Spread the love

ಬೆಂಗಳೂರು:ಮಾ27(ಹಾಯ್ ಉಡುಪಿ ನ್ಯೂಸ್)2023 ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ  ಗೆಲುವು ಸಾಧಿಸುವ ಅಭ್ಯರ್ಥಿಗಳಿಗಾಗಿ ಸಮೀಕ್ಷೆ ನಡೆಸಲು ಕಾಂಗ್ರೆಸ್ ಪಕ್ಷ ಮುಂದಾಗಿದೆ.                              

ಐದು ರಾಜ್ಯಗಳ ಚುನಾವಣಾ ಫಲಿತಾಂಶದ ಬಳಿಕ ಬಿಜೆಪಿ ರಾಷ್ಟ್ರೀಯ ನಾಯಕರು 2023ರಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿದ್ದು,  ಕಾಂಗ್ರೆಸ್  ಪಕ್ಷ ಕೂಡ ತನ್ನ ಸಿದ್ಧತೆಗಳನ್ನು ಪ್ರಾರಂಭಿಸಿದೆ.
ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಗೆಲ್ಲಬಲ್ಲ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಾಂಗ್ರೆಸ್  ಸಮೀಕ್ಷೆಗಳನ್ನು ನಡೆಸಲು ಮುಂದಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಡಿಜಿಟಲ್ ಸದಸ್ಯತ್ವ ಅಭಿಯಾನವನ್ನು ಆರಂಭಿಸಿದ್ದು, ಕರ್ನಾಟಕ ಕಾಂಗ್ರೆಸ್ ಮಾರ್ಚ್ ಅಂತ್ಯದೊಳಗೆ 50 ಲಕ್ಷ ಸದಸ್ಯರನ್ನು ಸೇರ್ಪಡೆಗೊಳಿಸುವ ಗುರಿ ಇಟ್ಟುಕೊಂಡಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದು, ಡಿಜಿಟಲ್ ಸದಸ್ಯತ್ವ ಅಭಿಯಾನದ ಮೇಲೆ ಗಮನವಿರಿಸಿದ್ದು ಈಗಾಗಲೇ ಹೆಚ್ಚೆಚ್ಚು ಸದಸ್ಯರನ್ನು ಸೇರ್ಪಡೆಗೊಳಿಸುವ ಪಕ್ಷದ ಕಾರ್ಯಕರ್ತರಿಗೆ ಭರ್ಜರಿ ಉಡುಗೊರೆಗಳನ್ನೂ ನೀಡಲಾಗುತ್ತಿದೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.
ಡಿಜಿಟಲ್ ಸದಸ್ಯತ್ವ ಅಭಿಯಾನದ ಮೂಲಕ 10 ಕ್ಕಿಂತ ಹೆಚ್ಚು ಸದಸ್ಯರನ್ನು ಸೇರ್ಪಡೆಗೊಳಿಸುವ ಕಾರ್ಯಕರ್ತರು ದ್ವಿತೀಯ ಸದಸ್ಯತ್ವಕ್ಕೆ ಅರ್ಹರಾಗಿದ್ದಾರೆ ಮತ್ತು ಮತ ಚಲಾಯಿಸಲು ಮತ್ತು ಪದಾಧಿಕಾರಿಗಳನ್ನು ಆಯ್ಕೆ ಮಾಡಲು ಅವರಿಗೆ ಅವಕಾಶ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಪಕ್ಷವು ಮೊಬೈಲ್ ಅಪ್ಲಿಕೇಶನ್ ನ್ನೂ ಕೂಡ ಅಭಿವೃದ್ಧಿಪಡಿಸುತ್ತಿದೆ, ಅದರ ಮೂಲಕ ದ್ವಿತೀಯ ಸದಸ್ಯತ್ವವನ್ನು ಪಡೆದವರು ಪ್ರತಿಕ್ರಿಯೆಯನ್ನು ನೀಡಬಹುದು ಮತ್ತು 2023 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ ಪಡೆದು ಸ್ಪರ್ಧಿಸಲು ಬಯಸುವ ಅಭ್ಯರ್ಥಿಗಳಿಗೆ ಮತ ಹಾಕಬಹುದು ಎಂದು ಹೇಳಲಾಗಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಮುಖ್ಯಸ್ಥ ಡಿಕೆ ಶಿವಕುಮಾರ್ ಇಬ್ಬರೂ ಖಾಸಗಿ ಏಜೆನ್ಸಿಗಳ ಮೂಲಕ ಪ್ರತ್ಯೇಕ ಸ್ಥಳೀಯ ಸಮೀಕ್ಷೆ ನಡೆಸಲು ಸಜ್ಜಾಗಿದ್ದಾರೆ.