
ದಿನಾಂಕ:22-05-2025(ಹಾಯ್ ಉಡುಪಿ ನ್ಯೂಸ್)
ನವದೆಹಲಿ: ತಮ್ಮ “ಅಧಿಕೃತ ಸ್ಥಾನಮಾನಕ್ಕೆ ಹೊಂದಿಕೆಯಾಗದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ” ಎಂಬ ಆರೋಪದ ಮೇಲೆ ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ನಲ್ಲಿ ಕೆಲಸ ಮಾಡುತ್ತಿದ್ದ ಮತ್ತೊಬ್ಬ ಪಾಕಿಸ್ತಾನಿ ರಾಜತಾಂತ್ರಿಕ ಅಧಿಕಾರಿಯನ್ನು ಭಾರತ ಬುಧವಾರ ಉಚ್ಛಾಟನೆ ಮಾಡಿದ್ದು, 24 ಗಂಟೆಯೊಳಗೆ ದೇಶ ತೊರೆಯುವಂತೆ ಆದೇಶ ಹೊರಡಿಸಿದೆ.
ವಿದೇಶಾಂಗ ಸಚಿವಾಲಯದ(MEA) ಪ್ರಕಾರ, ಪಾಕಿಸ್ತಾನ ಅಧಿಕಾರಿಗೆ ದೇಶ ಬಿಡಲು 24 ಗಂಟೆಗಳ ಕಾಲಾವಕಾಶ ನೀಡಲಾಗಿದೆ.
“ನವದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ನಲ್ಲಿ ಕೆಲಸ ಮಾಡುತ್ತಿರುವ ಪಾಕಿಸ್ತಾನಿ ಅಧಿಕಾರಿಯೊಬ್ಬರು ಭಾರತದಲ್ಲಿ ತಮ್ಮ ಅಧಿಕೃತ ಸ್ಥಾನಮಾನಕ್ಕೆ ಹೊಂದಿಕೆಯಾಗದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಭಾರತ ಸರ್ಕಾರವು ಅವರನ್ನು ಪರ್ಸನಾ ನಾನ್ ಗ್ರಾಟಾ ಎಂದು ಘೋಷಿಸಿದೆ. ಆ ಅಧಿಕಾರಿಗೆ 24 ಗಂಟೆಗಳ ಒಳಗೆ ಭಾರತ ತೊರೆಯುವಂತೆ ಸೂಚಿಸಲಾಗಿದೆ” ಎಂದು ವಿದೇಶಾಂಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಕುರಿತು ಇಂದು ಪಾಕಿಸ್ತಾನ ಹೈಕಮಿಷನ್‌ನ ಚಾರ್ಜ್ ಡಿ’ಅಫೇರ್ಸ್‌ಗೆ ಆದೇಶ ಹೊರಡಿಸಲಾಗಿದೆ.
ಭಾರತದಲ್ಲಿರುವ ಯಾವುದೇ ಪಾಕಿಸ್ತಾನಿ ರಾಜತಾಂತ್ರಿಕರು ಅಥವಾ ಅಧಿಕಾರಿಗಳು ತಮ್ಮ ಸವಲತ್ತುಗಳು ಮತ್ತು ಸ್ಥಾನಮಾನವನ್ನು ಯಾವುದೇ ರೀತಿಯಲ್ಲಿ ದುರುಪಯೋಗಪಡಿಸಿಕೊಳ್ಳದಂತೆ ಎಚ್ಚರ ವಹಿಸಲು ಅವರಿಗೆ ಸೂಚಿಸಲಾಗಿದೆ.
ಕಳೆದ ಒಂದು ವಾರದಲ್ಲಿ ಎರಡನೇ ಪಾಕಿಸ್ತಾನಿ ಅಧಿಕಾರಿಯನ್ನು ಹೊರಹಾಕಲಾಗುತ್ತಿದೆ. ಈ ಹಿಂದೆ ಮೇ 13 ರಂದು, ಇದೇ ರೀತಿಯ ಬೇಹುಗಾರಿಕೆ ಆರೋಪದ ಮೇಲೆ ಭಾರತ, ಪಾಕಿಸ್ತಾನಿ ರಾಜತಾಂತ್ರಿಕ ಅಧಿಕಾರಿಯೊಬ್ಬರನ್ನು ಹೊರಹಾಕಿತ್ತು.