ಬೆಂಗಳೂರು: ಏಪ್ರಿಲ್ ೨೬(ಹಾಯ್ ಉಡುಪಿ ನ್ಯೂಸ್) ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಈ ಕೂಡಲೇ ವಜಾಗೊಳಿಸುವಂತೆ ಆಗ್ರಹಿಸಿ ಆಮ್ ಆದ್ಮಿ ಪಕ್ಷ ರಾಜ್ಯಪಾಲರನ್ನು ಒತ್ತಾಯಿಸಿದೆ.
ಇಂದು ರಾಜಭವನದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ರವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಪಕ್ಷದ ಹಿರಿಯ ಮುಖಂಡ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಮತ್ತಿತರರು ಇದ್ದರು. ರಾಜ್ಯದ 52,000 ಅಭ್ಯರ್ಥಿಗಳು ಪಿಎಸ್‌ಐ ಪರೀಕ್ಷೆ ಬರೆದಿದ್ದಾರೆ. ಈಗ ಅಕ್ರಮ ಬಯಲಾಗಿರುವ ಹಿನ್ನೆಲೆಯಲ್ಲಿ, ಅಭ್ಯರ್ಥಿಗಳನ್ನು ಕಾಯಿಸದೇ ಶೀಘ್ರವೇ ಮರುಪರೀಕ್ಷೆ ನಡೆಸಬೇಕಾಗಿದೆ. ಇದಕ್ಕಾಗಿ ನೂತನ ಪ್ರಾಧಿಕಾರ ರಚಿಸಿ ಪಾರದರ್ಶಕವಾಗಿ ಪರೀಕ್ಷಾ ಪ್ರಕ್ರಿಯೆಗಳನ್ನು ಕೈಗೊಳ್ಳಬೇಕು. ಈ ಕುರಿತು ಕೂಡಲೇ ಸರ್ಕಾರಕ್ಕೆ ಆದೇಶ ನೀಡಬೇಕು ಎಂದು ಪೃಥ್ವಿ ರೆಡ್ಡಿ ಮನವಿ ಮಾಡಿದರು., ಪಿಎಸ್‌ಐ ಪರೀಕ್ಷೆಯ ಅಕ್ರಮಕ್ಕೆ ಸಂಬಂಧಿಸಿ ಪ್ರಸ್ತುತ ನಡೆಯುತ್ತಿರುವ ಸಿಐಡಿ ತನಿಖೆಯು ನಿಧಾನಗತಿಯಲ್ಲಿ ಸಾಗುತ್ತಿದೆ. ಅಲ್ಲದೇ, ರಾಜ್ಯ ಸರ್ಕಾರವು ತನ್ನ ಪ್ರಭಾವ ಬಳಸಿ ತನಿಖೆಯನ್ನು ವಿಳಂಬವಾಗುವಂತೆ ಮಾಡಿಸುವ ಸಾಧ್ಯತೆಯಿದೆ. ಆದ್ದರಿಂದ ತನಿಖೆಗೆ ಕಾಲಮಿತಿ ನಿಗದಿಪಡಿಸಬೇಕು. ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ ಆರೋಪಪಟ್ಟಿ ಸಲ್ಲಿಸಬೇಕು. ಈ ಕುರಿತು ಸರ್ಕಾರಕ್ಕೆ ಕೂಡಲೇ ಆದೇಶಿಸಬೇಕೆಂದು ಒತ್ತಾಯಿಸಿದರು.
ರಾಜ್ಯ ಸಚಿವ ಸಂಪುಟದಲ್ಲಿ ಗೃಹ ಇಲಾಖೆಯು ಅತ್ಯಂತ ಸೂಕ್ಷ್ಮವಾದ ಇಲಾಖೆಯಾಗಿದೆ. ಹಾಲಿ ಗೃಹ ಸಚಿವ ಆರಗ ಜ್ಞಾನೇಂದ್ರರವರಿಗೆ ಸಾಮರ್ಥ್ಯ ಹಾಗೂ ಅನುಭವದ ಕೊರತೆಯಿರುವುದು ಅವರು ಅಧಿಕಾರ ವಹಿಸಿಕೊಂಡ ಸಂದರ್ಭದಿಂದಲೂ ಸಾಬೀತಾಗುತ್ತಿದೆ. ಆದ್ದರಿಂದ ಕೂಡಲೇ ಅವರನ್ನು ವಜಾ ಮಾಡಿ ಸಮರ್ಥರನ್ನು ಗೃಹ ಸಚಿವ ಸ್ಥಾನಕ್ಕೆ ನೇಮಿಸಬೇಕು. ಈ ಕುರಿತು ಸರ್ಕಾರಕ್ಕೆ ಆದೇಶ ನೀಡಬೇಕು ಎಂದು ಭಾಸ್ಕರ್ ರಾವ್ ರಾಜ್ಯಪಾಲರಿಗೆ ಮನವಿ ಮಾಡಿದರು.