
ದಿನಾಂಕ:27-06-2025(ಹಾಯ್ ಉಡುಪಿ ನ್ಯೂಸ್)
ವಿಜಯಪುರ: ಕೆನರಾ ಬ್ಯಾಂಕಿನ ಮನಗೂಳಿ ಶಾಖೆಯಲ್ಲಿ 53.26 ಕೋಟಿ ರೂ. ಮೌಲ್ಯದ ಚಿನ್ನ ಮತ್ತು ನಗದು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಬ್ಯಾಂಕ್ ಮ್ಯಾನೇಜರ್ ವಿಜಯಕುಮಾರ್ ಮಿರಿಯಾಲ(41) ಮತ್ತು ಅವರ ಸಹಚರರಾದ ಚಂದ್ರಶೇಖರ್ ನೇರೆಲ್ಲಾ(38) ಹಾಗೂ ಸುನಿಲ್ ನರಸಿಂಹಲು ಮೋಕಾ(40) ಎಂದು ಗುರುತಿಸಲಾಗಿದೆ.
ಕಳೆದ ಮೇ 25 ರಂದು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನಲ್ಲಿರುವ ಕೆನರಾ ಬ್ಯಾಂಕಿನ ಮನಗೂಳಿ ಶಾಖೆಯಲ್ಲಿ ದರೋಡೆ ನಡೆದಿದ್ದು, ಇಲ್ಲಿ ಮಿರಿಯಾಲ ಈ ಹಿಂದೆ ಶಾಖಾ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದರು.
ಬ್ಯಾಂಕ್ ಲಾಕರ್‌ನಿಂದ 53.26 ಕೋಟಿ ರೂ. ಮೌಲ್ಯದ 58.97 ಕೆಜಿ ಚಿನ್ನಾಭರಣ ಮತ್ತು 5.2 ಲಕ್ಷ ರೂ. ನಗದು ಕಳವು ಮಾಡಲಾಗಿದೆ ಎಂದು ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಅವರು ತಿಳಿಸಿದ್ದಾರೆ.
“ಈ ಪ್ರಕರಣದಲ್ಲಿ, ಪ್ರಸ್ತುತ ಕೆನರಾ ಬ್ಯಾಂಕ್ ನ ಹುಬ್ಬಳ್ಳಿ ಶಾಖೆಯ ಹಿರಿಯ ವ್ಯವಸ್ಥಾಪಕರಾಗಿರುವ ವಿಜಯಕುಮಾರ್ ಮಿರಿಯಾಲ ಮತ್ತು ಅವರ ಸಹಚರರಾದ ಚಂದ್ರಶೇಖರ ನರಸಿಂಹಲು ಅವರನ್ನು ಬಂಧಿಸಲಾಗಿದೆ” ಎಂದು ನಿಂಬರ್ಗಿ ಹೇಳಿದ್ದಾರೆ.
ಪೊಲೀಸರ ಪ್ರಕಾರ, ಆರೋಪಿಗಳು ಬ್ಯಾಂಕ್ ದರೋಡೆಗೆ ವ್ಯವಸ್ಥಿತವಾಗಿ ಸಂಚು ರೂಪಿಸಿದ್ದರು. ಈ ವರ್ಷದ ಫೆಬ್ರವರಿಯಲ್ಲಿ ಅವರು ದರೋಡೆಗೆ ಸಂಚು ರೂಪಾಸಿದ್ದರು. ಆದರೆ ಅನುಮಾನ ಬರಬಾರದು ಎಂಬ ಕಾರಣಕ್ಕೆ ಮಿರಿಯಾಲ ಅವರನ್ನು ಮನಗುಳಿ ಶಾಖೆಯಿಂದ ವರ್ಗಾವಣೆ ಮಾಡುವವರೆಗೆ ಕಾಯುತ್ತಿದ್ದರು.
ಮೇ 9 ರಂದು ವಿಜಯಪುರ ಜಿಲ್ಲೆಯ ರೋನಿಹಾಲ್ ಶಾಖೆಗೆ ಮಿರಿಯಾಲ ವರ್ಗಾವಣೆಯಾದ ನಂತರ, ಬ್ಯಾಂಕಿನ ಸೇಫ್ ಡಿಪಾಸಿಟ್ ಲಾಕರ್‌ಗಳ ಕೀಲಿಗಳನ್ನು ತನ್ನ ಸಹಚರರಿಗೆ ಹಸ್ತಾಂತರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನಕಲಿ ಕೀಲಿಗಳನ್ನು ಬಳಸಿ, ಮೂವರು ದರೋಡೆ ನಡೆಸಿದ್ದಾರೆ ಮತ್ತು ಹೊರಗಿನವರು ಭಾಗಿಯಾಗಿದ್ದಾರೆ ಎಂದು ತನಿಖಾಧಿಕಾರಿಗಳು ನಂಬುವಂತೆ ಮಾಡಲು ಬ್ಯಾಂಕಿನ ಬಳಿ “ಮಾಟಮಂತ್ರದ ಸಾಮಗ್ರಿಗಳನ್ನು” ಇರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪರಾಧಕ್ಕೆ ಬಳಸಲಾದ ಎರಡು ಕಾರುಗಳನ್ನು ಮತ್ತು ವಾಹನಗಳಲ್ಲಿ ಸಾಗಿಸಲಾಗುತ್ತಿದ್ದ 10.5 ಕೆಜಿ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.