
ಇತ್ತೀಚಿನ ವರ್ಷಗಳಲ್ಲಿ ಭಾರತ ಸಾಗುತ್ತಿರುವ ದಿಕ್ಕು ತೀರಾ ವಿಚಿತ್ರ ತಿರುವುಗಳನ್ನು ಪಡೆಯುತ್ತಿದೆ. ಒಂದು ರೀತಿ ಹಿಂಸಾತ್ಮಕ ನಡವಳಿಕೆಗಳನ್ನು ಅಳವಡಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಮಹಾತ್ಮ ಗಾಂಧಿಯವರನ್ನು ಕೊಂದ ನಾತುರಾಮ್ ಗೋಡ್ಸೆಯನ್ನು ಸಹ ಸಮರ್ಥಿಸುವ, ವಿಜೃಂಭಿಸುವ ಜನರ ಸಂಖ್ಯೆ ವೇಗವಾಗಿ ಬೆಳೆಯುತ್ತಿದೆ. ಇಂತಹ ಸಂದರ್ಭದಲ್ಲಿ ನಾಥುರಾಮ್ ಗೋಡ್ಸೆ ಬಗ್ಗೆ ಒಂದು ಅನಿಸಿಕೆ……
ನಾಥುರಾಂ ಘೋಡ್ಸೆ ಒಬ್ಬ ಭಯೋತ್ಪಾದಕನೆ ?
ದೇಶಪ್ರೇಮಿಯೇ ?
ಕೊಲೆಗಡುಕನೇ ?
ದೇಶದ್ರೋಹಿಯೇ ?
ಇಷ್ಟೇ ಪ್ರಶ್ನೆಗಳಿಗೆ ಉತ್ತರ ಹುಡುಕಿದರೆ ಅದು ಅಪೂರ್ಣವಾಗುತ್ತದೆ ಮತ್ತು ಅವರವರ ಭಾವಕ್ಕೆ ತಕ್ಕಂತೆ ಉತ್ತರ ಸಿಗುತ್ತದೆ.
ಈಗಾಗಲೇ ಘೋಡ್ಸೆ ಬಗ್ಗೆ ಒಂದು ಅಭಿಪ್ರಾಯ ಹೊಂದಿರುವವರು ಅದನ್ನೇ ಮತ್ತೆ ಮತ್ತೆ ಸಮರ್ಥಿಸುತ್ತಾರೆ ಅಥವಾ ವಿರೋಧಿಸುತ್ತಾರೆ.
ಹಾಗಾದರೆ ಘೋಡ್ಸೆ ಯಾರು ? ಮತ್ತು ಏನು ?
ಆತ ಯಾರೇ ಆಗಿರಲಿ ಏನೇ ಆಗಿರಲಿ ಮೊದಲಿಗೆ ಆತ ಕೊಲೆಗಡುಕ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.
ಗೊಂದಲವಿರುವುದು ಆತ ಕೊಲೆಗಡುಕನಾದರೂ ಆತನನ್ನು ಭಯೋತ್ಪಾದಕ ಅಥವಾ ದೇಶದ್ರೋಹಿ ಅಥವಾ ದೇಶಭಕ್ತ ಎಂದು ನಿರ್ಧರಿಸುವುದು ಹೇಗೆ ಎಂದು.
ದೇಶದ ಸಾಮಾನ್ಯ ಜನರಿಗೂ ಅಭಿಪ್ರಾಯ ವ್ಯಕ್ತಪಡಿಸುವ ವೇದಿಕೆಯಾದ ಸಾಮಾಜಿಕ ಜಾಲತಾಣ ಮತ್ತು ಸುದ್ದಿ ಮಾಧ್ಯಮಗಳ ಅಭಿವೃದ್ಧಿಯಿಂದ ದೇಶಭಕ್ತ, ದೇಶದ್ರೋಹಿ, ಭಯೋತ್ಪಾದಕ ಎಂಬ ಪದಗಳು ತೀರಾ ಸಾಮಾನ್ಯವಾಗಿ ಬಿಟ್ಟಿದೆ. ಆ ಪದಗಳು ಎಷ್ಟು ಹದಗೆಟ್ಟಿದೆ ಎಂದರೆ Watsapp Facebook ನಂತಹ ಪರಿಚಿತರ ಗುಂಪುಗಳಲ್ಲಿ ಸಹ ತಮ್ಮ ಅಭಿಪ್ರಾಯಕ್ಕೆ ವಿರೋಧ ವ್ಯಕ್ತಪಡಿಸುವವರನ್ನು ಈ ಪದಗಳಿಂದಲೇ ನಿಂದಿಸುತ್ತಾರೆ. ಚಿಕ್ಕ ಮಕ್ಕಳ ಆಟಿಕೆ ವಸ್ತುವಿನಂತಾಗಿದೆ ಈ ಪದಗಳ ಅರ್ಥ.
