
ದಿನಾಂಕ ೨೯.೦೩.೨೦೨೫ರ ದಿನಪತ್ರಿಕೆಗಳಲ್ಲಿ ಕಂದಾಯ ಮಂತ್ರಿಗಳಾದ ಕೃಷ್ಣಭೈರೇಗೌಡ ರವರು '೬ ತಿಂಗಳಲ್ಲಿ ಬಗರ್ ಹುಕುಂ ಅರ್ಜಿ ವಿಲೇವಾರಿ ಮಾಡಿ' ಎನ್ನುವ ಜತೆಗೆ 'ಅಸಡ್ಡೆ ತೋರುವ ತಹಶೀಲ್ದಾರ್‌ಗಳಿಗೆ ಚಾಟಿ ಬೀಸಿದ್ದಾರೆ' ಎಂಬುದಾಗಿ ವರದಿಯಾಗಿರುತ್ತದೆ. ೨೮.೦೩.೨೦೨೫ರಂದು ವಿಕಾಸಸೌಧದಲ್ಲಿ ಜರಗಿದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಅಧಿಕಾರಿಗಳಿಗೆ ಈ ಸೂಚನೆ ನೀಡಿದ್ದಾರೆ. ಸರಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡಿಕೊಂಡು ಬಂದವರಿಗೆ ಆ ಜಮೀನುಗಳನ್ನು ಮಂಜೂರು ಮಾಡುವುದನ್ನೇ 'ಬಗರ್ ಹುಕುಂ ಜಮೀನು ಸಕ್ರಮೀಕರಣ' ಎನ್ನಲಾಗುತ್ತದೆ. ಈ ಬಗ್ಗೆ ಅನಧಿಕೃತ ಅನುಭೋಗದಾರರು ಸಲ್ಲಿಸಿರುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಎಂಬುದೇ ಸಚಿವರ ಸೂಚನೆಯಾಗಿದೆ. 'ಭೂಮಿ ಹಕ್ಕಿನ' ವಿಶ್ಲೇಷಣೆಯ ಸಂದರ್ಭ ಮೊಟ್ಟಮೊದಲು ಈ ಕೆಳಗಿನ ಮೂಲ ಅಂಶಗಳ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕಿದೆ. ಅವೆಂದರೆ; ಸಮಾಜದಲ್ಲಿ ಶೋಷಿತ ಸಮುದಾಯಗಳಾದ ಅನುಸೂಚಿತ ಜಾತಿ ಮತ್ತು ಪಂಗಡಗಳಿಗೆ ಸೂಕ್ತ ಭೂಮಿಯ ಒಡೆತನ ದೊರೆತಿದೆಯೇ? ಆ ನಿಟ್ಟಿನಲ್ಲಿ 'ಕಾನೂನು ಅನುಪಾಲನೆ ಚೌಕಟ್ಟಿನಲ್ಲಿ' ಪ್ರಾಮಾಣಿಕ ಪ್ರಯತ್ನವನ್ನಾದರೂ ಮಾಡಲಾಗಿದೆಯೇ? ಆ ಸಮುದಾಯದಲ್ಲಿ ಭೂ ರಹಿತರು ಎಷ್ಟು? ಅರ್ಧ ಎಕರೆ ಮತ್ತು ಅದಕ್ಕಿಂತ ಹೆಚ್ಚು ಜಮೀನು ಹೊಂದಿರುವ ಕುಟುಂಬಗಳು ಎಷ್ಟು? ಕನಿಷ್ಟ ೨.