
ಬರವಣಿಗೆಯಿಂದ ಸಾಧನೆ
ಶ್ರೀಮತಿ ಬಾನು ಮುಷ್ತಾಕ್….
ಬದುಕು ಸಾರ್ಥಕತೆಯ ಕಡೆಗೆ ಸಾಗುವುದು ಸಾಮಾನ್ಯವಾಗಿ ಈ ನಾಗರಿಕ ಸಮಾಜದಲ್ಲಿ ಒಂದು ದೊಡ್ಡ ಅಧಿಕಾರ, ಒಂದು ದೊಡ್ಡ ಪ್ರಶಸ್ತಿ, ಒಂದು ದೊಡ್ಡ ಜನಪ್ರಿಯತೆ, ಒಂದು ದೊಡ್ಡ ಶ್ರೀಮಂತಿಕೆ, ಒಂದು ದೊಡ್ಡ ಸಾಧನೆ ಮಾಡಿದಾಗ ಎಂಬುದು ವಾಸ್ತವಿಕ ನೆಲೆಯಲ್ಲಿ ನಿಜ. ಪ್ರಖ್ಯಾತ ಸಿನಿಮಾ ನಟ ನಟಿಯರಾಗುವುದು, ಪ್ರಖ್ಯಾತ ರಾಜಕಾರಣಿಯಾಗುವುದು, ಪ್ರಖ್ಯಾತ ಕ್ರೀಡಾಪಟುವಾಗುವುದು, ಪ್ರಖ್ಯಾತ ಉದ್ಯಮಿಯಾಗುವುದು, ಪ್ರಖ್ಯಾತ ವಿಜ್ಞಾನಿಯಾಗುವುದು,
ಪ್ರಖ್ಯಾತ ಪೋಲೀಸ್ ಆಗುವುದು,
ಪ್ರಖ್ಯಾತ ವಕೀಲರಾಗುವುದು, ಪ್ರಖ್ಯಾತ ಡಾಕ್ಟರ್ ಆಗುವುದು, ಪ್ರಖ್ಯಾತ ಸಾಹಿತಿಯಾಗುವುದು, ಪ್ರಖ್ಯಾತ ಸಮಾಜ ಸೇವಕರಾಗುವುದು, ಪ್ರಖ್ಯಾತ ಮಾಫಿಯಾ ಡಾನ್ ಆಗುವುದು ಹೀಗೆ ನಾನಾ ಕ್ಷೇತ್ರದ ಪ್ರಖ್ಯಾತಿ ಪಡೆಯುವುದು, ಅದಕ್ಕೆ ಕಿರೀಟವಿಟ್ಟಂತೆ ರಾಷ್ಟ್ರೀಯ, ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆಯುವುದು.
ನೊಬೆಲ್ ಪ್ರಶಸ್ತಿ, ಭಾರತ ರತ್ನ ಪ್ರಶಸ್ತಿ, ಆಸ್ಕರ್ ಪ್ರಶಸ್ತಿ, ಭೂಕರ್ ಪ್ರಶಸ್ತಿ, ಮ್ಯಾಗ್ಸೆಸೆ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ, ಪದ್ಮ ಪ್ರಶಸ್ತಿಗಳು, ಒಲಂಪಿಕ್ ಪ್ರಶಸ್ತಿ ಹೀಗೆ ದೊಡ್ಡ ಪ್ರಶಸ್ತಿಗಳನ್ನು ಪಡೆದಾಗ ಅದು ಮತ್ತಷ್ಟು ಸಾರ್ಥಕತೆಯ ಕ್ಷಣಗಳನ್ನು ಉಂಟುಮಾಡುತ್ತದೆ.
ನಿಜಕ್ಕೂ ಸಾಮಾನ್ಯ ಜನ ಈ ರೀತಿಯ ಕನಸುಗಳನ್ನು ಸಹಜವಾಗಿ ಕಾಣುತ್ತಲೇ ಇರುತ್ತಾರೆ. ಅದು ಕೆಲವರಿಗೆ ಮಾತ್ರ ಸಾಧ್ಯವಾಗುತ್ತದೆ. ಉಳಿದವರು ಆ ಕನಸಿನಲ್ಲೋ, ಆ ಪ್ರಯತ್ನದಲ್ಲೋ, ಆ ನಿರಾಸೆಯಲ್ಲೋ ಜೀವನ ಕಳೆಯುತ್ತಿರುತ್ತಾರೆ.
