
ಧರ್ಮಸ್ಥಳದ ಪರ ವಿರೋಧದ
ವಾದ ವಿವಾದಗಳು, ಚರ್ಚೆಗಳು, ಮಾತುಗಳು ದಿಕ್ಕು ತಪ್ಪುತ್ತಿದೆ. ಭಾಷೆ ಮತ್ತು ಭಾವನೆಗಳು ತೀರಾ ಕೆಳಹಂತಕ್ಕೆ ಇಳಿದಿವೆ ಮತ್ತು ಕ್ರೌರ್ಯವನ್ನು ಸೃಷ್ಟಿಸುತ್ತಿವೆ ಹಾಗು ಹೊರಹಾಕುತ್ತಿದೆ.
ನಮ್ಮದೇ ಜನಗಳು, ನಾವೆಲ್ಲ ಭಾರತೀಯರು, ಬಹುತೇಕ ಕನ್ನಡಿಗರು, ಹೆಚ್ಚು ಕಡಿಮೆ ಸಹಪಾಠಿಗಳು, ಸಹವರ್ತಿಗಳು, ಸಮಕಾಲೀನರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ, ಎಲ್ಲರಿಗೂ ಬಹುತೇಕ ವಿದ್ಯಾಭ್ಯಾಸ ಇದೆ. ಸಾಮಾನ್ಯ ತಿಳುವಳಿಕೆಯೂ ಇದೆ.
ಪರವಾಗಿ ವಾದ ಮಾಡುವವರಿಗೆ ಧರ್ಮ, ಭಕ್ತಿ, ಸಂಪ್ರದಾಯ ಹೆಚ್ಚು ಕಡಿಮೆ ಮೂಲವಾದರೆ, ವಿರೋಧವಾಗಿ ಮಾತನಾಡುತ್ತಿರುವವರಿಗೆ ಬಹುತೇಕ ಬುದ್ಧ, ಗಾಂಧಿ, ಅಂಬೇಡ್ಕರ್, ಬಸವಣ್ಣ, ವಿವೇಕಾನಂದ ಮುಂತಾದವರ ಚಿಂತನೆಗಳೇ ಮೂಲಾಧಾರ. ಇಷ್ಟರ ನಡುವೆಯೂ ಈ ಜನಗಳ ವರ್ತನೆ ಎಷ್ಟು ಕೆಳಮಟ್ಟಕ್ಕೆ ಇಳಿದಿದೆ ಎಂದರೆ ಕುಡುಕನೊಬ್ಬ ತೀರಾ ನಿಯಂತ್ರಣ ಮೀರಿ ಕುಡಿದಾಗ ಆಡುವ ಮಾತುಗಳಂತೆ, ಹುಚ್ಚನೊಬ್ಬನ ಹೊಲಸು ಮಾತುಗಳಂತೆ, ಮಾನಸಿಕ ರೋಗಿಯೊಬ್ಬನ ಸ್ಥಿಮಿತ ಕಳೆದುಕೊಂಡ ಭಾಷೆಯಂತೆ, ಕೆಟ್ಟ ಕೊಳಕ ಭಾಷೆಯನ್ನು ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಳಸುತ್ತಿದ್ದಾರೆ.
ತನ್ನ ಸಹವರ್ತಿಗಳ ಬಗ್ಗೆ ಗೌರವವಿಲ್ಲ, ಪ್ರೀತಿ ಇಲ್ಲ. ಕೇವಲ ದ್ವೇಷ, ಅಸೂಯಗಳೇ. ಆರೋಪಗಳಿಗಂತೂ ತಲೆ ಬುಡವೇ ಇಲ್ಲ. ಆತ ಮಾರಾಟವಾಗಿದ್ದಾನೆ ಅಂತ ಇವರು, ಈತ ಮಾರಾಟವಾಗಿದ್ದಾನೆ ಎಂದು ಅವರು ಮಾತಿನಲ್ಲಿಯೇ ಕೋಟ್ಯಂತರ ರೂಪಾಯಿಗಳ ವ್ಯವಹಾರಗಳನ್ನು ಕುದುರಿಸಿದ್ದಾರೆ. ಎಷ್ಟು ನಿಜವೋ ಎಷ್ಟು ಸುಳ್ಳೋ ನಮ್ಮಂತ ಸಾಮಾನ್ಯರಿಗೆ ಅರ್ಥವಾಗುವುದು ಕಷ್ಟ.
ಹೌದು, ಧರ್ಮಸ್ಥಳದ ಮೇಲೆ ಒಂದಷ್ಟು ಆರೋಪಗಳು ಬಂದಿದೆ. ಅದನ್ನು ತನಿಖೆ ಮಾಡಲಾಗುತ್ತಿದೆ. ಎರಡೂ ಕಡೆಯವರು ಸ್ವಲ್ಪ ಸಂಮಯ ಪ್ರದರ್ಶಿಸಿ. ಅನಾವಶ್ಯಕವಾಗಿ ಉದ್ವೇಗಕ್ಕೊಳಗಾಗಿ ಅಪರಾಧ ಮತ್ತು ಅಪರಾಧಿಗಳ ಮೇಲೆ ಕೇಂದ್ರಿತವಾದ ವಿಷಯವನ್ನು ದಿಕ್ಕು ತಪ್ಪಿಸದಿರಿ.
ಜೊತೆಗೆ ಈಗ ಅನೇಕ ಘಟನೆಗಳು ನಡೆದು ಹೋಗಿದೆ. ಅದನ್ನು ತಡೆಯಲು ಸಾಧ್ಯವಿಲ್ಲ. ಅಪರಾಧಿಗಳಿಗೆ ಶಿಕ್ಷೆ ವಿಧಿಸುವ ಸಾಧ್ಯತೆ ಮಾತ್ರ ಉಳಿದಿದೆ. ಆದರೆ ಮುಂದೆ ಒಂದು ವೇಳೆ ಧರ್ಮಸ್ಥಳದ ವ್ಯಾಪ್ತಿಯಲ್ಲೇ ಇರಲಿ ಅಥವಾ ರಾಜ್ಯದ ಯಾವುದೇ ಮುಖ್ಯ ಸ್ಥಳದಲ್ಲಿ ಇರಲಿ, ಈ ರೀತಿಯ ಅಸಹಜ ಸಾವುಗಳು ಸಂಭವಿಸಿದಾಗ ಯಾವ ರೀತಿಯ ಕ್ರಮ ಕೈಗೊಳ್ಳಬೇಕು, ಪೊಲೀಸ್ ಮತ್ತು ಸ್ಥಳೀಯ ಆಡಳಿತ ಯಾವ ಮಾಹಿತಿಯನ್ನು ಕಲೆ ಹಾಕಬೇಕು, ದೇಹವನ್ನು ಯಾವ ರೀತಿ ವಿಲೇವಾರಿ ಮಾಡಬೇಕು ಮುಂತಾದ ಒಂದು ಸ್ಪಷ್ಟ ನೀತಿ ನಿಯಮಗಳನ್ನು ನ್ಯಾಯಾಧೀಶರ ವರದಿ ಆಧರಿಸಿ ಸಿದ್ದಪಡಿಸಬೇಕು. ಈಗ ನಾವು ಮಾಡಬೇಕಾಗಿರುವ ಕೆಲಸ ಆ ನಿಟ್ಟಿನಲ್ಲಿ ಮಾತ್ರ.
ನಮಗೆ ಇಷ್ಟವಿದೆಯೋ ಇಲ್ಲವೋ ಒಂದು ಪ್ರಜಾಪ್ರಭುತ್ವದ ಸಂವಿಧಾನ ಅಡಿಯಲ್ಲಿ ನಾವಿದ್ದೇವೆ. ಅದನ್ನು ಗೌರವಿಸ ಬೇಕಾಗಿರುವುದು ಎರಡೂ ಕಡೆಯವರ ಕರ್ತವ್ಯ. ಈ ದೇಶದಲ್ಲಿ ಜಾತಿ, ಧರ್ಮ, ಹಣ, ಅಧಿಕಾರದ ಕಾರಣಕ್ಕಾಗಿ ಕೆಲವು ಪ್ರಭಾವಶಾಲಿಗಳು ಸೃಷ್ಟಿಯಾಗುತ್ತಾರೆ, ಹಾಗೆಯೇ ಅಜ್ಞಾನ, ಬಡತನದ ಕಾರಣಕ್ಕಾಗಿ ಕೆಲವು ದುರ್ಬಲರು ಸೃಷ್ಟಿಯಾಗುತ್ತಾರೆ. ಇವರ ನಡುವಿನ ಅಂತರ ಜಾಸ್ತಿಯಾಗಿ ಶೋಷಣೆಗಳು ನಿರಂತರವಾಗಿ ನಡೆಯುತ್ತದೆ.
