
ಗಗನಯಾನಿ ಭಾರತದ ಶುಭಾಂಶು ಶುಕ್ಲ ಅವರ ಅದ್ಭುತ ಸಾಧನೆಯ ಸಮಯದಲ್ಲಿಯೇ ಅವರ ಜೊತೆ ನೆನಪಾಗುತ್ತಿರುವ ಮತ್ತೊಂದು ಹೆಸರು ಚಾಮರಾಜನಗರದ ಅಡುಗೆ ಕೆಲಸ ಮಾಡುವ ಪರಿಶಿಷ್ಟ ಜಾತಿಯ ನಂಜಮ್ಮ……..
ಭಾರತದ ವ್ಯಕ್ತಿಯೊಬ್ಬರು ಅಂತರಿಕ್ಷದಲ್ಲಿ ವೈಜ್ಞಾನಿಕ ಸಂಶೋಧನೆಗೆ ಹೊರಟು ಬಾಹ್ಯಾಕಾಶ ಕೇಂದ್ರ ಪ್ರವೇಶಿಸಿರುವಾಗ, ಇಡೀ ದೇಶ ಆ ಅದ್ಬುತ ಸಾಧನೆಯನ್ನು ನೋಡಿ ಹೆಮ್ಮೆಪಡುತ್ತಿರುವಾಗ, ಕರ್ನಾಟಕದ ಚಾಮರಾಜನಗರದ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟದ ನಂಜಮ್ಮ ಭಾರತೀಯ ಸಾಮಾಜಿಕ ವ್ಯವಸ್ಥೆಯ ಪಾತಾಳದೊಳಗೆ ಇಳಿಯುತ್ತಿರುವ ದೃಶ್ಯ ಕಣ್ಣ ಮುಂದೆ ಬರುತ್ತಿದೆ…..
ಎಲ್ಲಿದೆ ಜಾತಿ, ಎಲ್ಲಿದೆ ಜಾತಿ, ಈಗ ಜಾತಿಯೇ ಇಲ್ಲ, ಹೋಟೆಲ್ ಗಳಲ್ಲಿ ಇಲ್ಲ, ಸಿನಿಮಾ ಮಂದಿರಗಳಲ್ಲಿಲ್ಲ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇಲ್ಲ, ಪ್ರಯಾಣದಲ್ಲಿ ಇಲ್ಲ, ಶಾಲಾ-ಕಾಲೇಜುಗಳಲ್ಲಿ ಇಲ್ಲ, ಎಲ್ಲಿಯೂ ಇಲ್ಲ ಎನ್ನುವವರು, ಭಾರತೀಯರ ಬಹುತೇಕರ ಮನಸ್ಸಿನಲ್ಲಿ ಇದೆ ಎಂಬುದನ್ನು ಮರೆಯುತ್ತಾರೆ. ಅದು ಕೇವಲ ಮನಸ್ಸಿನಲ್ಲಿ ಮಾತ್ರವಲ್ಲ ಪ್ರತಿಯೊಬ್ಬರ ಆಚರಣೆಯಲ್ಲೂ ಇದೆ ಎಂಬುದನ್ನು ಖಂಡಿತ ಸಾಕ್ಷಿ ಸಮೇತ ದೃಢಪಡಿಸಬಹುದು.
ಕೇವಲ ಚಾಮರಾಜನಗರ ಮಾತ್ರವಲ್ಲ ಈಗಲೂ ಯಾವುದೇ ಹೋಟೆಲುಗಳ ಮುಂದೆ ನಮ್ಮಲ್ಲಿ ಪರಿಶಿಷ್ಟ ಜಾತಿಯವರು ಅಡುಗೆ ಕೆಲಸ ಮಾಡುತ್ತಾರೆ ಎಂದು ಫಲಕ ಹಾಕಿದರೆ, ಯಾವುದೇ ಮದುವೆ ಮನೆಯಲ್ಲಿ ನಮ್ಮಲ್ಲಿ ಪರಿಶಿಷ್ಟ ಜಾತಿಯ ಬಾಣಸಿಗರು ಶುಚಿಯಾದ, ರುಚಿಯಾದ ಅಡುಗೆ ಮಾಡುತ್ತಾರೆ ಎಂದು ಫಲಕ ಹಾಕಿದರೆ, ಆ ಕಾರ್ಯಕ್ರಮದಲ್ಲಿ ಅಥವಾ ಹೋಟೆಲಿನಲ್ಲಿ ಊಟ ಮಾಡುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತದೆ. ಇದಕ್ಕಿಂತ ಜಾತಿ ವ್ಯವಸ್ಥೆಗೆ ಸಾಕ್ಷಿಗಳು ಬೇಕೆ.
