
ಮಣಿಪಾಲ: ದಿನಾಂಕ:05-03-2025( ಹಾಯ್ ಉಡುಪಿ ನ್ಯೂಸ್) ಬೆಂಗಳೂರಿನಲ್ಲಿ ನಡೆದ ಅಪರಾಧ ಪ್ರಕರಣ ಒಂದರ ಆರೋಪಿ ಓರ್ವನನ್ನು ಉಡುಪಿಯಲ್ಲಿ ಪೊಲೀಸರು ಬಂಧಿಸಲು ಸುತ್ತುವರಿದಾಗ ಆತ ತಾನು ಬಂದ ಮಹೀಂದ್ರ ತಾರ್ ಕಾರಿನಿಂದ ಪೊಲೀಸರಿಗೆ ಹಾಗೂ ಇನ್ನಿತರ ವಾಹನಗಳಿಗೆ ಡಿಕ್ಕಿ ಹೊಡೆದುಕೊಂಡು ಹೋಗಿ ತಪ್ಪಿಸಿ ಕೊಂಡಿದ್ದಾನೆ ಎಂದು ಪೊಲೀಸರು ದೂರು ದಾಖಲಿಸಿದ್ದಾರೆ.
ಬೆಂಗಳೂರಿನ ಮಾದನಾಯಕನ ಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾಗಿರುವ ಸೋಮಶೇಖರರವರು ದಿನಾಂಕ 04/03/2025 ರಂದು ತಮ್ಮ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಯವರೊಂದಿಗೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಕರಣವೊಂದರಲ್ಲಿ 2 ನೇ ಆರೋಪಿಯಾಗಿರುವ ಇಸಾಕ್ ಎಂಬವನ ಪತ್ತೆಯ ಬಗ್ಗೆ ಉಡುಪಿ ತಾಲೂಕಿನ ಮಣಿಪಾಲಕ್ಕೆ ಬಂದಿದ್ದು ವಿ.ಎಸ್ ಆಚಾರ್ಯ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್ ಒಂದರಲ್ಲಿ ಆರೋಪಿ ಇಸಾಕ್ ನ ಗೆಳತಿ ಸುಜೈನ್ ಎಂಬಾಕೆ ಇದ್ದು ಆರೋಪಿ ಇಸಾಕ್ ಅಲ್ಲಿಗೆ ಬರುವುದಾಗಿ ಪೊಲೀಸರಿಗೆ ಮಾಹಿತಿ ಬಂದ ಮೇರೆಗೆ ಸೋಮಶೇಖರ ರವರು ಮತ್ತು ಪೊಲೀಸ್ ನಿರೀಕ್ಷಕರಾದ ನರೇಂದ್ರ ಬಾಬು ಹಾಗೂ ಸಿಬ್ಬಂದಿಯವರು ಸುಜೈನ್ ರವರ ಮನೆಯನ್ನು ಪತ್ತೆ ಮಾಡಿ ಆರೋಪಿ ಇಸಾಕ್ ನ ಬರುವಿಕೆಯ ಬಗ್ಗೆ ಕಾಯುತ್ತಿದ್ದರು ಎನ್ನಲಾಗಿದೆ.
ಆರೋಪಿ ಇಸಾಕ್‌ನ ಗೆಳತಿ ಸುಜೈನ್ ಹಾಗೂ ಆಕೆಯ ತಂಗಿ ಅಲ್ಲೇ ಹತ್ತಿರದಲ್ಲಿರುವ ಮೊಬೈಲ್ ಅಂಗಡಿಯ ಒಳಗೆ ಹೋಗಿದ್ದು ಸಮಯ ರಾತ್ರಿ 8:00 ಗಂಟೆಗೆ ಒಂದು ಕಪ್ಪು ಬಣ್ಣದ ನಂಬರ್ ಪ್ಲೇಟ್ ಇಲ್ಲದ ಮಹೇಂದ್ರ ತಾರ್ ಕಾರು ಬಂದಿದ್ದು ಕಾರಿನಲ್ಲಿ ಇಸಾಕ್ ಇರಬಹುದೆಂದು ಅನುಮಾನಿಸಿ ಪೊಲೀಸರು ಬಂದಿದ್ದ KA-02-MN-5580 ನಂಬರಿನ ಇನೋವಾ ಕಾರಿನಲ್ಲಿ ಹಿಂಬಾಲಿಸಿದ್ದು ,ಕಪ್ಪು ಬಣ್ಣದ ತಾರ್ ಕಾರಿನಲ್ಲಿ ಬಂದಂತಹ ವ್ಯಕ್ತಿ ತನ್ನ ಕಾರನ್ನು ಸ್ವಲ್ಪ ದೂರ ಹೋಗಿ ಯು ಟರ್ನ್ ಮಾಡಿಕೊಂಡು ಬಂದು ಮೊಬೈಲ್ ಅಂಗಡಿಯ ಮುಂಭಾಗ ನಿಲ್ಲಿಸಿದ್ದು ಆ ಸಮಯದಲ್ಲಿ ಆತನ ಗೆಳತಿ ಸುಜೈನ್ ಎಂಬಾಕೆ ಆ ಕಾರನ್ನು ಹತ್ತಿದ್ದಾಳೆ ಎನ್ನಲಾಗಿದೆ . ಸೋಮಶೇಖರರವರೊಂದಿಗೆ ಬಂದಿದ್ದ KA-19-MG-2333 ನೇ ಇನೋವಾ ಕಾರಿನಲ್ಲಿದ್ದ ಸಿಬ್ಬಂದಿಯವರು ಅವನೇ ಇಸಾಕ್ ಎಂದು ಖಚಿತಪಡಿಸಿಕೊಂಡು ಅವನನ್ನು ಹಿಡಿದುಕೊಳ್ಳಿ ಎಂದು