ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಗಲಿಕೆಯ ನಂತರ ಅವರ ಮೊದಲ ಹುಟ್ಟುಹಬ್ಬ ಇಂದು ಮಾರ್ಚ್ 17 ಅವರ ಕುಟುಂಬಸ್ಥರು, ಅಭಿಮಾನಿಗಳಿಗೆ ನೋವಿನ ನಡುವೆ ಜೇಮ್ಸ್ ಚಿತ್ರ ಬಿಡುಗಡೆಯ ಭಾಗ್ಯ ನೋಡುವ ಪರಿಸ್ಥಿತಿ.
ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಅಭಿಮಾನಿಗಳ ಕೂಗು, ಥಿಯೇಟರ್ ಗಳ ಮುಂದೆ ಜನಜಾತ್ರೆ, ಸಂಭ್ರಮ ಮುಗಿಲುಮುಟ್ಟಿದೆ. ತಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ಹಲವು ರೀತಿಯ ಸಮಾಜಮುಖಿ ಕೆಲಸಗಳಲ್ಲಿ ತೊಡಗಿದ್ದಾರೆ.
ಅಪ್ಪು ಸಮಾಧಿ ಕಂಠೀರವ ಸ್ಟುಡಿಯೊ, ಥಿಯೇಟರ್ ಗಳ ಮುಂದೆ ಉಪಾಹಾರ, ಚಹಾ-ಕಾಫಿ, ಸ್ನ್ಯಾಕ್ಸ್, ಮಧ್ಯಾಹ್ನದ ಊಟದ ವ್ಯವಸ್ಥೆ ಏರ್ಪಾಡಾಗಿದೆ. ಜೇಮ್ಸ್ ಸಿನಿಮಾಗಳನ್ನು ಥಿಯೇಟರ್ ಗಳಲ್ಲಿ ನೋಡಿ ಅಭಿಮಾನಿಗಳು ಭಾವುಕರಾಗುತ್ತಿದ್ದಾರೆ. ಬಹುತೇಕ ಎಲ್ಲಾ ಕಡೆ ಇಂದು ಜೇಮ್ಸ್ ಚಿತ್ರದ ಟಿಕೆಟ್ ಸೋಲ್ಡ್ ಔಟ್ ಆಗಿದೆ.
ಅಪ್ಪು ಸಮಾಧಿಗೆ ಬೆಳ್ಳಂಬೆಳಗ್ಗೆ ಅಶ್ವಿನಿ ಭೇಟಿ: ತಮ್ಮ ಪತಿಯ ಅಗಲುವಿಕೆಯ ನೋವಲ್ಲಿ ಬೆಳಗ್ಗೆಯೇ ಪುನೀತ್ ಅವರ ಪತ್ನಿ ಅಶ್ವಿನಿ ಕಂಠೀರವ ಸ್ಟುಡಿಯೊದಲ್ಲಿ ಪತಿಯ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದರು. ಬಳಿಕ ತಮ್ಮ ಮಾವ-ಅತ್ತೆ ರಾಜ್ ಕುಮಾರ್ ಮತ್ತು ಪಾರ್ವತಮ್ಮನವರ ಸಮಾಧಿಗೆ ಸಹ ಭೇಟಿ ನೀಡಿ ನಮಸ್ಕರಿಸಿದರು.
ಪತಿಯ ಅಗಲುವಿಕೆ ನಡುವೆ ಅವರ ಹುಟ್ಟುಹಬ್ಬದ ದಿನವನ್ನು, ಜೇಮ್ಸ್ ಚಿತ್ರ ಬಿಡುಗಡೆಯ ಸಂಭ್ರಮವನ್ನು ನೋಡುವ ಸ್ಥಿತಿ ಅಶ್ವಿನಿಯವರದ್ದಾಗಿದೆ.
ಇಂದು ಬೆಳಗ್ಗೆ ಸಮಾಧಿಗೆ ಭೇಟಿ ನೀಡಿದ ಖ್ಯಾತ ನಟ ಸುಮನ್ ಅಪ್ಪು ಫೋಟೋ ಕಂಡು ಭಾವುಕರಾದರು.
ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳು, ವಿವಿಧ ರಾಜಕೀಯ ನಾಯಕರು, ಸಚಿವರುಗಳು, ಚಿತ್ರರಂಗದ ಕಲಾವಿದರು, ಸೆಲೆಬ್ರಿಟಿಗಳು ಇಂದು ಅಪ್ಪು ಅವರ ಸಿನಿಮಾ, ಸಾಮಾಜಿಕ ಕಾರ್ಯಗಳನ್ನು ನೆನೆಸಿಕೊಂಡಿದ್ದಾರೆ.