೭೫ ಸೆಂಟ್ಸು ಮನೆ ನಿವೇಶನ ಹೊಂದಿರುವವರಾದರೂ ಎಷ್ಟು ಮಂದಿ? ಹಿಂದುಳಿದ ವರ್ಗಗಳ ಸಹಿತ ಕಡು ಬಡ ಕುಟುಂಬಗಳು ಕನಿಷ್ಟ ಮನೆ ನಿವೇಶನವನ್ನಾದರೂ ಹೊಂದಿವೆಯೇ?... ಇತ್ಯಾದಿ. ಈ ನೆಲದ ಮೂಲ ವಾರೀಸುದಾರರಾದ ಕೊರಗ ಸಮುದಾಯವು ೨೦೦೧ರಲ್ಲಿ ಕಳ್ತೂರಿನಲ್ಲಿ ನಡೆಸಿದ ಐತಿಹಾಸಿಕ ಭೂಮಿ ಹಕ್ಕಿನ ಹೋರಾಟ ಮತ್ತು ಈ ಹೋರಾಟದಲ್ಲಿ ಸಮುದಾಯದ ವೃದ್ಧರು, ಮಹಿಳೆಯರು, ಮಕ್ಕಳು ಸಹಿತ ೨೭ ಮಂದಿ ಅನುಭವಿಸಿದ 'ವ್ಯವಸ್ಥೆಯ ಹಿಂಸೆ' ನಮ್ಮ ಕಣ್ಣ ಮುಂದೆಯೇ ಇದೆ. ಮೊಹಮ್ಮದ್ ಪೀರ್ ವರದಿಯಲ್ಲಿ ಅಳಿವಿನ ಅಂಚಿನಲ್ಲಿರುವ ಕೊರಗ ಸಮುದಾಯ ಶ್ರೇಯೋಭಿವೃದ್ಧಿಗೆ ಕುಟುಂಬವೊಂದಕ್ಕೆ ೨.೫ ಎಕ್ರೆ ಭೂಮಿ ಒದಗಿಸಬೇಕೆಂಬ ಸ್ಪಷ್ಟ ಶಿಫಾರಸು ಇದ್ದರೂ ಈ ಸಮುದಾಯ ತಮ್ಮ ಹಕ್ಕನ್ನು ಪಡೆದುಕೊಳ್ಳಲು ಬೀದಿಗಿಳಿದು ಹೋರಾಟ ಮಾಡಲೇಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿರುವುದು 'ಸರಕಾರದ ಪುಟಗಟ್ಟಲೆ ಕಾಯಿದೆ/ನಿಯಮ/ ಘೋಷಣೆಗಳು' ಕಡತದಲ್ಲೇ ಬಾಕಿಯಾಗಿ ಸಂಪೂರ್ಣ ನಿಷ್ಕ್ರಿಯವಾಗಿರುವುದನ್ನು ಎತ್ತಿ ತೋರಿಸುತ್ತದೆ. ೨೦೨೪ರ ಜುಲೈಯಲ್ಲಿ ಕೊರಗ ಸಮುದಾಯದ ಬಂಧುಗಳು ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಭೂಮಿ ಹಕ್ಕಿಗಾಗಿ, ಸರಕಾರಿ ನೌಕರಿಯಲ್ಲಿ ನೇರ ನೇಮಕಾತಿಗಾಗಿನ ತಮ್ಮ ಆಕ್ರೋಶದ ದ್ಯೋತಕವಾಗಿ ಡೋಲನ್ನು ಬಾರಿಸಿ ೧೦ ದಿನಗಳ ಕಾಲ ಅಹೋರಾತ್ರಿ ಪ್ರತಿಭಟನೆಯನ್ನು ನಡೆಸಿದರು. ೧೦ನೇ ದಿನ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದ್ದರು. ಇಂಥ ಹೋರಾಟಗಳು ನಿರಂತರ ಜ್ಯಾರಿಯಲ್ಲಿರುವಾಗಲೂ ಸರಕಾರ ಆದಿಬುಡಮೂಲ ಸಮುದಾಯದ ತಲ್ಲಣಗಳಿಗೆ ಮಿಡಿಯುವ ಪ್ರಯತ್ನ ಎಷ್ಟು ಮಟ್ಟಿಗೆ ಮಾಡುತ್ತಿದೆ ಎಂಬುದೇ ಪ್ರಶ್ನೆಯಾಗಿದೆ. ಡಿಸಿ ಮನ್ನಾ ಜಮೀನನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡುವ ಬಗ್ಗೆಯೂ ಹೋರಾಟಗಳು ನಡೆಯುತ್ತಿವೆ. ಆದರೆ ನಿರೀಕ್ಷಿತ ಫಲಿತಾಂಶ ದೊರೆತಿಲ್ಲ. ಅನುಸೂಚಿತ ಜಾತಿ ಮತ್ತು