಗಿದೆ……

ಸಾಂಪ್ರದಾಯಿಕ ಆಧ್ಯಾತ್ಮದಲ್ಲಿ ಕಾಲ್ಪನಿಕ ಲೋಕದ, ಅವಾಸ್ತವಿಕ ನೆಲೆಯ, ಈ ಕ್ಷಣದ ಪ್ರಾಯೋಗಿಕವಲ್ಲದ, ಪಲಾಯನವಾದದ, ಸಾಮಾನ್ಯ ಜನರ ತಿಳುವಳಿಕೆಗೆ ನಿಲುಕದ ಅನೇಕ ಅಂಶಗಳು ಅಡಗಿವೆ. ಆದ್ದರಿಂದಲೇ ಅದು ಒಂದು ಕಬ್ಬಿಣದ ಕಡಲೆ ಎಂದು ಭಾವಿಸುವ ಜನ ಸಮೂಹ ಅದರಿಂದ ಬಹಳ ದೂರ ಸರಿದು ಅದು ಯಾರೋ ವಯಸ್ಸಾದ, ಸನ್ಯಾಸ ಸ್ವೀಕರಿಸಿದ, ಕೆಲಸ ಇಲ್ಲದವರ, ಗ್ರಂಥಗಳನ್ನು ಓದಿದ, ಮಹಾತ್ಮರ ದಾರಿ. ದಿನನಿತ್ಯದ ಬದುಕಿನ ಜಂಜಾಟದಲ್ಲಿ ಮುಳುಗಿದ ನಮಗೆ ಅದು ಸಾಧ್ಯವಿಲ್ಲ ಎಂದು ಭಾವಿಸಿದ್ದಾರೆ…..

ಇದು ಖಂಡಿತ ತಪ್ಪು ಕಲ್ಪನೆ.
ಅಧ್ಯಾತ್ಮ ಕೂಡ ಆಸಕ್ತಿ ಇರುವ ಎಲ್ಲರಿಗೂ ನಿಲುಕುವ ಒಂದು ಸಾಮಾನ್ಯ ಜ್ಞಾನ. ಇದಕ್ಕಾಗಿ ವೇದ ಉಪನಿಷತ್ತು, ರಾಮಾಯಣ, ಮಹಾಭಾರತ, ಖುರಾನ್, ಬೈಬಲ್ ಮುಂತಾದ ಗ್ರಂಥಗಳನ್ನು ಓದಲೇಬೇಕು ಎಂಬ ನಿಯಮವಿಲ್ಲ. ಬಹುದೊಡ್ಡ ಚಿಂತಕರ ಮಾರ್ಗದರ್ಶನ ಬೇಕೆ ಬೇಕು ಎಂಬ ಒತ್ತಡವಿಲ್ಲ. ಬದುಕಿನ ಸುಖ ಭೋಗಗಳನ್ನು ತ್ಯಾಗ ಮಾಡಲೇಬೇಕು ಎಂಬ ಅನಿವಾರ್ಯತೆ ಇಲ್ಲ…..

ಈಗ ನಾವು ಇರುವ ಸ್ಥಾನದಿಂದಲೇ, ನಮಗೆ ಸಿಗುತ್ತಿರುವ ಮಾಹಿತಿಗಳಿಂದಲೇ, ನಮ್ಮ ಜೀವನದ ಅನುಭವದಿಂದಲೇ, ನಮ್ಮ ಗೆಳೆಯರು, ಹಿತೈಷಿಗಳ, ಪರಿಚಯದಿಂದಲೇ ವೈಚಾರಿಕ ಅಧ್ಯಾತ್ಮದ ಸಾಧನೆ ಮಾಡಬಹುದು…..