ನಿನ್ನೆ ರಾತ್ರಿ ಇಂಗ್ಲೆಂಡಿನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕನ್ನಡದ ಖ್ಯಾತ ಸಾಹಿತಿ ಶ್ರೀಮತಿ ಬಾನು ಮುಷ್ತಾಕ್ ಅವರಿಗೆ ಬೂಕರ್ ಪ್ರಶಸ್ತಿ ಘೋಷಣೆಯಾದ ಸಂದರ್ಭ ನಿಜಕ್ಕೂ ಭಾರತಕ್ಕೂ, ಕನ್ನಡಿಗರಿಗೂ ಒಂದು ಹೆಮ್ಮೆಯ ವಿಷಯ. ಅವರಿಗೆ ಶುಭಾಶಯಗಳನ್ನು ಹೇಳುತ್ತಾ……
ತಾಯಿ ಕರುಳ ಬಳ್ಳಿಯಿಂದ ಹೊರಬರುವ ಮಗು ಆ ತಾಯಿ, ಆ ಕುಟುಂಬ, ಆ ಪ್ರದೇಶ, ಆ ಭಾಷೆ, ಆ ಜಾತಿ, ಆ ಧರ್ಮ, ಆ ಸಂಸ್ಕೃತಿ, ಆ ಸಮುದಾಯ, ಆ ವರ್ಗ, ಆ ಮನೆಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ವಾತಾವರಣ, ಆ ಪ್ರದೇಶ, ರಾಜ್ಯ, ಆ ದೇಶದ ರಾಜಕೀಯ ಪರಿಸ್ಥಿತಿ ಈ ಎಲ್ಲವನ್ನು ಒಂದು ಸರಳುಗಳ ಬಂಧನದಂತೆ ಸುತ್ತಿಕೊಂಡೇ ತನ್ನ ಮೆದುಳು ಬೆಳೆದಂತೆಲ್ಲ ಅದನ್ನು ಗ್ರಹಿಸುತ್ತಾ, ಅಭಿಪ್ರಾಯ ರೂಪಿಸಿಕೊಳ್ಳುತ್ತಾ ಸಾಗುತ್ತದೆ.
ಈ ಎಲ್ಲಾ ಸ್ಥಾಪಿತ ಬಂಧನಗಳಿಂದ ಬೆಳವಣಿಗೆ ಹೊಂದುವ ಮನಸ್ಸು ಯಾವುದನ್ನು ಹೆಚ್ಚು ಗ್ರಹಿಸುತ್ತದೋ ಅದು ಪ್ರಭಾವ ಬೀರಿ ಅದರ ಮೇಲೆ ನಿಧಾನವಾಗಿ ಕಾರ್ಯಪ್ರವೃತ್ತವಾಗುತ್ತದೆ.
ಹಾಗೆಂದು ಬಾಲ್ಯದಲ್ಲಿ ಗ್ರಹಿಸಿದ ಆಸೆ, ಆಕಾಂಕ್ಷೆ, ಛಲ ನಿರಂತರವಾಗಿ ಬದುಕಿನ ಕೊನೆಯವರೆಗೂ ಇದ್ದು ಅಂದುಕೊಂಡಿದ್ದು ಸಾಧಿಸಲಾಗುತ್ತದೆ ಎಂಬುದು ತೀರಾ ತೀರಾ ಅಪರೂಪ. ಯೌವನ, ಉದ್ಯೋಗ, ಸಾಂಸಾರಿಕ ಜಂಜಡ, ದೇಹ ಮತ್ತು ಮನಸ್ಸಿನ ದುರ್ಬಲತೆ, ಆಕಸ್ಮಿಕತೆ, ದುರಾದೃಷ್ಟ ಮುಂತಾದ ಕಾರಣಗಳಿಂದ ಅದು ಬಹುತೇಕ ವಿಫಲವಾಗುವ ಸಾಧ್ಯತೆಯೇ ಹೆಚ್ಚು. ಹಾಗೆಲ್ಲ ಸಾಮಾನ್ಯ ರೀತಿಯಲ್ಲಿಯೇ ಬದುಕುತ್ತಾರೆ. ಕೆಲವೊಮ್ಮೆ ಪರಿಸ್ಥಿತಿಯ ಒತ್ತಡದಿಂದ ಗುರಿ ಬದಲಾಗಿ ಇನ್ನೊಂದು ಗುರಿಯತ್ತ ಸಾಗಿ ಅದರಲ್ಲಿ ಯಶಸ್ವಿಯಾಗಿರುವ ಸಾಧ್ಯತೆಯೂ ಇರುತ್ತದೆ.
