images-5.jpeg
Spread the love

ದಿನಾಂಕ:25-10-2025(ಹಾಯ್ ಉಡುಪಿ ನ್ಯೂಸ್)

ಮಂಗಳೂರು: ನಗರದ ಹೊರವಲಯದ ಸುರತ್ಕಲ್‌ನಲ್ಲಿರುವ ದೀಪಕ್ ಬಾರ್ ಬಳಿ ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ ಚೂರಿ ಇರಿತದಲ್ಲಿ ಅಂತ್ಯಗೊಂಡ ಘಟನೆ ಗುರುವಾರ ರಾತ್ರಿ ಸುಮಾರು 11 ಗಂಟೆಗೆ ವರದಿಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಗುರುತಿಸಿ ಬಂಧಿಸಿದ್ದಾರೆ. ಮುಕ್ಷಿದ್, ನಿಜಾಮ್ ಮತ್ತು ಇತರ ಇಬ್ಬರು ಸ್ನೇಹಿತರು ದೀಪಕ್ ಬಾರ್‌ಗೆ ತೆರಳಿ ಮದ್ಯ ಸೇವಿಸುತ್ತಿದ್ದರು.

ಇದೇ ವೇಳೆ, ಅಲ್ಲಿಗೆ ಬಂದಿದ್ದ ನಾಲ್ವರು ಅಪರಿಚಿತ ವ್ಯಕ್ತಿಗಳ ಜೊತೆ ಅವರಿಗೆ ವಾಗ್ವಾದ ಶುರುವಾಗಿದೆ. ಬಾರ್‌ನಿಂದ ಹೊರಬಂದ ನಂತರವೂ ಎರಡೂ ಗುಂಪುಗಳ ನಡುವೆ ಜಗಳ ಮುಂದುವರಿದಿದೆ. ಈ ಸಂದರ್ಭದಲ್ಲಿ, ಆರೋಪಿಗಳಲ್ಲಿ ಒಬ್ಬ ಚಾಕುವಿನಿಂದ ( ಫ್ಲೆಕ್ಸ್ ಕತ್ತರಿಸುವ ಚಾಕು ಎಂದು ಶಂಕಿಸಲಾಗಿದೆ) ಮುಕ್ಷಿದ್ ಅವರ ಹೊಟ್ಟೆಗೆ ಮತ್ತು ಕಿವಿಯ ಸಮೀಪ ಇರಿದಿದ್ದಾನೆ.

ತಡೆಯಲು ಬಂದ ಸ್ನೇಹಿತ ನಿಜಾಮ್ ಕೈಗೂ ಗಾಯವಾಗಿದೆ. ಅದೃಷ್ಟವಶಾತ್ ಗಾಯ ಆಳವಾಗಿರದ ಕಾರಣ ಮುಕ್ಷಿದ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತ ಸುಧೀರ್‌ ಕುಮಾರ್‌ ರೆಡ್ಡಿ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ನಾಲ್ವರು ಅಪರಿಚಿತ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307ರ ಅಡಿಯಲ್ಲಿ (ಕೊಲೆ ಯತ್ನ) ಪ್ರಕರಣ ದಾಖಲಿಸಲಾಗಿದೆ.

ರಾತ್ರಿಯೇ ಕಾರ್ಯಪ್ರವೃತ್ತರಾದ ಪೊಲೀಸರ ವಿಶೇಷ ತಂಡಗಳು ಆರೋಪಿಗಳನ್ನು ಗುರುತಿಸುವಲ್ಲಿ ಯಶಸ್ವಿಯಾಗಿವೆ. ಸುರತ್ಕಲ್ ಠಾಣೆಯ ರೌಡಿ ಶೀಟರ್ ಹಾಗೂ ಬಜರಂಗದಳದಲ್ಲಿ ಸಕ್ರಿಯನಾಗಿರುವ ಗುರುರಾಜ್, ಆತನ ಸ್ನೇಹಿತ ಅಲೆಕ್ಸ್ ಸಂತೋಷ್, ಸುಶಾಂತ್ ಮತ್ತು ನಿತಿನ್ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳು ಎಂದು ಗುರುತಿಸಿ ಬಂಧಿಸಲಾಗಿದೆ.

error: No Copying!