ಆರೋಗ್ಯವಂತ ಪ್ರೌಢಾವಸ್ಥೆ ತಲುಪಿದ ಪ್ರತಿ ಮನುಷ್ಯನಿಗೂ ಮೆದುಳಿದೆ ಮತ್ತು ಅದು ಎಲ್ಲಾ ಆಗುಹೋಗುಗಳನ್ನು ಗ್ರಹಿಸುತ್ತದೆ. ಗ್ರಹಿಕೆಗಳು ಮನಸ್ಸಿನಲ್ಲಿ ಮೂಡಿ ಚಿಂತನೆಯನ್ನು ಹುಟ್ಟುಹಾಕುತ್ತದೆ. ಅದರ ಜೊತೆ ದೇಹವೂ ಪ್ರತಿಕ್ರಿಯಿಸುತ್ತದೆ…..

ಇದು ಮನುಷ್ಯ ಪ್ರಾಣಿಯ ಸಹಜ ಕ್ರಿಯೆ ಮತ್ತು ಎಲ್ಲರಲ್ಲಿಯೂ ಕಂಡುಬರುವ ಗುಣಲಕ್ಷಣ. ಆದರೆ ಗ್ರಹಿಕೆ ಮತ್ತು ಚಿಂತನೆಯಲ್ಲಿ ಮನುಷ್ಯರಲ್ಲಿ ಸಾಕಷ್ಟು ವೈವಿಧ್ಯತೆ ಇದೆ. ಅನುವಂಶೀಯ ಗುಣಗಳಿಂದ ಹಿಡಿದು ಪ್ರೌಢಾವಸ್ಥೆ ತಲುಪುವವರೆಗೆ ಅನೇಕ ಅಂಶಗಳು ನಮ್ಮನ್ನು ಪ್ರಭಾವಿಸುತ್ತವೆ ಮತ್ತು ನಿಯಂತ್ರಿಸುತ್ತವೆ. ಜೊತೆಗೆ ಬದುಕಿನ ಅನಿವಾರ್ಯತೆ ನಮ್ಮ ತನವನ್ನು ಸಹಜವಾಗಿ ಬೆಳೆಯಲು ಬಿಡುವುದಿಲ್ಲ….

ಇಂತಹ ಬದುಕಿನಲ್ಲೂ ನಾವು ಅಧ್ಯಾತ್ಮದ ಸಾಧನೆ ಖಂಡಿತ ಮಾಡಬಹುದು. …

ಅಧ್ಯಾತ್ಮ ಎಂದರೇನು ?

ಸರಳವಾಗಿ ಹೇಳುವುದಾದರೆ,
ಅರಿವಿನ ಜೊತೆ ನಾವು ಸಾಧಿಸಬಹುದಾದ ಮಾನಸಿಕ ನಿಯಂತ್ರಣವೇ ಅಧ್ಯಾತ್ಮ. ಆ ಅರಿವು ಒಂದು ನಿರ್ಧಿಷ್ಟ ವಿಷಯಕ್ಕಲ್ಲದೆ ನಮ್ಮ ಇಡೀ ವ್ಯಕ್ತಿತ್ವದ ಸಂಪೂರ್ಣ ಭಾಗವಾಗಿರಬೇಕು. ಅರಿವಿನಲ್ಲಿ ಅನೇಕ ಮಿತಿಗಳು ಇರುತ್ತವೆ. ಆದರೆ ಯಾವುದೇ ಪರಿಸ್ಥಿತಿಯಲ್ಲಿ ಅದಕ್ಕೆಲ್ಲ ಒಂದು ಪರಿಹಾರಾತ್ಮಕ ಉತ್ತರ ಹುಡುಕಿಕೊಂಡು ಮಾನಸಿಕ ನಿಯಂತ್ರಣ ಸಾಧಿಸುವುದು ಅಧ್ಯಾತ್ಮ ಸಾಧಕರಿಗೆ ಸಿದ್ದಿಸಿರುತ್ತದೆ. ( ಧಾರ್ಮಿಕ ಹಿನ್ನೆಲೆಯ ವ್ಯಕ್ತಿಗಳು ಅಧ್ಯಾತ್ಮಕ್ಕೆ ಇನ್ನೂ ವಿಶಾಲ ಮತ್ತು ಅಗೋಚರ ಅರ್ಥ ಕೊಡುತ್ತಾರೆ )….

