ಬಂಟ್ವಾಳ: ದಿನಾಂಕ:14-12-2025(ಹಾಯ್ ಉಡುಪಿ ನ್ಯೂಸ್) ಅಕ್ರಮವಾಗಿ ನಿಷೇಧಿತ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 810 ಗ್ರಾಂ ಗಾಂಜಾ ಹಾಗೂ ಮಾರಾಟಕ್ಕೆ ಬಳಸಲಾಗುತ್ತಿದ್ದ ಕಾರು ಮತ್ತು ಆಟೋ ರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಬಂಟ್ವಾಳದ ತುಂಬೆ ನಿವಾಸಿ ಸಮೀರ್ (31) ಮತ್ತು ಗೂಡಿನಬಳಿ ನಿವಾಸಿ ಮೊಹಮ್ಮದ್ ಅಸೀಫ್ (35) ಎಂದು ಗುರುತಿಸಲಾಗಿದೆ.
ಡಿ. 13ರಂದು ಸಂಜೆ ತುಂಬೆ ಗ್ರಾಮದ ಹನುಮನಗರ ರಾಷ್ಟ್ರೀಯ ಹೆದ್ದಾರಿ ಬಳಿ ಕೆಲ ವ್ಯಕ್ತಿಗಳು ನಿಷೇಧಿತ ಮಾದಕ ವಸ್ತುವನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಮಂಜುನಾಥ ಟಿ. ಅವರಿಗೆ ಖಚಿತ ಮಾಹಿತಿ ಲಭಿಸಿದ್ದು,ಮಾಹಿತಿ ಆಧರಿಸಿ, ಮಂಜುನಾಥ ಟಿ. ಅವರು ತಮ್ಮ ಸಿಬ್ಬಂದಿಗಳೊಂದಿಗೆ ತಕ್ಷಣವೇ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ರಾಷ್ಟ್ರೀಯ ಹೆದ್ದಾರಿ ಪಕ್ಕದ ನಿರ್ಜನ ಪ್ರದೇಶದಲ್ಲಿ KA-19-MN-3664 ನಂಬರಿನ ಕಾರು ಮತ್ತು KA-19-AE-0166 ನಂಬರಿನ ಆಟೋ ರಿಕ್ಷಾದ ಬಳಿ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ನಿಂತಿದ್ದರು.
ಪೊಲೀಸರು ಅವರನ್ನು ಹಿಡಿದು ಬಂಧಿಸಿ ವಿಚಾರಣೆ ನಡೆಸಿದಾಗ, ಇಬ್ಬರೂ ಹೆಚ್ಚಿನ ಹಣಗಳಿಸುವ ಉದ್ದೇಶದಿಂದ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.
ಆರೋಪಿಗಳಲ್ಲಿದ್ದ ಕಾರಿನಿಂದ 450 ಗ್ರಾಂ ಮತ್ತು ಆಟೋ ರಿಕ್ಷಾದಿಂದ 360 ಗ್ರಾಂ ಸೇರಿದಂತೆ ಒಟ್ಟು 810 ಗ್ರಾಂ ಗಾಂಜಾ ಪತ್ತೆಯಾಗಿದೆ.
ಗಾಂಜಾ ಸಾಗಾಟ ಮತ್ತು ಮಾರಾಟಕ್ಕೆ ಬಳಸಲಾಗುತ್ತಿದ್ದ ಕಾರು ಹಾಗೂ ಆಟೋ ರಿಕ್ಷಾವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
