Spread the love

ಉಡುಪಿ: ದಿನಾಂಕ:23-03-2025 (ಹಾಯ್ ಉಡುಪಿ ನ್ಯೂಸ್)

ಉಡುಪಿ ಜಿಲ್ಲೆ ಬಹುತೇಕ ವಿದ್ಯಾವಂತರ ಹಾಗೂ ಸೌಹಾರ್ದತೆಯ ಜಿಲ್ಲೆ , ಇತ್ತೀಚಿನ ವರ್ಷಗಳಲ್ಲಿ ಕೋಮು ಸೂಕ್ಷ್ಮ ಪ್ರದೇಶವಾಗಿ ಬದಲಾಗಿ ರಾಜಕೀಯ ಸ್ವಾರ್ಥದಿಂದ ದಿನ ಬೆಳಗಾದರೆ ಕೋಮು ಗಲಭೆಗಳು, ದ್ವೇಷ ಭಾಷಣಗಳು , ಮಟ್ಕಾ, ಇಸ್ಪೀಟ್, ಕೋಳಿ ಅಂಕ, ದಂಧೆಗಳು, ಅಕ್ರಮ ಮರಳು ಗಣಿಗಾರಿಕೆ, ರಾತ್ರಿಯಾದರೆ ಪುಂಡರ ಗಲಭೆ, ಗಾಂಜಾ, ಡ್ರಗ್ಸ್, 12 ಗಂಟೆಯಾದರೂ ತೆರೆದಿರುವ ಬಾರ್, ಅಕ್ರಮ ಮದ್ಯ ಮಾರಾಟ, ಕ್ರಿಮಿನಲ್ ಚಟುವಟಿಕೆಗಳು ನಡೆಯುತ್ತಿದ್ದವು.

ಆದರೆ ಈ ಎಲ್ಲಾ ಚಟುವಟಿಕೆಗಳಿಗೆ ಇದೀಗ ಬ್ರೇಕ್ ಬಿದ್ದಿದೆ. ಇದಕ್ಕೆ ಕಾರಣ ಇಂತಹ ಸಮಾಜಘಾತುಕ ಶಕ್ತಿಗಳಿಗೆ ಸಿಂಹ ಸ್ವಪ್ನವಾಗಿ ಕಾಡುತ್ತಿರುವುದು ದಿ ಗ್ರೇಟ್ ದಕ್ಷ ಪೊಲೀಸ್ ಅಧಿಕಾರಿ ಡಾ ಅರುಣ್ ಕುಮಾರ್.

ಇದೀಗ ಎಲ್ಲಾ ರಾಜಕೀಯ ಪಕ್ಷಗಳ ಕೆಲವೊಂದು ಸಮಾಜಘಾತುಕ ಶಕ್ತಿಗಳು  ಎಸ್ಪಿ ಡಾ ಅರುಣ್ ಕುಮಾರ್ ಅವರನ್ನು ಉಡುಪಿ ಜಿಲ್ಲೆಯಿಂದ ವರ್ಗಾವಣೆ ಮಾಡಬೇಕೆಂದು ಒಕ್ಕೊರಲ ಬೇಡಿಕೆ ಇಟ್ಟಿವೆ.  ನಾನು ಸರ್ಕಾರದಲ್ಲಿ ಕೇಳಿಕೊಳ್ಳುವುದು ಇಷ್ಟೇ ಯಾರ ಒತ್ತಡಕ್ಕೂ ಮಣಿಯದೆ ಎಸ್ಪಿ ಡಾ.ಅರುಣ್ ಕುಮಾರ್ ಅವರನ್ನು ಇನ್ನಷ್ಟು ವರ್ಷ ಉಡುಪಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಲು ಸರ್ಕಾರ ಹೆಚ್ಚಿನ ಭದ್ರತೆಯೊಂದಿಗೆ ಅವಕಾಶ ಮಾಡಿಕೊಡಬೇಕು, ಇಲ್ಲಿನ ಸಮಾಜಘಾತುಕ ಶಕ್ತಿಗಳನ್ನು ಸಂಪೂರ್ಣವಾಗಿ ನಾಶಗೊಳಿಸಬೇಕು.ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಡಾ.ಅರುಣ್ ಕುಮಾರ್ ರವರ ಅಗತ್ಯ ವಿದೆ .