ಭಾರತದ ಇತಿಹಾಸದಲ್ಲಿ ರಾಮಕೃಷ್ಣ ಪರಮಹಂಸರು ಆಧ್ಯಾತ್ಮಿಕ ಜ್ಞಾನದಲ್ಲಿ ಉತ್ತುಂಗ ತಲುಪಿದ್ದರು ಎಂದು ಹೇಳಲಾಗುತ್ತದೆ. ರಮಣ ಮಹರ್ಷಿಗಳ ವಿಷಯದಲ್ಲಿಯೂ ಇದೇ ಅಭಿಪ್ರಾಯವಿದೆ……

ಹಾಗೆ ನೋಡಿದರೆ ಬುದ್ದ, ಮಹಾವೀರ, ಶಂಕರ, ರಾಮಾನುಜ, ಮಧ್ವ, ಬಸವೇಶ್ವರ, ಕಬೀರ್, ಮೀರಾ ಬಾಯಿ, ಅಕ್ಕಮಹಾದೇವಿ, ಅಲ್ಲಮಪ್ರಭು, ವಿವೇಕಾನಂದ, ಗಾಂಧಿ ಮುಂತಾದ ಅನೇಕರನ್ನು ಅವರದೇ ರೀತಿಯಲ್ಲಿ ಆಧ್ಯಾತ್ಮಿಕ ಅರಿವಿನ ಸಾಧಕರೆಂದು ಗುರುತಿಸಲಾಗುತ್ತದೆ….

ಆಧ್ಯಾತ್ಮಿಕತೆಯ ಆಳವನ್ನು ಅಳೆಯಲು ಯಾವುದೇ ಮಾನದಂಡಗಳು ಇಲ್ಲ. ಅವರ ಚಿಂತನೆಗಳ ಆಧಾರದ ಮೇಲೆ ಇದನ್ನು ಗುರುತಿಸಲಾಗುತ್ತದೆ….

ಈ ಹಿನ್ನೆಲೆಯಲ್ಲಿ ಸಾಮಾನ್ಯರು ಸಹ ಸಾಧಿಸಬಹುದಾದ ವೈಚಾರಿಕ ಅಧ್ಯಾತ್ಮದ ಕೆಲವು ಮಾರ್ಗಗಳೆಂದರೆ ನಮ್ಮ ಕಣ್ಣಿಗೆ ಕಾಣುವ, ತಿಳುವಳಿಕೆಗೆ ನಿಲುಕುವ, ಸ್ಪರ್ಶಕ್ಕೆ ಸಿಗುವ, ವ್ಯಾವಹಾರಿಕ ಜಗತ್ತಿನ ಎಲ್ಲವನ್ನೂ ಏಕಾಗ್ರತೆಯಿಂದ ಗ್ರಹಿಸಿ ಅದರ ಆಧಾರದ ಮೇಲೆಯೇ ಮಾನಸಿಕ ನಿಯಂತ್ರಣ ಸಾಧಿಸುವುದು. ಆಗೋಚರ ಶಕ್ತಿಯ ಅಥವಾ ನಮ್ಮ ಅರಿವಿಗೆ ಬಾರದ ಯಾವುದನ್ನೂ ನಾವು ನಂಬಬಾರದು. ಎಲ್ಲೋ ಕೇಳಿದ, ಯಾರೋ ಹೇಳಿದ ಅಪರೂಪದ ಅಸಹಜ ಘಟನೆಗಳು ಅಥವಾ ವಿಷಯಗಳನ್ನು ಗಣನೆಗೆ ತೆಗೆದುಕೊಳ್ಳಬಾರದು….