ಪಂಗಡಗಳ ಭಾಂಧವರು ಶತಮಾನಗಳಿಂದ ಭೂಮಿ ಹಕ್ಕಿನಿಂದ ವಂಚಿತರಾಗುತ್ತಲೇ ಬಂದಿದ್ದಾರೆ. ಅವರಿಗೆ ನ್ಯಾಯ ಒದಗಿಸಬೇಕಾದರೆ ಸರಕಾರಿ ಜಮೀನುಗಳನ್ನು ದಲಿತರ ಕೈತಪ್ಪಿ ಹೋಗದಂತೆ ಕಾಪಿಟ್ಟುಕೊಳ್ಳುವುದು ಸರಕಾರ ಕೂಡಲೇ ಮಾಡಬೇಕಾದ ಅತೀ ಅಗತ್ಯದ ಕೆಲಸವಾಗಿದೆ. ಇದಕ್ಕೆ ಸಾಕಷ್ಟು ಬಲಯುತವಾದ ಕಾನೂನುಗಳು ಇದ್ದಾಗ್ಯೂ ಸರಕಾರದ ಇಚ್ಛಾಶಕ್ತಿ ಯಾರ ಪರ ಇದೆ ಎಂಬುದೇ ಸಮಸ್ಯೆಗೆ ಮೂಲ ಕಾರಣವಾಗಿದೆ. ಮೊದಲು ಗ್ರಾಮದಲ್ಲಿರುವ ಸರಕಾರಿ ಜಮೀನುಗಳನ್ನು ಗುರುತಿಸಿ ನಿಖರವಾದ ಪಟ್ಟಿ ತಯ್ಯಾರಿಸಿ, ಈ ಪೈಕಿ ಡಿಸಿ ಮನ್ನಾ ಜಮೀನುಗಳು ಎಷ್ಟಿವೆ ಎಂಬ ಅಂಕಿಅಂಶವನ್ನು ದಾಖಲಿಸಿ ಸಾರ್ವಜನಿಕವಾಗಿ ಪ್ರಕಟಮಾಡಬೇಕಿದೆ. ಕರ್ನಾಟಕ ಭೂ ಮಂಜೂರಾತಿ ನಿಯಮಗಳು, ೧೯೬೯ರ ನಿಯಮ ೫ಎರಲ್ಲಿ ಪ್ರತಿ ಗ್ರಾಮದಲ್ಲಿ ಅನುಸೂಚಿತ ಜಾತಿ ಮತ್ತು ಪಂಗಡದವರಿಗೆ ವಿಲೇಗೆ ಲಭ್ಯವಿರುವ ಸರಕಾರಿ ಜಮೀನಿನಲ್ಲಿ ಶೇ. ೫೦ನ್ನು ಅನುಸೂಚಿತ ಜಾತಿ ಹಾಗೂ ಪಂಗಡಗಳಿಗೆ ಮೀಸಲಿರಿಸುವಂತೆ ಸೂಚಿಸಲಾಗಿದೆ. ತಾಲ್ಲೂಕು ಮಟ್ಟದಲ್ಲಿ ಒಂದೊಮ್ಮೆ ೧೯೬೯-೧೯೭೯ರ ಅವಧಿಯಲ್ಲಿ ಅನುಸೂಚಿತ ಜಾತಿ ಹಾಗೂ ಪಂಗಡಗಳಿಗೆ 'ವಿಲೇ ಮಾಡದ' ಸರಕಾರಿ ಜಮೀನಿನ ವಿಸ್ತೀರ್ಣವು ಆ ಅವಧಿಯಲ್ಲಿ ಸದ್ರಿ ತಾಲ್ಲೂಕಿನಲ್ಲಿ ವಿಲೇಗಾಗಿ ಸಿಕ್ಕುವ ಜಮೀನುಗಳು ಶೇ. ೫೦ಕ್ಕಿಂತ ಕಡಿಮೆಯಾಗಿದ್ದರೆ; ಆಮೇಲೆ ತಾಲ್ಲೂಕಿಗಾಗಿ ಅಂಥ ಶೇಕಡಾ ಅಂಥ ವಿಲೇಗೆ ತಲುಪುವ ವರೆಗೆ, ತಾಲ್ಲೂಕಿನ ಪ್ರತಿ ಗ್ರಾಮದಲ್ಲಿ ಭೂಮಿಗಳ ಶೇಕಡಾ ಮೀಸಲಾತಿಯು, ಅನುಸೂಚಿತ ಜಾತಿ ಹಾಗೂ ಪಂಗಡಗಳ ವ್ಯಕ್ತಿಗಳಿಗೆ ಶೇ. ೭೫ ಇರಬೇಕು ಎಂದು ಸ್ಪಷ್ಟಪಡಿಸುತ್ತದೆ. ನಿಯಮ ೫(೩) ರ ಪ್ರಕಾರ ಗ್ರಾಮದಲ್ಲಿ ವಿಲೇಗೆ ದೊರಕುವ ಭೂಮಿಯ ಪ್ರಮಾಣ ೪ ಹೆಕ್ಟೇರ್‌ಗೆ ಕಡಿಮೆ ಇದ್ದಲ್ಲಿ ಇಡೀ ಲಭ್ಯ ಭೂಮಿಯನ್ನು ಅನುಸೂಚಿತ ಜಾತಿ ಹಾಗೂ ಪಂಗಡಗಳಿಗೆ ವಿಲೇ ಮಾಡಬೇಕು ಎಂದು ತಿಳಿಸಲಾಗಿದೆ. ಆದರೆ ಈ ವಿಲೇಗೆ ಲಭ್ಯವಿರುವ ಭೂಮಿ ಪಟ್ಟಿಯಲ್ಲಿ ಭೂಮಿ ಉಳ್ಳವರ ಸ್ವಾಧೀನದಲ್ಲಿರುವ ಸರಕಾರಿ ಕುಮ್ಕಿ ಭೂಮಿ, ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ಸರಕಾರಿ ಭೂಮಿ, ಒತ್ತುವರಿಯಾಗಿರುವ ಡಿಸಿ ಮನ್ನಾ ಭೂಮಿ, ಪೋಡಿ ಆಗದೆ ಮಂಜೂರಿದಾರರಲ್ಲಿ ಹೆಚ್ಚಿಗೆ ಉಳಿದುಕೊಂಡಿರುವ ಸರಕಾರಿ ಭೂಮಿ ಸೇರದೇ ಇರುವುದು ವ್ಯವಸ್ಥೆಯ ದುರಂತವೇ ಸರಿ. 'ಅಧಿಕೃತ ಅನುಭೋಗದ ಹೊರತುಪಡಿಸಿ' ಎಂದು ಕಾನೂನು ಸ್ಪಷ್ಟವಾಗಿ ತಿಳಿಸಿದ್ದರೂ, ದಲಿತರ ಹಕ್ಕಿನ ಭೂಮಿಯು ಕನಿಷ್ಟ ಪಕ್ಷ ಭೂ ಲಭ್ಯತೆಯ ಪಟ್ಟಿಯಲ್ಲೂ ಕಾಣಸಿಗದೆ ಬೆಚ್ಚಗೆ ಅವಿತುಕೊಂಡಿರುವುದು ಯಾರ ಒಲವನ್ನು ಗಿಟ್ಟಿಸಿಕೊಳ್ಳಲು ಸರಕಾರಗಳು ಮಾಡುತ್ತಿರುವ ಪ್ರಯತ್ನ ಎಂದು ಪ್ರಶ್ನೆ ಮಾಡಬೇಕಿದೆ. ದಲಿತರ ಸಂಪೂರ್ಣ ಹಕ್ಕಿನ ಡಿಸಿ ಮನ್ನಾ ಜಮೀನುಗಳೇ ಒತ್ತುವರಿಯಾಗಿರುವಾಗ ಹಾಗೂ ಗ್ರಾಮದಲ್ಲಿ ದಲಿತರಿಗೆ ವಾಸ ಮಾಡಿ ಬದುಕು ಕಟ್ಟಿಕೊಳ್ಳಲು ಅಗತ್ಯವಾಗಿ ಮೀಸಲಿರಿಸಬೇಕಾದ (ಶೇ. ೫೦) ಸರಕಾರಿ ಭೂಮಿಯೇ ಲಭ್ಯವಿಲ್ಲದಿದ್ದಾಗ ಅಥವಾ ಮೀಸಲಿರಿಸುವ ಪ್ರಕ್ರಿಯೆಯೇ ಬಾಕಿ ಇರುವಾಗ ಬಗರ್‌ಹುಕುಂ ಸಹಿತ ಸರಕಾರಿ ಜಮೀನು ಮಂಜೂರಾತಿ ಪ್ರಕ್ರಿಯೆ ಮಾಡುವುದು ಮತ್ತು ಕುಮ್ಕಿ ಹಕ್ಕನ್ನು ಸಾಧನೆ ಮಾಡುವುದು ಎಷ್ಟು ಸರಿ ಎಂಬುದು ಸಾಮಾಜಿಕ ನ್ಯಾಯದ ಕಳಕಳಿಯಲ್ಲಿ ಹುಟ್ಟಿಕೊಳ್ಳಬೇಕಾದ ಪ್ರಶ್ನೆಯಾಗಿದೆ. ಇದು ಹಸಿವಿನಿಂದ ಕಂಗೆಟ್ಟವನಿಗೆ ಕನಿಷ್ಟ ತುತ್ತೂ ನೀಡದೆ; ಪುಷ್ಕಳ ಭೋಜನ ಉಂಡಂತಲ್ಲವೇ? ಎಲ್ಲದಕ್ಕೂ ಮೊದಲು ದಲಿತರ ಹಕ್ಕಿನ ಜಮೀನನ್ನು ಮೀಸಲಿರಿಸಿ, ಸಮರ್ಪಕ ವಿಲೇ ಮಾಡಿ, ಇತರ ಮಂಜೂರಾತಿ ಪ್ರಕ್ರಿಯೆಗಳನ್ನು ಮಾಡಬೇಕಿದೆ.
