Spread the love

ಕೋಟ: ದಿನಾಂಕ: 18-03-2025(ಹಾಯ್ ಉಡುಪಿ ನ್ಯೂಸ್) ಗಿಳಿಯಾರು ಗ್ರಾಮದ ಕೋಟ ಎಂಬಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ಬೊಲೆರೋ ವಾಹನವನ್ನು ಕೋಟ ಪೊಲೀಸ್‌ ಠಾಣೆಯ ಉಪನಿರೀಕ್ಷಕರಾದ ರಾಘವೇಂದ್ರ ಸಿ ರವರು ವಶಪಡಿಸಿಕೊಂಡಿದ್ದಾರೆ.

ಉಡುಪಿ ಆಹಾರ ಇಲಾಖೆಯ ನಿರೀಕ್ಷಕರಾದ ಸುಧೀರ್ (42) ಅವರಿಗೆ ದಿನಾಂಕ 17/03/2025 ರಂದು ಸಂಜೆ ಕೋಟ ಪೊಲೀಸ್‌ ಠಾಣೆಯ ಉಪನಿರೀಕ್ಷಕರಾದ ರಾಘವೇಂದ್ರ ಸಿ ರವರು ಅಕ್ರಮ ಪಡಿತರ ಅಕ್ಕಿ ಸಾಗಾಟ ಮಾಡುತ್ತಿರುವ ಬಗ್ಗೆ ತಿಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅಕ್ರಮ ಪಡಿತರ ಅಕ್ಕಿ ಸಾಗಾಟದ ಮಾಹಿತಿ ದೊರೆತೊಡನೆ ಉಡುಪಿ ಆಹಾರ ಶಿರಸ್ತೆದಾರರೊಂದಿಗೆ ಬ್ರಹ್ಮಾವರ ತಾಲೂಕು ಗಿಳಿಯಾರು ಗ್ರಾಮದ ಕೋಟ ಎಂಬಲ್ಲಿನ ಸ್ಥಳಕ್ಕೆ ಹೋಗಿ ಅಕ್ರಮ ಅಕ್ಕಿ ಸಾಗಾಟ ಮಾಡಲಾಗುತ್ತಿತ್ತು ಎಂಬ ಗಾಡಿಯನ್ನು ಪರಿಶೀಲಿಸಿದಾಗ ಬೋಲೆರೋ ವಾಹನ ನಂಬ್ರ KA-20-C-6806 ನೇ ದರಲ್ಲಿ 42 ಪ್ಲಾಸ್ಟಿಕ್‌ ಚೀಲಗಳಲ್ಲಿ ಅಕ್ಕಿಯನ್ನು ಯಾವುದೇ ಪರವಾನಿಗೆ/ದಾಖಲಾತಿಗಳಿಲ್ಲದೇ ಅಕ್ರಮವಾಗಿ ತುಂಬಿಸಿ ಸಾಗಾಟ ಮಾಡಲಾಗುತ್ತಿದ್ದು  ಈ ಬಗ್ಗೆ ಪರಿಶೀಲಿಸಿ ಬೋಲೆರೋ ಚಾಲಕ ಉದಯ ಎಂಬವನಲ್ಲಿ ವಿಚಾರಿಸಿದಾಗ ಅಕ್ಕಿಯನ್ನು ಸಾಲಿಗ್ರಾಮದ ಸುರೇಂದ್ರ ಎಂಬವರ ಅಂಗಡಿಯಿಂದ ತಂದ ಬಗ್ಗೆ ತಿಳಿಸಿರುತ್ತಾನೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.

ಸ್ಥಳದಲ್ಲಿದ್ದ 42 ಚೀಲ ಅಕ್ಕಿ ಹಾಗೂ ಬೋಲೆರೋ KA-20-C-6806 ನೇ ವಾಹನ ಮತ್ತು ಚಾಲಕನನ್ನು ಪೊಲೀಸರು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ  ಕಲಂ: 3, 7 EC Act ರಂತೆ ಪ್ರಕರಣ ದಾಖಲಾಗಿದೆ.

error: No Copying!