ಈ ನಿಟ್ಟಿನಲ್ಲಿಯೂ ಸಹ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಾಗಿದೆ.
ನಾವು ತಾಂತ್ರಿಕವಾಗಿ ಎಷ್ಟೇ ಮುಂದುವರೆದಿದ್ದರೂ ಈ ಸಂದರ್ಭದಲ್ಲಿ ಸಹ ಕೊಲೆ ಆರೋಪಿಗಳನ್ನು ಪತ್ತೆಹಚ್ಚುವುದು ಎಷ್ಟೊಂದು ಕಷ್ಟವಾಗಿದೆ ಎಂದರೆ ನಾವೆಷ್ಟು ಸಂಕುಚಿತ, ಅನಾಗರಿಕ ವ್ಯವಸ್ಥೆಯಲ್ಲಿದ್ದೇವೆ ಎಂಬುದನ್ನು ಊಹಿಸಿ ನೋಡಿ. ಮನುಷ್ಯ ಮುಂದುವರಿಯುತ್ತಿದ್ದಾನೋ ಹಿಮ್ಮುಖವಾಗಿ ಚಲಿಸುತ್ತಿದ್ದಾನೋ ಅರ್ಥವಾಗುತ್ತಿಲ್ಲ.
ಇಂತಹ ಸಂಕೀರ್ಣ ಸನ್ನಿವೇಶವನ್ನು ಪಟ್ಟಭದ್ರ ಹಿತಾಸಕ್ತಿಗಳು ಉಪಯೋಗಿಸಿಕೊಂಡು ಜನರಲ್ಲಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಮೇಲೆ ಅಸಹನೆ ಉಂಟಾಗುವಂತೆ ಮಾಡಿ ಅವುಗಳ ಮೇಲೆ ನಿಯಂತ್ರಣ ಹೇರುವ ಸಾಧ್ಯತೆ ಇದೆ. ಆಗ ನಾವು ನಿಜವಾಗಲೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತೇವೆ. ಅದು ಈಗಿನ ಪರಿಸ್ಥಿತಿಗಿಂತ ಅತ್ಯಂತ ಅಪಾಯಕಾರಿ.
ಆದ್ದರಿಂದ ನಾವುಗಳು ಪ್ರಬುದ್ಧವಾಗಿ ಯೋಚಿಸಿ ನಮ್ಮ ಮೇಲೆ ಸ್ವಯಂ ನಿಯಂತ್ರಣ ಹೇರಿಕೊಳ್ಳಬೇಕು. ಬಾಯಿಗೆ ಬಂದಂತೆ ಮಾತನಾಡಬಾರದು. ಇದು ಹುಚ್ಚರ ಸಂತೆಯಲ್ಲ.ಕಳೆದು ಹೋದ ಸಮಯಕ್ಕೆ ಚಿಂತಿಸಿ ಫಲವಿಲ್ಲ. ಈಗ ಇರುವ ಪರಿಸ್ಥಿತಿಯಲ್ಲಿಯೇ ಸುಧಾರಿಸಿಕೊಳ್ಳಬೇಕು.
ಕೆಲವರು ತಮ್ಮ ಸ್ವಾರ್ಥ ಮತ್ತು ವ್ಯಾಪಾರದ ದೃಷ್ಟಿಯಿಂದ ಇಲ್ಲಸಲ್ಲದ ಆರೋಪಗಳನ್ನು, ದ್ವೇಷವನ್ನು, ಅಸೂಯೆಯನ್ನು ಬಹಿರಂಗವಾಗಿ ಪ್ರದರ್ಶಿಸುತ್ತಾ ಜನರನ್ನು ಪ್ರಚೋದಿಸುತ್ತಾರೆ, ಉದ್ರೇಕಿಸುತ್ತಾರೆ. ಆದರೆ ನಾವುಗಳು ಆ ಮುಖವಾಡದ ಕಪಟತೆಯನ್ನು ನಿರ್ಲಕ್ಷಿಸಬೇಕು…..
