Spread the love

ಉಡುಪಿ: ದಿನಾಂಕ:18-03-2025(ಹಾಯ್ ಉಡುಪಿ ನ್ಯೂಸ್) ಅಂಬಾಗಿಲು ಕಡೆಗೆ ಅಕ್ರಮವಾಗಿ ಮರಳು ಕಳ್ಳ ಸಾಗಣೆ ನಡೆಸುತ್ತಿದ್ದ ಟಿಪ್ಪರ್ ಲಾರಿಯೊಂದನ್ನು ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್‌ ಉಪನಿರೀಕ್ಷಕರಾದ ಗೋಪಾಲಕೃಷ್ಣ ಜೋಗಿ ಅವರು ವಶಪಡಿಸಿಕೊಂಡಿದ್ದಾರೆ.

ಉಡುಪಿ ನಗರ ಪೊಲೀಸ್‌ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಗೋಪಾಲಕೃಷ್ಣ ಜೋಗಿ ಅವರು ದಿನಾಂಕ 18/03/2025 ರಂದು ಬೆಳಿಗ್ಗೆ 7 ಗಂಟೆಗೆ ಠಾಣಾ ಸಿಬ್ಬಂದಿಗಳೊಂದಿಗೆ ರಾ.ಹೆ 66 ರಲ್ಲಿ ವಿಶೇಷ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಉಡುಪಿ ತಾಲ್ಲೂಕು ಮೂಡನಿಡಂಬೂರು ಗ್ರಾಮದ ಕರಾವಳಿ ಜಂಕ್ಷನ್‌ ನಿಂದ ಅಂಬಾಗಿಲು ಕಡೆಗೆ ಮರಳು ತುಂಬಿಕೊಂಡು ಹೋಗುತ್ತಿದ್ದ ಟಿಪ್ಪರ್‌ ಲಾರಿಯನ್ನು ಸಿಬ್ಬಂದಿಗಳ ಸಹಾಯದೊಂದಿಗೆ ಚಾಲಕನಿಗೆ ನಿಲ್ಲಿಸಲು ಸೂಚನೆ ನೀಡಿದರೂ ಸಹಾ ನಿಲ್ಲಿಸದೇ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿದ್ದಾನೆ ಎನ್ನಲಾಗಿದೆ.

ಪೊಲೀಸರು ಟಿಪ್ಪರ್‌ ಲಾರಿಯನ್ನು ಹಿಂಬಾಲಿಸಿಕೊಂಡು ಹೋದಾಗ ಚಾಲಕನು ಟಿಪ್ಪರ್‌ ಅನ್ನು ರಾ.ಹೆ 66 ರಲ್ಲಿರುವ ಗಣೇಶ್‌ ಕುಮಾರ್‌ ಎಂಬುವವರ ಮನೆಯ ಎದುರು ರಸ್ತೆ ಬದಿಯಲ್ಲಿ ಟಿಪ್ಪರ್‌ ನ ಕೀ ಯನ್ನು ಅದರಲ್ಲೇ ಬಿಟ್ಟು ಪರಾರಿಯಾಗಿರುತ್ತಾನೆ ಎನ್ನಲಾಗಿದೆ. ಬಿಟ್ಟು ಹೋದ ಟಿಪ್ಪರ್‌ ಅನ್ನು ಪೊಲೀಸರು ಪರಿಶೀಲಿಸಿದಾಗ ಅದರ ನೊಂದಣಿ ಸಂಖ್ಯೆ KA-28 A-5886 ಆಗಿದ್ದು, ಅದರಲ್ಲಿ ಅಂದಾಜು 3 ಯುನಿಟ್‌ ತೂಕದಷ್ಟು ಮರಳು ತುಂಬಿದ್ದು, ಅಂದಾಜು 15,000/- ರೂಪಾಯಿಗಳಷ್ಟು ಆಗಿದ್ದು, ಮರಳನ್ನು ಎಲ್ಲಿಂದಲೋ ಕಳವು ಮಾಡಿ, ಮಾರಾಟದ ಸಲುವಾಗಿ ಸಾಗಾಟ ಮಾಡಿ ವ್ಯವಸ್ಥಿತ ಅಪರಾಧ ಎಸಗಿದ್ದಾರೆ ಎಂದು ದೂರು ನೀಡಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 50/2025 ಕಲಂ :303(2),279,112 BNS, & ಕಲಂ :4(1-A), 21(4) MMRD ರಂತೆ ಪ್ರಕರಣ ದಾಖಲಾಗಿದೆ.

error: No Copying!