ಭಯೋತ್ಪಾದನೆಯ ಪದಶಃ ಅರ್ಥ ಹೆಸರೇ ಹೇಳುವಂತೆ ಭಯ ಉಂಟುಮಾಡುವುದು. ಅದು ಆಯುಧಗಳ ಮುಖಾಂತರ ಇರಬಹುದು, ಮಾತಿನ ಮುಖಾಂತರ ಇರಬಹುದು, ಅಕ್ಷರಗಳ ಮುಖಾಂತರ ಇರಬಹುದು, ನಂಬಿಕೆಗಳ ಮುಖಾಂತರ ಇರಬಹುದು ಅಥವಾ ಇನ್ಯಾವುದೇ ವಿಧಾನ ಇರಬಹುದು. ಆದರೆ ಇದರಿಂದಾಗುವ ಪರಿಣಾಮಗಳು ಮಾತ್ರ ವಿಭಿನ್ನವಾಗಿರುತ್ತವೆ. ಕೆಲವು ಘನಘೋರ ಹತ್ಯಾಕಾಂಡಗಳಾದರೆ ಮತ್ತೆ ಕೆಲವು ಸಾಧಾರಣ ಮತ್ತೆ ಹಲವು ಪರೋಕ್ಷವಾಗಿ ಭಯ ಹುಟ್ಟಿಸುವಂತೆ ಇರುತ್ತದೆ.
ದೇಶದ್ರೋಹವೂ ದೇಶದ ಹಿತಾಸಕ್ತಿಗೆ ವಿರುದ್ಧವಾದ ಎಲ್ಲಾ ಚಟುವಟಿಕೆಗಳನ್ನು ಒಳಗೊಂಡಿದೆ. ಇಲ್ಲಿ ಸಹ ಪರಿಣಾಮಗಳು ಬೇರೆ ಬೇರೆಯಾಗಿರುತ್ತವೆ. ಕೆಲವು ದೇಶದ ಅತ್ಯಮೂಲ್ಯ ವಿಷಯಗಳನ್ನು ನಮ್ಮ ವಿರೋಧಿ ದೇಶಗಳಿಗೆ ಕೊಡುವುದು, ದೇಶದಲ್ಲಿ ವಿಧ್ವಂಸಕ ಕೃತ್ಯಗಳಿಗೆ ಪ್ರೋತ್ಸಾಹ ಕೊಡುವುದು ಸೇರಿ ಭ್ರಷ್ಟಾಚಾರ, ಕಳ್ಳತನ, ಖೋಟಾನೋಟು ಚಲಾವಣೆ, ವರದಕ್ಷಿಣೆ, ಅಸ್ಪೃಶ್ಯತೆಯ ಆಚರಣೆ ಮುಂತಾದ ಕಾನೂನು ಬಾಹಿರ ಎಲ್ಲಾ ವ್ಯವಹಾರಗಳು ಸೇರುತ್ತವೆ. ಕೆಲವು ಅತ್ಯಂತ ಅಪಾಯಕಾರಿಯಾದರೆ ಹಲವು ಕಡಿಮೆ ತೊಂದರೆ ಕೊಡುತ್ತದೆ.
ಇನ್ನು ಸಹಜವಾಗಿ ದೇಶಭಕ್ತಿ ದೇಶದ ಸಂವಿಧಾನಕ್ಕೆ ನಾವು ಕೊಡುವ ಗೌರವ, ಸಮಾಜದಲ್ಲಿ ನಾಗರಿಕ ಪ್ರಜ್ಞೆಯಿಂದ ಬಾಳುವುದು ಮತ್ತು ದೇಶದ ಸಂಕಷ್ಟದ ಸಮಯದಲ್ಲಿ ಅದಕ್ಕೆ ಬೆಂಬಲವಾಗಿ ಒಬ್ಬ ಪ್ರಜೆಯಾಗಿ ನಿಲ್ಲುವುದು.
ಈ ಹಿನ್ನೆಲೆಯಲ್ಲಿ ನಾಥುರಾಮ ಅಂದಿನ ಭಾರತದ ಅಗ್ರಗಣ್ಯ ನಾಯಕ ಅಹಿಂಸಾವಾದಿ ಮೋಹನ ದಾಸ ಗಾಂಧಿಯವರನ್ನು ಸಾರ್ವಜನಿಕವಾಗಿ ಗುಂಡಿಟ್ಟು ಕೊಂದಿದ್ದನ್ನು ವಿಮರ್ಶಿಸಬೇಕಿದೆ.