ಒಂದು ತನಿಖೆ ನೆಡೆಯುತ್ತಿರುವಾಗ ಅನಾವಶ್ಯಕವಾಗಿ ನಾವುಗಳು ಏಕೆ ಮನಸ್ತಾಪ ಮಾಡಿಕೊಳ್ಳಬೇಕು, ನಾವುಗಳು ಏಕೆ ಶತ್ರುಗಳಾಗಬೇಕು, ನಾವುಗಳು ಏಕೆ ಒಬ್ಬರಿಗೊಬ್ಬರು ನಿಂದಿಸಿಕೊಳ್ಳಬೇಕು.
ಸಮ ಚಿತ್ತದ ಸ್ಥಿತಪ್ರಜ್ಞತೆ ಕಾಪಾಡಿಕೊಳ್ಳುವ ಮೂಲಕ ಆರೋಗ್ಯಕರ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಾ, ಸಂಬಂಧಗಳನ್ನು ಸಹಜವಾಗಿಯೇ ಕಾಪಾಡಿಕೊಳ್ಳಬಹುದಲ್ಲವೇ….
ಇದು ಪ್ರಜಾಪ್ರಭುತ್ವ ಮತ್ತು ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯದ ದೇಶ ನಿಜ.
ಹಾಗಂತ ಹುಚ್ಚುಚ್ಚಾಗಿ ಅವಶ್ಯಕತೆ ಇಲ್ಲದಿದ್ದರೂ ಚರ್ಚೆಯ ನೆಪದಲ್ಲಿ ಕೆಟ್ಟದಾಗಿ ಪ್ರತಿಕ್ರಿಯಿಸುವುದು ಬೇಡ….
ನಾವೆಲ್ಲರೂ ಸ್ನೇಹಿತರು. ಯಾವುದೋ ಒಂದು ಸಿದ್ಧಾಂತ ಅಥವಾ ನಂಬಿಕೆ ಬಗ್ಗೆ ಒಲವಿರಬಹುದು. ಅದರ ಅರ್ಥ ನಾವು ಅದನ್ನು ದೊಡ್ಡ ಗಂಟಲಿನಲ್ಲಿ ಕೂಗಾಡಿ ಈಗಿರುವ ನಮ್ಮ ಪ್ರೀತಿ ವಿಶ್ವಾಸಕ್ಕೆ ಧಕ್ಕೆ ಮಾಡಿಕೊಳ್ಳುವುದು ಬೇಡ…..
ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿ. ತುಂಬಾ ಸಂತೋಷ. ಆದರೆ ಸಭ್ಯತೆಯ ಗೆರೆ ದಾಟದೆ, ನಾವೇ ಸರಿ ಎಂದು ಹಠ ಮಾಡದೆ, ದುರಹಂಕಾರ ಪ್ರದರ್ಶಿಸದೆ ನಮ್ಮ ಅಭಿಪ್ರಾಯ ಒಪ್ಪಲೇ ಬೇಕು ಎಂದು ಒತ್ತಡ ಹೇರದೆ
ನಗುನಗುತ್ತಾ ಪ್ರತಿಕ್ರಿಯಿಸಿ…..
ಸೋಷಿಯಲ್ ಮೀಡಿಯಾಗಳಲ್ಲಿ ಎಷ್ಟೋ ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ, ಕೌಟುಂಬಿಕ , ಹಳೆಯ ಸ್ನೇಹಿತರ, ತಮ್ಮ ಊರಿನವರ ಹೀಗೆ ನಾನಾ ಗುಂಪುಗಳಿವೆ. ಈ ಸಮಯದಲ್ಲಿ ಕೇವಲ ಯಾರೋ ಸ್ವಾರ್ಥಿಗಳ ರಾಜಕೀಯ ದಾಳಗಳಾಗುವುದು ಬೇಡ…..
ಆದ್ದರಿಂದ,
ದಯವಿಟ್ಟು ಗೆಳೆಯರೆ,
ಈ ಕಾರಣದಿಂದ ನಾವುಗಳು ಮನಸ್ತಾಪ ಮಾಡಿಕೊಳ್ಳುವುದು ಬೇಡ. ನಾವೆಲ್ಲರೂ ಸಾಮಾನ್ಯರು.
ದ್ವೇಷಕ್ಕಿಂತ ಪ್ರೀತಿ ವಿಶ್ವಾಸವೇ ಮುಖ್ಯ ನೆನಪಿರಲಿ……..
ಎಂದಿನಂತೆ ಗೆಳೆತನದ ಘನತೆಯನ್ನು ಕಾಪಾಡೋಣ……..…
ಧನ್ಯವಾದಗಳು……
ಶುಭೋದಯ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
