Spread the love

ದಿನಾಂಕ:04-08-2025(ಹಾಯ್ ಉಡುಪಿ ನ್ಯೂಸ್)

ಭಾರತ ಕ್ರಿಕೆಟ್​ನಲ್ಲಿ ಆಟಗಾರರು ವಯಸ್ಸಿನ ವಂಚನೆ ಆರೋಪದಲ್ಲಿ ಸಿಕ್ಕಿ ಬೀಳುತ್ತಿರುವ ಘಟನೆಗಳು ಆಗಾಗ್ಗೆ ನಡೆಯುತ್ತಿವೆ. ಇದನ್ನು ತಪ್ಪಿಸುವ ಸಲುವಾಗಿ ಬಿಸಿಸಿಐ ಕೂಡ ನಾನಾ ಪರೀಕ್ಷೆಗಳನ್ನು ಜಾರಿಗೆ ತಂದಿದೆ. ಇದೀಗ ಆಟಗಾರರ ನಿಜವಾದ ವಯಸ್ಸನ್ನು ಪತ್ತೆ ಹಚ್ಚುವ ಸಲುವಾಗಿ ಬಿಸಿಸಿಐ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಆಟಗಾರರ ವಯಸ್ಸು ಮತ್ತು ಇತರ ಮಾಹಿತಿಯನ್ನು ಪರಿಶೀಲಿಸಲು ಬಾಹ್ಯ ಸಂಸ್ಥೆಯನ್ನು ನೇಮಿಸಲು ಮುಂದಾಗಿದೆ. ಕ್ರಿಕ್‌ಬಜ್ ವರದಿಯ ಪ್ರಕಾರ, ಬಿಸಿಸಿಐ ಎರಡು ಹಂತದ ವಯಸ್ಸಿನ ಪರಿಶೀಲನಾ ವ್ಯವಸ್ಥೆಯ ಸಹಾಯದಿಂದ ಆಟಗಾರರ ಸರಿಯಾದ ವಯಸ್ಸನ್ನು ಗುರುತಿಸಲು ಮುಂದಾಗಿದೆ ಈ ವ್ಯವಸ್ಥೆಯು ಮೊದಲು ದಾಖಲೆಗಳು ಮತ್ತು ಜನನ ಪ್ರಮಾಣಪತ್ರಗಳ ಪರಿಶೀಲನೆಯನ್ನು ಒಳಗೊಂಡಿರುತ್ತದೆ. ಇದರ ನಂತರ, ಎರಡನೆಯದು ಮೂಳೆ ಪರೀಕ್ಷೆಯಾಗಿದ್ದು, ಇದನ್ನು ಸಾಮಾನ್ಯವಾಗಿ TW3 ಅಂದರೆ ಟ್ಯಾನರ್ ವೈಟ್‌ಹೌಸ್ 3 ಎಂದು ಕರೆಯಲಾಗುತ್ತದೆ. ಈ ಪರಿಶೀಲನೆಗಳನ್ನು ಹೆಚ್ಚಾಗಿ 16 ವರ್ಷದೊಳಗಿನ ಹುಡುಗರು ಮತ್ತು 15 ವರ್ಷದೊಳಗಿನ ಹುಡುಗಿಯರ ಮಟ್ಟದಲ್ಲಿ ಮಾಡಲಾಗುತ್ತದೆ. ಇದೀಗ ಬಿಸಿಸಿಐ ಆಟಗಾರರ ನಿಜವಾದ ವಯಸ್ಸನ್ನು ಪತ್ತೆ ಹಚ್ಚುವ ಕೆಲಸವನ್ನು ವೃತ್ತಿಪರ ಏಜೆನ್ಸಿಯಿಂದ ಮಾಡಿಸಲು ನಿರ್ಧರಿಸಿದೆ. ಇದಕ್ಕಾಗಿ, ಬಿಸಿಸಿಐ ಬಿಡ್ಡಿಂಗ್ ಕೂಡ ಕರೆದಿದ್ದು, ಅನೇಕ ಪ್ರಸಿದ್ಧ ಕಂಪನಿಗಳನ್ನು ಬಿಡ್ ಮಾಡಲು ಮುಂದಾಗಿವೆ ಎಂದು ವರದಿಯಾಗಿವೆ. ಸಿಕ್ಕಿರುವ ಮಾಹಿತಿ ಪ್ರಕಾರ ಆಗಸ್ಟ್ ಅಂತ್ಯದ ವೇಳೆಗೆ ಈ ಕೆಲಸಕ್ಕೆ ಏಜೆನ್ಸಿಯನ್ನು ನೇಮಿಸಲಾಗುವುದು. ಇದಲ್ಲದೆ ಬಿಸಿಸಿಐ, ಆಧಾರ್, ಪಾಸ್‌ಪೋರ್ಟ್, ಮತದಾರರ ಗುರುತಿನ ಚೀಟಿ ಮತ್ತು ಇತರ ಎಲ್ಲಾ ಪುರಾವೆಗಳನ್ನು ಸಹ ಎಚ್ಚರಿಕೆಯಿಂದ ಪರಿಶೀಲಿಸಲು ತೀರ್ಮಾನಿಸಿದೆ. ಈ ತನಿಖೆಗಳ ಪ್ರಕ್ರಿಯೆಯು ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ನಡೆಯಲಿದ್ದು, ಆಟಗಾರರು ಈಗ ಈ ಎಲ್ಲಾ ವಿಷಯಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಯಾವುದೇ ಆಟಗಾರ ಇದರಲ್ಲಿ ಸಿಕ್ಕಿಬಿದ್ದರೆ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಯುವ ಆಟಗಾರ ನಿತೀಶ್ ರಾಣಾ ಅವರ ಜನ್ಮ ದಿನಾಂಕದಲ್ಲಿ ವ್ಯತ್ಯಾಸವಿರುವುದು ಪತ್ತೆಯಾಗಿತ್ತು. ಹೀಗಾಗಿ 2015 ರಲ್ಲಿ, ವಯಸ್ಸಿನ ವಂಚನೆಯ ಆರೋಪದಡಿ ಬಿಸಿಸಿಐ ದೆಹಲಿಯ 22 ಆಟಗಾರರನ್ನು ನಿಷೇಧಿಸಿತ್ತು. ಇದರಲ್ಲಿ ನಿತೀಶ್ ಅವರ ಹೆಸರೂ ಸೇರಿತ್ತು. ಅಲ್ಲದೆ ನಿತೀಶ್ ಅವರನ್ನು ವಯೋಮಾನದ ಪಂದ್ಯಾವಳಿಗಳಲ್ಲಿ ಆಡದಂತೆ ನಿಷೇಧಿಸಲಾಯಿತು. ಇದರ ಹೊರತಾಗಿ, ರಾಜಸ್ಥಾನ ರಾಯಲ್ಸ್‌ನ ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಅವರ ವಯಸ್ಸಿನ ಬಗ್ಗೆ ನಿರಂತರ ಚರ್ಚೆ ನಡೆಯುತ್ತಿದೆ. ಆದಾಗ್ಯೂ, ಈ ಎಲ್ಲಾ ಆರೋಪಗಳು ಆದಾರ ರಹಿತವಾಗಿವೆ ಎಂಬುದು ಬಿಸಿಸಿಐ ಸ್ಪಷ್ಟನೆಯಾಗಿದೆ.

error: No Copying!