ಕರ್ನಾಟಕ ವಿಧಾನಸಭೆಯಲ್ಲಿ 69 ಕಾಂಗ್ರೆಸ್ ಶಾಸಕರಿದ್ದು, 2023ರ ಚುನಾವಣೆ ವೇಳೆ 130-140 ಸ್ಥಾನಗಳ ಗೆಲ್ಲುವ ನಿರೀಕ್ಷೆಗಳನ್ನು ಕಾಂಗ್ರೆಸ್ ಪಕ್ಷ ಇಟ್ಟುಕೊಂಡಿದೆ. ಆಕಾಂಕ್ಷಿಗಳಿರುವ ಕಾಂಗ್ರೆಸ್ಸೇತರ ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಲು ಕಾಂಗ್ರೆಸ್ ಯೋಜನೆ ಹಾಕಿದೆ ಎಂದು ಕಾಂಗ್ರೆಸ್ ಕಚೇರಿಯ ಮೂಲಗಳು ಮಾಹಿತಿ ನೀಡಿದೆ.
“ಹಲವು ಆಕಾಂಕ್ಷಿಗಳಿದ್ದರೆ, ಅವರಲ್ಲಿ ಉತ್ತಮರನ್ನು ಹುಡುಕಲು ಮತ್ತು ಜನರೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿರುವವರು ಅಂತಿಮವಾಗಿ ಆಯ್ಕೆಯಾಗಲಿದ್ದಾರೆ. ಹೆಚ್ಚಿನ ಮತಗಳನ್ನು ಗಳಿಸಲು ಈ ಸಮೀಕ್ಷೆಯು ಸಹಾಯ ಮಾಡುತ್ತದೆ. ಸಮೀಕ್ಷೆಯು ಕಾಂಗ್ರೆಸ್ ಶಾಸಕರ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುತ್ತದೆ. ಡಿಕೆ.ಶಿವಕುಮಾರ್ ಕೂಡ ಏಪ್ರಿಲ್ ನಲ್ಲಿ ಖಾಸಗಿ ಏಜೆನ್ಸಿ ಮೂಲಕ ಸಮೀಕ್ಷೆ ಆರಂಭಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ನಾಯಕರ ಪ್ರಕಾರ, ಚುನಾವಣೆಗೆ ಕನಿಷ್ಠ ಆರು ತಿಂಗಳ ಮೊದಲು ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವುದು ಅಗತ್ಯವಿದೆ, ಇದರಿಂದ ಈ ಅಭ್ಯರ್ಥಿಗಳು ತಳಮಟ್ಟದಲ್ಲಿ ಕೆಲಸ ಮಾಡಲು ಮತ್ತು ಮತಗಳನ್ನು ಪಡೆಯಲು ಸಾಕಷ್ಟು ಸಮಯ ಸಿಗುತ್ತದೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಆಡಳಿತ ಪಕ್ಷವಾಗಿದೆ. ಕೇಂದ್ರ ಸಚಿವರ ಹೊರತಾಗಿ, ರಾಜ್ಯದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಪ್ರಧಾನಿ ಕೂಡ ಕರ್ನಾಟಕದತ್ತ ತೀವ್ರ ಗಮನ ಹರಿಸುವ ಸಾಧ್ಯತೆಯಿದೆ. ಈ ಬಾರಿ ಕಠಿಣ ಸ್ಪರ್ಧೆಯಿದ್ದರೂ, ರಾಜ್ಯದಲ್ಲಿ ಮರಳಿ ಅಧಿಕಾರಕ್ಕೆ ಬರುವ ಭರವಸೆಯನ್ನು ಕಾಂಗ್ರೆಸ್ ಪಕ್ಷ ಹೊಂದಿದೆ.

error: No Copying!