ನಾಥುರಾಮ ಅಂದಿನ ಅಧಿಕಾರಸ್ಥ ಪ್ರಬಲ ನಾಯಕರಾದ ಜವಹರಲಾಲ್ ನೆಹರು, ವಲ್ಲಭ ಬಾಯ್ ಪಟೇಲ್ ಅಥವಾ ಅಂದಿನ ಕರಡು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಕೊಲ್ಲಲು ಪ್ರಯತ್ನಿಸುವುದಿಲ್ಲ. ( ಅಂಬೇಡ್ಕರ್ ಅವರ ಕೊಲೆಗೆ ಬೇರೆ ಪ್ರಯತ್ನಗಳ ಬಗ್ಗೆ ಕೆಲವು ಅನುಮಾನಗಳು ಇವೆ )
ಆತ ನೇರವಾಗಿ ಗಾಂಧಿಯವರನ್ನೇ ಗುರಿಯಾಗಿಸಿ ಕೊಲ್ಲುತ್ತಾನೆ.
ಎಲ್ಲಾ ಮೂಲಗಳ ಅಭಿಪ್ರಾಯ ಮತ್ತು ಆಗಿನ ಪರಿಸ್ಥಿತಿಯನ್ನು ಅವಲೋಕಿಸಿದಾಗ ಆತ ಗಾಂಧಿಯನ್ನು ಹತ್ಯೆ ಮಾಡಲು ಇರಬಹುದಾದ ಮುಖ್ಯ ಕಾರಣ…..
ಅಖಂಡ ಭಾರತ ವಿಭಜನೆಯಾಗಲು ಗಾಂಧಿಯೂ ಕಾರಣ, ಪಾಕಿಸ್ತಾನದಲ್ಲಿ ಹಿಂದೂಗಳ ಮಾರಣಹೋಮ ನಡೆಯುವಾಗಲೂ ಗಾಂಧಿ ಇಲ್ಲಿ ಸೇಡು ತೀರಿಸಿಕೊಳ್ಳದೆ ಅಹಿಂಸೆಯ ಮಾತನಾಡುತ್ತಿದ್ದರು, ಸನಾತನ ಧರ್ಮದಲ್ಲಿ ನಂಬಿಕೆ ಇದೆ ಎಂದು ಹೇಳುತ್ತಿದ್ದರೂ ಅವರ ನಡವಳಿಕೆ ಪಾಕಿಸ್ತಾನಕ್ಕೇ ಬೆಂಬಲ ಸೂಚಿಸುತ್ತಿದೆ ಇವರನ್ನು ಹೀಗೆಯೇ ಬಿಟ್ಟರೆ ಭಾರತ ಮತ್ತು ಭಾರತದ ಹಿಂದೂಗಳಿಗೆ ಅಪಾಯ ಎಂದು ಆತ ಯೋಚಿಸಿದಂತೆ ಕಾಣುತ್ತದೆ ಮತ್ತು ಅದಕ್ಕೆ ಕೆಲವು ಸಂಘಟನೆಗಳು ವ್ಯವಸ್ಥಿತವಾಗಿ ಪ್ರಚೋದನೆಯೂ ನೀಡಿರುವ ಸಾಧ್ಯತೆ ಇದೆ.
ಗಾಂಧಿಯವರಿಗೂ ಘೋಡ್ಸೆಗೂ ಯಾವುದೇ ವ್ಯಾವಹಾರಿಕ ಸಂಬಂಧ ಇರುವುದಿಲ್ಲ. ಆದರೂ ಆತ ಜನಪ್ರಿಯ ನಾಯಕನನ್ನು ಕೊಲ್ಲುತ್ತಾನೆ. ಅಂದರೆ ಇದು ವೈಯಕ್ತಿಕ ದ್ವೇಷದ ಕೊಲೆಯಲ್ಲ. ಗಾಂಧಿಯನ್ನು ಕೊಲ್ಲುವ ಮುಖಾಂತರ ಭಾರತದೊಳಗಿನ ಪಾಕಿಸ್ತಾನ ಪರವಾದ ಅತಿಮುಖ್ಯ ಧ್ವನಿಯನ್ನು ಅಡಗಿಸುವುದು, ಪಾಕಿಸ್ತಾನದ ಹಿಂದೂ ಹತ್ಯೆಗಳಿಗೆ ಇಲ್ಲಿ ಸೇಡು ತೀರಿಸಿಕೊಳ್ಳುವುದು, ಭಾರತವನ್ನು ಹಿಂದೂ ರಾಷ್ಟ್ರವಾಗಿ ಉಳಿಸುವುದು, ಮುಂದೆ ಯಾರಾದರೂ ಪಾಕಿಸ್ತಾನದ ಜೊತೆ ಸಂಧಾನ ಮಾಡಲು ಪ್ರಯತ್ನಿಸಿದರೆ ಅವರಲ್ಲಿ ಸಾವಿನ ಭಯ ಮೂಡಿಸುವುದು ಆತನ ಮತ್ತು ಆತನ ಬೆಂಬಲಿಸಿದವರ ಉದ್ದೇಶ ಎಂಬಂತೆ ತೋರುತ್ತದೆ.