ಯುದ್ಧವಾದಾಗ ನಾವೆಲ್ಲ ಒಂದು ಎನ್ನುವ ಭಾರತೀಯತೆ, ಈಗಿನ ಶಾಂತಿಯ ಸಮಯದಲ್ಲಿ ಯಾಕಿಲ್ಲ, ಚಾಮರಾಜನಗರದ ನಂಜಮ್ಮನ ಅಡುಗೆ ಊಟ ಮಾಡದ ಮಕ್ಕಳು, ಅದಕ್ಕೆ ಅವಕಾಶ ಕೊಡದ ಪೋಷಕರು ನಂಜಮ್ಮನಿಂದ ಯಾವ ರೀತಿಯ ದೇಶನಿಷ್ಠೆ, ಧರ್ಮ ನಿಷ್ಠೆ ನಿರೀಕ್ಷಿಸುತ್ತಾರೆ. ಆ ದೃಶ್ಯಗಳನ್ನು ಕಣ್ಣಾರೆ ಕಾಣುವ ನಮ್ಮಂತಹವರಿಂದ ಸಹ ಯಾವ ನಿಷ್ಠೆ ಬಯಸುತ್ತಾರೆ.
ಕೆಲವರಿಗೆ ಜಾತಿ ಎಂಬುದು ಸಮಸ್ಯೆ ಅಲ್ಲದೇ ಇರಬಹುದು
ಕೆಲವರಿಗೆ ಅಸ್ಪೃಶ್ಯತೆ ಒಂದು ವಿಷಯವೇ ಅಲ್ಲದಿರಬಹುದು. ಆದರೆ ಅನುಭವಿಸುವ ಕೋಟ್ಯಂತರ ಜನರಿಗೆ ಅದರ ನೋವು ಸಾಯುವವರೆಗೂ ಕಾಡುತ್ತಿರುತ್ತದೆ ಎಂಬುದನ್ನು ಸೂಕ್ಷ್ಮ ಮನಸ್ಸುಗಳು ಅರ್ಥಮಾಡಿಕೊಳ್ಳಬೇಕು.
ಕೋಲಾರದ ಅರಿವು ಶಿವಪ್ಪ ಅವರು ಸುಮಾರು 10 ವರ್ಷಗಳಿಂದ ನಿರಂತರವಾಗಿ ಅಸ್ಪೃಶ್ಯತೆ ಮುಕ್ತ ಮನ, ಅಸ್ಪೃಶ್ಯತೆ ಮುಕ್ತ ಮನೆ, ಅಸ್ಪೃಶ್ಯತೆ ಮುಕ್ತ ಊರು ಮಾಡಬೇಕೆಂದು ನಿರಂತರವಾಗಿ ಸಮತೆಯ ಟೀ, ಸಹ ಭೋಜನ, ಗೃಹಪ್ರವೇಶ ಮುಂತಾದ ಕಾರ್ಯಕ್ರಮಗಳೊಂದಿಗೆ ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ. ಅವರೊಂದಿಗೆ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ನಾವು ಕೂಡ ಗ್ರಾಮೀಣ ಭಾಗದ ಜಾತಿ ವ್ಯವಸ್ಥೆಯ ಆಳ ಅಗಲಗಳನ್ನು ಕಣ್ಣಾರೆ ಕಂಡಿದ್ದೇವೆ.
ಗಗನಯಾನಿ ಶುಭಾಂಶು ಶುಕ್ಲಾ ಅವರ ಅದ್ಭುತ ಸಾಧನೆ ಬಹಳಷ್ಟು ಪ್ರಚಾರ ಪಡೆಯಲಿ, ಅದು ಒಂದು ಯುವ ಪೀಳಿಗೆಗೆ ಸ್ಪೂರ್ತಿಯಾಗಲಿ., ಹಾಗೆಯೇ ಅದರ ಜೊತೆಜೊತೆಯಾಗಿಯೇ ಈ ಭಾರತೀಯ ಸಮಾಜದ ಜಾತಿ ವ್ಯವಸ್ಥೆ ಎಂಬ ಅಸಹ್ಯಕರ ವಿದ್ಯಮಾನದ ಬಗ್ಗೆಯೂ ಅಷ್ಟೇ ಪ್ರಚಾರ ಸಿಗಬೇಕು. ಜಾತಿವಾದಿ ಹೃದಯಗಳಿಗೆ ಇದು ತಟ್ಟಬೇಕು, ಅವರಲ್ಲಿ ಕನಿಷ್ಠ ಮಾನವ ಪ್ರಜ್ಞೆ ಬೆಳೆಯಬೇಕು. ಆ ನಿಟ್ಟಿನಲ್ಲಿ ಸಹ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಪ್ರಜ್ಞಾಪೂರ್ವಕವಾಗಿ ಕೆಲಸ ಮಾಡಬೇಕು.
