images.jpeg
Spread the love

ದಿನಾಂಕ:14-12-2025(ಹಾಯ್ ಉಡುಪಿ ನ್ಯೂಸ್)

ಬೆಂಗಳೂರು: ಶೀಘ್ರದಲ್ಲೇ ಹೊಸ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಕೇಂದ್ರದ ಮಾಜಿ ಸಚಿವ ಸಿಎಂ ಇಬ್ರಾಹಿಂ ಅವರು ಘೋಷಣೆ ಮಾಡಿದ್ದಾರೆ.

ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು  ಜನರಿಗಾಗಿ ಮೂರನೇ ಶಕ್ತಿಯನ್ನು ತರಲು ಸಿದ್ಧನಾಗಿದ್ದೇನೆ, ಪಕ್ಷದ ಚಿಹ್ನೆ ನಿರ್ಧರಿಸಲು ಭಾನುವಾರ ಕಲಬುರಗಿಯಲ್ಲಿ ಸಭೆ ನಡೆಸಲಾಗುವುದು ಎಂದರು.ನಂತರ ಮೈಸೂರು ಮತ್ತು ಬೆಳಗಾವಿಯಲ್ಲಿ ಸಮಾನ ಮನಸ್ಕ ಜನರ ಸಭೆಗಳನ್ನು ನಡೆಸಲಾಗುವುದು. ನಮ್ಮ ಹೊಸ ಪಕ್ಷ ಬಸವಣ್ಣ ಮತ್ತು ಡಾ. ಬಿ. ಆರ್. ಅಂಬೇಡ್ಕರ್ ಅವರ ಸಿದ್ಧಾಂತವನ್ನು ಅಳವಡಿಸಿಕೊಳ್ಳಲಿದೆ ಎಂದು ಹೇಳಿದರು.

ರಾಜ್ಯದ ಯಾವುದೇ ರಾಜಕೀಯ ಪಕ್ಷವು ದಲಿತ ಮತ್ತು ಮುಸ್ಲಿಂ ಮುಖ್ಯಮಂತ್ರಿಯಾಗಬೇಕೆಂದು ಹೇಳಲು ಸಿದ್ಧರಿಲ್ಲ. ಐದು ವರ್ಷಗಳ ಕಾಲ ಪರ್ಯಾಯ ಅಧಿಕಾರಕ್ಕಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಹೊಂದಾಣಿಕೆ ಮಾಡಿಕೊಂಡಂತೆ ಕಾಣುತ್ತಿದೆ.

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ನಡುವಿನ ಕುರ್ಚಿ ಕಿತ್ತಾಟದ ವಿಚಾರದಲ್ಲಿ ಕರ್ನಾಟಕ ಇಬ್ಬಾಗ ಆಗುತ್ತದೆ, ಇವತ್ತು ರಾಜ್ಯ ಸರ್ಕಾರ ಸಂಪೂರ್ಣ ವೈಫಲ್ಯವಾಗಿದೆ. ಒಂದೊಂದು ವಸ್ತುಗಳ ಬೆಲೆ ಹೆಚ್ಚಳವಾಗಿದೆ. ನಮ್ಮ ಹೊಸ ಪಕ್ಷಕ್ಕೆ ಎಲ್ಲರ ಸಹಕಾರ ಬೇಕು. ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ, ಸರ್ಕಾರಗಳು ಕೆಲಸ ಮಾಡುತ್ತಿಲ್ಲ. ನಾನು, ನೀನು, ಎನ್ನುವ ಹೋರಾಟ ನಡೆಯುತ್ತಿದೆ.

ಬೆಳಗಾವಿಯಲ್ಲಿ ಡಿನ್ನರ್‌ ಮಾಡುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ಕರ್ನಾಟಕ ಎರಡು ಭಾಗವಾಗುತ್ತದೆ, ಹೀಗಾಗಿ ಜನರಿಗಾಗಿ ನಾವು ಒಂದು ಪಕ್ಷವನ್ನು ಸ್ಥಾಪನೆ ಮಾಡುತ್ತಿದ್ದೇವೆ. ಎಲ್ಲಾ ಪಕ್ಷಗಳವರು ನಮ್ಮನ್ನ ಬಳಸಿಕೊಂಡರು, ಆದರೆ ಏನು ಮಾಡಲಿಲ್ಲ ಎಂದು ಕಿಡಿಕಾರಿದರು.

error: No Copying!