Spread the love

ದಿನಾಂಕ: 08-08-2025(ಹಾಯ್ ಉಡುಪಿ ನ್ಯೂಸ್)

ಉಡುಪಿ: ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ (ಡಿ ಎಸ್) ಆಗಿ ಆಸ್ಪತ್ರೆಯ ಹಿರಿಯ ನೇತ್ರ ತಜ್ಞರಾದ ಡಾ. ನಿತ್ಯಾನಂದ ನಾಯಕ್ ಅವರು ಇಂದು (08/08/2025) ಅಧಿಕಾರ ಸ್ವೀಕರಿಸಿದ್ದಾರೆ.

ಈ ಹಿಂದೆ ಎರಡು ಬಾರಿ ರಾಜ್ಯ ಸರಕಾರ ವರ್ಗಾವಣೆ ಆದೇಶ ನೀಡಿದ್ದರೂ ಕುರ್ಚಿಯಿಂದೇಳದೆ, ಹುದ್ದೆ ಬಿಟ್ಟುಕೊಡದೆ ಹಠಪೂರ್ವಕವಾಗಿ ಅಧಿಕಾರದಲ್ಲಿದ್ದ ಡಾ. ಎಚ್. ಅಶೋಕ್ ಅವರು ಇಂದು ಸರಕಾರ ಮೂರನೇ ಬಾರಿ ವರ್ಗಾವಣೆ ಆದೇಶ ಜ್ಯಾರಿಗೊಳಿಸಿದ ಬೆನ್ನಿಗೆ ಗತ್ಯಂತರವಿಲ್ಲದೆ ಕಚೇರಿಯಿಂದ ನಿರ್ಗಮಿಸಿದರು. ಇದರಿಂದ ಹಾದಿ ಸುಗಮಗೊಂಡು ಡಾ. ನಿತ್ಯಾನಂದ ನಾಯಕ್ ಅವರು ಜಿಲ್ಲಾ ಸರ್ಜನ್ ಆಗಿ ಅಧಿಕಾರ ಸ್ವೀಕರಿಸಿದರು. ಡಾ. ಅಶೋಕ್ ಅವರಿಗೆ ಹುದ್ದೆ ತೆರವುಗೊಳಿಸಲು ಕಟ್ಟುನಿಟ್ಟಿನ ಆದೇಶ ಮಾಡಿದ ಸರಕಾರ ಸಧ್ಯಕ್ಕೆ ಯಾವುದೇ ಹುದ್ದೆ ತೋರಿಸದೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತಾಲಯಕ್ಕೆ ಹಾಜರಾಗಿ ವರದಿ ಸಲ್ಲಿಸುವಂತೆ ಸೂಚಿಸಿದೆ.

ಸರಕಾರ ಮೊದಲಿಗೆ 2025ರ ಜನವರಿಯಲ್ಲಿ ಮತ್ತು ಎರಡನೇ ಬಾರಿ ಫೆಬ್ರವರಿಯಲ್ಲಿ ವರ್ಗಾವಣೆ ಆದೇಶ ಹೊರಡಿಸಿತ್ತು. ಎರಡನೇ ಬಾರಿ ವರ್ಗಾವಣೆ ಆದೇಶ ಹೊರಡಿಸಿದ ನಂತರ ಡಾ. ಅಶೋಕ್ ಅವರು ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ (ಕೆಎಟಿ)ಗೆ ವರ್ಗಾವಣೆ ಆದೇಶಕ್ಕೆ ತಡೆಕೋರಿ ಅರ್ಜಿ ಸಲ್ಲಿಸಿದ್ದರು. ತಡೆಯಾಜ್ಞೆ ಕೋರಿ ಸಲ್ಲಿಸಿದ ಅರ್ಜಿಯನ್ನು ಕೆಎಟಿ ಜುಲೈ 23ರಂದು ವಜಾಗೊಳಿಸಿ ಆದೇಶ ಹೊರಡಿಸಿತ್ತು.

ಕೆಎಟಿ ತಡೆಯಾಜ್ಞೆ ಅರ್ಜಿಯನ್ನು ವಜಾಗೊಳಿಸಿದ ನಂತರವೂ ಡಾ. ಅಶೋಕ್ ಅವರು ಅಧಿಕಾರ ಬಿಟ್ಟುಕೊಟ್ಟಿರಲಿಲ್ಲ. ಈ ಬಗ್ಗೆ ದಸಂಸ (ಅಂಬೇಡ್ಕರ್ ವಾದ)ದ ನಾಯಕರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ಶ್ರೀರಾಮ ದಿವಾಣ ಅವರು ಸರಕಾರಕ್ಕೆ ದೂರು ನೀಡಿದ್ದರು. ದಸಂಸ ನಾಯಕರು ಪತ್ರಿಕಾಗೋಷ್ಟಿ ನಡೆಸಿ, ಜಿಲ್ಲಾಧಿಕಾರಿಗಳನ್ನು ನಿಯೋಗದ ಮೂಲಕ ತೆರಳಿ ಕೂಡಲೇ ವರ್ಗಾವಣೆಗೊಳಿಸದಿದ್ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಜಿಲ್ಲೆಗೆ ಆಗಮಿಸುವಾಗ ಕರಿ ಬಾವುಟ ಪ್ರದರ್ಶಿಸುವುದಾಗಿಯೂ ಮುನ್ನೆಚ್ಚರಿಕೆ ನೀಡಿದ್ದರು.

ಇಲಾಖೆಯ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ನೀಡಿದ ದೂರಿನ ಹಿನ್ನೆಲೆಯಲ್ಲಿ ನಡೆದ ಆಂತರಿಕ ತನಿಖೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸರಕಾರ ಡಾ. ಅಶೋಕ್ ರನ್ನು ಅಮಾನತು ಮಾಡಿತ್ತು. ಮತ್ತು ಐದು ವರ್ಷದ ಹಿಂದಿನ ಹಂತಕ್ಕೆ ವೇತನ ಹಿಂಭಡ್ತಿಗೊಳಿಸಿ ಆದೇಶಿಸಿತ್ತು.

ಇಷ್ಟಾಗಿಯೂ ಜಾತಿ ಪ್ರಭಾವ ಬಳಸಿ ಅರ್ಹತೆ ಇಲ್ಲದಿದ್ದರೂ 2024ರ ಮಾರ್ಚ್ ನಲ್ಲಿ ಡಾ. ಅಶೋಕ್ ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಆಗಿ ನಿಯುಕ್ತಿಗೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ವರದಿ: ಶ್ರೀರಾಮ ದಿವಾಣ

error: No Copying!