Spread the love

ದಿನಾಂಕ:27-06-2025(ಹಾಯ್ ಉಡುಪಿ ನ್ಯೂಸ್)

ನವದೆಹಲಿ: ಸಂವಿಧಾನದ ಪೀಠಿಕೆಯಿಂದ “ಸಮಾಜವಾದಿ” ಮತ್ತು “ಜಾತ್ಯತೀತ” ಪದಗಳನ್ನು ತೆಗೆಯಬೇಕು ಎಂದು ಆರ್‌ಎಸ್‌ಎಸ್‌ನ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಒತ್ತಾಯಿಸಿದ ನಂತರ, ಆರ್‌ಎಸ್‌ಎಸ್‌ನ ಮುಖವಾಡ ಮತ್ತೆ ಕಳಚಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ.

ಆರ್‌ಎಸ್‌ಎಸ್‌ನ ಮುಖವಾಡ ಮತ್ತೆ ಕಳಚಿದೆ. ಸಂವಿಧಾನವು ಸಮಾನತೆ, ಜಾತ್ಯತೀತತೆ ಮತ್ತು ನ್ಯಾಯದ ಬಗ್ಗೆ ಮಾತನಾಡುವುದರಿಂದ ಅದು ಅವರನ್ನು ಕೆರಳಿಸುತ್ತಿದೆ ಎಂದು ರಾಹುಲ್ ಗಾಂಧಿ ಎಕ್ಸ್ ನಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿದ್ದಾರೆ.

ಆರ್‌ಎಸ್‌ಎಸ್, ಬಿಜೆಪಿಗೆ ಸಂವಿಧಾನ ಬೇಕಾಗಿಲ್ಲ, ಅವರಿಗೆ ‘ಮನುಸ್ಮೃತಿ’ ಬೇಕು. ಅವರು ಅಂಚಿನಲ್ಲಿರುವ ಮತ್ತು ಬಡವರ ಹಕ್ಕುಗಳನ್ನು ಕಸಿದುಕೊಂಡು ಮತ್ತೆ ಅವರನ್ನು ಗುಲಾಮರನ್ನಾಗಿ ಮಾಡುವ ಗುರಿ ಹೊಂದಿದ್ದಾರೆ. ಅವರಿಂದ ಸಂವಿಧಾನದಂತಹ ಪ್ರಬಲ ಅಸ್ತ್ರವನ್ನು ಕಸಿದುಕೊಳ್ಳುವುದು ಅವರ ನಿಜವಾದ ಕಾರ್ಯಸೂಚಿಯಾಗಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಆರೋಪಿಸಿದ್ದಾರೆ.

ಆರ್‌ಎಸ್‌ಎಸ್ ಈ ಕನಸು ಕಾಣುವುದನ್ನು ನಿಲ್ಲಿಸಬೇಕು  ನಾವು ಅದನ್ನು ಎಂದಿಗೂ ಯಶಸ್ವಿಯಾಗಲು ಬಿಡುವುದಿಲ್ಲ. ಪ್ರತಿಯೊಬ್ಬ ದೇಶಭಕ್ತ ಭಾರತೀಯರು ತಮ್ಮ ಕೊನೆಯ ಉಸಿರು ಇರುವವರೆಗೂ ಸಂವಿಧಾನವನ್ನು ರಕ್ಷಿಸುತ್ತಾರೆ ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ.

ತುರ್ತು ಪರಿಸ್ಥಿತಿಯ ಕುರಿತು ಗುರುವಾರ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹೊಸಬಾಳೆ, ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನದ ಪೀಠಿಕೆಯಲ್ಲಿ “ಸಮಾಜವಾದಿ” ಮತ್ತು “ಜಾತ್ಯತೀತ” ಪದಗಳು ಇರಲಿಲ್ಲ. ತುರ್ತು ಪರಿಸ್ಥಿತಿಯ ಸಮಯದಲ್ಲಿ ಈ ಪದಗಳನ್ನು ಸೇರಿಸಲಾಯಿತು. ಹೀಗಾಗಿ ಈ ಎರಡು ಪದಗಳನ್ನು ತೆಗೆದುಹಾಕಬೇಕು  ಎಂದು ಹೇಳಿದ್ದರು.

error: No Copying!