ಇದೀಗಿನ ದಿನಗಳಲ್ಲಿ ಯುವಕರು , ಯುವತಿಯರು ಧಷ್ಟ ಪುಷ್ಟ ದೇಹವನ್ನು ಹೊಂದುವುದಕ್ಕಾಗಿ ಮಿತಿ ಮೀರಿದ ವ್ಯಾಯಾಮ, ಕಸರತ್ತು ನಡೆಸುತ್ತಿದ್ದಾರೆ. ಮಿತಿಯರಿತ ವ್ಯಾಯಾಮದಿಂದ ಲಾಭವಿರುವಂತೆಯೇ, ಹದ್ದುಮೀರಿದ ವ್ಯಾಯಾಮದಿಂದ ಹಾನಿಯೇ ಹೆಚ್ಚು. ‘ಅರ್ಧ ಶಕ್ತ್ಯಾ ವ್ಯಾಯಾಮಂ ಕುರ್ವೀತ’ ಎನ್ನುತ್ತದೆ ಆರ್ಯುವೇದದ ಮೂಲಸೂತ್ರ. ಎಂದರೆ, ನಿಮಗೆ ಮೂರು ಕಿಲೋಮೀಟರ್‌ನಷ್ಟು ಓಡುವ ಚೈತನ್ಯವಿದೆಯೇ? ಒಂದೂವರೆ ಕಿಲೋಮೀಟರ್‌ನಷ್ಟು ಮಾತ್ರವೇ ಓಡಿ. ಇದಕ್ಕೆ ಚರಕಮಹರ್ಷಿ ನೀಡುವ ದೃಷ್ಟಾಂತ – ಸಿಂಹ–ಆನೆಯ ನಡುವೆ ನಡೆಯುವ ಕದನ. ಬಲಿಷ್ಠ ಆನೆಯನ್ನು ಸಿಂಹವೇ ಕೊಂದುಬಿಡುತ್ತದೆ. ಹೀಗೆಯೇ ವ್ಯಾಯಾಮದಿಂದ ಆನೇಕಾನೇಕ ಶುಭಫಲಗಳಿವೆ. ಆದರೆ ಕ್ರಮವರಿತು ಮಾಡದ ವ್ಯಾಯಾಮದಿಂದ ಕ್ರಮೇಣ ರೋಗನಿರೋಧಕ ಶಕ್ತಿ ಕುಸಿಯುತ್ತದೆ. ಮಾತ್ರವಲ್ಲ, ರೋಗಗಳು ಎದುರಾಗುತ್ತ, ಮರಣವೂ ಸನ್ನಿಹಿತವಾಗುತ್ತದೆ. ಅದನ್ನೇ ಮತ್ತೆ ಮತ್ತೆ ಪುನರುಚ್ಚರಿಸುವ ಚರಕಮಹರ್ಷಿ ಹೇಳುವ ಮಾತು ಸಾರ್ವಕಾಲಿಕ ಸತ್ಯ. ‘ಅರ್ಧ ಶಕ್ತ್ಯಾ ವ್ಯಾಯಾಮಂ ಕುರ್ವೀತ’; ಎಂದರೆ ದೇಹದ ಆರೋಗ್ಯ ಕಾಪಾಡಿಕೊಳ್ಳಬೇಕೆ? ನಿಮ್ಮ ಧಾರಣಾಶಕ್ತಿಯ ಅರ್ಧದಷ್ಟು ಮಾತ್ರ ವಿನಿಯೋಗಿಸಿರಿ ವ್ಯಾಯಾಮ ಮಾಡಿರಿ. ಉಳಿದ ಅರ್ಧ ಶಕ್ತಿಯನ್ನು ಕಾಪಾಡಿಕೊಂಡು ನಿರೋಗಿಗಳಾಗಿರಿ, ನೂರ್ಕಾಲ ಬಾಳಿರಿ.