ಗಂಗೊಳ್ಳಿ: ದಿನಾಂಕ:24-10-2025(ಹಾಯ್ ಉಡುಪಿ ನ್ಯೂಸ್) ಬೈಂದೂರು -ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯೊಂದರಲ್ಲಿ ಅಕ್ರಮವಾಗಿ ಸರಕಾರದ ಅನ್ನ ಭಾಗ್ಯ ಯೋಜನೆಯ ಅಕ್ಕಿ ಸಾಗಾಟ ನಡೆಸುತ್ತಿದ್ದ ಲಾರಿ ಮತ್ತು ಚಾಲಕನನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.
ಕುಂದಾಪುರ ತಾಲೂಕಿನ ಆಹಾರ ನಿರೀಕ್ಷಕರಾದ ಸುರೇಶ್ ಹೆಚ್.ಎಸ್ ರವರಿಗೆ ದಿನಾಂಕ: 24-10-2025 ರಂದು ಕುಂದಾಪುರ ತಾಲೂಕು, ತ್ರಾಸಿ ಗ್ರಾಮದ ಮರವಂತೆ ಬೀಚ್ ಹತ್ತಿರದ ಕ್ರಾಸ್ ರಸ್ತೆಯಲ್ಲಿ ಬೈಂದೂರು-ಕುಂದಾಪುರ ರಾ.ಹೆ 66 ರ ಮಾರ್ಗವಾಗಿ ಲಾರಿಯಲ್ಲಿ ಸರಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಕಾನೂನು ಬಾಹಿರವಾಗಿ ರವಾನಿಸುತ್ತಿರುವ ಬಗ್ಗೆ ಗುಪ್ತ ಮಾಹಿತಿದಾರರಿಂದ ಖಚಿತ ಮಾಹಿತಿ ದೊರೆತ ಮೇರೆಗೆ, ಆಹಾರ ನಿರೀಕ್ಷಕರು ಗಂಗೊಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಗಳೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ ಹೋಗಿ ತಪಾಸಣೆ ನಡೆಸುವಾಗ ಒಂದು ಟಾಟಾ ಕಂಪೆನಿಯ 1412 ನೇ ಲಾರಿ ಬರುತ್ತಿರುವುದನ್ನು ಕಂಡು, ಲಾರಿ ನಿಲ್ಲಿಸಿದಾಗ, ಲಾರಿ ಚಾಲಕನು ವಾಹನ ನಿಲ್ಲಿಸಿ ಓಡಿ ಹೋಗಲು ಪ್ರಯತ್ನಿಸಿದವನನ್ನು ಪೊಲೀಸ್ ಸಿಬ್ಬಂದಿಗಳ ಸಹಾಯದಿಂದ ಸುತ್ತುವರಿದು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸರು ಲಾರಿ ಚಾಲಕನನ್ನು ವಿಚಾರಣೆ ನಡೆಸಿದಾಗ, ಆತನ ಹೆಸರು ನಂಜುಂಡ ಎಂದಾಗಿದ್ದು, ಭಟ್ಕಳದ ಶಫೀಕ್ ಸಾಹೇಬ್ ಎನ್ನುವವರು ತನ್ನ ಲಾರಿ KA 52 B 3687 ನೇದಕ್ಕೆ, 214 ಚೀಲ ಗಳಲ್ಲಿ, ಒಟ್ಟು 107 ಕ್ವಿಂಟಾಲ್ ಅಕ್ಕಿಯನ್ನು ಲಾರಿಗೆ ತುಂಬಿಸಿ ಲೋಡ್ ಮಾಡಿದ್ದು, ಶ್ರೀ ಬಸವೇಶ್ವರ ಅಗ್ರೋ ರೈಸ್ ಇಂಡಸ್ಟ್ರೀಸ್ 2 ನೇ ಅಡ್ಡ ರಸ್ತೆ ಎಂ. ಜಿ ರಸ್ತೆ ಮಂಡ್ಯ ಎನ್ನುವವರ ರೈಸ್ ಮಿಲ್ಲಿಗೆ ತಲುಪಿಸಲು ಕಳುಹಿಸಿದ್ದು ಎಂಬುದಾಗಿ ತಿಳಿಸಿದ್ದು, ಸರಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಕಾನೂನು ಬಾಹಿರವಾಗಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದಾಗಿ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.
ಅಕ್ಕಿಯ ಮೌಲ್ಯ 2,56,800/- /ರೂ ಆಗಿದ್ದು. ಸಾಗಾಟಮಾಡುತ್ತಿದ್ದ KA 52 B 3687 ನೇ ಮೆರೂನ್ ಬಣ್ಣದ ಟಾಟಾ ಕಂಪೆನಿಯ 1412 ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ ನಂಜುಂಡ ಕೆ. ಆರ್ ಹಾಗೂ ಭಟ್ಕಳದ ಶಫೀಕ್ ಸಾಹೇಬ್ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.
ಗಂಗೊಳ್ಳಿ ಠಾಣೆಯಲ್ಲಿ ಕಲಂ: 3,6,7 ಅವಶ್ಯಕ ವಸ್ತುಗಳ ಅಧಿನಿಯಮ ಕಾಯ್ದೆ 1955 ರಂತೆ ಪ್ರಕರಣ ದಾಖಲಾಗಿದೆ.