ಸರ್ಕಾರ ಮೃದು ಧೋರಣೆ ತಾಳಿ   ಎಸ್ಪಿಯವರನ್ನು ವರ್ಗಾವಣೆ ಮಾಡಿದರೆ ಇದರ  ಸಂಪೂರ್ಣ ಲಾಭವನ್ನು ಪಡೆದು ಜಿಲ್ಲೆಯಲ್ಲಿ ದಂಧೆ ಕೋರರು ತಮ್ಮ ಹಳೆ ಚಾಳಿಯನ್ನು ಮುಂದುವರಿಸುತ್ತಾರೆ.

ತುಸು ಶಾಂತಿ ನೆಮ್ಮದಿ ಸೌಹಾರ್ದತೆಯಲ್ಲಿರುವ ಈ ಜಿಲ್ಲೆ ಪುನಃ ಕೋಮುವಾದಿಗಳ ಅಟ್ಟಹಾಸಕ್ಕೆ ಬಲಿ ಆಗುತ್ತದೆ, ಇಲ್ಲಿನ ಜನರಿಗೆ ನಿಮ್ಮ ಋಣ ಇಲ್ಲದಿರುವಾಗ ಇಡಿ ರಾಜ್ಯಕ್ಕೆ ಕೋಮು ದ್ವೇಷವನ್ನು ಹೊರಡಿಸುವ ಈ ಭಾಗದ ಕೋಮು ಫ್ಯಾಕ್ಟರಿಗಳ ಬಗ್ಗೆ ಯಾವುದೇ ಕಾರಣಕ್ಕೂ ಅವಕಾಶ ಮಾಡಿ ಕೊಡಬೇಡಿ,ದಕ್ಷ ಅಧಿಕಾರಿ ಡಾ.ಅರುಣ್ ಕುಮಾರ್ ಅವರನ್ನು ಯಾವುದೇ ಕಾರಣಕ್ಕೂ ಸರ್ಕಾರ ವರ್ಗಾವಣೆ ಮಾಡ ಬಾರದು.

ಮಾನ್ಯ ಎಸ್ಪಿಯವರೇ ನೀವು ಜಿಲ್ಲೆಯಲ್ಲಿ ಇರುವಷ್ಟು ದಿವಸ ಈ ಭಾಗದ ಸಮಾಜಘಾತುಕ ಶಕ್ತಿಗಳನ್ನು ಸದೆ ಬಡಿಯಬೇಕು ಈ ಜಿಲ್ಲೆಯನ್ನು ಶಾಂತಿ ನೆಮ್ಮದಿ ಸೌಹಾರ್ದತೆಯ ನಾಡನ್ನಾಗಿ ಮಾಡಬೇಕು ನಿಮ್ಮ ಬೆಂಬಲಕ್ಕೆ ಸಜ್ಜನ ವಿದ್ಯಾವಂತ ಪ್ರಬುದ್ಧ ಜಿಲ್ಲೆಯ ಜನರಿದ್ದಾರೆ .ಎಸ್ಪಿಯವರಿಗೆ ಉಡುಪಿ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲವನ್ನು ನೀಡುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ  ಹಾಗೂ ಜಿಲ್ಲಾ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರುಗಳು ಸಭೆ ಸೇರಿ ಪತ್ರಿಕಾ ಪ್ರಕಟಣೆ ಮೂಲಕ ಜಿಲ್ಲಾ ಎಸ್ಪಿ ಡಾ.ಅರುಣ್ ಕುಮಾರ್ ಅವರಿಗೆ ಬೆಂಬಲ ಸೂಚಿಸಿದ್ದಾರೆ.

error: No Copying!