ಜನಪ್ರಿಯತೆ ಗಳಿಸಿರುವ ಧಾರ್ಮಿಕ ಚಿಂತಕರ ಸುಪ್ತ ಮನಸ್ಸು, ಆತ್ಮದ ಪಯಣ, ಪುನರ್ ಜನ್ಮ, ಆಕಸ್ಮಿಕ ಘಟನೆಗಳು, ವಿಶಿಷ್ಟ ಅನುಭವ ಮುಂತಾದ ಅಸಹಜ ಮತ್ತು ಸಾರ್ವತ್ರಿಕವಲ್ಲದ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು…..

ಅಮೆರಿಕ ಅಥವಾ ಚಂದ್ರಲೋಕವನ್ನು ನಾವು ನೋಡಿಲ್ಲ, ಗಾಳಿ, ನೋವು ನಮ್ಮ ಕಣ್ಣಿಗೆ ಕಾಣುವುದಿಲ್ಲ ಎಂದ ಮಾತ್ರಕ್ಕೆ ಅದನ್ನು ಇಲ್ಲ ಎನ್ನಲಾಗುತ್ತದೆಯೇ ಎನ್ನುವ ಕುಹುಕ ಚರ್ಚೆಗಳಿಗೆ ಬಲಿ ಬೀಳಬಾರದು. ಅವು ಸಹಜವಾಗಿ ನಮ್ಮ ಅರಿವು, ಅನುಭವಕ್ಕೆ ಬರುವುದು ಮುಖ್ಯವಾಗಬೇಕು. ಯಾರದೋ ಅತಿಮಾನುಷ ಶಕ್ತಿಯನ್ನು ಕೇಳಿ ಅಥವಾ ನೋಡಿ ಅದನ್ನೇ ದೊಡ್ಡ ಸಾಧನೆ ಎಂದು ಅರ್ಥಮಾಡಿಕೊಳ್ಳಬಾರದು. ಕೆಲವೊಮ್ಮೆ ಅಸಹಜ ರೀತಿಯ ಪ್ರತಿಭೆಗಳು ನಮ್ಮ ನಡುವೆ ಉದ್ಭವವಾಗುತ್ತವೆ. ಆದರೆ ಅದನ್ನು ಸಾರ್ವತ್ರಿಕ ಸತ್ಯ ಎಂದು ಪರಿಗಣಿಸಬಾರದು. ಯಾರೋ ಒಬ್ಬರೋ, ಇಬ್ಬರೋ ಕೇವಲ ನೀರು ಕುಡಿದು ಬದುಕಿದ್ದಾರೆ, ಒಂದು ಮಗು ಮೂರನೇ ವಯಸ್ಸಿಗೆ ವಿಶ್ವದ ಅನೇಕ ಭಾಷೆಗಳನ್ನು ಮಾತನಾಡುತ್ತದೆ, ಇನ್ಯಾರೋ ದೇವರೊಂದಿಗೆ ಮಾತನಾಡಿದ್ದೇನೆ ಎನ್ನುವ ವಿಷಯಗಳನ್ನು ಆ ಘಟನೆಗೆ ಸೀಮಿತವಾಗಿ ಮಾತ್ರ ನೋಡಬೇಕು…..

ಹುಟ್ಟು, ಸಾವು, ಸಂಸಾರ, ಅನಾರೋಗ್ಯ, ಅಪಘಾತ, ಆಕಸ್ಮಿಕ, ವ್ಯವಹಾರ, ಆಡಳಿತ, ಸೋಲು ಗೆಲುವು ಎಲ್ಲವನ್ನೂ ಸಹಜ ಪರಿಸ್ಥಿತಿಯಲ್ಲಿ ಅವಲೋಕನ ಮಾಡಿ ಗ್ರಹಿಸಿ ಅದರ ಆಧಾರದ ಮೇಲೆ ನಮ್ಮ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸುವುದೇ ವೈಜ್ಞಾನಿಕ ಅಧ್ಯಾತ್ಮ ಎಂದು ಕರೆಯಬಹುದು. ಇಲ್ಲಿ ಅಳುವೂ ಇದೆ, ನಗುವೂ ಇದೆ, ಕಷ್ಟ ಸುಖಗಳು ಇವೆ, ಮೋಸ ವಂಚನೆಗಳು ಇವೆ, ಸಾವು ನೋವುಗಳು, ಸೋಲು ವಿಫಲತೆಗಳು, ಅದೃಷ್ಟ ದುರಾದೃಷ್ಟಗಳು ಇವೆ. ಆದರೆ ಅದನ್ನು ಸಹಜವಾಗಿ ಸ್ವೀಕರಿಸುವ ಮನೋ ಭೂಮಿಕೆಯೇ ವೈಚಾರಿಕ ಅಧ್ಯಾತ್ಮ…….

