Spread the love

ಉಡುಪಿ: ದಿನಾಂಕ:18-05-2025(ಹಾಯ್ ಉಡುಪಿ ನ್ಯೂಸ್) ತನ್ನನ್ನು ಅಡ್ವೊಕೇಟ್ ಎಂದು ಕೊಂಡ ವ್ಯಕ್ತಿಯೋರ್ವನು ನಗರದ ಸಂಚಾರಿ ಪೊಲೀಸ್ ಕಾನ್ಸ್ಟೇಬಲ್ ಓರ್ವರಿಗೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ ಎಂದು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದಿನಾಂಕ: 17/05/2025 ರಂದು ಬೆಳಿಗ್ಗೆ  ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಕರಾವಳಿ ಜಂಕ್ಷನ್‌ ಫ್ಲೈಓವರ್‌ ಬಳಿ ಉಡುಪಿ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್ಟೇಬಲ್  ದುಂಡಪ್ಪ ಮಾದರ (35) ಅವರು ಸಮವಸ್ತ್ರದಲ್ಲಿ ಕರ್ತವ್ಯದಲ್ಲಿರುವಾಗ ವಾಹನ ಸಂಚಾರ ದಟ್ಟಣೆ ಇದ್ದುದರಿಂದ ಬನ್ನಂಜೆ ಕಡೆಯಿಂದ ಕರಾವಳಿ ಕಡೆಗೆ ಬರುವಂತಹ ವಾಹನಗಳನ್ನು ಹ್ಯಾಂಡ್‌ ಸಿಗ್ನಲ್‌ ಮಾಡಿ ನಿಲ್ಲಿಸಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಆ ಸಂದರ್ಭದಲ್ಲಿ KA-20-EZ-5985 ನೇ ಸ್ಕೂಟರ್‌ ಸವಾರನು ಯಾಕೆ ವಾಹವನ್ನು ತಡೆದಿದ್ದಿರೀ, ನಾನು ಅಡ್ವೊಕೇಟ್‌ ಆಗಿದ್ದು, ನೀನು ಎಲ್ಲಿಂದಲೋ ಬಂದು , ಇಲ್ಲಿ ಕರ್ತವ್ಯ ನಿರ್ವಹಿಸುವ ಅವಶ್ಯಕತೆ ಇಲ್ಲ ನಮ್ಮ ಜಿಲ್ಲೆಯನ್ನು ನಾವೇ ನೋಡಿಕೊಳ್ಳುತ್ತೇನೆ ಎಂದು ಏಕವಚನದಲ್ಲಿ ಬೈದಿದ್ದನ್ನು  ದುಂಡಪ್ಪ ಮಾದರ ಅವರು ಪ್ರಶ್ನಿಸಲು ಮುಂದಾದಾಗ ಆರೋಪಿಯು ಸ್ಕೂಟರ್‌ ನಿಂದ ಎದ್ದು ದುಂಡಪ್ಪ ಮಾದರ ಅವರ ಕುತ್ತಿಗೆಯ ಎಡಭಾಗಕ್ಕೆ ಕೈಯಿಂದ ಹೊಡೆದು ಜೀವ ಬೆದರಿಕೆ ಹಾಕಿ ಹೋಗಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಆ ನಂತರ ಅಲ್ಲಿ ನಿಂತಿದ್ದ ಸ್ಥಳೀಯರಲ್ಲಿ ಆರೋಪಿಯ ಬಗ್ಗೆ ವಿಚಾರಿಸಿದಾಗ ಆತನ ಹೆಸರು ಕೆ ರಾಜೇಂದ್ರ ಎಂಬುದಾಗಿ ತಿಳಿದು ಬಂದಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಕಲಂ:115(2),121(1),132,351(2),352 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!