
ಗಂಗೊಳ್ಳಿ: ದಿನಾಂಕ:29-03-2025(ಹಾಯ್ ಉಡುಪಿ ನ್ಯೂಸ್) ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಘದಲ್ಲಿ ಪಡೆದ ಸಾಲದ ಕಂತು ಕಟ್ಟಲಿಲ್ಲ ಎಂದು ಸಂಘದ ಯೋಜನಾ ಅಧಿಕಾರಿ ಹಾಗೂ ಇನ್ನಿತರರು ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.
ಗಂಗೊಳ್ಳಿ ಗ್ರಾಮದ ಅಶ್ವಿನಿ (29) ಎಂಬವರು ಶ್ರೀ ಧರ್ಮಸ್ಥಳ ಗ್ರಾಮಾಭೀವೃದ್ದಿ ಯೋಜನೆಯ ಸಂಘದಲ್ಲಿ 12 ವರ್ಷದಿಂದ ಇದ್ದು ಪ್ರಸ್ತುತ ಸಂಘದ ಅಧ್ಯಕ್ಷೆಯಾಗಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಅಶ್ವಿನಿ ಅವರು ಸುಮಾರು ಒಂದೂವರೆ ವರ್ಷದ ಹಿಂದೆ 4 ಲಕ್ಷ ರೂಪಾಯಿ ಹಣವನ್ನು ಸಾಲವಾಗಿ ಪಡೆದಿದ್ದು ಸಾಲದ ಕಂತುಗಳನ್ನು ಪ್ರತಿ ವಾರದಂತೆ ಪಾವತಿಸುತ್ತಿದ್ದು ಈ ವಾರದಲ್ಲಿ ಹಣದ ಅಡಚಣೆ ಇರುವುದರಿಂದ ಸಾಲದ ಕಂತುಗಳನ್ನು ಕಟ್ಟಿರುವುದಿಲ್ಲ ಎಂದಿದ್ದಾರೆ. ಅಶ್ವಿನಿ ಅವರು ಸಾಲದ ಕಂತಿನ ಹಣವನ್ನು ಕಟ್ಟದೇ ಇರುವ ವಿಚಾರವಾಗಿ ಆಪಾದಿತರಾದ ಸಂಘದ ಯೋಜನಾ ಅಧಿಕಾರಿಯಾದ ಸರಸ್ವತಿ ಎಂಬವರು ಸುರೇಖಾ ಹಾಗೂ ಚಂದ್ರ ಎಂಬವರೊಂದಿಗೆ ದಿನಾಂಕ 27-03-2025 ರಂದು ಬೆಳಿಗ್ಗೆ ಅಶ್ವಿನಿ ಯವರ ಮನೆಗೆ ಅಕ್ರಮ ಪ್ರವೇಶ ಮಾಡಿ ಮೂರು ಜನರು ಸೇರಿಕೊಂಡು ಅಶ್ವಿನಿ ಯವರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು ನೀನು ಸಂಘದ ಹಣವನ್ನು ಕಟ್ಟದೇ ಇದ್ದರೆ ನಿನ್ನನ್ನು ಏನು ಮಾಡಬೇಕು ಎಂದು ನಮಗೆ ಗೊತ್ತಿದೆ ಎಂದು ಹೇಳಿ ಮುಂದಕ್ಕೆ ನೋಡಿಕೊಳ್ಳುತ್ತೇವೆ ಎಂಬುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಕಲಂ: 329(4̧) 352, 351(2) ಜೊತೆ 3(5) ಬಿಎನ್ಎಸ್ ರಂತೆ ಪ್ರಕರಣ ದಾಖಲಾಗಿದೆ.