ನಾವೆಲ್ಲರೂ ಎಂದಿನ ದಿನನಿತ್ಯದ ಚಟುವಟಿಕೆಗಳನ್ನು ಮಾಡುತ್ತಾ ಅದರ ಅನುಭವದ ಆಧಾರದಲ್ಲಿಯೇ, ನಮ್ಮ ಅರಿವಿನ ಮಿತಿಯಲ್ಲಿಯೇ ಇದನ್ನು ಸಾಧಿಸಬಹುದು. ಆ ಮುಖಾಂತರ ನಮ್ಮ ಮಾನಸಿಕ ಜೀವನಮಟ್ಟವನ್ನು ಉತ್ತಮಪಡಿಕೊಳ್ಳಬಹುದು. ನಮ್ಮ ಬದುಕಿನ ಮೇಲೆ ನಿಯಂತ್ರಣ ಸಾಧಿಸಬಹುದು. ನೆಮ್ಮದಿಯ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು…..

ಸಾವು ಸಹಜ ಎಂಬ ಅರಿವು, ಸೋಲು ಗೆಲುವ ಸಾಮಾನ್ಯ ಎಂಬ ತಿಳಿವಳಿಕೆ, ಅಧಿಕಾರ, ಹಣ, ಆಸ್ತಿ ಶಾಶ್ವತವಲ್ಲ ಎಂಬ ಭಾವನೆ, ಅರಿಷಡ್ವರ್ಗಗಳು ಮಾನವನ ಸಹಜ ಸ್ವಭಾವಗಳು ಎನ್ನುವ ಅರ್ಥ,
ನಗು ಬಂದಾಗ ನಗುವುದು, ಅಳು ಬಂದಾಗ ಅಳುವುದು, ರೋಗ ಬಂದಾಗ ನರಳುವುದು ಎಲ್ಲವೂ ಬದುಕಿನ ಭಾಗ ಎಂದು ಸ್ವೀಕರಿಸುವ ಮನೋಭಾವವೇ ವೈಜ್ಞಾನಿಕ ಅಧ್ಯಾತ್ಮ……

ಜನ ಸಾಮಾನ್ಯರು ಸಹ ಮನೋ ನಿಯಂತ್ರಣದ ಈ ಆಧ್ಯಾತ್ಮಿಕ ಸಾಧಕರಾದಾಗ ಖಂಡಿತ ಈ ಸಮಾಜ ಈಗಿನ ಪರಿಸ್ಥಿತಿಗಿಂತ ಉತ್ತಮ ಗುಣಮಟ್ಟದ, ಶಾಂತಿ ಸೌಹಾರ್ದತೆ, ಸಮಾನತೆಯ ಸಮಾಜ ನಿರ್ಮಾಣ ಆಗುವ ಸಾಧ್ಯತೆ ಇದೆ. ನಿಮ್ಮ ಯೋಚಿಸುವ ಸ್ವಾತಂತ್ರ್ಯವನ್ನು ಪ್ರೋತ್ಸಾಹಿಸುತ್ತಾ ಮತ್ತು ಗೌರವಿಸುತ್ತಾ….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್.ಕೆ.

error: No Copying!