ಬೆಂಗಳೂರು: ಏಪ್ರಿಲ್ ೨೩(ಹಾಯ್ ಉಡುಪಿ ನ್ಯೂಸ್) ಒಬ್ಬ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಾಗದಿದ್ದರೂ ಮತ್ತು ನ್ಯಾಯಾಲಯದಿಂದ ಯಾವುದೇ ಶಿಕ್ಷೆಗೆ ಗುರಿಯಾಗಿಲ್ಲ ಎಂದರೂ ಸಂದೇಹಿತ ವ್ಯಕ್ತಿಯನ್ನು ರೌಡಿ ಪಟ್ಟಿಗೆ ಸೇರಿಸಬಹುದು ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
‘ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದ ಆರೋಪಗಳಿಂದ ಮುಕ್ತನಾಗಿದ್ದರೂ ಪೊಲೀಸರು ನನ್ನ ವಿರುದ್ಧ ರೌಡಿಶೀಟ್ ತೆರೆದಿದ್ದಾರೆ. ಖುಲಾಸೆಯಾದ ನಂತರವೂ ರೌಡಿಶೀಟ್ ತೆರೆಯುವುದು ಮೂಲಭೂತ ಹಕ್ಕಿಗೆ ಚ್ಯುತಿ ಉಂಟುಮಾಡಿದಂತೆ’ ಎಂದು ಆಕ್ಷೇಪಿಸಿ ರೌಡಿ ಶೀಟರ್‌ಗಳಾದ ನಾಗರಾಜು ಅಲಿಯಾಸ್ ಬಾಂಬ್ ನಾಗ ಮತ್ತು ಅವರ ಮೂವರು ಪುತ್ರರು, ರಾಕೇಶ್ ಮಲ್ಲಿ, ಬಿ.ಎಸ್.ಪ್ರಕಾಶ್ ಸೇರಿದಂತೆ ಒಟ್ಟು 19 ಜನರು ಸಲ್ಲಿಸಿದ್ದ ಪ್ರತ್ಯೇಕ ರಿಟ್ ಅರ್ಜಿಗಳನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ತಿರಸ್ಕರಿಸಿದೆ.
‘ನಾಗರಿಕ ಸಮಾಜದಲ್ಲಿ ರೌಡಿ ಚಟುವಟಿಕೆಗಳಿಗೆ ಅವಕಾಶವಿರಬಾರದು. ಅದನ್ನು ನಿಯಂತ್ರಿಸಲು ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ನಿರ್ದೇಶಿಸಿರುವ ನ್ಯಾಯಪೀಠ, ಬ್ರಿಟಿಷ್ ಮುತ್ಸದ್ದಿ ಲಾರ್ಡ್ ವಿಲಿಯಂ ಬೆಂಟಿಕ್ ಸುಧಾರಣೆಗಳನ್ನು ಉದಾಹರಿಸಿದೆ. ಅಂತೆಯೇ ಅಮೆರಿಕ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಕಾನೂನುಗಳನ್ನೂ ಉದಾಹರಣೆಯಾಗಿ ಉಲ್ಲೇಖಿಸಿದೆ.
‘ಒಬ್ಬ ಅಪರಾಧಿಕ ವ್ಯಕ್ತಿಯನ್ನು ರೌಡಿ ಶೀಟರ್ ಎಂದು ಹೆಸರಿಸುವ ಹಾಗೂ ಅಂತಹ ಇತಿಹಾಸ ಹೊಂದಿರುವವರನ್ನು ರೌಡಿ ಪಟ್ಟಿಯಿಂದ ಕೈಬಿಡಬೇಕು ಎಂಬ ಕೋರಿಕೆಗಳ ಬಗ್ಗೆ ಶಾಸಕಾಂಗ ವಿಸ್ತೃತ ಕಾನೂನು ರಚಿಸಬೇಕು’ ಎಂದೂ ನ್ಯಾಯಪೀಠ ಇದೇ ವೇಳೆ ಅಭಿಪ್ರಾಯಪಟ್ಟಿದೆ.
‘ಹತ್ತಿಪ್ಪತ್ತು ವರ್ಷಗಳ ಹಿಂದೆಯೇ ರೌಡಿ ಶೀಟರ್‌ನಿಂದ ಖುಲಾಸೆ ಆಗಿದ್ದಾನೆ ಎಂದ ಮಾತ್ರಕ್ಕೆ ಅಂತಹ ವ್ಯಕ್ತಿಯನ್ನು ರೌಡಿ ಪಟ್ಟಿಯಿಂದ ಕೈಬಿಡಲು ಆಗುವುದಿಲ್ಲ. ಈ ವಿಷಯದಲ್ಲಿ ಪೊಲೀಸರು ಸೂಕ್ಷ್ಮ ಮಾಹಿತಿ ಆಧರಿಸಿಯೇ ತೀರ್ಮಾನಕ್ಕೆ ಬಂದಿರುತ್ತಾರೆ. ಹಾಗಾಗಿ ಪೊಲೀಸರಿಗೆ ಅನುಮಾನ ಇದ್ದರೆ ಅಂತಹವರನ್ನು ರೌಡಿ ಶೀಟರ್‌ನಿಂದ ತೆಗೆಯಲು ಆಗುವುದಿಲ್ಲ’ ಎಂದು ನ್ಯಾಯಪೀಠ ಈ ಕುರಿತಂತೆ ಮಾರ್ಗಸೂಚಿ ರಚಿಸಿದೆ.