ಕಂದಾಯ ಮಂತ್ರಿಗಳು ಬಗರ್ ಹುಕುಂ ಅರ್ಜಿಗಳ ಶೀಘ್ರ ವಿಲೇ ಬಗ್ಗೆ ಅಧಿಕಾರಿಗಳಿಗೆ ಚಾಟಿ ಬೀಸುವ ಮೊದಲು; ಗ್ರಾಮಗಳಲ್ಲಿ ದಲಿತರಿಗೆ ಸಿಗಲೇಬೇಕಾದ ಸರಕಾರಿ ಜಮೀನುಗಳ ಶೇ. ೫೦ ಪಾಲನ್ನು ಮೀಸಲಿರಿಸಲಾಗಿದೆಯೇ? ಡಿಸಿ ಮನ್ನಾ ಜಮೀನುಗಳ ಸಮರ್ಪಕ ವಿಲೇ ಮಾಡಲಾಗಿದೆಯೇ? ಡಿಸಿ ಮನ್ನಾ ಜಮೀನು ಒತ್ತುವರಿ/ ಅನಧಿಕೃತ ಮಂಜೂರಾತಿ ವಿರಹಿತ ಮಾಡಲಾಗಿದೆಯೇ? ಮಂಜೂರು ಜಮೀನಿನ ಪೋಡಿ ಮಾಡಿ ಉಳಿಕೆ ಸರಕಾರಿ ಜಮೀನನ್ನು ಒತ್ತುವರಿಯಿಂದ ಮುಕ್ತಗೊಳಿಸಲಾಗಿದೆಯೇ? ಅದಕ್ಕೆ ತೆರಳಲು ರಸ್ತೆ ಕಾದಿರಿಸಲಾಗಿದೆಯೇ? ಸಾವಿರಾರು ಸಂಖ್ಯೆಯಲ್ಲಿರುವ ನಿವೇಶನ ರಹಿತರಿಗಾಗಿ ಸರಕಾರಿ ಜಮೀನು ಮೀಸಲಾತಿಗೆ ಆದ್ಯತೆ ನೀಡಲಾಗಿದೆಯೇ? ದಲಿತರಿಗೆ ದೊರೆಯದ ಸರಕಾರಿ ಜಮೀನು ಕುಮ್ಕಿ ಹಕ್ಕಿನ ಹೆಸರಿನಲ್ಲಿ ಭೂ ಒಡೆಯರ ಪಾಲಾಗುವ ಬಗ್ಗೆ ಗಮನಹರಿಸಲಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕಿದೆ.
ಈ ಎಲ್ಲ ಅಂಶಗಳನ್ನು ಪರಾಮರ್ಶಿಸುವಾಗ ದಲಿತರ ಹಕ್ಕಿನ ಸರಕಾರಿ ಜಮೀನು ಹಲವು ಕಾರಣಗಳಿಂದ ದಲಿತರ ಕೈತಪ್ಪುವ ಆತಂಕ ಎದುರಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಚಳುವಳಿ ಕಟ್ಟುವ ಕಾರ್ಯವನ್ನು ಸಂಘಟಿತವಾಗಿ ಮಾಡಬೇಕಿದೆ. ಜತೆಗೆ ಪ್ರತೀ ಗ್ರಾಮದಲ್ಲಿ ಸಾಮಾಜಿಕ ಕಳಕಳಿಯ ವ್ಯಕ್ತಿಗಳು ಈ ಕೂಡಲೇ ಈ ನಿಟ್ಟಿನಲ್ಲಿ ಪೂರಕವಾಗಿ ಕಾರ್ಯೋನ್ಮುಖರಾಗಬೇಕಿದೆ.