” ನೊಂದವರ ನೋವು , ನೋಯದವರೆತ್ತ ಬಲ್ಲರೋ ” ಹಾಗೆಯೇ ಜಾತಿಯಿಂದ, ಜಾತಿಯ ಕಾರಣಕ್ಕೆ ನೊಂದವರು, ಅವಕಾಶ ವಂಚಿತರು, ಶೋಷಿತರು, ಅವಮಾನಿತರು ಇರುವವರೆಗೂ ಭಾರತೀಯತೆ ಎಂಬುದು ಕೇವಲ ಒಂದು ಘೋಷಣೆ ಯಾಗುತ್ತದೆ. ಇಡೀ ದೇಶದ ಐಕ್ಯತೆ ಕೇವಲ ಬಾಯಿ ಮಾತಿನ ಭ್ರಮೆಯಾಗುತ್ತದೆ.
ನಾವು ಎಲ್ಲ ಸಂದರ್ಭಗಳಲ್ಲೂ ಮನುಷ್ಯರೆಲ್ಲಾ ಒಂದೇ, ಭಾರತೀಯರೆಲ್ಲಾ ಒಂದೇ ಎನ್ನುವ ನೈಜ ನಡವಳಿಕೆ ನಮ್ಮೊಳಗೆ ಉಂಟಾಗದಿದ್ದರೆ ದೇಶದ ಸಮಗ್ರ ಅಭಿವೃದ್ಧಿ ಎಂದೆಂದಿಗೂ ಸಾಧ್ಯವಿಲ್ಲ.
ನಾವು ಕೇವಲ ಮೇಲ್ಮುಖವಾಗಿ ನೋಡುತ್ತಾ ಚಲಿಸುತ್ತಿದ್ದರೆ ಎಡವಿ ಬೀಳುವುದು ಖಂಡಿತ. ಆದ್ದರಿಂದ ಸಾಧನೆಗಳು ತುಂಬಾ ಅವಶ್ಯಕ ಹಾಗೆಯೇ ಈ ರೀತಿಯ ಅಸಹ್ಯಕರ ನಡವಳಿಕೆಗಳನ್ನು ಅಷ್ಟೇ ತೀವ್ರವಾಗಿ ಖಂಡಿಸಿ ಜಾಗೃತಿ ಮೂಡಿಸುತ್ತಲೇ ಇರಬೇಕು.
ಪರಿಶಿಷ್ಟ ಜಾತಿಯ ಹೆಣ್ಣೊಬ್ಬರು ಮಾಡುವ ಅಡುಗೆಯನ್ನು ತನ್ನ ಸಹಪಾಠಿಗಳೇ, ಸಹಜೀವಿಗಳೇ ಜಾತಿಯ ಕಾರಣಕ್ಕೆ ತಿರಸ್ಕರಿಸಿದರೆ ಈ ಸಮಾಜದ ಇನ್ನೂ ಅನಾಗರಿಕವಾಗಿಯೇ ಇದೆ. ಎಷ್ಟೇ ಆಧುನಿಕತೆ, ತಂತ್ರಜ್ಞಾನ ಬೆಳೆದರೂ ಜಾತಿಯೆಂಬ ಪೆಡಂಭೂತ ಈ ದೇಶದಿಂದ ತೊಲಗುವವರೆಗೂ ಈ ದೇಶಕ್ಕೆ ವಿಶ್ವಗುರುವಿನ ಪಟ್ಟ ಸಿಗಲು ಸಾಧ್ಯವೇ ಇಲ್ಲ. ಮನುಷ್ಯರೆಲ್ಲರೂ ಒಂದೇ, ಭಾರತೀಯರು ಒಂದೇ ಎನ್ನುವ ಸಮ ಸಮಾಜ ನಿರ್ಮಾಣವಾಗುವ ಬಹಳ ದೂರ ಚಲಿಸಬೇಕಿದೆ. ಆ ನಿಟ್ಟಿನಲ್ಲಿ ನಮ್ಮೆಲ್ಲರ ಪ್ರಯತ್ನಗಳು ಸಾಗಲಿ ಎಂದು ಆಶಿಸುತ್ತಾ……..
ಅಡುಗೆ ನಂಜಮ್ಮನ್ನೊಂದಿಗೆ ನಾವು.
ಆಕೆ ನಮ್ಮ ಸಹೋದರಿ. ಎಲ್ಲಾ ನೊಂದವರೊಂದಿಗೆ ಸದಾ ನಾವು……
ಶುಭಾಂಶು ಶುಕ್ಲಾ ಅವರಿಗೆ ಅಭಿನಂದನೆಗಳು…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451..Watsapp)
9844013068……