ಹಾಗಾದರೆ ಘೋಡ್ಸೆಯನ್ನು ಏನೆಂದು ಕರೆಯೋಣ…..
ಮೊದಲನೆಯದಾಗಿ ಆತ ಕೊಲೆಗಡುಕ,
ಎರಡನೆಯದಾಗಿ ಆತ ಆಗಿನ ಭಾರತದ ಸ್ವಾತಂತ್ರ್ಯ ಹೋರಾಟಗಾರ ಅಹಿಂಸಾವಾದಿ ಗಾಂಧಿಯನ್ನು ಹತ್ಯೆ ಮಾಡಿ ದೇಶವನ್ನು ಅತ್ಯಂತ ಅಪಾಯಕಾರಿ ಹಂತಕ್ಕೆ ತಳ್ಳಿದ ದೇಶದ್ರೋಹಿ ಸಹ.
ಗಾಂಧಿಯ ವಿರುದ್ಧ ಪ್ರತಿಭಟಿಸಲು ಇತರ ಹಲವಾರು ಮಾರ್ಗಗಳು ಇದ್ದರೂ ಆತ ಕೊಲೆಯನ್ನೇ ಆಯ್ಕೆ ಮಾಡಿಕೊಂಡ.
ಆತ ಭಯೋತ್ಪಾದಕನೆ,
ಈಗಿನ ಸನ್ನಿವೇಶದ ಅರ್ಥದಲ್ಲಿ ಭಯೋತ್ಪಾದಕ ಎನ್ನುವುದು ಅತ್ಯಂತ ಕಠಿಣ ಪದವಾಗಬಹುದು. ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ಉದ್ದೇಶ ಇರಲಾರದು.
ಘೋಡ್ಸೆ ದೇಶಭಕ್ತನೆ….
ಆತನ ವೈಯಕ್ತಿಕ ತಿಳಿವಳಿಕೆಯ ಮಟ್ಟಿಗೆ ಆತ ದೇಶ ಭಕ್ತ ಎಂದು ಭಾವಿಸಿರಬಹುದು ಮತ್ತು ಆತನ ಗ್ರಹಿಕೆಯ ಮಟ್ಟದಲ್ಲಿ ಅದು ನಿಜವಿರಲೂ ಬಹುದು. ಅದು ಆತನ ಸ್ವಾತಂತ್ರ್ಯವೂ ಹೌದು.
ಅದನ್ನು ಹೊರತುಪಡಿಸಿ ಆತನ ರಕ್ತ ಸಂಬಂಧಿಗಳೂ ಸೇರಿದಂತೆ ಯಾವ ಮಾನವ ಪ್ರಾಣಿಯೂ ಯಾವುದೇ ಸಂದರ್ಭದಲ್ಲಿ ಆತನನ್ನು ದೇಶಭಕ್ತ ಎನ್ನುವುದು ತಪ್ಪಾಗುತ್ತದೆ ಮತ್ತು ದೇಶಕ್ಕೆ ಮತ್ತು ಮಾನವೀಯತೆಗೆ ಮಾಡುವ ಅವಮಾನವಾಗುತ್ತದೆ.
ಇತಿಹಾಸದ ಯಾವುದೋ ಘಟನೆಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಅರ್ಥೈಸಿ ಘೋಡ್ಸೆ ಒಬ್ಬ ದೇಶಭಕ್ತ ಎಂದು ಸಮರ್ಥಿಸುವ ಲೇಖನಗಳ ಬಗ್ಗೆ ಎಚ್ಚರವಿರಲಿ. ಇಲ್ಲದಿದ್ದರೆ ಎಲ್ಲಾ ಕೊಲೆಗಳೂ ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ಸಮರ್ಥನೀಯವೇ ಆಗುತ್ತದೆ.
ಮನಸ್ಸುಗಳೇ ಮಲಿನವಾಗಿರುವ ಈ ಸಂದರ್ಭದಲ್ಲಿ ಘೋಡ್ಸೆ ಕೂಡ ಗಾಂಧಿಯ ಸಮತೂಕದ ವ್ಯಕ್ತಿತ್ವ ಮತ್ತು ಜನಪ್ರಿಯತೆ ಗಳಿಸಿರುವುದು ವ್ಯವಸ್ಥೆಯ ದುರಂತ.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068……..