ಜೋರಾಗಿ ಕೂಗಿಕೊಂಡು ಆತನನ್ನು ಅಡ್ಡಗಟ್ಟಲು ಪ್ರಯತ್ನಿಸಿದಾಗ ಆತನಿಗೆ ಸೋಮಶೇಖರರವರು ಸಮವಸ್ತ್ರದಲ್ಲಿದ್ದು ಪೊಲೀಸರು ಎಂದು ತಿಳಿದಿದ್ದರು ಸಹ ಕೊಲೆ ಮಾಡುವ ಉದ್ದೇಶದಿಂದ ಸಿಬ್ಬಂದಿಯಾದ ವಿಶ್ವನಾಥ ರವರಿಗೆ ತಾರ್ ಕಾರಿನಿಂದ ಗುದ್ದಿದ ರಭಸಕ್ಕೆ ಸಿಬ್ಬಂದಿ ಹಾರಿ ಪುಟ್ ಪಾತ್‌ನಲ್ಲಿ ಬಿದ್ದಿದ್ದು ಸಿಬ್ಬಂದಿಗೆ ತೀವ್ರ ಸ್ವರೂಪದ ಗಾಯಗಳಾಗಿದೆ ಹಾಗೂ ಪೊಲೀಸ್ ನಿರೀಕ್ಷಕರಾದ ನರೇಂದ್ರ ಬಾಬು, ಸಿಬ್ಬಂದಿಗಳಾದ ಕೇಶವಾನಂದ,ಬಾಲಾಜಿ ಸಿಂಗ್ ಮತ್ತು ರಾಯಗೊಂಡರವರಿಗೆ ಗಾಯಗಳಾಗಿರುತ್ತವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನಂತರ ಆರೋಪಿ ಇಸಾಕ್ ನು ತನ್ನ ಕಾರನ್ನು ಅತೀವೇಗವಾಗಿ ರಿವರ್ಸ್ ನಲ್ಲಿ ಚಲಾಯಿಸಿದ್ದು ಕಾರಿನ ಹಿಂಬಾಗದಲ್ಲಿದ್ದ ಸೋಮಶೇಖರರವರು ಹಾರಿ ತಪ್ಪಿಸಿಕೊಂಡಿದ್ದಾರೆ ಎಂದಿದ್ದಾರೆ. ಆಗ ಸೋಮಶೇಖರರು ಬಂದಿದ್ದ ಇನ್ನೋವಾ KA-02-MN-5580 ನಂಬರಿನ ಕಾರಿಗೆ ಡಿಕ್ಕಿ ಹೊಡೆದಿದ್ದು ಕಾರು ಜಖಂಗೊಂಡಿರುತ್ತದೆ ನಂತರ ಆರೋಪಿ ಇಸಾಕ್ ನು ತನ್ನ ಕಾರನ್ನು ರಿವರ್ಸ್ ನಲ್ಲಿಯೇ ಓಡಿಸಿಕೊಂಡು ಹೋಗಿ ಒಂದು ಕೆಂಪು ಬಣ್ಣದ ಎಸ್ ಯು ವಿ 700 ಕಾರಿಗೆ ಡಿಕ್ಕಿ ಹೊಡೆದು ಜಖಂಗೊಳಿಸಿದ್ದಾನೆ ಅಲ್ಲದೇ ಪುನಃ ಆರೋಪಿ ಇಸಾಕ್‌ನು ತನ್ನ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಾ ಮುಂದೆ ಹೋಗಿ ರಸ್ತೆಯ ಬದಿಯಲ್ಲಿ ಪಾರ್ಕ್ ಮಾಡಿದ್ದ ಕಪ್ಪು ಬಣ್ಣದ ಕ್ರೆಟಾ ಕಾರೊಂದಕ್ಕೆ ಡಿಕ್ಕಿ ಹೊಡೆದು ಆ ಕಾರನ್ನೂ ಜಖಂಗೊಳಿಸಿದ್ದಾನೆ ಎನ್ನಲಾಗಿದೆ.
ಆತನನ್ನು ಹಿಡಿಯಲು ಹೋದ ಸೋಮಶೇಖರ ರವರೊಂದಿಗೆ ಇದ್ದ KA-19-MG-2333 ನಂಬರಿನ ಕಾರಿಗೂ ಸಹ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು ಜಖಂಗೊಳಿಸಿ ತಪ್ಪಿಸಿಕೊಂಡು ಹೋಗಿದ್ದು, ಸೋಮಶೇಖರರವರೊಂದಿಗೆ ಇದ್ದ ಸಿಬ್ಬಂದಿಯವರು ಆತನನ್ನು ಹಿಂಬಾಲಿಸಿಕೊಂಡು ಹೋಗಿದ್ದು ಆರೋಪಿ ಇಸಾಕ್ ತನ್ನ ಕಾರನ್ನು ಸುಮಾರು 3 ಕಿ ಮೀ ದೂರ ಓಡಿಸಿಕೊಂಡು ಹೋಗಿ ಮಣ್ಣಪಳ್ಳ ಬಳಿ ಮಾರ್ಗಮದ್ಯದಲ್ಲಿ ನಿಲ್ಲಿಸಿ ಆತನ ಗೆಳತಿಯೊಂದಿಗೆ ಕಾರಿನಿಂದ ಇಳಿದು ಕತ್ತಲೆಯಲ್ಲಿ ಓಡಿ ಹೋಗಿದ್ದಾನೆ ಎಂದು ಬೆಂಗಳೂರು ಪೊಲೀಸರು ದೂರು ನೀಡಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ:281,132,121(1),109 ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.