ಸಾಮಾನ್ಯವಾಗಿ ಕನಸುಗಳನ್ನು ಹೊತ್ತು ಬದುಕು ಕಟ್ಟಿಕೊಳ್ಳುವವರು ದೊಡ್ಡಮಟ್ಟದ ಮನ್ನಣೆ ಗಳಿಸಲು ಸದಾ ಪ್ರಯತ್ನಿಸುತ್ತಾರೆ, ಹಾತೊರೆಯುತ್ತಾರೆ, ಹಗಲುಗನಸು ಕಾಣುತ್ತಲೇ ಇರುತ್ತಾರೆ. ಅದು ದೊಡ್ಡ ಮಟ್ಟದಲ್ಲಿ ಸಿಕ್ಕಿದಾಗ ಅದರ ತೃಪ್ತಿ, ಸಾರ್ಥಕತೆ ಖಂಡಿತವಾಗಲೂ ಅತ್ಯುತ್ತಮ ಮಟ್ಟದಲ್ಲಿ ಇರುತ್ತದೆ. ಹಾಗೆಯೆ ಸಾಕಷ್ಟು ಪ್ರಯತ್ನದ ನಂತರವೂ ಅದು ಸಿಗದೇ ಇದ್ದಾಗ ಒಂದಷ್ಟು ನಿರಾಸೆ, ಅಸೂಯೆ, ಅತೃಪ್ತಿ, ಅಸಮಾಧಾನ ಇತರರಲ್ಲಿ ಇರುತ್ತದೆ. ಅವರು ವಿಫಲವಾಗಲು ತಡೆಯೊಡ್ಡಿದ ಎಲ್ಲಾ ರೀತಿಯ ಕಾರಣಗಳನ್ನು ಶಪಿಸುತ್ತಾ ಒಂದು ರೀತಿ ಅತೃಪ್ತ ಆತ್ಮದಂತೆ ಇರುತ್ತಾರೆ.
ಈ ನಿಟ್ಟಿನಲ್ಲಿ ಕನ್ನಡದ ಸಾಹಿತ್ಯ ಕ್ಷೇತ್ರದಲ್ಲಿ ಶ್ರೀಮತಿ ಬಾನು ಮುಸ್ತಾಕ್ ಅವರ ಪ್ರಶಸ್ತಿಯ ಗರಿ ಒಂದು ಬಹುದೊಡ್ಡ ಸಾಧನೆ. ಅಕ್ಷರಗಳ ಮುಖಾಂತರ ತಮ್ಮ ಅನುಭವವನ್ನು ಅನುಭವವಾಗಿ ಪ್ರಕಟಗೊಳಿಸುತ್ತಾ ಈ ಮಣ್ಣಿನ, ಈ ಸಂಸ್ಕೃತಿಯ ಸಮಸ್ಯೆಗಳನ್ನು ಆಳವಾಗಿ ನಿರೂಪಿಸುತ್ತಾರೆ. ಲಂಕೇಶ್ ಎಂಬ ದೈತ್ಯ ಪ್ರತಿಭೆಯ ಶೋಧಗಳಲ್ಲಿ ಭಾನು ಮುಷ್ತಾಕ್ ಸಹ ಒಬ್ಬರು.
ಬರಹಗಾರರು ಏಕಾಗಿ ಬರೆಯುತ್ತಾರೆ……..
ಬರೆಯುತ್ತಾ ಕಲಿಯುತ್ತಾರೆ,
ಕಲಿಯುತ್ತಾ ಬರೆಯುತ್ತಾರೆ…………….