ಏನಿದು ಡಿಸಿ ಮನ್ನಾ?
ಹಿಂದೆ ಮದ್ರಾಸ್ ಪ್ರಾಂತ್ಯಕ್ಕೆ ಒಳಪಟ್ಟ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಿಸಿ ಮನ್ನಾ ಎಂಬ ಪರಿಕಲ್ಪನೆ ಇತ್ತು. ‘ಸ್ಟ್ಯಾಂಡಿಂಗ್ ಆರ್ಡರ್ಸ್ ಆಫ್ ದಿ ಬೋರ್ಡ್ ಆಫ್ ರೆವೆನ್ಯೂ ಆಫ್ ದಿ ಆರ್ಸ್ಟ್‌ವೈಲ್ ಪ್ರಾವಿನ್ಸಸ್ ಆಫ್ ಮದ್ರಾಸ್ (ನಿಯಮ ೩೮ಡಿ)’ ನಂತೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗಾಗಿ ಡಿಸಿ ಮನ್ನಾ ಎಂದು ಗುರುತಿಸಿ ಸರಕಾರಿ ಜಮೀನುಗಳನ್ನು ಮೀಸಲಾಗಿರಿಸಲಾಗುತ್ತಿತ್ತು.
ಸದ್ರಿ ಡಿಸಿ ಮನ್ನಾ ಜಮೀನುಗಳನ್ನು ಅನುಸೂಚಿತ ಜಾತಿ ಹಾಗೂ ಪಂಗಡಗಳಿಗೆ ಹೊರತುಪಡಿಸಿ ಇತರರಿಗೆ ಮಂಜೂರು ಮಾಡಲು ಅವಕಾಶ ಇಲ್ಲ ಎಂಬುದಾಗಿ ಕಂದಾಯ ಮಂತ್ರಿಗಳು ವಿಧಾನ ಪರಿಷತ್ತಿನಲ್ಲಿ ೧೮.೧೨.೨೦೨೪ರಂದು ತಿಳಿಸಿರುತ್ತಾರೆ.
ಸೆಕ್ಷನ್ ೧೦೪ ಏನನ್ನುತ್ತೆ?
ಕರ್ನಾಟಕ ಭೂ ಕಂದಾಯ ಕಾಯಿದೆ ೧೯೬೪ರ ಸೆಕ್ಷನ್ ೧೦೪: ಭೂಮಿಯನ್ನು ಅನಧಿಕೃತವಾಗಿ ಅಧಿಭೋಗಿಸುತ್ತಿರುವ ವ್ಯಕ್ತಿಯನ್ನು ಕೂಡಲೇ ಹೊರದೂಡುವುದು.-[ಕರ್ನಾಟಕ] ಸಾರ್ವಜನಿಕ ಆವರಣಗಳ (ಅನಧಿಕೃತ ಅಧಿಭೋಗದಾರರನ್ನು ಹೊರದೂಡುವಿಕೆ) ಅಧಿನಿಯಮ, ೧೯೬೧ ([ಕರ್ನಾಟಕ] ಅಧಿನಿಯಮ ೧೯೬೨ರ ೩)ರಲ್ಲಿ ಏನೇ ಒಳಗೊಂಡಿದ್ದರೂ, [ಅಧಿನಿಯಮದ ೬೭ ಅಥವಾ ೭೧ನೇ ಪ್ರಕರಣಗಳ ಅಡಿಯಲ್ಲಿ ಒಳಗೊಂಡಿರುವ] ಯಾವುದೇ ಭೂಮಿಯನ್ನು ಅನಧಿಕೃತವಾಗಿ ಅಧಿಭೋಗಿಸುವ ಅಥವಾ ಅಕ್ರಮವಾಗಿ ಸ್ವಾಧೀನದಲ್ಲಿಟ್ಟುಕೊಂಡಿರುವ ಯಾರೇ ವ್ಯಕ್ತಿಯನ್ನು [ತಹಶೀಲ್ದಾರನು] ಕೂಡಲೇ ಹೊರದೂಡಬಹುದು ಮತ್ತು ಮರಗಳೂ ಸೇರಿದಂತೆ ಆ ಭೂಮಿಯ ಮೇಲಿರುವ ಯಾವುದೇ ಬೆಳೆಯು ಮುಟ್ಟುಗೋಲಿಗೆ ಗುರಿಯಾಗತಕ್ಕದ್ದು ಮತ್ತು ಆ ಭೂಮಿಯ ಮೇಲೆ ಕಟ್ಟಿರುವ ಯಾವುದೇ ಕಟ್ಟಡವನ್ನು ಅಥವಾ ಇತರ ನಿರ್ಮಾಣವನ್ನು [ತಹಶೀಲ್ದಾರನು] ಯುಕ್ತವೆಂದು ಭಾವಿಸಬಹುದಾದ ಲಿಖಿತ ನೋಟೀಸನ್ನು ಕೊಟ್ಟ ತರುವಾಯವೂ ಅವನು ತೆಗೆದು ಹಾಕದಿದ್ದರೆ, ಅದು ಮುಟ್ಟುಗೋಲಿಗೆ ಅಥವಾ ಕೂಡಲೇ ತೆಗೆದು ಹಾಕುವಿಕೆಗೆ ಗುರಿಯಾಗತಕ್ಕದ್ದು.