ಹವ್ಯಾಸಕ್ಕಾಗಿ ಬರೆಯುತ್ತಾರೆ,
ಹಣಕ್ಕಾಗಿ ಬರೆಯುತ್ತಾರೆ,
ಖ್ಯಾತಿಗಾಗಿ ಬರೆಯುತ್ತಾರೆ,
ಪ್ರಶಸ್ತಿಗಾಗಿ ಬರೆಯುತ್ತಾರೆ,
ನೋವಿಗಾಗಿ ಬರೆಯುತ್ತಾರೆ,
ನಲಿವಿಗಾಗಿ ಬರೆಯುತ್ತಾರೆ,
ಪ್ರೀತಿಗಾಗಿ ಬರೆಯುತ್ತಾರೆ,
ವಿರಹಕ್ಕಾಗಿ ಬರೆಯುತ್ತಾರೆ,
ದ್ವೇಷಕ್ಕಾಗಿ ಬರೆಯುತ್ತಾರೆ,
ಅಸೂಯೆಗಾಗಿ ಬರೆಯುತ್ತಾರೆ,
ವಿಷ ಕಕ್ಕಲು ಬರೆಯುತ್ತಾರೆ,
ಸುಧಾರಣೆಗಾಗಿ ಬರೆಯುತ್ತಾರೆ,
ತೆವಲಿಗಾಗಿಯೂ ಬರೆಯುತ್ತಾರೆ,
ಬದಲಾಣೆಗಾಗಿಯೂ ಬರೆಯುತ್ತಾರೆ,
ಓಲೈಕೆಗಾಗಿ ಬರೆಯುತ್ತಾರೆ,
ಹೋರಾಟಕ್ಕಾಗಿ ಬರೆಯುತ್ತಾರೆ,
ಕ್ರಾಂತಿಗಾಗಿ ಬರೆಯುತ್ತಾರೆ,
ನಾಶಕ್ಕಾಗಿ ಬರೆಯುತ್ತಾರೆ,
ಖುಷಿಗಾಗಿ ಬರೆಯುತ್ತಾರೆ,
ಹಿಂಸಿಸಲು ಬರೆಯುತ್ತಾರೆ,
ಆತ್ಮಾವಲೋಕನಕ್ಕಾಗಿ ಬರೆಯುತ್ತಾರೆ,
ಕೆಲಸವಿಲ್ಲದೆಯೂ ಬರೆಯುತ್ತಾರೆ,
ವಿಗ್ರಹ ಭಂಜನೆಗಾಗಿಯೂ ಬರೆಯುತ್ತಾರೆ,
ಅರಿವು ಮೂಡಿಸಲು ಬರೆಯುತ್ತಾರೆ,
ಮೌಢ್ಯ ಬಿತ್ತಲು ಬರೆಯುತ್ತಾರೆ,
ಸಂದೇಶಗಳಿಗಾಗಿ ಬರೆಯುತ್ತಾರೆ,
ಭಾವನೆಗಳಿಗಾಗಿ ಬರೆಯುತ್ತಾರೆ,
ನೆನಪುಗಳಿಗಾಗಿ ಬರೆಯುತ್ತಾರೆ,
ಸಮಯ ಕೊಲ್ಲಲು ಬರೆಯುತ್ತಾರೆ,
ಬುದ್ದಿ ಪ್ರದರ್ಶಿಸಲು ಬರೆಯುತ್ತಾರೆ,
ಹೊಟ್ಟೆಪಾಡಿಗಾಗಿ ಬರೆಯುತ್ತಾರೆ,
ನಿರೀಕ್ಷೆಯಿಂದ ಬರೆಯುತ್ತಾರೆ,
ನಿರ್ಲಿಪ್ತತೆಯಿಂದ ಬರೆಯುತ್ತಾರೆ,
ಕುತೂಹಲಕ್ಕಾಗಿ ಬರೆಯುತ್ತಾರೆ,
ಹೀಗೆ ಬರೆಯುತ್ತಲೇ ಇದ್ದಾರೆ…..
ಅಕ್ಷರಗಳ ಉಗಮದೊಂದಿಗೆ,
ಭಾಷೆಯ ಬೆಳವಣಿಗೆಯೊಂದಿಗೆ ,
ಎಲ್ಲವೂ ಸಾಹಿತ್ಯವೇ…….
ಅವರವರ ಭಾವಕ್ಕೆ……
ನಾನು, ನೀವು, ಅವರು, ಇವರು, ಎಲ್ಲರೂ ಬರೆಯುತ್ತಲೇ ಇದ್ದೇವೆ,
ಕಾರಣಗಳು – ಉದ್ದೇಶಗಳು – ಪ್ರಕಾರಗಳು – ವಿಷಯಗಳು – ಭಾವನೆಗಳು ಮಾತ್ರ ವಿಭಿನ್ನ.
ಬರೆಯುತ್ತಲೇ ಇರೋಣ…
ಭಾವ ಬರಿದಾಗುವವರೆಗೂ,
ಮನಸ್ಸು ಹಗುರಾಗುವವರೆಗೂ,
ಬೆರಳು ನಿಸ್ತೇಜಿತವಾಗುವವರೆಗೂ,
ಕಾಲನ ಕರೆ ಬರುವವರೆಗೂ,……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068……..