ತಾಲ್ಲೂಕು ಮಟ್ಟದ ಸಮಿತಿ ಏನು ಮಾಡುತ್ತಿದೆ?
ಡಿಸಿ ಮನ್ನಾ ಜಮೀನುಗಳ ಗುರುತಿಸುವಿಕೆ ಹಾಗೂ ಹಂಚಿಕೆ ಮಾಡುವ ಬಗ್ಗೆ ಉಡುಪಿ ಜಿಲ್ಲಾಧಿಕಾರಿಗಳ ನಡವಳಿ ಸಂಖ್ಯೆ: ಎಲ್‌ಎನ್‌ಡಿ: ಡಿಸಿಡಿಆರ್: ೧೯/೨೦೨೩/ ಇ೧೨೩೧೦೦ ದಿನಾಂಕ: ೨೫.೧೧.೨೦೨೪ ರಂತೆ ತಹಶೀಲ್ದಾರ್ ಅಧ್ಯಕ್ಷತೆಯ ತಾಲ್ಲೂಕು ಮಟ್ಟದ ಸಮಿತಿ ರಚನೆ ಮಾಡಲಾಗಿದೆ. ಇದರಲ್ಲಿ ತಾಪಂ ಇಒ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ, ಎಡಿಎಲ್‌ಆರ್, ಪಿಡಿಒ. ಆರ್‌ಐ ಮತ್ತು ವಿಎಒ ಸದಸ್ಯರಾಗಿರುತ್ತಾರೆ. ಈ ಸಮಿತಿ ಕನಿಷ್ಟ ೧೫ ದಿನಕ್ಕೊಮ್ಮೆ ಕಡ್ಡಾಯವಾಗಿ ಸಭೆ ಸೇರಿ ಗ್ರಾಮದಲ್ಲಿ ಲಭ್ಯ ಸರಕಾರಿ ಜಮೀನಿನಲ್ಲಿ ಶೇ. ೫೦ ಜಮೀನನ್ನು ಅನುಸೂಚಿತ ಜಾತಿ/ಪಂಗಡಗಳಿಗೆ ಮೀಸಲಿಡುವ ಬಗ್ಗೆ ಪರಿಶೀಲಿಸಿಸುವ ಹಾಗೂ ಅರ್ಹ ಫಲಾನುಭವಿಗಳಿಗೆ ಸದ್ರಿ ಜಮೀನನ್ನು ಹಂಚುವ ಬಗ್ಗೆ ಪ್ರಸ್ತಾವನೆ ಸಲ್ಲಿಸುವ ಕೆಲಸ ಮಾಡಬೇಕಿದೆ. ಆದರೆ ಈ ಸಮಿತಿಗಳ ಕಾರ್ಯನಿರ್ವಹಣೆ ಎಷ್ಟು ಪರಿಣಾಮಕಾರಿಯಾಗಿದೆ ಎಂಬುದು ಆಯಾ ಗ್ರಾಮದ ‘ಭೂ ಲಭ್ಯತಾ ಪಟ್ಟಿ’ಯು ಪ್ರತಿಫಲಿಸುತ್ತದೆ.
-ಅಶ್ವಿನ್ ಲಾರೆನ್ಸ್, ಮೂಡುಬೆಳ್ಳೆ.